ಗುಜರಾತ್ ರಾಜ್ಯದ ವಿರಾಮ್ ಗಾಮ್ ಗ್ರಾಮದಲ್ಲಿ ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆಗೆ ಒಳಗಾದ ನಂತರ 17 ಮಂದಿ ಅಂಧತ್ವ ಸಮಸ್ಯೆ ಅನುಭವಿಸುತ್ತಿದ್ದಾರೆ. ಖಾಸಗಿ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಶಸ್ತ್ರಚಿಕಿತ್ಸಕರ ವಿರುದ್ಧ ಉದಾಸೀನ ಚಿಕಿತ್ಸೆಯ ಗಂಭೀರ ಆರೋಪ ಕೇಳಿಬಂದಿದೆ.
ಈ ಸಮಸ್ಯೆಯಿಂದ ಐವರು ರೋಗಿಗಳು ಅಹಮದಾಬಾದ್ ಸಿವಿಲ್ ಆಸ್ಪತ್ರೆಗೆ ವೈದ್ಯಕೀಯ ಚಿಕಿತ್ಸೆಗಾಗಿ ತೆರಳಿದ್ದಾರೆ.
ಗುಜರಾತ್ ನ ಅಹಮದಾಬಾದ್ ಜಿಲ್ಲೆಯ ಮಂಡಲ್ ತಾಲೂಕಿನ ಸೇವಾ ನಿಕೇತನ ಟ್ರಸ್ಟ್‌ನ ಒಡೆತನದ ರಮಾನಂದ್ ಕಣ್ಣಿನ ಆಸ್ಪತ್ರೆಯು ಜನವರಿ 10 ರಂದು 28 ರೋಗಿಗಳಿಗೆ ಶಸ್ತ್ರಚಿಕಿತ್ಸೆ ನಡೆಸಿತ್ತು. 17 ರೋಗಿಗಳಿಗೆ ಶಸ್ತ್ರಚಿಕಿತ್ಸೆ ನಡೆಸಿದ ಕೆಲವೇ ದಿನಗಳಲ್ಲಿ ಕಡಿಮೆ/ಮಸುಕಾದ ದೃಷ್ಟಿ ಉಂಟಾಯಿತು ಹಾಗೂ ಹಲವರು ದೃಷ್ಟಿಯನ್ನು ಸಂಪೂರ್ಣವಾಗಿ ಕಳೆದುಕೊಂಡರು.
ರೋಗಿಗಳಲ್ಲಿ ಹೆಚ್ಚಾಗಿ ವಯಸ್ಸಾದವರು ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆಯ ನಂತರ ತೊಂದರೆ ಅನುಭವಿಸಿದರು. ಸಂತ್ರಸ್ತರ ಕುಟುಂಬದ ಪ್ರಕಾರ, ಆಸ್ಪತ್ರೆಯ ವೈದ್ಯರ ಸಂಪೂರ್ಣ ನಿರ್ಲಕ್ಷ್ಯದ ಪರಿಣಾಮವಾಗಿ ಇದು ಸಂಭವಿಸಿದೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಬಾಕಿ ಖಟ್ಲೆಗಳ ಭಾರದಡಿ ಕುಸಿದಿರುವ ನ್ಯಾಯಾಂಗ ಮತ್ತು ಸಿನಿಕ ಸಾರ್ವಜನಿಕರು
ಆಸ್ಪತ್ರೆಯ ವೈದ್ಯರ ವಿರುದ್ಧ ಆರೋಪಿಸಿದ ಸೋಲಂಕಿ ಗೋವಿಂದ್, ‘‘ಪತ್ನಿ ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆಗೆಂದು ಆ.10ರಂದು ರಮಾನಂದ್ ಕಣ್ಣಿನ ಆಸ್ಪತ್ರೆಗೆ ಹೋಗಿದ್ದೆವು. ಸಂಜೆ ವೈದ್ಯರು ಮನೆಗೆ ತೆರಳಲು ಅವಕಾಶ ಮಾಡಿಕೊಟ್ಟಿದ್ದು, ನನ್ನ ಪತ್ನಿ ಎರಡು ದಿನ ಚೆನ್ನಾಗಿದ್ದರು. ಮೂರನೆಯ ದಿನ ಅವಳು ತನ್ನ ದೃಷ್ಟಿಯನ್ನು ಸಂಪೂರ್ಣವಾಗಿ ಕಳೆದುಕೊಂಡಳು” ಎಂದರು.
“ನಾನು ಆಸ್ಪತ್ರೆಯ ವೈದ್ಯರನ್ನು ಸಂಪರ್ಕಿಸಿದೆ. ನಂತರ ಅವರು ಕಣ್ಣಿನ ಹನಿಗಳನ್ನು ಸೂಚಿಸಿದರು. ಆದರೆ ಹನಿಗಳು ಯಾವುದೇ ವ್ಯತ್ಯಾಸವನ್ನು ಮಾಡಲಿಲ್ಲ. ಆದ್ದರಿಂದ ಸೋಮವಾರ, ನಾವು ನನ್ನ ಹೆಂಡತಿಯನ್ನು ಅದೇ ಆಸ್ಪತ್ರೆಗೆ ಸೇರಿಸಿದ್ದೇವೆ. ಕಣ್ಣಿನ ಸಮಸ್ಯೆ ಕಡಿಮೆಯಾಗಿಲ್ಲ” ಎಂದು ಸೋಲಂಕಿ ಗೋವಿಂದ್ ಹೇಳಿದರು.
ಬಹುತೇಕರು ದೃಷ್ಟಿ ಕಳೆದುಕೊಂಡಿರುವ ಹಿನ್ನೆಲೆಯಲ್ಲಿ ಗುಜರಾತ್ ಸರ್ಕಾರವು ತನಿಖೆಗೆ ಒಂಬತ್ತು ಸದಸ್ಯರ ತಂಡವನ್ನು ನೇಮಿಸಿದೆ.
ಅಹಮದಾಬಾದ್ ವಲಯದ ಪ್ರಾದೇಶಿಕ ಆರೋಗ್ಯ ಉಪನಿರ್ದೇಶಕ ಡಾ. ಸತೀಶ್‌ಭಾಯ್ ಮಕ್ವಾನಾ ಮಾತನಾಡಿ, “ಐದು ಜನರನ್ನು ಅಹಮದಾಬಾದ್ ಆಸ್ಪತ್ರೆಗೆ ವರ್ಗಾಯಿಸಲಾಗಿದೆ, ಆದರೆ ಕಡಿಮೆ ಸಮಸ್ಯೆಗಳಿರುವ ಸುಮಾರು 12 ಜನರನ್ನು ಆಸ್ಪತ್ರೆಯಲ್ಲಿ ಇರಿಸಲಾಗಿದೆ. ಎಲ್ಲ ರೋಗಿಗಳನ್ನು ಪರಿವೀಕ್ಷಣೆಯಲ್ಲಿಡಲಾಗಿದೆ ” ಎಂದರು.
ಆಸ್ಪತ್ರೆಯ ಉಪಾಧ್ಯಕ್ಷ ನಾರಾಯಣ ದಳವಾಡಿ ಮಾತನಾಡಿ, “ಈ ಸಂಸ್ಥೆಯು ಕಳೆದ 40 ವರ್ಷಗಳಿಂದ ಈ ಆಸ್ಪತ್ರೆಯನ್ನು ನಡೆಸುತ್ತಿದೆ. ಒಂದು ಲಕ್ಷಕ್ಕೂ ಹೆಚ್ಚು ಶಸ್ತ್ರಚಿಕಿತ್ಸೆಗಳನ್ನು ಮಾಡಲಾಗಿದೆ. ಆದರೆ ಇದುವರೆಗೆ ದೂರು ಬಂದಿಲ್ಲ. ಬಹುಶಃ ಇದು ವೈರಸ್ ಆಗಿರುವ ಸಾಧ್ಯತೆಯಿದ್ದು, ತನಿಖೆ ನಡೆಸಲಾಗುತ್ತಿದೆ” ಎಂದರು.