ತೆಲಂಗಾಣ ಸರ್ಕಾರ ನಡೆಸುತ್ತಿರುವ ಪರಿಶಿಷ್ಟ ಜಾತಿ ಸಮುದಾಯದ ಹಾಸ್ಟೆಲ್‌ನಲ್ಲಿ ಇಬ್ಬರು ದಲಿತ ಸಮುದಾಯದ ಶಾಲಾ ಬಾಲಕಿಯರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹೈದರಾಬಾದ್‌ನಲ್ಲಿ ನಡೆದಿದೆ. ಶಿಕ್ಷಕರ ಅನುಚಿತ ವರ್ತನೆಯೆ ವಿದ್ಯಾರ್ಥಿನಿಯರ ಆತ್ಮಹತ್ಯೆಗೆ ಕಾರಣ ಎನ್ನಲಾಗಿದೆ.
ಆತ್ಮಹತ್ಯೆ ಮಾಡಿಕೊಂಡ ಬಾಲಕಿಯರು 10ನೇ ತರಗತಿ ವ್ಯಾಸಂಗ ಮಾಡುತ್ತಿದ್ದು, ಶಿಕ್ಷಕರೊಬ್ಬರು ಬಾಲಕಿಯರ ವಿರುದ್ಧ ಮಾಡಿದ ಆರೋಪದಿಂದಾಗಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಆತ್ಮಹತ್ಯೆ ಚೀಟಿಯಲ್ಲಿ ವಿದ್ಯಾರ್ಥಿನಿಯರು ಬರೆದಿದ್ದಾರೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಕಾಂಗ್ರೆಸ್ಸಿನ ದಿಲ್ಲಿ ಚಲೋ ಮತ್ತು ಬಿಜೆಪಿಯ ಭಂಡತನ
“ನಮ್ಮನ್ನು ಯಾರು ನಂಬಲಿಲ್ಲ. ನಾವು ಮಾಡದ ತಪ್ಪಿಗೆ ನಮ್ಮನ್ನು ಸಿಕ್ಕಿಸಲಾಗಿದೆ. ನಮಗೆ ಇದರಿಂದ ಹೊರಬರಲು ಸಾಧ್ಯವಾಗುತ್ತಿಲ್ಲ. ಅದಕ್ಕಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇವೆ. ನಾವು ತಪ್ಪಿತಸ್ಥರಲ್ಲ ಎಂಬುದನ್ನು ಹಾಸ್ಟೆಲ್ ವಾರ್ಡನ್ ಮಾತ್ರ ನಂಬಿದ್ದರು. ನಮ್ಮನ್ನು ಒಟ್ಟಿಗೆ ಅಂತ್ಯಸಂಸ್ಕಾರ ಮಾಡಿ” ಎಂದು ಆತ್ಮಹತ್ಯೆ ಚೀಟಿಯಲ್ಲಿ ಬರೆದಿಟ್ಟಿದ್ದಾರೆ.
“ಸಣ್ಣ ವಿಷಯಕ್ಕಾಗಿ ಈ ಇಬ್ಬರು ವಿದ್ಯಾರ್ಥಿನಿಯರ ವಿರುದ್ಧ ಕೆಳ ತರಗತಿಯ ವಿದ್ಯಾರ್ಥಿಗಳಿಂದ ದೂರು ಬಂದ ಕಾರಣ ಈ ಘಟನೆ ನಡೆದಿದೆ. ವಾರ್ಡನ್ ಇವರಿಬ್ಬರನ್ನು ಭೇಟಿ ಮಾಡಿ ಸಮಾಲೋಚನೆ ನಡೆಸಿದ್ದರು. ಆದರೆ ಕೆಲವು ಘಟನೆಯ ಬಗ್ಗೆ ಇಬ್ಬರು ಬಾಲಕಿಯರು ಕುಗ್ಗಿ ಹೋಗಿದ್ದರು” ಎಂದು ಜಿಲ್ಲಾ ಶಿಕ್ಷಣ ಅಧಿಕಾರಿ ನಾರಾಯಣ ರೆಡ್ಡಿ ತಿಳಿಸಿದ್ದಾರೆ.