ಉತ್ತರಾಖಂಡ್ ಹಿಮಾಲಯದ ಗರ್‌ವಾಲ್ ಪರ್ವತ ಶ್ರೇಣಿಗಳಲ್ಲಿನ ಸಹಸ್ತ್ರ ತಲ್ ಮಾಯಾಲಿಗೆ ಬೆಂಗಳೂರಿನಿಂದ ಚಾರಣಕ್ಕೆ ತೆರಳಿದ್ದ 19 ಮಂದಿಯಲ್ಲಿ ನಾಲ್ವರು ಮೃತಪಟ್ಟಿದ್ದಾರೆ.
ಉತ್ತರಾಖಂಡ್‌ನ ಕಂದಾಯ ಇಲಾಖೆಯ ಮಾಹಿತಿಯಂತೆ ಅಲ್ಲಿನ ಪ್ರದೇಶದಲ್ಲಿನ ಹವಾಮಾನ ವೈಪರೀತ್ಯದಿಂದಾಗಿ ನಾಲ್ವರು ಚಾರಣಿಗರು ಸಾವನ್ನಪ್ಪಿದ್ದಾರೆ.
ರಾಜ್ಯ ವಿಪತ್ತು ಕಾರ್ಯಾಚರಣೆ ಪಡೆ ಹಾಗೂ ರಾಷ್ಟ್ರೀಯ ವಿಪತ್ತು ಕಾರ್ಯಾಚರಣೆ ಪಡೆ ಪರಿಹಾರ ಕಾರ್ಯಾಚರಣೆ ನಡೆಸುತ್ತಿದ್ದು, ಆರು ಚಾರಣಿಗರನ್ನು ರಕ್ಷಿಸಿದೆ.
ಚಾರಣಿಗರನ್ನು ರಕ್ಷಿಸಲು ಹೆಚ್ಚಿನ ನೆರವಿಗಾಗಿ ಭಾರತೀಯ ವಾಯುಪಡೆಯ ಹೆಲಿಕಾಪ್ಟರ್‌ಅನ್ನು ಕೋರಲಾಗಿದೆ. ರಕ್ಷಣಾ ಕಾರ್ಯಾಚರಣೆಯಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿ ಜೊತೆ ಸ್ಥಳೀಯ ಗ್ರಾಮಸ್ಥರು ಸಹಾಯದಲ್ಲಿ ತೊಡಗಿಸಿಕೊಂಡಿದ್ದಾರೆ.
ವಿವಿಧ ಸಂಸ್ಥೆಯ ನಾಲ್ಕು ಹೆಲಿಕಾಪ್ಟರ್‌ಅನ್ನು ಪರಿಹಾರ ಕಾರ್ಯಾಚರಣೆಗೆ ಬಳಸಿಕೊಳ್ಳಲಾಗುತ್ತಿದ್ದು, ರಕ್ಷಿಸಲಾದ ಚಾರಣಿಗರನ್ನು ಏರ್‌ಲಿಫ್ಟ್ ಮೂಲಕ ಡೆಹ್ರಾಡೂನ್‌ಗೆ ಕರೆತರಲಾಗಿದ್ದು, ತುರ್ತು ವೈದ್ಯಕೀಯ ನೆರವು ನೀಡಲಾಗಿದೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಪ್ರಜಾಪ್ರಭುತ್ವದ ಮೇಲೆ ಸವಾರಿ ಮಾಡುವವರಿಗೆ ಪಾಠ ಕಲಿಸಿದ ಫಲಿತಾಂಶ
“ಸ್ಥಳದಲ್ಲಿ ಹವಾಮಾನ ಪರಿಸ್ಥಿತಿ ತುಂಬ ಕೆಟ್ಟದಾಗಿದೆ. ಹೆಚ್ಚು ಹಿಮ ಹಾಗೂ ಮಳೆ ಬೀಳುತ್ತಿರುವುದರಿಂದ ಗೋಚರತೆ ಕಡಿಮೆಯಿದೆ. ಈ ಕಾರಣದಿಂದ ಪರಿಹಾರ ಹೆಲಿಕಾಪ್ಟರ್ ಟೇಕ್‌ಆಫ್ ಆಗಿಲ್ಲ. ಆದಾಗ್ಯೂ ಎರಡು ಪರಿಹಾರ ತಂಡಗಳು ಕಣಿವೆಯಲ್ಲಿ ಸಿಲುಕಿಕೊಂಡಿರುವ ಬಳಿ ತೆರಳುತ್ತಿವೆ. ಇಂದು ಬೆಳಿಗ್ಗೆ ಹವಾಮಾನ ಪರಿಸ್ಥಿತಿ ಒಂಚೂರು ಸುಧಾರಿಸಿತ್ತು. ಪರಿಹಾರ ಹೆಲಿಕಾಪ್ಟರ್ ಕಣಿವೆಯಲ್ಲಿ ಸಿಲುಕಿಕೊಂಡಿದ್ದ ಇಬ್ಬರು ಚಾರಣಿಗರನ್ನು ಕರೆತಂದಿದ್ದು, ಅವರ ಆರೋಗ್ಯ ಸ್ಥಿತಿ ಹದಗೆಟ್ಟಿದೆ” ಎಂದು ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ವಿ ರಶ್ಮಿ ಮಹೇಶ್ ತಿಳಿಸಿದ್ದಾರೆ.
ಪರಿಹಾರ ಕಾರ್ಯಾಚರಣೆ ನಡೆಸುತ್ತಿರುವ ಬಗ್ಗೆ ರಾಜ್ಯ ಸರ್ಕಾರ ಮೇಲ್ವಿಚಾರಣೆ ನಡೆಸುತ್ತಿದ್ದು, ಕರ್ನಾಟಕ ಸರ್ಕಾರ ಕೂಡ ಪರಿಹಾರ ಕಾರ್ಯಾಚರಣೆಗೆ ಸಹಕರಿಸಲು ಉತ್ತರಾಖಂಡ್‌ಗೆ ಒಬ್ಬರು ಅಧಿಕಾರಿಗಳನ್ನು ಕಳಿಸುವ ಸಾಧ್ಯತೆಯಿದೆ.
ಇಂದು ಸಂಜೆಯೊಳಗೆ ಪರಿಹಾರ ಕಾರ್ಯಚರಣೆ ಮುಕ್ತಾಯಗೊಳ್ಳುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.
ಖಾಸಗಿ ಸಂಸ್ಥೆಯ ಮೂಲಕ ಚಾರಣಿಗರು ಪರ್ವತ ಶ್ರೇಣಿಗಳಿಗೆ ತೆರಳಿದ್ದರು ಎನ್ನಲಾಗಿದೆ.
