ನೀಟ್ (NEET) ಪರೀಕ್ಷಾ ಅಕ್ರಮ ಮತ್ತು ಪ್ರಶ್ನೆಪತ್ರಿಕೆ ಸೋರಿಕೆ ಖಂಡಿಸಿ ದೆಹಲಿಯ ಜಂತರ್ ಮಂತರ್‌ನಲ್ಲಿ ‘ಕಾಕ್‌ರೋಚ್ ಜನತಾ ಪಾರ್ಟಿ’ (CJP) ನಡೆಸುತ್ತಿರುವ ಬೃಹತ್ ಪ್ರತಿಭಟನೆಯು ತೀವ್ರಗೊಳ್ಳುತ್ತಿದ್ದು, ಕೇವಲ ಪರೀಕ್ಷಾರ್ಥಿಗಳಷ್ಟೇ ಅಲ್ಲದೆ ದೆಹಲಿಯ ಸಾಮಾನ್ಯ ನಾಗರಿಕರು ಹಾಗೂ ಬಾಲಕಿಯರೂ ಈ ಹೋರಾಟಕ್ಕೆ ಕೈಜೋಡಿಸುತ್ತಿದ್ದಾರೆ.
ದರಿಯಾಗಂಜ್‌ನ 13 ವರ್ಷದ ಉಮಾಸಾ ಎಂಬ ಬಾಲಕಿ ತನ್ನ ತಂದೆ ಸಲೀಂ ಮತ್ತು ಗೆಳತಿಯೊಂದಿಗೆ ತ್ರಿವರ್ಣ ಧ್ವಜ ಹಿಡಿದು ಜಂತರ್ ಮಂತರ್‌ಗೆ ಆಗಮಿಸಿದ್ದು, “ನಾವು ನಮ್ಮ ಉಜ್ವಲ ಭವಿಷ್ಯಕ್ಕಾಗಿ ಹಾಗೂ ಪರೀಕ್ಷಾ ಗೊಂದಲವಿಲ್ಲದ ವ್ಯವಸ್ಥೆಗಾಗಿ ಇಲ್ಲಿಗೆ ಬಂದಿದ್ದೇವೆ,” ಎಂದು ಧೈರ್ಯವಾಗಿ ಹೇಳಿದ್ದಾಳೆ. ಪ್ರತಿಭಟನೆಯಲ್ಲಿ ಭಾಗವಹಿಸಿದ ಆಶಿಶ್ ಎಂಬ ಯುವತಿ, “ಈ ಹೋರಾಟ ಕೇವಲ ನಮಗಾಗಿ ಮಾತ್ರವಲ್ಲ, ನಮ್ಮ ಆಂದೋಲನವನ್ನು ವಿರೋಧಿಸುವವರ ಮಕ್ಕಳಿಗೂ ಸೇರಿ ದೇಶದ ಸಂಪೂರ್ಣ ಯುವ ಸಮೂಹದ ಭವಿಷ್ಯಕ್ಕಾಗಿ ನಡೆಯುತ್ತಿದೆ,” ಎಂದಿದ್ದಾರೆ.
ಸೋಮವಾರ ಪ್ರತಿಭಟನಾ ಸ್ಥಳದಲ್ಲಿ ನಡೆದ ಅಹಿತಕರ ಘಟನೆ ಹಾಗೂ ಪೊಲೀಸರ ಬಲಪ್ರಯೋಗದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ಯುವಕ ಫರಾಜ್, “ಪೊಲೀಸರ ಕಡೆಯಿಂದ ಯಾವುದೇ ಪ್ರಚೋದನೆಯಿಲ್ಲದೆ ಅತ್ಯಂತ ಕ್ರೂರ ಹಾಗೂ ಅನಿರೀಕ್ಷಿತ ದೌರ್ಜನ್ಯ ನಡೆದಿದೆ. ನಾವು ಇಷ್ಟಪಟ್ಟು ಬೆಳೆದ ಭಾರತೀಯ ಪ್ರಜಾಸತ್ತಾತ್ಮಕ ಮೌಲ್ಯಗಳ ಪರವಾಗಿ ನಾವಿಲ್ಲಿ ನಿಂತಿದ್ದೇವೆ,” ಎಂದಿದ್ದಾರೆ. ಮತ್ತೊಬ್ಬ ಯುವಕ, “ತನ್ನ ಜೀವಮಾನದಲ್ಲೇ ರಾಜಧಾನಿಯಲ್ಲಿ ಇಷ್ಟೊಂದು ಭೀಕರ ಪೊಲೀಸ್ ದೌರ್ಜನ್ಯವನ್ನು ತಾನು ನೋಡಿಲ್ಲ,” ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ಈ ನಡುವೆ, ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್ ನಾಯಕರು ಪ್ರಧಾನಿ ನಿವಾಸದ ಹೊರಭಾಗದಲ್ಲಿ ನಡೆಸಿದ ಧರಣಿ ಬಳಿಕ, ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆ, ಸಂಸತ್ತಿನಲ್ಲಿ ಚರ್ಚೆ ಹಾಗೂ ಪರೀಕ್ಷಾ ವ್ಯವಸ್ಥೆಯ ಸುಧಾರಣೆ ಸೇರಿದಂತೆ 5 ಪ್ರಮುಖ ಬೇಡಿಕೆಗಳನ್ನು ಸರ್ಕಾರದ ಮುಂದಿಟ್ಟಿದ್ದಾರೆ.
ದೆಹಲಿಯ ಜಂತರ್ ಮಂತರ್‌ನಲ್ಲಿ ‘ಕಾಕ್‌ರೋಚ್ ಜನತಾ ಪಾರ್ಟಿ’ (CJP) ನಡೆಸುತ್ತಿರುವ ಪ್ರತಿಭಟನೆ ಗುರುವಾರ (ಜುಲೈ 23) ಮತ್ತಷ್ಟು ತೀವ್ರಗೊಂಡಿದೆ. ಬುಧವಾರ ಶಾಂತಿಯುತವಾಗಿದ್ದ ಧರಣಿ ಪ್ರದೇಶದ ಸುತ್ತಮುತ್ತ ಭಾರೀ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಪ್ರತಿಭಟನೆಯ ಕಾವು ಹೆಚ್ಚಾದ ಹಿನ್ನೆಲೆಯಲ್ಲಿ, ದೆಹಲಿ ಮೆಟ್ರೋ ರೈಲು ನಿಗಮವು (DMRC) ಮುಂಜಾನೆ 7.30 ರಿಂದಲೇ ರಾಜೀವ್ ಚೌಕ್, ಮಂಡಿ ಹೌಸ್, ಸುಪ್ರೀಂ ಕೋರ್ಟ್ ಸೇರಿದಂತೆ 16 ಪ್ರಮುಖ ಮೆಟ್ರೋ ನಿಲ್ದಾಣಗಳನ್ನು ಮುಂದಿನ ಆದೇಶದವರೆಗೆ ಮುಚ್ಚಿದೆ.
ಈ ಹಿಂದೆಯೂ ಮೆಟ್ರೋ ನಿಲ್ದಾಣಗಳನ್ನು ಮುಚ್ಚಲಾಗಿತ್ತು.ಈ ನಡುವೆ, ಜಂತರ್ ಮಂತರ್‌ನಲ್ಲಿ ಪ್ರತಿಭಟನಾ ಸ್ಥಳದ ಬಳಿ ದೆಹಲಿ ಪೊಲೀಸರು ಸಂಪೂರ್ಣ ಜಖಂಗೊಂಡ ಕಾರೊಂದನ್ನು ತಂದು ನಿಲ್ಲಿಸಿದ್ದಾರೆ ಎಂದು ಸಿಜೆಪಿ ಗಂಭೀರ ಆರೋಪ ಮಾಡಿದೆ. ಈ ಕಾರಿನ ಫೋಟೋಗಳನ್ನು ಎಕ್ಸ್ (X) ಖಾತೆಯಲ್ಲಿ ಹಂಚಿಕೊಂಡಿರುವ ಸಿಜೆಪಿ ವಕ್ತಾರ ಅಶುತೋಷ್ ರಂಕಾ, “ಶಾಂತಿಯುತವಾಗಿ ಹೋರಾಡುತ್ತಿರುವ ಪ್ರತಿಭಟನಾಕಾರರ ಮೇಲೆ ಗಲಭೆಯ ಗೂಬೆ ಕೂರಿಸಲು ಪೊಲೀಸರು ಈ ಕಾರನ್ನು ಉದ್ದೇಶಪೂರ್ವಕವಾಗಿ ತಂದು ನಿಲ್ಲಿಸಿದ್ದಾರೆ. ಪೊಲೀಸರು ನಮ್ಮ ಮೇಲೆ ಗೂಬೆ ಕೂರಿಸುವ ಮುನ್ನ ಈ ಕಾರನ್ನು ಇಲ್ಲಿ ತಂದಿರಿಸಲಾಗಿದೆ ಎಂಬುದನ್ನು ಎಲ್ಲರೂ ನೆನಪಿಡಬೇಕು” ಎಂದು ಆರೋಪಿಸಿದ್ದಾರೆ.
ಹಿಂದಿನ ದಿನ ಇಂಟರ್ನೆಟ್ ಸ್ಥಗಿತ ಹಾಗೂ ಲಾಠಿಚಾರ್ಜ್ ನಡುವೆಯೂ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದಾರೆ ಎಂದು ಅವರು ತಿಳಿಸಿದ್ದಾರೆ.ಸೋನಮ್ ವಾಂಗ್ಚುಕ್ ಅವರೊಂದಿಗೆ ನಿರಂತರ ಸಂಪರ್ಕದಲ್ಲಿರುವುದಾಗಿ ತಿಳಿಸಿರುವ ಮತ್ತೋರ್ವ ವಕ್ತಾರ ಸೌರವ್ ದಾಸ್, ಆಂದೋಲನವು ಸಂಪೂರ್ಣ ಶಾಂತಿಯುತವಾಗಿರಬೇಕು ಎಂದು ವಾಂಗ್ಚುಕ್ ಕರೆ ನೀಡಿದ್ದಾರೆ ಎಂದಿದ್ದಾರೆ.
“ಹಿಂದೆ ನಡೆದ ಹಲವು ಹೋರಾಟಗಳಲ್ಲಿ ಆಡಳಿತಾರೂಢ ಸರ್ಕಾರವೇ ಕಿಡಿಗೇಡಿಗಳನ್ನು ನುಗ್ಗಿಸಿ ಪ್ರತಿಭಟನೆಯ ಹಾದಿ ತಪ್ಪಿಸಿದ ಉದಾಹರಣೆಗಳಿವೆ, ಇಲ್ಲಿಯೂ ಹಾಗೆ ಆಗದಿರಲಿ” ಎಂದು ಅವರು ಎಚ್ಚರಿಸಿದ್ದಾರೆ. ಜೊತೆಗೆ, ಕೇಂದ್ರ ಸಚಿವ ಜೆ.ಪಿ. ನಡ್ಡಾ ಅವರ ಹೇಳಿಕೆಯನ್ನು ಖಂಡಿಸಿರುವ ಅವರು, ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆ ಪಡೆಯದೆ ಹೋರಾಟ ನಿಲ್ಲದು, ಎಷ್ಟೇ ದಿನವಾದರೂ ಧರಣಿ ಮುಂದುವರಿಯಲಿದೆ ಎಂದು ಸ್ಪಷ್ಟಪಡಿಸಿದ್ದಾರೆ.





