ಕಳೆದ ಎರಡು ದಿನಗಳಲ್ಲಿ ಮಧ್ಯ ಮತ್ತು ಪೂರ್ವ ಭಾರತದಲ್ಲಿ, ಹೆಚ್ಚಾಗಿ ಉತ್ತರ ಪ್ರದೇಶ ಮತ್ತು ಬಿಹಾರದಲ್ಲಿ ಸಿಡಿಲು ಬಡಿದು ಸುಮಾರು 126 ಮಂದಿ ಸಾವನ್ನಪ್ಪಿದ್ದಾರೆ. ಏಪ್ರಿಲ್ 10-12ರ ನಡುವೆ ಇಷ್ಟೊಂದು ಸಾವುಗಳು ಸಂಭವಿಸಿದೆ.
ಮುಂದಿನ ಕೆಲವು ದಿನಗಳವರೆಗೆ ಉತ್ತರಾಖಂಡ, ಉತ್ತರ ಪ್ರದೇಶ, ಮಧ್ಯಪ್ರದೇಶ ಮತ್ತು ಪೂರ್ವ ಭಾರತದಲ್ಲಿ ಭಾರೀ ಗಾಳಿ, ಆಲಿಕಲ್ಲು ಮಳೆ ಮುಂದುವರೆಯಲಿದೆ ಎಂದು ಈಗಾಗಲೇ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಸಾರ್ವಜನಿಕರು ಮುನ್ನೆಚ್ಚರಿಕೆ ವಹಿಸುವಂತೆಯೂ ಸಲಹೆ ನೀಡಲಾಗಿದೆ.
ಇದನ್ನು ಓದಿದ್ದೀರಾ? ಉತ್ತರ ಕರ್ನಾಟಕದಲ್ಲಿ ಮಳೆ ಅಬ್ಬರ: 16 ಜಿಲ್ಲೆಗಳಲ್ಲಿ 4 ದಿನ ಭಾರೀ ಮಳೆ
ಬಿಹಾರದ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಪ್ರಕಾರ ಏಪ್ರಿಲ್ 10 ಮತ್ತು 11ರ ನಡುವೆ ಗುಡುಗು ಮತ್ತು ಮಿಂಚಿನ ಪರಿಣಾಮವಾಗಿ ರಾಜ್ಯದಲ್ಲಿ ಕನಿಷ್ಠ 82 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಈ ನಡುವೆ ಉತ್ತರ ಪ್ರದೇಶ ರಾಜ್ಯ ವಿಪತ್ತು ನಿರ್ವಹಣಾ ಅಧಿಕಾರಿಗಳು ವಿವಿಧ ಜಿಲ್ಲೆಗಳಲ್ಲಿ, ವಿಶೇಷವಾಗಿ ನೇಪಾಳ ಗಡಿಯ ಬಳಿ ಕನಿಷ್ಠ 23 ಜನರು ಸಾವನ್ನಪ್ಪಿದ್ದಾರೆ ಎಂದು ವರದಿ ಮಾಡಿದ್ದಾರೆ.
ಛತ್ತೀಸ್‌ಗಢದಲ್ಲಿ ಆರು ಮಂದಿ, ಜಾರ್ಖಂಡ್‌ನಲ್ಲಿ ಐವರು, ಒಡಿಶಾದಲ್ಲಿ ನಾಲ್ವರು ಸಿಡಿಲು ಬಡಿದು ಮೃತಪಟ್ಟಿದ್ದಾರೆ. ಮಿಂಚಿನಿಂದ ಕನಿಷ್ಠ ಎಂಟು ಮಂದಿ ಸಾವನ್ನಪ್ಪಿದ್ದಾರೆ ಎಂದು ನೇಪಾಳ ಕೂಡಾ ದೃಢಪಡಿಸಿದೆ. ಮಧ್ಯಪ್ರದೇಶ, ಮಹಾರಾಷ್ಟ್ರ ಮತ್ತು ಛತ್ತೀಸ್‌ಗಢದಂತಹ ಮಧ್ಯ ಭಾರತದ ರಾಜ್ಯಗಳು, ಉತ್ತರ ಪ್ರದೇಶ, ಬಿಹಾರ ಮತ್ತು ಒಡಿಶಾದಂತಹ ಪೂರ್ವ ರಾಜ್ಯಗಳು ಗುಡುಗು, ಮಿಂಚು, ಸಿಡಿಲಿನಿಂದ ಹೆಚ್ಚು ಹಾನಿ ಅನುಭವಿಸಿದೆ.
ಇದಕ್ಕೆ ವ್ಯತಿರಿಕ್ತವಾಗಿ ಗುಜರಾತ್‌ನಂತಹ ಪಶ್ಚಿಮ ಪ್ರದೇಶದಲ್ಲಿ ಬಿಸಿಗಾಳಿ ಅಪ್ಪಳಿಸುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಹೇಳಿದೆ.
