ನಿಶ್ಚಿತಾರ್ಥವಾಗಿದ್ದ ಯುವತಿಯೊಬ್ಬಳನ್ನು ಮಾರಕಾಸ್ತ್ರಗಳಿಂದ ಇರಿದು ಕೊಲೆ ಮಾಡಿರುವ ಘಟನೆ ಯಾದಗಿರಿ ತಾಲೂಕಿನಲ್ಲಿ ನಡೆದಿದೆ. ಆಕೆಯ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಮರಣೋತ್ತರ ಪರೀಕ್ಷಾ ವರದಿ ಬಂದ ಬಳಿಕ ಅತ್ಯಾಚಾರ ನಡೆದಿದೆಯೇ ಇಲ್ಲವೇ ಎಂಬುದು ತಿಳಿಯಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಯಾದಗಿರಿ ತಾಲೂಕು ಕಂಚಗಾರಹಳ್ಳಿ ಕ್ರಾಸ್ ಸಮೀಪ ಈ ಕೊಲೆ ನಡೆದಿದ್ದು, ಸವಿತಾ ರಾಠೋಡ್ (35) ಕೊಲೆಯಾದ ಮೃತ ದುರ್ದೈವಿ ಎಂದು ತಿಳಿದುಬಂದಿದೆ. ಯಾದಗಿರಿ ತಾಲೂಕಿನ ಮುದ್ನಾಳ್ ತಾಂಡಾದ ನಿವಾಸಿಯಾದ ಯುವತಿಯ ಕುತ್ತಿಗೆ ಹಾಗೂ ಕಿವಿಗೆ ಮಾರಕಾಸ್ತ್ರದಿಂದ ಇರಿದು ಕೊಲೆ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.
ಹೆತ್ತವರು ಇಲ್ಲದ ಕಾರಣ ವಿಕಲಚೇತನ ಸಹೋದರನ ಜೊತೆ ವಾಸವಾಗಿದ್ದ ಸವಿತಾಗೆ ನಾಲ್ಕೈದು ದಿನಗಳ ಹಿಂದೆಯಷ್ಟೆ ನಿಶ್ಚಿತಾರ್ಥವಾಗಿತ್ತು. ಎಂದಿನಂತೆ ಶನಿವಾರ ಕೂಡ ತನ್ನ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ವೇಳೆ ದುಷ್ಕರ್ಮಿಗಳು ಆಕೆಯನ್ನು ಕೊಲೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಗಂಭೀರ ಗಾಯಗೊಂಡಿದ್ದ ಸವಿತಾ ಅವರನ್ನು ಗ್ರಾಮಸ್ಥರು ಕಲಬುರಗಿ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ, ಸೋಮವಾರ ಮುಂಜಾನೆ ಆಕೆ ಮೃತಪಟ್ಟಿದ್ದಾರೆ.
ಈ ಸುದ್ದಿ ಓದಿದ್ದೀರಾ? ಮೈಸೂರು | ಹುಡುಕಬೇಡಿ ಎಂದು ಪತ್ರ ಬರೆದಿಟ್ಟು ಅಬ್ಬಿ ಫಾಲ್ಸ್ಗೆ ಬಂದಾಕೆ ಬೆಂಗಳೂರಿನಲ್ಲಿ ಪತ್ತೆ
ಸಚಿನ್ ಎಂಬ ಯುವಕ ಆಕೆಯ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿರಬಹುದು ಎಂದು ಶಂಕಿಸಲಾಗಿದೆ. ಯಾದಗಿರಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿ ಪತ್ತೆಗೆ ಬಲೆ ಬೀಸಿದ್ದು, ಆತನನ್ನು ಬಂಧಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಈ ದಿನ.ಕಾಮ್ ಯಾದಗಿರಿ ಗ್ರಾಮೀಣ ಠಾಣೆ ಪಿಎಸ್ಐ ಅವರನ್ನು ಸಂಪರ್ಕಿಸಿದಾಗ ಪ್ರತಿಕ್ರಿಯಿಸಿದ್ದು, “ಅತ್ಯಾಚಾರ ಎಸಗಿರುವ ಕುರಿತು ಯಾವುದೇ ನಿಖರ ಮಾಹಿತಿ ಇಲ್ಲ.ಮರಣೋತ್ತರ ಪರೀಕ್ಷಾ ವರದಿ ಬಂದ ಬಳಿಕವೇ ಅತ್ಯಾಚಾರ ನಡೆದಿರುವ ಕುರಿತು ಸ್ಪಷ್ಟವಾಗುತ್ತದೆ. ಸದ್ಯ ಆರೋಪಿಯ ಬಂಧನವಾಗಿದೆ. ಯಾವ ವಿಚಾರಕ್ಕೆ ಕೊಲೆ ನಡೆದಿದೆ ಎಂಬುದು ತನಿಖೆ ಬಳಿಕ ಗೊತ್ತಾಗುತ್ತದೆ” ಎಂದು ಹೇಳಿದರು.