ಗುಪ್ತಚರ ಇಲಾಖೆಗಳಿಂದ ಇನ್ನು ಹೆಚ್ಚಿನ ಉಗ್ರರ ದಾಳಿಯಾಗುವ ಸಾಧ್ಯತೆಯ ಬಗ್ಗೆ ಮಾಹಿತಿ ಬಂದ ಹಿನ್ನೆಲೆಯಲ್ಲಿ ಕಾಶ್ಮೀರದಾದ್ಯಂತ 87 ಪ್ರವಾಸಿ ತಾಣಗಳಲ್ಲಿ 48 ತಾಣಗಳನ್ನು ಜಮ್ಮು ಮತ್ತು ಕಾಶ್ಮೀರ ಸರ್ಕಾರ ಸ್ಥಗಿತಗೊಳಿಸಿದೆ.
ಪಹಲ್ಗಾಮ್ ದಾಳಿಯ ನಂತರ ಕೆಲವು ಉಗ್ರ ಸಂಘಟನೆಗಳು ಕಾಶ್ಮೀರದಲ್ಲಿ ಇನ್ನೂ ಸಕ್ರಿಯವಾಗಿದ್ದು, ದಾಳಿ ನಡೆಸುವ ಸೂಚನೆ ಇದೆಯೆಂದು ಅಧಿಕೃತ ಮಾಹಿತಿಗಳು ದೃಢೀಕರಿಸಿವೆ.
ಪ್ರಶಾಂತ ಕಣಿವೆಗಳು ಮತ್ತು ಸುಂದರವಾದ ಪರ್ವತಗಳಿಗೆ ಹೆಸರುವಾಸಿಯಾದ ಜಮ್ಮು ಕಾಶ್ಮೀರದಲ್ಲಿ ಕನಿಷ್ಠ 48 ರೆಸಾರ್ಟ್‌ಗಳನ್ನು ಬಂದ್ ಮಾಡಲಾಗಿದೆ. ಬುದ್ಗಾಮ್‌ನ ದೂಧಪತ್ರಿ ಮತ್ತು ಅನಂತನಾಗ್‌ನ ವೆರಿನಾಗ್‌ನಂತಹ ಹಲವಾರು ಪ್ರವಾಸಿ ತಾಣಗಳಿಗೆ ತೆರಳದಂತೆ ಪ್ರವಾಸಿಗರಿಗೆ ನಿರ್ಬಂಧ ವಿಧಿಸಲಾಗಿದೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಒಳಮೀಸಲಾತಿ ಗಣತಿ ಚಾರಿತ್ರಿಕ ದಾಖಲೆ, ತಪ್ಪದೇ ಭಾಗಿಯಾಗಿರಿ
ಪಹಲ್ಗಾಮ್‌ನಲ್ಲಿ 26 ಪ್ರವಾಸಿಗರ ಹತ್ಯೆ ಹಿನ್ನೆಲೆ ಜಮ್ಮು ಕಾಶ್ಮೀರಕ್ಕೆ ತೆರಳಿದ್ದ ಪ್ರವಾಸಿಗರು ವಾಪಸ್ಸಾಗುತ್ತಿದ್ದಾರೆ. ಅನೇಕ ಜನರು ತಮ್ಮ ನಿಗದಿಗೊಳಿಸಿದ ಪ್ರವಾಸವನ್ನು ಮೊಟಕುಗೊಳಿಸಿದ್ದಾರೆ. ಒಂದು ವಾರದ ಹಿಂದೆ ಪಹಲ್ಗಾಮ್ ಪಟ್ಟಣವು ಪ್ರವಾಸಿಗರಿಂದ ತುಂಬಿ ಕೊಂಡಿತ್ತು.
ಆದರೆ ಈಗ ಪ್ರವಾಸಿಗರ ಸಂಖ್ಯೆ ಗಣನೀಯವಾಗಿ ಕುಸಿದಿದೆ. ಪ್ರವಾಸೋದ್ಯಮ ಸ್ಥಳೀಯರ ಪ್ರಮುಖ ಆದಾಯದ ಮೂಲವಾಗಿತ್ತು. ಪ್ರವಾಸಿಗರ ಕುಸಿತವು ತಮ್ಮ ಆದಾಯದ ಮೂಲ ಮತ್ತು ಜೀವನೋಪಾಯದ ಮೇಲೆ ದೊಡ್ಡ ಪರಿಣಾಮ ಬೀರುತ್ತದೆ ಎಂದು ಸ್ಥಳೀಯರಿಗೆ ಆತಂಕವಾಗಿದೆ. ಭಯೋತ್ಪಾದಕ ದಾಳಿಯನ್ನು ಖಂಡಿಸಿ ಸ್ಥಳೀಯರು ಇತ್ತೀಚಿಗಷ್ಟೆ ಬಂದ್ ನಡೆಸಿದ್ದರು.