ರಾಜ್ಯ ಸರ್ಕಾರ ಇತ್ತೀಚೆಗೆ ಪರಿಶಿಷ್ಟ ಜಾತಿ ಒಳಮೀಸಲಾತಿ ವಿವಾದಕ್ಕೆ ಪರಿಹಾರ ಘೋಷಿಸಿದೆ. ಪರಿಶಿಷ್ಟ ಜಾತಿ ಸಮುದಾಯವನ್ನು ಎಡಗೈ, ಬಲ ಮತ್ತು ಇತರೆ ಎಂಬ ಮೂರು ಗುಂಪುಗಳಾಗಿ ಮರುವರ್ಗೀಕರಣ ಮಾಡಿದ್ದು, ಕ್ರಮವಾಗಿ 6%, 6% ಮತ್ತು 5% ಒಳಮೀಸಲಾತಿ ನೀಡಲು ವಿಶೇಷ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಆದರೆ ತೀರಾ ಹಿಂದುಳಿದಿರುವ ಅಲೆಮಾರಿ ಸಮುದಾಯಕ್ಕೆ ಪ್ರತ್ಯೇಕವಾಗಿ ಶೇಕಡ 1ರಷ್ಟು ಒಳಮೀಸಲಾತಿ ನೀಡಬೇಕು ಎಂದು ಆಗ್ರಹ ಕೇಳಿಬಂದಿದೆ. ಈ ಬೇಡಿಕೆ ಹಲವು ಸಾಮಾಜಿಕ ಹೋರಾಟಗಾರರು, ಪ್ರಗತಿಪರರು ಬೆಂಬಲ ವ್ಯಕ್ತಪಡಿಸಿದ್ದಾರೆ. ಅಲೆಮಾರಿ ಸಮುದಾಯಗಳಿಗೆ ನ್ಯಾಯ ಸಿಗಬೇಕು ಎಂದು ಮಹಾನಾಯಕ ದಲಿತ ಸೇನೆ, ಚಲನಚಿತ್ರ ನಿರ್ದೇಶಕಿ ಸುಮನ್ ಕಿತ್ತೂರು, ನಟ ಚೇತನ್ ಅಹಿಂಸಾ, ಹಿರಿಯ ಸಾಹಿತಿ ಬರಗೂರು ರಾಮಚಂದ್ರಪ್ಪ ಮೊದಲಾದವರು ಆಗ್ರಹಿಸಿದ್ದಾರೆ.
