ಜಮ್ಮು ಕಾಶ್ಮೀರದ ಕಿಶ್ತ್‌ವಾಡ ಜಿಲ್ಲೆಯ ಚಸೋತಿ ಪ್ರದೇಶದಲ್ಲಿ ಗುರುವಾರ ಮಧ್ಯಾಹ್ನ ಸಂಭವಿಸಿದ ಭೀಕರ ಮೇಘಸ್ಫೋಟದಿಂದಾಗಿ ಉಂಟಾದ ಹಠಾತ್ ಪ್ರವಾಹದಲ್ಲಿ 40 ಮಂದಿ ಮೃತಪಟ್ಟಿದ್ದು, 200ಕ್ಕೂ ಹೆಚ್ಚು ಜನರು ನಾಪತ್ತೆಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರವಾಹದಿಂದಾಗಿ 120ಕ್ಕೂ ಅಧಿಕ ಜನರನ್ನು ರಕ್ಷಿಸಲಾಗಿದ್ದು, 38 ಗಾಯಾಳುಗಳ ಸ್ಥಿತಿ ಗಂಭೀರವಾಗಿದೆ. ಮೃತರಲ್ಲಿ ಕೇಂದ್ರೀಯ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್)ಯ ಇಬ್ಬರು ಸಿಬ್ಬಂದಿ ಸೇರಿದ್ದಾರೆ. ಸಾವಿನ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದ್ದು, ರಕ್ಷಣಾ ಕಾರ್ಯಾಚರಣೆ ತೀವ್ರಗೊಂಡಿದೆ.
ಚಸೋತಿ ಗ್ರಾಮವು ಕಿಶ್ತ್‌ವಾಡದಿಂದ ಸುಮಾರು 90 ಕಿ.ಮೀ ದೂರದಲ್ಲಿದ್ದು, 9,500 ಅಡಿ ಎತ್ತರದಲ್ಲಿರುವ ಈ ಪ್ರದೇಶವು ಮಚೈಲ್ ಮಾತಾ ದೇವಾಲಯಕ್ಕೆ ತೆರಳುವ ಯಾತ್ರಿಗರಿಗೆ ಪ್ರಮುಖ ಕೇಂದ್ರವಾಗಿದೆ. ದೇವಾಲಯಕ್ಕೆ 8.5 ಕಿ.ಮೀ. ಪಾದಯಾತ್ರೆಯು ಚಸೋತಿಯಿಂದ ಆರಂಭವಾಗುತ್ತದೆ. ಘಟನೆಯ ಸಮಯದಲ್ಲಿ ದೇವಾಲಯಕ್ಕೆ ತೆರಳಲು ದೊಡ್ಡ ಸಂಖ್ಯೆಯ ಭಕ್ತರು ಗ್ರಾಮದಲ್ಲಿ ಜಮಾಯಿಸಿದ್ದರು. ಈ ದುರಂತದಿಂದಾಗಿ ವಾರ್ಷಿಕ ಮಚೈಲ್ ಮಾತಾ ಯಾತ್ರೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಅವಾಂತರಕಾರಿ ಆಸಿಮ್ ಮುನೀರ್ ಮತ್ತು ಮೌನಿ ಮೋದಿ
ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್)ಯ ಎರಡು ತಂಡಗಳು ಉಧಂಪುರದಿಂದ ರಕ್ಷಣಾ ಕಾರ್ಯಾಚರಣೆಗೆ ಆಗಮಿಸಿವೆ ಎಂದು ಜಿಲ್ಲಾಧಿಕಾರಿ ಪಂಕಜ್ ಕುಮಾರ್ ಶರ್ಮಾ ಮಾಹಿತಿ ನೀಡಿದ್ದಾರೆ. ರಕ್ಷಣಾ ಕಾರ್ಯವು ತೀವ್ರಗತಿಯಲ್ಲಿ ನಡೆಯುತ್ತಿದ್ದು, ಗಾಯಾಳುಗಳಿಗೆ ತಕ್ಷಣದ ವೈದ್ಯಕೀಯ ನೆರವು ಒದಗಿಸಲಾಗುತ್ತಿದೆ.
ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರು ದುರಂತಕ್ಕೆ ಸಂತಾಪ ವ್ಯಕ್ತಪಡಿಸಿದ್ದಾರೆ. ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರು ಸಂತ್ರಸ್ತರಿಗೆ ಸಹಾಯ ಮತ್ತು ಪರಿಹಾರಕ್ಕಾಗಿ ಅಗತ್ಯ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.