ಜೈಲು ಶಿಕ್ಷೆಯ ಅವಧಿ ಪೂರ್ಣಗೊಂಡಿದ್ದರೂ ಮೇಘಾಲಯದ ಜೈಲಿನಲ್ಲಿ 17 ವಿದೇಶಿ ಪ್ರಜೆಗಳು ಅಕ್ರಮವಾಗಿ ಬಂಧನದಲ್ಲಿರುವುದನ್ನು ಮೇಘಾಲಯ ಹೈಕೋರ್ಟ್ ಪತ್ತೆ ಹಚ್ಚಿದೆ. ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ರೇವತಿ ಮೋಹಿತೆ ದೀರೆ ಹಾಗೂ ನ್ಯಾಯಮೂರ್ತಿ ಡಬ್ಲ್ಯೂ. ದಿಯಾಂಗ್ಡೋ ಅವರಿದ್ದ ಪೀಠವು ಶಿಲ್ಲಾಂಗ್ ಜಿಲ್ಲಾ ಜೈಲಿಗೆ ದಿಢೀರ್ ಭೇಟಿ ನೀಡಿದಾಗ ಈ ಸತ್ಯ ಬೆಳಕಿಗೆ ಬಂದಿದೆ.
ಮೇಘಾಲಯ ಹೈಕೋರ್ಟ್ ಪೀಠವು ಜೈಲಿನ ಸ್ಥಿತಿಗತಿ ಹಾಗೂ ಕೈದಿಗಳಿಗೆ ಸಿಗುತ್ತಿರುವ ಕಾನೂನು ನೆರವು ಪರಿಶೀಲಿಸಲು ಶಿಲ್ಲಾಂಗ್ ಜೈಲಿಗೆ ಭೇಟಿ ನೀಡಿತ್ತು. ಈ ವೇಳೆ ಒಟ್ಟು 17 ವಿದೇಶಿ ಪ್ರಜೆಗಳು ತಮ್ಮ ಶಿಕ್ಷೆಯ ಅವಧಿ ಮುಗಿದಿದ್ದರೂ ಇನ್ನು ಜೈಲಿನಲ್ಲೇ ಇರುವುದು ಕಂಡುಬಂದಿದೆ. ಇವರಲ್ಲಿ 15 ಜನರು ಬಾಂಗ್ಲಾದೇಶ, ಒಬ್ಬರು ಮ್ಯಾನ್ಮಾರ್ ಹಾಗೂ ಒಬ್ಬರು ನೈಜೀರಿಯಾ ದೇಶಕ್ಕೆ ಸೇರಿದವರಾಗಿದ್ದಾರೆ.
ಇದನ್ನೂ ಓದಿ: ವಿಫಲಗೊಳ್ಳುತ್ತಿದೆ ಗೋಹತ್ಯೆ ನಿಷೇಧ; ಬಿಜೆಪಿಗೆ ತಿರುಗು ಬಾಣ
ಅತ್ಯಂತ ಗಂಭೀರ ವಿಚಾರವೆಂದರೆ, ಮ್ಯಾನ್ಮಾರ್ ದೇಶದ ಒಬ್ಬ ಪ್ರಜೆ ಶಿಕ್ಷೆ ಮುಗಿದರೂ ಕಳೆದ 10 ವರ್ಷಗಳಿಂದ ಜೈಲಿನಲ್ಲೇ ಉಳಿದುಕೊಂಡಿದ್ದಾರೆ. ಮತ್ತೊಬ್ಬ ಬಾಂಗ್ಲಾದೇಶಿ ಪ್ರಜೆ ತನ್ನ ಶಿಕ್ಷೆ ಪೂರ್ಣಗೊಂಡು 4 ವರ್ಷಗಳಾಗಿದ್ದರೂ ಬಿಡುಗಡೆಯಾಗಿಲ್ಲ. ಉಳಿದವರು 6 ತಿಂಗಳಿಂದ 2 ವರ್ಷಗಳಿಗೂ ಹೆಚ್ಚು ಕಾಲ ಹೆಚ್ಚುವರಿಯಾಗಿ ಜೈಲಿನಲ್ಲಿ ಕಾಲ ಕಳೆಯುತ್ತಿದ್ದಾರೆ.
ಶಿಕ್ಷೆ ಮುಗಿದ ನಂತರವೂ ವಿದೇಶಿ ಪ್ರಜೆಗಳನ್ನು ಜೈಲಿನಲ್ಲಿಡುವುದು ಸಂವಿಧಾನದ 21ನೇ ವಿಧಿಯ (ಜೀವಿಸುವ ಮತ್ತು ವೈಯಕ್ತಿಕ ಸ್ವಾತಂತ್ರ್ಯದ ಹಕ್ಕು) ನೇರ ಉಲ್ಲಂಘನೆ ಎಂದು ಹೈಕೋರ್ಟ್ ಕಿಡಿಕಾರಿದೆ.
ಇದಕ್ಕೂ ಮುನ್ನ ರಾಜ್ಯ ಸರ್ಕಾರದ ಪರ ವಕೀಲರು ಜೈಲಿನಲ್ಲಿ ಶಿಕ್ಷೆ ಮುಗಿದ ಒಬ್ಬ ಬಾಂಗ್ಲಾದೇಶಿ ಪ್ರಜೆ ಮಾತ್ರ ಇದ್ದಾರೆ ಎಂದು ನ್ಯಾಯಾಲಯಕ್ಕೆ ಮಾಹಿತಿ ನೀಡಿದ್ದರು. ಆದರೆ ನ್ಯಾಯಮೂರ್ತಿಗಳ ಜೈಲು ಭೇಟಿಯ ನಂತರ ಇದು ತಪ್ಪು ಮತ್ತು ದಾರಿತಪ್ಪಿಸುವ ಮಾಹಿತಿ ಎಂಬುದು ಸಾಬೀತಾಗಿದ್ದು, ಹೈಕೋರ್ಟ್ ಸರ್ಕಾರಕ್ಕೆ ತೀವ್ರ ತರಾಟೆ ತೆಗೆದುಕೊಂಡಿದೆ.
ರಾಜ್ಯದಲ್ಲಿ ವಿದೇಶಿಗರನ್ನು ಕಳುಹಿಸುವವರೆಗೆ (ಡಿಪೋರ್ಟೇಶನ್) ಇರಿಸಲು ಯಾವುದೇ ‘ಡಿಟೆನ್ಷನ್ ಸೆಂಟರ್’ (ತಡೆಗೋಡೆ ಕೇಂದ್ರಗಳು) ಇಲ್ಲದಿರುವುದೇ ಇದಕ್ಕೆ ಕಾರಣ ಎಂದು ಜೈಲು ಅಧಿಕಾರಿಗಳು ಸಮಜಾಯಿಷಿ ನೀಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಹೈಕೋರ್ಟ್, ತಕ್ಷಣವೇ ತಾತ್ಕಾಲಿಕ ಡಿಟೆನ್ಷನ್ ಸೆಂಟರ್ ಗುರುತಿಸುವಂತೆ ಹಾಗೂ ಅನಗತ್ಯವಾಗಿ ಜೈಲಿನಲ್ಲಿ ಬಂಧಿಯಾಗಿದ್ದ ವಿದೇಶಿ ಪ್ರಜೆಗಳಿಗೆ ಸೂಕ್ತ ಪರಿಹಾರ ನೀಡುವ ಬಗ್ಗೆ ಮುಂದಿನ ದಿನಗಳಲ್ಲಿ ತೀರ್ಮಾನಿಸುವುದಾಗಿ ತಿಳಿಸಿದೆ.





