ಉತ್ತರಾಖಂಡ್ ಅರಣ್ಯಗಳಲ್ಲಿ ಕಾಡ್ಗಿಚ್ಚು ಸಂಭವಿಸಿ ಐವರು ಮೃತಪಟ್ಟು, ಸಾವಿರಾರು ಎಕರೆ ಅರಣ್ಯ ಪ್ರದೇಶ ಬೆಂಕಿಗಾಹುತಿಗಾಗಿದೆ.
ಪಿತೋರಾಘರ್ ಜಿಲ್ಲೆಯ ಗಂಗೋಲಿಹಟ್ ಅರಣ್ಯ ಪ್ರದೇಶದಲ್ಲಿ ಈ ಘಟನೆ ಸಂಭವಿಸಿದೆ. ಮಾನವ ನಿರ್ಮಿತವಾದ ಈ ಘಟನೆಗೆ ಸಂಬಂಧಿಸಿದಂತೆ ಭಾರತೀಯ ಅರಣ್ಯ ಕಾಯ್ದೆಯಡಿ ಪಿಯೂಶ್ ಸಿಂಗ್, ಆಯೂಶ್ ಸಿಂಗ್, ರಾಹುಲ್ ಸಿಂಗ್ ಹಾಗೂ ಅಂಕಿತ್ ಎಂಬುವವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಡೆಹರಾಡೂನ್ನ ಹವಾಮಾನ ಕೇಂದ್ರದ ನಿರ್ದೇಶಕ ಬಿಕ್ರಮ್ ಸಿಂಗ್ ಮಾತನಾಡಿ, ಮೇ 7 ರಿಂದ ಮೇ 8 ಹಾಗೂ ಮೇ 11 ರಿಂದ ಉತ್ತರಾಖಂಡ್ನಲ್ಲಿ ಮಳೆಬರುವ ಸಾಧ್ಯತೆಯಿದ್ದು, ಕಾಡ್ಗಿಚ್ಚು ಶಮನಗೊಳ್ಳುವ ನಿರೀಕ್ಷೆಯಿದೆ ಎಂದು ತಿಳಿಸಿದ್ದಾರೆ.
ಹಿಮಾಲಯದ ಕಣಿವೆಯ ರಾಜ್ಯದಲ್ಲಿ ಸಂಭವಿಸುವ ಕಾಡ್ಗಿಚ್ಚು ತಿಂಗಳುಗಳ ಕಾಲ ಮುಂದುವರೆಯುತ್ತದೆ. 2023ರ ನವೆಂಬರ್ 1ರಂದ 910 ಅರಣ್ಯಗಳಲ್ಲಿ ಸಂಭವಿಸಿದ ಕಾಡ್ಗಿಚ್ಚಿನಿಂದ 1145 ಹೆಕ್ಟೇರ್ ಅರಣ್ಯ ನಾಶವಾಗಿತ್ತು. ಇದರಿಂದ ಸರ್ಕಾರಕ್ಕೆ ಲಕ್ಷಾಂತರ ರೂ. ನಷ್ಟವಾಗಿತ್ತು ಎಂದು ಅರಣ್ಯ ಇಲಾಖೆ ತಿಳಿಸಿದೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಪ್ರಜ್ವಲ್ ಪ್ರಕರಣ, ಒಕ್ಕಲಿಗರ ನಾಯಕತ್ವ ಮತ್ತು ಮನುಷ್ಯತ್ವ
ಕಾಡ್ಗಿಚ್ಚು ವಸತಿ ಪ್ರದೇಶದಲ್ಲಿ ವಾಸಿಸುವ ಜನರಿಗೂ ಅಪಾಯ ತಂದೊಡ್ಡಲಿದೆ. ಸಾರ್ವಜನಿಕರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಎಲ್ಲ ರೀತಿಯ ಕ್ರಮ ಕೈಗೊಳ್ಳಬೇಕೆಂದು ಉತ್ತರಾಖಂಡ್ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ತಿಳಿಸಿದ್ದಾರೆ.
ಮಾನವ ನಿರ್ಮಿತದಿಂದ ಸಂಭವಿಸುವ ಕಾಡ್ಗಿಚ್ಚಿನ ಪ್ರಕರಣದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಮೇ 8 ರಂದು ತುರ್ತಾಗಿ ಪರಿಗಣಿಸಲು ಇಂದು ಒಪ್ಪಿಗೆ ಸೂಚಿಸಿದೆ.ಕಾಡ್ಗಿಚ್ಚಿನಿಂದ ಸಂಭವಿಸುವ ಅನಾಹುತದಲ್ಲಿ ಶೇ.90 ರಷ್ಟು ಮಾನವ ನಿರ್ಮಿತವಾಗಿರುತ್ತದೆ.
ನ್ಯಾಯಮೂರ್ತಿ ಬಿ ಆರ್ ಗವಾಯಿ ನೇತೃತ್ವದ ಪೀಠ ಹಿರಿಯ ನ್ಯಾಯವಾದಿ ರಾಜೀವ್ ದತ್ತ, ವಕೀಲ ಕೆ ಪರಮೇಶ್ವರ್ ಒಳಗೊಂಡ ಅರ್ಜಿದಾರರಿಗೆ ಸೂಚನೆ ನೀಡಿದೆ.
ಘಟನೆಯು ಆಘಾತಕಾರಿಯಾಗಿದ್ದು, ಅರಣ್ಯದ ಎಲ್ಲಡೆ ಇಂಗಾಲದ ಡೈಆಕ್ಸೈಡ್ ಹೊಗೆ ಆವರಿಸಿದೆ. ಕಳೆದ 6 ತಿಂಗಳಲ್ಲಿ ಸಂಭವಿಸಿದ ಅಗ್ನಿ ಅನಾಹುತಗಳಲ್ಲಿ 900ಕ್ಕೂ ಹೆಚ್ಚು ಘಟನೆಗಳು ಮಾನವ ನಿರ್ಮಿತವಾಗಿದ್ದು, ಇದರಿಂದ ಸಾವಿರಾರು ಎಕರೆ ಅರಣ್ಯ ನಾಶವಾಗಿದೆ ಎಂದು ಹಿರಿಯ ನ್ಯಾಯವಾದಿ ರಾಜೀವ್ ದತ್ತ ಕೋರ್ಟ್ಗೆ ಮಾಹಿತಿ ನೀಡಿದರು.
