ಕ್ಷುಲ್ಲಕ ಕಾರಣಕ್ಕೆ ದಾಂಧಲೆ ನಡೆಸಿ, ಇಬ್ಬರು ದಲಿತ ಸಹೋದರಿಯರ ಮದುವೆ ರದ್ದಾಗಲು ಕಾರಣರಾಗಿದ್ದ ಪ್ರಬಲ ಜಾತಿ 15 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ. ಉತ್ತರ ಪ್ರದೇಶದ ಮಥುರಾ ಜಿಲ್ಲೆಯ ಕರ್ನಾವಾಲ್ ಗ್ರಾಮದಲ್ಲಿ ಘಟನೆ ನಡೆದಿದೆ.
ಗ್ರಾಮದ ದಲಿತ ಸಹೋದರಿಯರಾದ ಮನೀಷಾ (19) ಮತ್ತು ರಾಣಿ (22) ಅವರಿಗೆ ರಾಜಸ್ಥಾನದ ವರರಾದ ದೇವೇಂದ್ರ ಸಿಂಗ್ ಮತ್ತು ಅರ್ಜುನ್ ಸಿಂಗ್ ಜೊತೆಗೆ ಫೆಬ್ರವರಿ 21ರಂದು ವಿವಾಹ ನಿಶ್ಚಯವಾಗಿತ್ತು. ಮದುವೆ ಸಮಾರಂಭಕ್ಕಾಗಿ ವರದ ಸಂಬಂಧಿಗಳು ಕರ್ನಾವಾಲ್ ಗ್ರಾಮಕ್ಕೆ ಬಂಧಿದ್ದರು.
ಮದುವೆ ತಯಾರಿಯಲ್ಲಿದ್ದ ಸಹೋದರಿಯರು ಸಲೂನ್‌ಗೆ ತೆರಳುವಾಗ ಅವರ ಕಾರು ಗ್ರಾಮದ ಬದಿಯಲ್ಲಿ ನಿಂತಿದ್ದ ಬೈಕ್‌ಗೆ ಡಿಕ್ಕಿ ಹೊಡೆದಿತ್ತು. ಆ ಕಾರಣಕ್ಕೆ, ಪ್ರಬಲ ಜಾತಿಯ ಪುಂಡರು ಸಹೋದರಿಯರ ಮೇಲೆ ಹಲ್ಲೆಗೆ ಯತ್ನಿಸಿದ್ದರು. ಅವರನ್ನು ತಡೆಯಲು ಬಂದ ವರನ ಸಂಬಂಧಿಗಳ ಮೇಲೂ ಹಲ್ಲೆ ನಡೆಸಿದ್ದರು.
ಪರಿಣಾಮ, ಭದ್ರತೆಯ ಕಾರಣಗಳಿಗಾಗಿ ವರರಾದ ದೇವೇಂದ್ರ ಸಿಂಗ್ ಮತ್ತು ಅರ್ಜುನ್ ಸಿಂಗ್ ಮದುವೆಯನ್ನು ರದ್ದುಗೊಳಿಸಿ, ತಮ್ಮ ಕುಟುಂಬಗಳೊಂದಿಗೆ ವಾಪಸ್ ಹೋಗಿದ್ದರು.
ದಾಂಧಲೆ ನಡೆಸಿ ತಮ್ಮ ಮಕ್ಕಳ ಮದುವೆ ರದ್ದಾಗಲು ಕಾರಣರಾದ ಪ್ರಬಲ ಜಾತಿಯ ಪುಂಡರ ವಿರುದ್ಧ ದಲಿತ ಸಹೋದರಿಯರ ತಂದೆ ಪದಮ್ ಸಿಂಗ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಅವರ ದೂರಿನಆಧಾರದ ಮೇಲೆ ಪ್ರಮುಖ ಆರೋಪಿಗಳಾದ ಲೋಕೇಶ್ ಯಾದವ್, ರೋಹ್ತಾಶ್, ಶ್ರೀಪಾಲ್ ಮತ್ತು ಇತರ 12 ಮಂದಿ ವಿರುದ್ಧ ಬಿಎನ್ಎಸ್ ಸೆಕ್ಷನ್ 191 (ಗಲಭೆ) ಮತ್ತು 109 (ಕೊಲೆ ಯತ್ನ) ಹಾಗೂ ಎಸ್‌ಸಿ/ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆಯ ಸೆಕ್ಷನ್ 3 ರ ಅಡಿಯಲ್ಲಿ ಪೊಲಿಸರು ಪ್ರಕರಣ ದಾಖಲಿಸಿದ್ದಾರೆ. ಇದೀಗ, ಎಲ್ಲ ಆರೋಪಿಗಳನ್ನು ಬಂಧಿಸಿದ್ದಾರೆ.
ಈ ವರದಿ ಓದಿದ್ದೀರಾ?: ರಾಷ್ಟ್ರಪತಿ ಆಡಳಿತದಲ್ಲಿ ಮಣಿಪುರ ಹೇಗಿದೆ, ಜನರಿಗೆ ನೆಮ್ಮದಿ ಲಭಿಸುವುದೆ?
“ಎಲ್ಲ 15 ಆರೋಪಿಗಳನ್ನು ಬಂಧಿಸಲಾಗಿದೆ. ನಾವು ದಲಿತ ಕುಟುಂಬದೊಂದಿಗೆ ಸಂಪರ್ಕದಲ್ಲಿದ್ದೇವೆ. ಅವರ ಸುರಕ್ಷತೆಗೆ ಒತ್ತುಕೊಡುವುದಾಗಿ ಭರವಸೆ ನೀಡಿದ್ದೇವೆ. ಕುಟುಂಬವು ಮದುವೆಯನ್ನು ಮತ್ತೆ ನಿಗದಿ ಮಾಡಲು ಪ್ರಯತ್ನಿಸುತ್ತಿದೆ. ಇಬ್ಬರೂ ಯುವತಿಯರು ಯಾವುದೇ ಸಮಸ್ಯೆಗಳಿಲ್ಲದೆ ಮದುವೆ ಮಾಡಿಕೊಳ್ಳಲು ಭದ್ರತೆ ನೀಡುವ ಕೆಲಸ ಮಾಡುತ್ತಿದ್ದೇವೆ” ಎಂದು ರಿಫೈನರಿ ಪೊಲೀಸ್ ಠಾಣೆಯ ಎಸ್‌ಎಚ್‌ಒ ಸೋನು ಕುಮಾರ್ ಹೇಳಿದ್ದಾರೆ.