ಕಳೆದ 24 ಗಂಟೆಗಳಲ್ಲಿ ಹರಿಯಾಣ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಇನ್ನೂ ನಾಲ್ವರು ಸಾವನ್ನಪ್ಪಿದ್ದು, ನಾಲ್ಕು ದಿನಗಳಲ್ಲಿ ನಕಲಿ ಮದ್ಯ ಸೇವನೆಯಿಂದ ಮೃತಪಟ್ಟವರ ಸಂಖ್ಯೆ 18 ಕ್ಕೆ ತಲುಪಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಯಮುನಾನಗರ ಜಿಲ್ಲೆಯ ಪಂಜೆಟೊ ಕಾ ಮಜ್ರಾ ಮತ್ತು ಫೂಸ್ಗಢ್ ಸೇರಿದಂತೆ ಐದು ಗ್ರಾಮಗಳಲ್ಲಿ ಕಳೆದ ನಾಲ್ಕು ದಿನಗಳಲ್ಲಿ ಈ ಘಟನೆ ಸಂಭವಿಸಿದೆ.
ಪ್ರಕರಣದ ತನಿಖೆಗಾಗಿ ವಿಶೇಷ ತನಿಖಾ ತಂಡವನ್ನು (ಎಸ್ಐಟಿ) ರಚಿಸಿರುವ ಯಮುನಾನಗರ ಪೊಲೀಸರು, ಇಬ್ಬರು ಅಕ್ರಮ ಮಾರಾಟಗಾರರು ಸೇರಿದಂತೆ ಒಟ್ಟು 10 ಮಂದಿಯನ್ನು ಬಂಧಿಸಿದ್ದಾರೆ
ಯಮುನಾನಗರದ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಹಿಮಾದ್ರಿ ಕೌಶಿಕ್, “ಯಮುನಾನಗರದಲ್ಲಿ 16 ಜನರು ಸಾವನ್ನಪ್ಪಿದ್ದಾರೆ. ಕೆಲವು ಪ್ರಮುಖ ಆರೋಪಿಗಳು ಸೇರಿದಂತೆ ಏಳು ಮಂದಿಯನ್ನು ಬಂಧಿಸಿದ್ದೇವೆ. ಬಂಧಿತರು ಇನ್ನೂ ಅನೇಕರ ಹೆಸರನ್ನು ಬಹಿರಂಗಪಡಿಸಿದ್ದಾರೆ. ದುರಂತದ ಹೆನ್ನೆಲೆಯಲ್ಲಿ ಮದ್ಯವನ್ನು ಸೇವಿಸದಂತೆ ನಾವು ಗ್ರಾಮಸ್ಥರಿಗೆ ಎಚ್ಚರಿಕೆ ನೀಡುತ್ತಿದ್ದೇವೆ” ಎಂದು ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ವಿಶ್ವಕಪ್ | ಬೆಂಗಳೂರಿನ ಇಂದಿನ ಪಂದ್ಯದಲ್ಲಿ ಸಚಿನ್ ದಾಖಲೆ ಮುರಿಯುವರೇ ವಿರಾಟ್ ಕೊಹ್ಲಿ?
ಕಠಿಣ ಕ್ರಮಕ್ಕೆ ಒತ್ತಾಯಿಸಿರುವ ಹರಿಯಾಣದ ಮಾಜಿ ಮುಖ್ಯಮಂತ್ರಿ ಮತ್ತು ಕಾಂಗ್ರೆಸ್ ನಾಯಕ ಭೂಪಿಂದರ್ ಸಿಂಗ್ ಹೂಡಾ, ಈ ಹಿಂದೆ ಇಂತಹ ಹಲವಾರು ಘಟನೆಗಳಿಂದ ಯಾವುದೇ ಪಾಠ ಕಲಿಯಲು ರಾಜ್ಯ ಸರ್ಕಾರ ವಿಫಲವಾಗಿದೆ. ಬಿಜೆಪಿ-ಜೆಜೆಪಿ ಸರ್ಕಾರದ ಆಶ್ರಯದಲ್ಲಿ ಹರಿಯಾಣ ರಾಜ್ಯದಲ್ಲಿ ಅಮಲು ಪದಾರ್ಥಗಳ ವ್ಯಾಪಾರವು ಹೆಚ್ಚಾಗುತ್ತಿದೆ. ಇದು ಸರ್ಕಾರದ ವೈಫಲ್ಯದ ಪರಿಣಾಮವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಭಾರತೀಯ ರಾಷ್ಟ್ರೀಯ ಲೋಕದಳ ನಾಯಕ ಅಭಯ್ ಚೌತಾಲಾ ಮಾತನಾಡಿ, ಹಿಂದಿನ ಘಟನೆಗಳಲ್ಲಿ ಕ್ರಮ ಕೈಗೊಂಡಿದ್ದರೆ ಹೊಸ ಸಾವುಗಳನ್ನು ತಪ್ಪಿಸಬಹುದಿತ್ತು ಎಂದಿದ್ದಾರೆ.
ಸಂತ್ರಸ್ತರ ಕುಟುಂಬಗಳಿಗೆ ಆರ್ಥಿಕ ನೆರವು ನೀಡಲು ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಅವರೊಂದಿಗೆ ಮಾತನಾಡುವುದಾಗಿ ಹರಿಯಾಣದ ಶಾಲಾ ಶಿಕ್ಷಣ ಸಚಿವ ಮತ್ತು ಯಮುನಾನಗರ ಜಿಲ್ಲೆಯ ಜಗದ್ರಿಯ ಭಾರತೀಯ ಜನತಾ ಪಕ್ಷದ ಶಾಸಕ ಕನ್ವರ್ ಪಾಲ್ ಹೇಳಿದ್ದಾರೆ.