ಬೆಳಗಾವಿ ಸಮೀಪದ ನಾವಗೆ ಗ್ರಾಮದ ಸ್ನೇಹ ಕಾರ್ಖಾನೆಯಲ್ಲಿ ಸಂಭವಿಸಿದ ದುರಂತದಲ್ಲಿ ಮೃತಪಟ್ಟ ಯುವಕ ಸಣ್ಣಗೌಡ ಗುಂಡ್ಯಾಗೋಳ ಕುಟುಂಬಕ್ಕೆ ಪರಿಹಾರ ನೀಡುವಂತೆ ಆಗ್ರಹಿಸಿ ಸಿಐಟಿಯು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದೆ.
ಸಿಐಟಿಯು ಸಂಘಟನೆಯ ಪ್ರಧಾನ ಕಾರ್ಯದರ್ಶಿ ಜಿ.ಎಮ್.ಜೈನೆಖಾನ್ ಮಾತನಾಡಿ, ʼಬೆಳಗಾವಿ ತಾಲೂಕಿನ ನಾವಗೆ ಗ್ರಾಮದಲ್ಲಿ ಸ್ನೆಹಂ ಕಾರ್ಖಾನೆಯಲ್ಲಿ ಸಂಭವಿಸಿದ ಬೆಂಕಿ ಅವಘಡದಿಂದ ಮೃತಪಟ್ಟ 20 ವರ್ಷದ ಯುವಕ ಸಣ್ಣಗೌಡ ಗುಂಡ್ಯಾಗೊಳ ಅವರ ಮೃತ ದೇಹ ಕುಟುಂಬಕ್ಕೆ ಹಸ್ತಾಂತರಿಸುವ ವೇಳೆ ಜಿಲ್ಲಾಡಳಿತ ಗೌರವಯುತವಾಗಿ ನಡೆದುಕೊಂಡಿಲ್ಲʼ ಎಂದು ದೂರಿದರು.
ʼಕುಟುಂಬದ ಮುಖ್ಯಸ್ಥನಾಗಿ ಜವಾಬ್ದಾರಿ ವಹಿಸಿಕೊಂಡಿದ್ದ ಯುವಕನ ಸಾವಿನಿಂದ ಕುಟುಂಬಸ್ಥರು ಚಿಂತೆಗೀಡಾಗಿದ್ದಾರೆ. ಹೀಗಾಗಿ ಶೀಘ್ರದಲ್ಲೇ ಸರ್ಕಾರ ಮೃತ ಯುವಕನ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು. ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರಿಗೆ ಪರ್ಯಾಯ ಕೆಲಸ ಕೊಡಬೇಕು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಇಬ್ಬರು ಕಾರ್ಮಿಕರಿಗೆ ಪರಿಹಾರ ಒದಗಿಸಬೇಕುʼ ಎಂದು ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ? ಬೆಳಗಾವಿ | ರೈತ ಮುಖಂಡರಿಂದ ‘ವಿದೇಶಿ ಕಂಪನಿಗಳ ಭೂತ ದಹನ’ ಕಾರ್ಯಕ್ರಮ
ಈ ಸಂದರ್ಭದಲ್ಲಿ ಸಿಐಟಿಯು ಮುಖಂಡರಾದ ಜಿ.ವಿ.ಕುಲಕರ್ಣಿ, ಮಂದಾ ನೇವಗಿ, ರೈತ ಮುಖಂಡರಾದ ಸಿದ್ದಗೌಡ ಮೋದಗಿ, ಶಿವಲಿಲಾ ಮಿಸಾಲೆ, ಶಂಕರ ಡವಳಿ ಸೇರಿದಂತೆ ಅನೇಕ ಮುಖಂಡರು ಇದ್ದರು.