ಶೋಕಿ ಜೀವನ ನಡೆಸಲು ದ್ವಿಚಕ್ರವಾಹನಗಳನ್ನು ಕಳವು ಮಾಡಿ ಮಾರಾಟ ಮಾಡುತ್ತಿದ್ದ ನಾಲ್ವರು ಯುವಕರನ್ನು ಶಹಾಪುರ ಪೊಲೀಸರು ಬಂಧಿಸಿದ್ದು, ಅವರಿಂದ ₹6.45 ಲಕ್ಷ ಮೌಲ್ಯದ ವಿವಿಧ ಕಂಪನಿಗಳ 14 ದ್ವಿಚಕ್ರವಾಹನಗಳನ್ನು ಜಪ್ತಿ ಮಾಡಿದ್ದಾರೆ.
ಬಂಧಿತರನ್ನು ಶಹಾಪುರ ನಗರದ ಮಹಮ್ಮದ್ ಸಾಯಿಲ್ ಭಾಗವಾನ (20), ಮಹಮ್ಮದ್ ಸಿರಾಜ್ ಮನಸೂರ ಶೇಖ (26), ಮರೆಪ್ಪ ಕುಂಚಿಕೊರವರ (24) ಹಾಗೂ ಸಣ್ಣ ಮರೆಪ್ಪ ಕುಂಚಿಕೊರವರ (21) ಎಂದು ಗುರುತಿಸಲಾಗಿದೆ. ಆರೋಪಿಗಳು ನಗರದ ಪ್ರಮುಖ ಪ್ರದೇಶಗಳಲ್ಲಿ ನಿಲ್ಲಿಸುತ್ತಿದ್ದ ದ್ವಿಚಕ್ರವಾಹನಗಳನ್ನು ಕಳವು ಮಾಡಿ, ಮಾರಾಟದಿಂದ ಬಂದ ಹಣವನ್ನು ಜೂಜಾಟ ಮತ್ತು ಮದ್ಯ ಸೇವನೆಗೆ ಬಳಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ಕಲಬುರಗಿ | ಮನೆ ಬೀಗ ಮುರಿದು ದೇವರ ಹುಂಡಿಯ ₹2.50 ಲಕ್ಷ ನಗದು, ಚಿನ್ನಾಭರಣ ಕಳ್ಳತನ
ಈ ಸಂಬಂಧ ಶಹಾಪುರ ಪೊಲೀಸ್ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ ಎಂದು ಎಸ್.ಎಂ. ಪಾಟೀಲ್ ಮಾಹಿತಿ ನೀಡಿದ್ದಾರೆ. ಪ್ರಕರಣ ಭೇದಿಸಿದ ಪೊಲೀಸ್ ಠಾಣೆಯ ಪಿಐ ಡಿ.ವಿ. ನಾಯಕ ಹಾಗೂ ಸಿಬ್ಬಂದಿಗಳಾದ ಗಣೇಶ, ಶಂಕರಲಿಂಗ, ರವಿಕುಮಾರ, ಮಾನಯ್ಯ, ಜುಬೇರ, ಗೋವಿಂದ ಮತ್ತು ವೆಂಕಟೇಶ ಅವರ ಕಾರ್ಯವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪೃಥ್ವಿಕ್ ಶಂಕರ ಹಾಗೂ ಸುರಪುರ ಡಿವೈಎಸ್ಪಿ ಶಿವರಾಜ ಕಟಕಬಾವಿ ಶ್ಲಾಘಿಸಿದ್ದಾರೆ.





