ದಕ್ಷಿಣ ದೆಹಲಿಯ ಮಾಳವೀಯ ನಗರದಲ್ಲಿ ಬುಧವಾರ ಮುಂಜಾನೆ ಸಂಭವಿಸಿದ ಭೀಕರ ಅಗ್ನಿ ದುರಂತದಲ್ಲಿ 21 ಜನರು ಸಾವನ್ನಪ್ಪಿದ ‘ಫ್ಲೋರಿಶ್ ಸ್ಟೇಸ್ ಬಿ&ಬಿ’ ಹೋಟೆಲ್‌ನ ಮಾಲೀಕ ಲವಕೇಶ್ ಬಜಾಜ್‌ನನ್ನು ಬೇರೊಂದು ಪ್ರಕರಣದಲ್ಲಿ ಪೊಲೀಸರು ಬಂಧಿಸಿದ್ದಾರೆ. ಲವಕೇಶ್ ಅವರು ಬಾಂಗ್ಲಾದೇಶಿ ಪ್ರಜೆಗಳಿಗೆ ಸಂಬಂಧಿಸಿದ ನಕಲಿ ಪಾಸ್‌ಪೋರ್ಟ್ ಪ್ರಕರಣದಲ್ಲಿ ಆರೋಪಿಯಾಗಿದ್ದಾರೆ. ಅವರನ್ನು ಕಳೆದ ವರ್ಷವೇ ಪೊಲೀಸರು ಬಂಧಿಸಿದ್ದರು. ಬಳಿಕ, ಅವರು ಜಾಮೀನು ಪಡೆದು ಹೊರಬಂದಿದ್ದರು. ಇದೀಗ ಮತ್ತೆ ಬಂಧಿಸಲಾಗಿದೆ.
ಬುಧವಾರ ಸಂಜೆ, ಸಹಾಯಕ ಪೊಲೀಸ್ ಕಮಿಷನರ್ ರಿತು ರಾಜ್ ನೇತೃತ್ವದ ತಂಡವು ಲವಕೇಶ್ ಬಜಾಜ್‌ನನ್ನು ಬಂಧಿಸಿದೆ. ಜೊತೆಗೆ, ‘ಫ್ಲೋರಿಶ್ ಸ್ಟೇಸ್’ ಹೋಟೆಲ್ ಕಾರ್ಯಾಚರಣೆಯಲ್ಲಿ ತೊಡಗಿರುವ ಎಲ್ಲ ಕಾರ್ಮಿಕರು, ಉದ್ಯೋಗಿಗಳು ಮತ್ತು ಇತರರ ವಿವರಗಳನ್ನು ಪತ್ತೆಹಚ್ಚಲು ಮತ್ತು ಪರಿಶೀಲಿಸಲು ಹಾಗೂ ತಲೆಮರೆಸಿಕೊಂಡಿರುವ ಹೋಟೆಲ್‌ನ ಅಕೌಂಟೆಂಟ್ ಜಯ್ ಮಿಶ್ರಾ ಮತ್ತು ಮ್ಯಾನೇಜರ್ ರಾಕೇಶ್‌ನನ್ನು ಬಂಧಿಸಲು ಪೊಲೀಸರು ಶೋಧ ನಡೆಸುತ್ತಿದ್ದಾರೆ.
ಲವಕೇಶ್ ಸದ್ಯ ನಾಲ್ಕು ದಿನಗಳ ಪೊಲೀಸ್ ಕಸ್ಟಡಿಯಲ್ಲಿದ್ದು, ಆತನನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಲಾಗಿದೆ. ಮಿಶ್ರಾನನ್ನು ಹಿಡಿಯಲು ಪೊಲೀಸರು ದಾಳಿ ನಡೆಸುತ್ತಿದ್ದು, ಆತನ ತವರೂರಾದ ಬಿಹಾರಕ್ಕೂ ಒಂದು ತಂಡವನ್ನು ಕಳುಹಿಸಲಾಗಿದೆ.
ದೆಹಲಿ ಪೊಲೀಸ್ ಮೂಲಗಳ ಪ್ರಕಾರ, 2025ರ ಪ್ರಕರಣವು ಮಧ್ಯ ದೆಹಲಿಯ ಪಹಡ್‌ಗಂಜ್‌ನಲ್ಲಿ ಅಕ್ರಮವಾಗಿ ವಾಸಿಸುತ್ತಿದ್ದ ಹಲವಾರು ಬಾಂಗ್ಲಾದೇಶಿ ಪ್ರಜೆಗಳ ಬಂಧನಕ್ಕೆ ಸಂಬಂಧಿಸಿದ್ದಾಗಿದೆ. ಪಹಡ್‌ಗಂಜ್ ಪೊಲೀಸ್ ಠಾಣೆಯ ತಂಡವು ಈ ಬಗ್ಗೆ ಸಮಗ್ರ ತನಿಖೆ ನಡೆಸಿ, ಅಕ್ರಮ ವಲಸಿಗರಿಗೆ ನಕಲಿ ಪಾಸ್‌ಪೋರ್ಟ್‌ಗಳನ್ನು ಒದಗಿಸುವಲ್ಲಿ ಲವಕೇಶ್‌ನ ಪಾತ್ರ ಇರುವುದನ್ನು ಪತ್ತೆಹಚ್ಚಿತ್ತು. ಈ ಪ್ರಕರಣದ ಸಂಪೂರ್ಣ ವಿವರಗಳನ್ನು ನೀಡುವಂತೆ ದಕ್ಷಿಣ ದೆಹಲಿ ಪೊಲೀಸರು ಈಗ ಮಧ್ಯ ದೆಹಲಿ ಪೊಲೀಸರನ್ನು ಕೋರಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಪಹಡ್‌ಗಂಜ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾದ ನಂತರ ಲವಕೇಶ್‌ನನ್ನು ಕಳೆದ ವರ್ಷ ಬಂಧಿಸಲಾಗಿತ್ತು. ತನಿಖೆಯ ಸಮಯದಲ್ಲಿ ಆತನ ಶಾಮೀಲಾತಿ ಸಾಬೀತಾಗಿದ್ದರಿಂದ, ಆತನನ್ನು ತಿಹಾರ್ ಜೈಲಿಗೆ ಕಳುಹಿಸಲಾಗಿತ್ತು. 15 ದಿನ ಜೈಲಿನಲ್ಲಿದ್ದ ಆತ ಜಾಮೀನಿನ ಮೇಲೆ ಹೊರಬಂದಿದ್ದ” ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಪ್ರಕರಣವು ಇನ್ನುೂ ನ್ಯಾಯಾಲಯದ ವಿಚಾರಣೆಯಲ್ಲಿದೆ ಎಂದು ವಿವರಿಸಿದ್ದಾರೆ.
ಈ ಲೇಖನ ಓದಿದ್ದೀರಾ?: ಅಂಗನವಾಡಿಗಳಲ್ಲಿ ಜಾತಿಭೂತ: ಹಸುಳೆಗಳ ಊಟ- ಆಟದ ಅಂಗಳಗಳಲ್ಲಿ ಜಾತೀಯತೆಯ ಅದೃಶ್ಯ ಗೋಡೆಗಳು
ಪಹಡ್‌ಗಂಜ್ ಪೊಲೀಸ್ ಠಾಣೆಯಲ್ಲಿ ದಾಖಲಾದ ಎಫ್‌ಐಆರ್ ಪ್ರಕಾರ, 2025ರ ಜನವರಿ 29ರಂದು ಮಧ್ಯ ದೆಹಲಿಯ ಪಹಡ್‌ಗಂಜ್ ಪ್ರದೇಶದಲ್ಲಿ ಬಾಂಗ್ಲಾದೇಶಿ ಪ್ರಜೆಯೊಬ್ಬ ನಕಲಿ ಭಾರತೀಯ ಗುರುತಿನ ದಾಖಲೆಗಳನ್ನು (ಭಾರತೀಯ ಪಾಸ್‌ಪೋರ್ಟ್ ಸೇರಿದಂತೆ) ಬಳಸಿಕೊಂಡು ವಾಸಿಸುತ್ತಿರುವುದು ಪತ್ತೆಯಾಗಿತ್ತು. ಆತನ ಮನೆಗೆ ಪೊಲೀಸರು ತೆರಳಿದ್ದಾಗ, ಅಲ್ಲಿ ಇಬ್ಬರು ಮಹಿಳೆಯರು ಮತ್ತು ಒಬ್ಬ ಅಪ್ರಾಪ್ತ ಬಾಲಕ ಪತ್ತೆಯಾಗಿದ್ದರು. ಅವರು ಮಾನ್ಯವಾದ ಗುರುತಿನ ದಾಖಲೆಗಳನ್ನು ಪ್ರಸ್ತುತಪಡಿಸಲು ವಿಫಲರಾಗಿದ್ದರು. ಮನೆಯನ್ನು ಶೋಧಿಸಿದಾಗ ಪೊಲೀಸರು ಎರಡು ಬಾಂಗ್ಲಾದೇಶಿ ಪಾಸ್‌ಪೋರ್ಟ್‌ಗಳು, ಒಂದು ಭಾರತೀಯ ಪಾಸ್‌ಪೋರ್ಟ್, ಭಾರತೀಯ ಗುರುತಿನ ಚೀಟಿಗಳು ಹಾಗೂ ಹಲವಾರು ಬ್ಯಾಂಕ್ ಸಂಬಂಧಿತ ದಾಖಲೆಗಳನ್ನು ವಶಪಡಿಸಿಕೊಂಡಿದ್ದರು.




