ಇಂದು 18ನೇ ಲೋಕಸಭಾ ಚುನಾವಣೆಯ 542 ಕ್ಷೇತ್ರಗಳು ಹಾಗೂ ಆಂಧ್ರ ಪ್ರದೇಶ, ಒಡಿಶಾ ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆ ಬೆಳಿಗ್ಗೆ 8 ಗಂಟೆಗೆ ಆರಂಭವಾಗಲಿದೆ. ಮಧ್ಯಾಹ್ನ 1 ಗಂಟೆಯ ವೇಳೆಗೆ ಫಲಿತಾಂಶದ ಬಹುತೇಕ ಸ್ಪಷ್ಟ ಚಿತ್ರಣ ಲಭ್ಯವಾಗಲಿದೆ. ಮೊದಲು 8ರಿಂದ 9ಗಂಟೆಗಳ ಕಾಲ ಅಂಚೆ ಮತ ಎಣಿಕೆ 9 ಗಂಟೆಯಿಂದ ವಿದ್ಯುನ್ಮಾನ ಮತ ಎಣಿಕೆ ನಡೆಯಲಿದೆ.
8360 ಅಭ್ಯರ್ಥಿಗಳ ಭವಿಷ್ಯ ಇಂದು ನಿರ್ಧಾರವಾಗಲಿದೆ. ಮತ ಎಣಿಕೆಗೆ 70 ಲಕ್ಷದಿಂದ 80 ಲಕ್ಷ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ಚುನಾವಣಾ ಆಯೋಗದ ಮೂಲಗಳು ತಿಳಿಸಿವೆ.ಒಟ್ಟು 543 ಕ್ಷೇತ್ರಗಳಲ್ಲಿ ಈಗಾಗಲೇ ಗುಜರಾತ್‌ನ ಸೂರತ್ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ನಾಳೆ ನಡೆಯುವ ಮತ ಎಣಿಕೆಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸೇರಿದಂತೆ ಘಟಾನುಘಟಿಗಳ ರಾಜಕೀಯ ಭವಿಷ್ಯ ನಿರ್ಧಾರವಾಗಲಿದೆ.
18ನೇ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನ 285 ಕ್ಷೇತ್ರಗಳು ಸೇರಿದಂತೆ ಇಂಡಿಯಾ ಒಕ್ಕೂಟದ 466 ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ. ಇವರಲ್ಲಿ ಸಮಾಜವಾದಿ ಪಕ್ಷದಿಂದ 62, ಆರ್‌ಜೆಡಿ 24, ಡಿಎಂಕೆ 21,ಉದ್ಧವ್ ಬಣದ ಶಿವಸೇನಾದಿಂದ 21 ಅಭ್ಯರ್ಥಿಗಳು ಕಣದಲ್ಲಿದ್ದಾರೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಹಣದ ಹರಿವು, ಆತ್ಮಹತ್ಯೆಗಳು, ಅಧಿಕಾರಸ್ಥರು ಮತ್ತು ಬಡವರು
ಎನ್‌ಡಿಎ ಒಕ್ಕೂಟದಿಂದ ಒಟ್ಟು 540 ಮಂದಿ ಸ್ಪರ್ಧಿಸಿದ್ದಾರೆ. ಇವರಲ್ಲಿ ಬಿಜೆಪಿಯಿಂದ 441, ಟಿಡಿಪಿ 17,ಜೆಡಿಯು 16, ಏಕನಾಥ್ ಶಿಂಧೆ ಬಣದ ಶಿವಸೇನೆಯ 15 ಸ್ಪರ್ಧಿಗಳು ಸ್ಪರ್ಧಿಸಿದ್ದಾರೆ.
ನಾಳೆಯೇ ಒಡಿಶಾ ಹಾಗೂ ಆಂಧ್ರ ಪ್ರದೇಶ ವಿಧಾನಸಭೆಯ ಫಲಿತಾಂಶ ಕೂಡ ಹೊರಬೀಳಲಿದೆ. ಅಧಿಕಾರದಲ್ಲಿರುವ ಆಂಧ್ರದ ವೈಎಸ್‌ಆರ್‌ಸಿ ಪಕ್ಷದ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಹಾಗೂ ಒಡಿಶಾದ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರ ಬಿಜೆಡಿ ಪಕ್ಷದ ತೀರ್ಪು ಕೂಡ ಪ್ರಕಟವಾಗಲಿದೆ.
ಬಹುತೇಕ ಚುನಾವಣೋತ್ತರ ಸಮೀಕ್ಷೆಗಳು ಎನ್‌ಡಿಎ ಒಕ್ಕೂಟ ಮೂರನೇ ಬಾರಿ ಅಧಿಕಾರಕ್ಕೆ ಬರುತ್ತದೆ ಎಂದು ಭವಿಷ್ಯ ನುಡಿದಿವೆ. ಇಂಡಿಯಾ ಒಕ್ಕೂಟದ ನಾಯಕರು ಇದನ್ನು ಅಲ್ಲಗೆಳದಿದ್ದು ಭ್ರಷ್ಟಾಚಾರ ಸೇರಿದಂತೆ ಹಲವು ವಿಷಯಗಳು ಈ ಬಾರಿಯ ಚುನಾವಣೆಯಲ್ಲಿ ಪ್ರಮುಖ ಪಾತ್ರ ವಹಿಸಲಿದೆ. ಅಲ್ಲದೆ ತಮ್ಮ ಒಕ್ಕೂಟ 295ಕ್ಕೂ ಹೆಚ್ಚು ಸ್ಥಾನಗಳಲ್ಲಿ ಜಯಗಳಿಸಲಿದೆ ಎಂದು ಹೇಳಿದ್ದಾರೆ.
ಏ.19ರಿಂದ ಮೊದಲ ಹಂತದಿಂದ ಆರಂಭವಾದ ಲೋಕಸಭಾ ಚುನಾವಣೆ ಜೂನ್ 1ರವರೆಗೂ ಒಟ್ಟು 7 ಹಂತಗಳಲ್ಲಿ ನಡೆದಿತ್ತು.ದೇಶದ 28 ರಾಜ್ಯಗಳು ಹಾಗೂ 8 ಕೇಂದ್ರಾಡಳಿತ ಪ್ರದೇಶಗಳ ಒಟ್ಟು 64.2 ಕೋಟಿ ಮತದಾರರು ತಮ್ಮ ಹಕ್ಕು ಚಲಾಯಿಸಿದ್ದರು.
