ನಿಜಾಮಾಬಾದ್‌ನ ಬ್ರಹ್ಮ ಪುರಿಯಲ್ಲಿರುವ 400 ವರ್ಷ ಹಳೆಯದಾದ ಬಾದಾ ರಾಮಮಂದಿರ ಮಠದ ಆಸ್ತಿ ವಿವಾದ ಮುನ್ನೆಲೆಗೆ ಬಂದಿದೆ. ಬಡಾ ಅಥವಾ ಪೆದ್ದಾ ರಾಮಮಂದಿರ ಎಂದು ಕರೆಯಲ್ಪಡುವ ಈ ಮಠವನ್ನು ಛತ್ರಪತಿ ಶಿವಾಜಿ ಮಹಾರಾಜರ ಗುರು ಎನ್ನಲಾಗಿರುವ ಸಮರ್ಥ ರಾಮದಾಸ್ ಸ್ಥಾಪಿಸಿದ್ದರು. ಇದೀಗ, ಸಂಸ್ಥೆಗೆ ಸೇರಿದ ಜಮೀನುಗಳಲ್ಲಿ ಕೆಲವರು ಸಾಗುವಳಿ ಮಾಡುತ್ತಿದ್ದಾರೆಂದು ಆರೋಪಿಸಲಾಗಿದೆ. ಅಂತವರ ವಿರುದ್ಧ ಪ್ರಕರಣಗಳು ದಾಖಲಾಗಿವೆ.
ಮಠದ ಮುಖ್ಯಸ್ಥರ ನಿಧನದ ನಂತರ ಜಮೀನುಗಳಿಗೆ ಸಂಬಂಧಿಸಿದ ಸಮಸ್ಯೆಗಳು ಮೊದಲು ಬೆಳಕಿಗೆ ಬಂದವು. ನ್ಯಾಯಾಲಯದ ಆದೇಶದ ನಂತರ, ದತ್ತಿ ಇಲಾಖೆಯು ಸಂಸ್ಥೆಯ ಆಸ್ತಿಗಳ ಜವಾಬ್ದಾರಿಯನ್ನು ವಹಿಸಿಕೊಂಡಿದೆ. ಆ ಆಸ್ತಿಯ ಮೌಲ್ಯ ಈಗ ಕೋಟ್ಯಂತರ ರೂಪಾಯಿಗೆ ಏರಿಕೆಯಾಗಿದೆ.
ಅಧಿಕೃತ ಮೂಲಗಳ ಪ್ರಕಾರ, ಬಡಾ ರಾಮ ಮಂದಿರವು ತೆಲಂಗಾಣದ ನಿಜಾಮಾಬಾದ್ ಮತ್ತು ಅದಿಲಾಬಾದ್ ಜಿಲ್ಲೆಗಳಲ್ಲಿ ಮತ್ತು ಮಹಾರಾಷ್ಟ್ರದ ನಾಂದೇಡ್ ಜಿಲ್ಲೆಯಲ್ಲಿ ಸುಮಾರು 413 ಎಕರೆ ಕೃಷಿ ಭೂಮಿಯನ್ನು ಹೊಂದಿದೆ.
ಆದರೆ, ಬಡಾ ರಾಮಮಂದಿರ ಮಠದ ಮುಖ್ಯಸ್ಥರ ಕಚೇರಿಯು ಆಸ್ತಿಗಳ ಸರಿಯಾದ ದಾಖಲೆಗಳನ್ನು ನಿರ್ವಹಿಸಿಲ್ಲ. ಭೂಮಾಪನ ಸಂಖ್ಯೆಗಳು ಮತ್ತು ನಕ್ಷೆಗಳ ಆಧಾರದ ಮೇಲೆ ದತ್ತಿ ಅಧಿಕಾರಿಗಳು ಕಂದಾಯ ಮತ್ತು ಪೊಲೀಸ್ ಅಧಿಕಾರಿಗಳ ಸಮನ್ವಯದಲ್ಲಿ ಜಮೀನುಗಳನ್ನು ಗುರುತಿಸುವ ಕೆಲಸ ಮಾಡುತ್ತಿದ್ದಾರೆ.
ಈವರೆಗೆ ಎರಡು ಪ್ರಕರಣಗಳು ದಾಖಲಾಗಿದ್ದು, ಜಮೀನು ಸಾಗುವಳಿ ಮಾಡುತ್ತಿರುವವರಿಗೆ ನೋಟಿಸ್ ಜಾರಿ ಮಾಡಲಾಗಿದೆ. ಮಠದಲ್ಲಿ ದಾಖಲೆಗಳ ಕೊರತೆಯಿಂದ ಕೆಲವು ಜಮೀನುಗಳನ್ನು ಲೀಸ್‌ಗೆ ನೀಡಿ ನಂತರ ಪ್ಲಾಟ್‌ಗಳಾಗಿ ಮಾರಾಟ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.
ಜಮೀನುಗಳಲ್ಲಿ ಸಾಗುವಳಿ ಮಾಡುತ್ತಿರುವ ರೈತರು ದತ್ತಿ ಇಲಾಖೆಯ ಮಧ್ಯ ಪ್ರವೇಶಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ತಾವು ಬಾಡ ರಾಮಮಂದಿರ ಮಠದ ಮುಖ್ಯಸ್ಥರಿಗೆ ಪ್ರತಿ ಎಕರೆಗೆ ವಾರ್ಷಿಕ ಮೊತ್ತವನ್ನು ಪಾವತಿಸುವ ಹಿಡುವಳಿ ರೈತರಾಗಿದ್ದೇವೆ ತಿಳಿಸಿದ್ದಾರೆ. ಪ್ರತ್ಯೇಕ ಕಾಯಿದೆಗಳು ಮಠಗಳು ಮತ್ತು ಇತರ ದೇವಾಲಯಗಳ ನಿರ್ವಹಣೆಯನ್ನು ನಿಯಂತ್ರಿಸುವುದರಿಂದ ಮಠಾಧಿಪತಿಗಳು ಜಮೀನುಗಳನ್ನು ಗೇಣಿದಾರರಿಗೆ ಗುತ್ತಿಗೆ ನೀಡುವ ಹಕ್ಕನ್ನು ಹೊಂದಿದ್ದಾರೆ ಎಂದು ಅವರು ವಾದಿಸಿದ್ದಾರೆ.
“ನಾವು ಬಾಡಾ ರಾಮಮಂದಿರ ಮತ್ತು ಅದರ ಆಸ್ತಿಗಳನ್ನು ವಿರೋಧಿಸುವುದಿಲ್ಲ. ಆದರೂ ಮಠಾಧಿಪತಿಗಳು ಒಕ್ಕಲು ವ್ಯವಸ್ಥೆಯನ್ನು ಕಾಯ್ದುಕೊಳ್ಳುವಂತೆ ಒತ್ತಾಯಿಸುತ್ತೇವೆ” ಎಂದು ರೈತರು ಹೇಳಿದ್ದಾರೆ.
ನ್ಯಾಯಾಲಯದ ಆದೇಶದ ಕಾರಣ ನಾವು ಕ್ರಮಕ್ಕೆ ಮುಂದಾಗಿದ್ದೇವೆ. ಸಾಗುವಳಿದಾರರು ಮಠಕ್ಕೆ ಪಾವತಿಸಿದ ದಾಖಲೆಗಳು ಮತ್ತು ಬಿಲ್‌ಗಳನ್ನು ನೀಡಬೇಕು ಎದು ಮಠದ ಪ್ರಭಾರಿ ಕಾರ್ಯನಿರ್ವಾಹಕ ಅಧಿಕಾರಿ (ಇಒ) ಜಿ ವೇಣು ತಿಳಿಸಿದ್ದಾರೆ.
ನ್ಯಾಯಾಲಯದ ಆದೇಶಕ್ಕೆ ಅನುಗುಣವಾಗಿ ದಾಖಲೆಗಳನ್ನು ನಿರ್ವಹಿಸುವ ಪ್ರಯತ್ನಗಳನ್ನು ಗಮನಿಸಿದ ವೇಣು, “ದೇವಾಲಯದ ಭೂಮಿ ಮತ್ತು ಆಸ್ತಿಗಳನ್ನು ರಕ್ಷಿಸಲು ರಾಜ್ಯ ಸರ್ಕಾರ ಬದ್ಧತೆಯಿಂದ ಕೆಲಸ ಮಾಡುತ್ತಿದೆ. ಮಹಾರಾಷ್ಟ್ರದ ನಾಂದೇಡ್ ಸೇರಿದಂತೆ ವಿವಿಧ ಸ್ಥಳಗಳಲ್ಲಿ ಮಠವು ಆಸ್ತಿಯನ್ನು ಹೊಂದಿದೆ. ಈ ವಿಷಯದ ಬಗ್ಗೆ ಮಹಾರಾಷ್ಟ್ರ ಸರ್ಕಾರದೊಂದಿಗೆ ಉನ್ನತ ಅಧಿಕಾರಿಗಳು ಮಾತುಕತೆ ನಡೆಸುತ್ತಾರೆ” ಎಂದು ಹೇಳಿದ್ದಾರೆ.
“ಜಮೀನುಗಳು ಕೇವಲ ಮಠಕ್ಕೆ ಸೇರಿದ್ದು, ಬೇರೆ ಯಾರಿಗೂ ಭೂಮಿಯನ್ನು ಮಾರಾಟ ಮಾಡುವ ಅಥವಾ ಗುತ್ತಿಗೆ ನೀಡುವ ಹಕ್ಕು ಇಲ್ಲ. ವಿವರಗಳನ್ನು ಸರ್ಕಾರದ ಆನ್‌ಲೈನ್ ಪೋರ್ಟಲ್‌ನಲ್ಲಿ ದಾಖಲಿಸಲಾಗುವುದು” ಎಂದು ಅವರು ತಿಳಿಸಿದ್ದಾರೆ.