ವರದಿಯನ್ನು ಅಧ್ಯಯನ ಮಾಡದೇ, ತಪ್ಪು ಅಭಿಪ್ರಾಯ ಮೂಡಿಸಲಾಗಿದೆ : ಮಾಧವ ಗಾಡ್ಗೀಳ್‌ ಬೇಸರ

Date:

“ನನ್ನ ವರದಿಯನ್ನು ಅಧ್ಯಯನ ಮಾಡದೇ, ಕಾರ್ಯರೂಪಕ್ಕೆ ತರಲು ಸಾಧ್ಯವಾಗದ ಶಿಪಾರಸ್ಸುಗಳಿವೆ ಎಂಬ ತಪ್ಪು ಅಭಿಪ್ರಾಯ ಮೂಡಿಸಲಾಗಿದೆ. ಈ ಕಾರಣದಿಂದ ವರದಿ ಅನುಷ್ಠಾನಕ್ಕೆ ಹಿನ್ನಡೆಯಾಗಿದೆ” ಎಂದು ಹಿರಿಯ ಪರಿಸರ ವಿಜ್ಞಾನಿ ಮಾಧವ ಗಾಡ್ಗೀಳ್‌ ಬೇಸರ ವ್ಯಕ್ತಪಡಿಸಿದರು.

ಪರಿಸರಕ್ಕಾಗಿ ನಾವು ಬಳಗ ಶನಿವಾರ ಆಯೋಜಿಸಿದ್ದ ʼಜೀವಲೋಕದ ಹಕ್ಕೊತ್ತಾಯಕ್ಕಾಗಿ ಚರ್ಚೆ ಮತ್ತು ಸಂವಾದʼ ಕಾರ್ಯಕ್ರಮದಲ್ಲಿ ಅವರು ಆನ್‌ಲೈನ್‌ ಮೂಲಕ ಮಾತನಾಡಿದರು.

“ಈ ವರದಿಯ ಶಿಫಾರಸುಗಳನ್ನು ಜಾರಿಗೊಳಿಸಿದರೆ ಪಶ್ಚಿಮ ಘಟ್ಟದಲ್ಲಿ ಉಂಟಾಗುವ ಅವಘಡಗಳನ್ನು ತಪ್ಪಿಸಬಹುದು. ಪಶ್ಚಿಮಘಟ್ಟದ ಸಾಮಾನ್ಯ, ಸೂಕ್ಷ್ಮ, ಅತಿಸೂಕ್ಷ್ಮ ಪ್ರದೇಶಗಳಲ್ಲಿ ಪ್ರವಾಸೋದ್ಯಮದ ಹೆಸರಿನಲ್ಲಿ ಅಭಿವೃದ್ಧಿ ಮಾಡಿರುವುದು, ರೆಸಾರ್ಟ್‌ಗಳ ನಿರ್ಮಾಣ ಮುಂತಾದ ಚಟುವಟಿಕೆಗಳಿಂದಾಗಿ ಭೂಕುಸಿತಗಳಾಗುತ್ತಿವೆ. ಇವುಗಳಿಗೆ ನಿಷೇಧ ಹೇರಬೇಕು” ಎಂದು ಅಭಿಪ್ರಾಯಪಟ್ಟರು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

“ಹಿಂದೆಯೂ ಪಶ್ಚಿಮಘಟ್ಟ ಪ್ರದೇಶದಲ್ಲಿ ಭೂಕುಸಿತಗಳಾಗಿದ್ದವು. 1984 ಆಗಿತ್ತು, ಕೊಡಗಿನಲ್ಲಿ 2019, 2020ರಲ್ಲಿ ಭೂಕುಸಿತವಾಗಿತ್ತು. ಆದರೆ ಸಾವಿನ ಸಂಖ್ಯೆ ಕಡಿಮೆ ಇತ್ತು. ಇಪ್ಪತ್ತರಿಂದ ನಲವತ್ತು ಮಂದಿ ಸತ್ತಿರುವುದು ಇದೆ. ಹೀಗಾಗಿ ಹೆಚ್ಚು ಲಕ್ಷ್ಯ ಕೊಡುತ್ತಿರಲಿಲ್ಲ. ಈಗ ಕೇರಳದ ವಯನಾಡಿನಲ್ಲಿ ನಡೆದ ಭೂಕುಸಿತದಲ್ಲಿ ನೂರಾರು ಜನ ಸತ್ತ ನಂತರ ವರದಿಯ ಬಗ್ಗೆ ಚರ್ಚೆ ಶುರುವಾಗಿದೆ.

ಐದು ವರ್ಷಗಳ ಹಿಂದೆ ಕೇರಳದಲ್ಲಿ ಪ್ರಕೃತಿ ವಿಕೋಪದಿಂದ ದುರ್ಘಟನೆ ನಡೆದಾಗ ಅಲ್ಲಿಗೆ ಭೇಟಿ ನೀಡಿದ್ದೆ. ಅಲ್ಲಿ ಮೃತಪಟ್ವರೆಲ್ಲ ಟೀ ಪ್ಲಾಂಟೇಶನ್‌ ಕಾರ್ಮಿಕರು. ಹಿಮಾಚಲ, ಹಿಮಾಲಯ, ಮಹಾರಾಷ್ಟ್ರ, ಪಶ್ಚಿಮ ಘಟ್ಟ ಹೀಗೆ ಅನೇಕ ಕಡೆಗಳಲ್ಲಿ ಭೂಕುಸಿತಗಳು ಆಗಿವೆ. ಅಲ್ಲೂ ಜನರು ಮೃತಪಟ್ಟಿದ್ದಾರೆ. ಆದರೆ, ವಯನಾಡ್‌ನಲ್ಲಿ ಆಗಿರುವಷ್ಟು ದೊಡ್ಡ ಪ್ರಮಾಣದ ಜೀವ ಹಾನಿ ಎಲ್ಲೂ ಆಗಿರಲಿಲ್ಲ” ಎಂದು ವಿಷಾದ ವ್ಯಕ್ತಪಡಿಸಿದರು. 

ನಮ್ಮ ಹಿರಿಯರು ಕೃಷಿ ಮಾಡುವಾಗಲೂ ನಾಗಬನ ಎಂದು ಸೂಕ್ಷ್ಮ ಜಾಗಗಳನ್ನು ಮೀಸಲಿಡುತ್ತಿದ್ದರು. ಆದರೆ, ಈಗ ಅಂಥ ಸಂಸ್ಕೃತಿ ಉಳಿದಿಲ್ಲ. ಮಹಾರಾಷ್ಟ್ರದಲ್ಲಿ ಕೈಗಾರಿಕೆಗಳು ಹೆಚ್ಚಿವೆ. ಸಮುದ್ರ ತೀರಗಳಿಗೂ ಬೃಹತ್‌ ಕೈಗಾರಿಕೆಗಳು ಬರುತ್ತಿವೆ. ಅವು ನೀರು, ಗಾಳಿಯನ್ನು ದೊಡ್ಡ ಪ್ರಮಾಣದಲ್ಲಿ ಮಲೀನಗೊಳಿಸುತ್ತಿವೆ ಎಂದು ಹೇಳಿದರು.

ಪರಿಸರವಾದಿ ಟಿ ವಿ ರಾಮಚಂದ್ರ ಅವರು ಪಶ್ಚಿಮ ಘಟ್ಟದ ಜೀವವೈವಿಧ್ಯ, ಅಧ್ಯಯನಗಳ ಕುರಿತು ಸುದೀರ್ಘವಾಗಿ ಮಾತನಾಡಿದರು. “2009-10ರಲ್ಲಿ ನಡೆಸಿದ ಅಧ್ಯಯನದಲ್ಲಿ ಪಶ್ಚಿಮಘಟ್ಟ ಪ್ರದೇಶದಲ್ಲಿ ಕಾಡು ಕಡಿಮೆಯಾಗಿರುವುದು ಗೊತ್ತಾಗಿದೆ. ಎರಡು ದಶಕದಲ್ಲಿ ನಿತ್ಯಹರಿದ್ವರ್ಣ ಕಾಡು 5-8% ಕಡಿಮೆಯಾಗಿದೆ. ಕಾಡುಗಳು ನಾಶವಾಗಿರುವುದು ಮಾತ್ರವಲ್ಲ ಛಿದ್ರ ಛಿದ್ರವಾಗಿವೆ.

ಕಾಡುಗಳು ನಾಶದಿಂದ ಉಷ್ಣತೆ ಹೆಚ್ಚಾಗುತ್ತದೆ. ಕೇರಳದಲ್ಲಿ 1.5% ಉಷ್ಣಾಂಶ ಹೆಚ್ಚಾಗಿದೆ. ಇದರಿಂದಾಗಿ ಮಲೇರಿಯಾ, ಡೆಂಘೀ, ಕೋವಿಡ್‌ ಹೆಚ್ಚುತ್ತಿದೆ. ಮಳೆಯಲ್ಲಿ ಏರುಪೇರಾಗುತ್ತದೆ. ಎಲ್ಲಿ ಬೇಡವೂ ಅಲ್ಲಿ ಹೆಚ್ಚು ಸುರಿಯುತ್ತದೆ. ಕೇರಳದಲ್ಲಿ ಎಂಟು ತಿಂಗಳು ಮಳೆ ಬಿದ್ದರೆ ಕರ್ನಾಟಕದಲ್ಲಿ ನಾಲ್ಕು ತಿಂಗಳು ಮಳೆ ಬೀಳುವುದು ವಾಡಿಕೆ. ಅದು ಹಾಗೇ ಇದ್ದರೆ ಮಾತ್ರ ಸರಿ ಪ್ರಮಾಣದಲ್ಲಿ ಮಳೆ ಬಂದಂತಾಗುತ್ತದೆ. ಒಂದೇ ವಾರದಲ್ಲಿ ಎಲ್ಲ ಮಳೆ ಸುರಿದರೆ ಭೂ ಕುಸಿತವಾಗುತ್ತದೆ. ಇದಕ್ಕೆ ಇತ್ತೀಚೆಗೆ ವಯನಾಡಿನಲ್ಲಿ ಭೂಕುಸಿತವಾಗಿರುವುದೇ ಸಾಕ್ಷಿ” ಎಂದರು.

ಜನಪ್ರತಿನಿಧಿಗಳು ಸಾವಿರಾರು ಪ್ರದೇಶ ಒತ್ತುವರಿ ಮಾಡಿ ವಾಣಿಜ್ಯ ಬೆಳೆ ಬೆಳೆಯುತ್ತಿದ್ದಾರೆ. ಅವರಿಂದ ಅದನ್ನು ವಶಪಡಿಸಿಕೊಳ್ಳುವುದು ಸಾಧ್ಯವಾಗುತ್ತಿಲ್ಲ. ಜನಪ್ರತಿನಿಧಿಗಳನ್ನು ಕಂಟ್ರೋಲ್‌ ಮಾಡುವುದು ಹೇಗೆ ಎಂಬ ಪ್ರಶ್ನೆಗೆ, “ಹಿಂದಿನ ಕೇಂದ್ರ ಗೃಹಸಚಿವರದ್ದು ಕೊಡಗಿನಲ್ಲಿ ಎಂಟುನೂರು ಎಕರೆ ಎಸ್ಟೇಟ್‌ ಇದೆ. ಹಣಕಾಸು ಸಚಿವರ ಆರುನೂರು ಎಕರೆ ಜಮೀನು ಇದೆ. ಕೊಡಗು, ಉತ್ತರಕನ್ನಡ, ಚಿಕ್ಕಮಗಳೂರಿನಲ್ಲಿ ಬಹುತೇಕ ಕಾಡುಗಳನ್ನು ರಾಜಕಾರಣಿಗಳು ಕಬಳಿಸಿ ಎಸ್ಟೇಟ್‌, ರೆಸಾರ್ಟ್‌ ಮಾಡಿಕೊಂಡಿದ್ದಾರೆ. ಇದಕ್ಕೆ ಜನರ ಮೌನವೇ ಕಾರಣ. ಇಪ್ಪತ್ತೈದು ವರ್ಷ ಕಳೆದರೂ ಗಾಡ್ಗೀಳ್‌ ವರದಿ ಜಾರಿಗೆ ಬರಲಿಲ್ಲ ಎಂದರೆ ಇದೆಂಥಾ ವ್ಯವಸ್ಥೆ” ಎಂದು ವಿಷಾದಿಸಿದರು.

ಹಿರಿಯ ಪತ್ರಕರ್ತ ನಾಗೇಶ್‌ ಹೆಗಡೆ ಸರ್ಕಾರಕ್ಕೆ ಸಲ್ಲಿಸಲಿರುವ ಹಕ್ಕೊತ್ತಾಯವನ್ನು ಮಂಡಿಸಿದರು.

* ಮಾಧವ ಗಾಡ್ಗೀಳ್‌ ವರದಿ ಕುರಿತು ತಪ್ಪು ಕಲ್ಪನೆ ಬಿತ್ತುವ ವ್ಯವಸ್ಥಿತ ಸಂಚು ನಡೆದಿದೆ. ಅದನ್ನು ಹೋಗಲಾಡಿಸುವ ಜವಾಬ್ದಾರಿ ಸರ್ಕಾರದ್ದು. ಅದಕ್ಕಾಗಿ ಐದು ಸದಸ್ಯರ ಸಮಿತಿ ರಚನೆ ಮಾಡಬೇಕು. ಸಮಿತಿಯು ವರದಿಯ ಮುಖ್ಯ ಅಂಶವನ್ನು ಕನ್ನಡದಲ್ಲಿ ಕೈಪಿಡಿ ರೂಪದಲ್ಲಿ ತರಬೇಕು. ಸಮಿತಿಯಲ್ಲಿ ಪರಿಸರ ವಿಜ್ಞಾನಿ, ಸರ್ಕಾರಿ ಅಧಿಕಾರಿ, ರಾಜಕಾರಣಿ, ಪತ್ರಕರ್ತ, ಭೂ ವಿಜ್ಞಾನಿ ಇರಬೇಕು.
* ಆ ಕೈಪಿಡಿಯನ್ನು ತಾಲ್ಲೂಕು ಮಟ್ಟದಲ್ಲಿ ಬಿಡುಗಡೆ ಮಾಡಬೇಕು. ಎಲ್ಲ ಪಂಚಾಯತ್‌ ಸದಸ್ಯರಿಗೂ ಕೊಡಬೇಕು.
* ಪಶ್ಚಿಮಘಟ್ಟದಲ್ಲಿ ಬರುವ ಎಲ್ಲ ಸರ್ಕಾರಿ ಕಚೇರಿಗಳಲ್ಲಿ ಮಳೆ ಮತ್ತು ಬಿಸಿಲು ಕೊಯ್ಲು ಮಾಡಬೇಕು. ಅವುಗಳ ಸೂಚನಾ ಫಲಕ ಹಾಕಿ ಜನರಿಗೆ ತಿಳಿಯುವಂತೆ ಮಾಡಬೇಕು.
* ಪಶ್ಚಿಮಘಟ್ಟದಲ್ಲಿ ಹರಿಯುವ ಎಲ್ಲಾ ನದಿಗಳ ದಡದಲ್ಲಿ ಪರಿಸರ ವಿರೋಧಿ ಚಟುವಟಿಕೆಗಳಿಗೆ ಅವಕಾಶ ನೀಡಬಾರದು.
* ರಾಜ್ಯದಲ್ಲಿ ವಲಸಿಗರ ಸಂಖ್ಯೆ ಹೆಚ್ಚಾಗಿದ್ದು ಅದನ್ನು ತಡೆಯಲು ಈಶಾನ್ಯರಾಜ್ಯಗಳಂತೆ ʼಇನ್ನರ್‌ ಲೈನ್‌ ಪರ್ಮಿಟ್‌ʼ ಮಾದರಿಯನ್ನು ಜಾರಿಗೆ ತರಬೇಕು.
*ಟೀ ಕಾಫಿ ಎಸ್ಟೇಟ್‌ಗಳಲ್ಲಿ ರೌಂಡಪ್‌ ನಂತಹ ಕಳೆ ನಾಶಕ ಸಿಂಪಡಿಸುವುದನ್ನು ತಡೆಯಬೇಕು. ಇವು ಹಕ್ಕೊತ್ತಾಯ ಪ್ರಮುಖ ಅಂಶಗಳು

ಕಾರ್ಯಕ್ರಮದಲ್ಲಿ ರಾಜ್ಯದ ಬೇರೆ ಬೇರೆ ಕಡೆಗಳಿಂದ ಪರಿಸರವಾದಿಗಳು,ಹೋರಾಟಗಾರರು, ವಿವಿಧ ಸಂಘಟನೆಗಳ ಮುಖಂಡರು ಹಾಜರಿದ್ದರು.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ನಮ್ಮನ್ನು ಬೆಂಬಲಿಸಿ

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೆಂಗಳೂರು, ಮಂಗಳೂರು, ಮೈಸೂರಿನಲ್ಲಿ ಗಾಳಿ ಕಲುಷಿತ : ಎಚ್ಚರಿಕೆ ನೀಡಿದ ಗ್ರೀನ್ ಪೀಸ್ ವರದಿ

ಕರ್ನಾಟಕ ರಾಜ್ಯದ ಮೂರು ಪ್ರಮುಖ ನಗರಗಳಾದ ಬೆಂಗಳೂರು, ಮಂಗಳೂರು ಹಾಗು ಮೈಸೂರಿನ...

ಪ್ರೇಯಸಿ ನೋಡಲು ಹರಿಯಾಣದಿಂದ ಬೆಂಗಳೂರಿಗೆ ಬಂದಿದ್ದ ನಕ್ಸಲ್‌ ಈಗ ಸಿಸಿಬಿ ವಶಕ್ಕೆ

ಪ್ರೇಯಸಿ ನೋಡಲು ಹರಿಯಾಣದಿಂದ ಬೆಂಗಳೂರು ನಗರಕ್ಕೆ ಬಂದಿದ್ದ ನಕ್ಸಲ್‌ ನೊಬ್ಬನನ್ನು ಸಿಸಿಬಿಯ...

‘ಎತ್ತಿನಹೊಳೆ’ ಕಾಂಗ್ರೆಸ್ ಸರ್ಕಾರದ ಮತ್ತೊಂದು ಬಂಡಲ್ ಬೊಗಳೆ: ಆರ್‌ ಅಶೋಕ್‌ ಟೀಕೆ

ಬಿಜೆಪಿ ಸರ್ಕಾರ ರೂಪಿಸಿದ್ದ ಮಹತ್ವಾಕಾಂಕ್ಷೆಯ ಎತ್ತಿನಹೊಳೆ ಯೋಜನೆಯನ್ನ ಕಾಂಗ್ರೆಸ್ ಸರ್ಕಾರ ತನ್ನದೇ...

ಪ್ರಥಮ ಬಾರಿ ಬೆಂಬಲ ಬೆಲೆಯಲ್ಲಿ ನಾಲ್ಕು ಬೆಳೆ ಖರೀದಿ: ಸಚಿವ ಶಿವಾನಂದ ಪಾಟೀಲ

ಎಪಿಎಂಸಿ ಕಾಯ್ದೆ ಮರುಸ್ಥಾಪನೆಯಿಂದ ರೈತರಿಗೆ ಹೆಚ್ಚು ಅನುಕೂಲವಾಗಿದ್ದು, ಇತಿಹಾಸದಲ್ಲಿ ಇದೇ ಮೊದಲ...