2018ರಿಂದ 5 ವರ್ಷಗಳಲ್ಲಿ ದೇಶದಲ್ಲಿ ಸೆಪ್ಟಿಕ್ ಟ್ಯಾಂಕ್ ಮತ್ತು ಒಳಚರಂಡಿ ಸ್ವಚ್ಛಗೊಳಿಸುವಾಗ 400ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಎನ್ನುವ ಕಳವಳಕಾರಿ ಮಾಹಿತಿಯನ್ನು ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ ವರದಿ ನೀಡಿದೆ.
ಲೋಕಸಭೆಯಲ್ಲಿ ಟಿಎಂಸಿ ಸದಸ್ಯೆ ಅಪರೂಪ ಪೊದ್ದಾರ್ ಅವರ ಪ್ರಶ್ನೆಗೆ ಲಿಖಿತ ಉತ್ತರ ನೀಡಿದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ರಾಜ್ಯ ಸಚಿವ ರಾಮದಾಸ್ ಅಠಾವಳೆ, 2018 ರಿಂದ 2023ರ ನವೆಂಬರ್ 20ರ ನಡುವೆ ಒಳಚರಂಡಿ ಮತ್ತು ಸೆಪ್ಟಿಕ್ ಟ್ಯಾಂಕ್‌ಗಳನ್ನು ಸ್ವಚ್ಛಗೊಳಿಸುವಾಗ 443 ಮಂದಿ ಸಾವನ್ನಪ್ಪಿದ್ದಾರೆ ಎಂದು ತಿಳಿಸಿದ್ದಾರೆ.
2018ರಲ್ಲಿ 76, 2019ರಲ್ಲಿ 133, 2020ರಲ್ಲಿ 35, 2021ರಲ್ಲಿ 66, 2022ರಲ್ಲಿ 84 ಮತ್ತು ಈ ವರ್ಷದ ನವೆಂಬರ್ 20ರ ತನಕ 49 ಮಂದಿ ಮೃತಪಟ್ಟಿದ್ದಾರೆ. ಈ ವರ್ಷ ರಾಜಸ್ಥಾನದಲ್ಲಿ 10, ಗುಜರಾತ್‌ನಲ್ಲಿ 9 ಮತ್ತು ಮಹಾರಾಷ್ಟ್ರ ಮತ್ತು ತಮಿಳುನಾಡಿನಲ್ಲಿ ತಲಾ 7 ಮಂದಿ ಮೃತಪಟ್ಟಿದ್ದಾರೆ ಎಂದು ವರದಿ ಉಲ್ಲೇಖಿಸಿ ಸಚಿವರು ತಿಳಿಸಿದ್ದಾರೆ.
ಮತ್ತೊಂದು ಪ್ರಶ್ನೆಗೆ ಉತ್ತರಿಸಿದ ಅಠಾವಳೆ, ”ನೀತಿ ಆಯೋಗದ ಆದೇಶದ ಮೇರೆಗೆ 2018ರಲ್ಲಿ ನಡೆಸಿದ ಮ್ಯಾನ್ಯುವಲ್ ಸ್ಕಾವೆಂಜರ್‌ಗಳ ರಾಷ್ಟ್ರೀಯ ಸಮೀಕ್ಷೆ ವೇಳೆ 44,217 ಮ್ಯಾನ್ಯುವಲ್ ಸ್ಕಾವೆಂಜರ್‌ಗಳನ್ನು ಗುರುತಿಸಲಾಗಿದೆ” ಎಂದು ತಿಳಿಸಿದ್ದಾರೆ.
ಸರ್ಕಾರವು ಮತ್ತೊಂದು ಸಮೀಕ್ಷೆಯನ್ನು ನಡೆಸಲಿದೆಯೇ? ಎನ್ನುವ ಪ್ರಶ್ನೆಗೆ ಉತ್ತರಿಸಿದ ಸಚಿವರು, ʼʼಸುಪ್ರೀಂ ಕೋರ್ಟ್ ಮ್ಯಾನ್ಯುವಲ್ ಸ್ಕಾವೆಂಜರ್‌ಗಳ ರಾಷ್ಟ್ರವ್ಯಾಪಿ ಸಮೀಕ್ಷೆಗೆ ನಿರ್ದೇಶನ ನೀಡಿದೆ. ಅದರಂತೆ ಸಮೀಕ್ಷೆ ನಡೆಸಲಿದ್ದೇವೆʼʼ ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಮಿಚಾಂಗ್ ಚಂಡ ಮಾರುತ | ಆಂಧ್ರದಲ್ಲಿ 40 ಲಕ್ಷ ಜನರಿಗೆ ತೊಂದರೆ, ಕನಿಷ್ಠ 17 ಮಂದಿ ಸಾವು
ಮ್ಯಾನ್ಯುವಲ್ ಸ್ಕಾವೆಂಜರ್ ಉದ್ಯೋಗ ನಿಷೇಧ ಮತ್ತು ಪುನರ್ವಸತಿ ಕಾಯ್ದೆ 2013ರ ಪ್ರಕಾರ ಮ್ಯಾನ್ಯುವಲ್ ಸ್ಕಾವೆಂಜಿಂಗ್ ಅನ್ನು ನಿಷೇಧಿಸಲಾಗಿದೆ. ಅಂದರೆ ಕೈಯಿಂದ ಮಲ ಬಾಚುವ ಕೆಲಸವನ್ನು ಮಾಡುವಂತಿಲ್ಲ. ಒಳಚರಂಡಿಗಳು ಮತ್ತು ಸೆಪ್ಟಿಕ್ ಟ್ಯಾಂಕ್‌ಗಳನ್ನು ಸ್ವಚ್ಛಗೊಳಿಸುವುದು ಕೂಡ ಈ ನಿಷೇಧಿತ ಅಭ್ಯಾಸದ ಒಂದು ಭಾಗ ಎಂದು ತಜ್ಞರು ಹೇಳುತ್ತಾರೆ.
“ದೇಶದ 766 ಜಿಲ್ಲೆಗಳ ಪೈಕಿ 714 ಜಿಲ್ಲೆಗಳು ಈ ವರ್ಷದ ನವೆಂಬರ್ 29ರಂದು ತಮ್ಮನ್ನು ಮ್ಯಾನ್ಯುವಲ್ ಸ್ಕಾವೆಂಜಿಂಗ್ ಮುಕ್ತವೆಂದು ಘೋಷಿಸಿಕೊಂಡಿವೆʼʼ ಎಂದು ಸಚಿವರು ಹೇಳಿದ್ದಾರೆ.
ಸರ್ಕಾರವು ಮ್ಯಾನ್‌ಹೋಲ್ ಸ್ವಚ್ಛಗೊಳಿಸಲು ರೋಬೋಟ್‌ಗಳನ್ನು ನಿಯೋಜಿಸಿದೆಯೇ ಎಂದು ಕೇಳಿದಾಗ, ಉತ್ತರಿಸಿದ ಸಚಿವರು, ʼʼಅಂತಹ ರೋಬೋಟ್‌ಗಳ ಸಂಖ್ಯೆ ಅಥವಾ ಅವುಗಳನ್ನು ಎಲ್ಲಿ ಬಳಸಲಾಗುತ್ತಿದೆ ಎಂಬುದರ ಬಗ್ಗೆ ಯಾವುದೇ ಮಾಹಿತಿ ಇಲ್ಲʼʼ ಎಂದು ತಿಳಿಸಿದ್ದಾರೆ.