ರಾಮಾಯಣದಲ್ಲಿ ಖಳನಾಯಕನಾಗಿರುವ ಲಂಕೆಯ ರಾಜ ರಾವಣನನ್ನು ಭಾರತದಲ್ಲಿಯೂ ಪೂಜಿಸಲಾಗಿತ್ತು. ಭಾರತದಲ್ಲಿ ರಾವಣನ ಐದು ದೇವಾಲಯಗಳಿವೆ. ಅದರಲ್ಲೊಂದು ಉತ್ತರ ಪ್ರದೇಶದ ಕಾನ್ಪುರದಲ್ಲಿರುವ ದಶಾನನ್ ದೇವಾಲಯ. ಈ ದೇವಾಲಯ ವರ್ಷದಲ್ಲಿ ಒಮ್ಮೆ ಮಾತ್ರವೇ ತೆರೆಯಲಾಗುತ್ತದೆ. ವಿಯಜದಶಮಿಯ ಸಂದರ್ಭದಲ್ಲಿ ದೇವಾಲಯವನ್ನು ತೆರೆದು ಪೂಜೆ ಸಲ್ಲಿಸಲಾಗುತ್ತಿದೆ.
ಈ ವರ್ಷವೂ ಇಂದು (ಮಂಗಳವಾರ- ವಿಜಯದಶಮಿ) ದೇವಾಲಯವನ್ನು ತೆರೆಯಲಾಗಿದ್ದು, ಸಾವಿರಾರು ಭಕ್ತರು ದೇವಾಲಯಕ್ಕೆ ಭೇಟಿ ನೀಡಿದ್ದಾರೆ. ಪೂಜೆ ಸಲ್ಲಿಸಿದ್ದಾರೆ.
“ತಮ್ಮ ಮಕ್ಕಳು ರಾವಣನಂತೆಯೇ ಬುದ್ದಿವಂತಿಕೆ ಮತ್ತು ಶಕ್ತಿಯನ್ನು ಪಡೆಯಲೆಂದು ಭಕ್ತರು ಪ್ರಾರ್ಥಿಸುತ್ತಾರೆ” ಎಂದು ದೇವಾಲಯದ ಅರ್ಚಕ ರಾಮ್ ಬಾಜ್‌ಪೇಯ್ ತಿಳಿಸಿದ್ದಾರೆ.
“ದಸರಾ ದಿನದಂದು ನಾವು ಈ ದೇವಾಲಯವನ್ನು ತೆರೆಯುತ್ತೇವೆ. ರಾವಣನನ್ನು ಪೂಜಿಸುತ್ತೇವೆ. ಸಂಜೆಯ ವೇಳೆಗೆ, ರಾವಣನ ಪ್ರತಿಕೃತಿಯನ್ನು ಸುಟ್ಟು ದೇವಾಲಯವನ್ನು ಮುಚ್ಚಲಾಗುತ್ತದೆ. ನಾವು ರಾವಣನ ಜ್ಞಾನಕ್ಕಾಗಿ ಪೂಜಿಸುತ್ತೇವೆ. ರಾವಣನಿಗೆ ಸಮಾನವಾದ ಶಕ್ತಿ, ಜ್ಞಾನ ಮತ್ತು ಬುದ್ಧಿವಂತಿಕೆಯನ್ನು ಹೊಂದಿದ್ದನು ಬೇರೆ ಯಾರೂ ಇಲ್ಲ. ಅವನ ಏಕೈಕ ನ್ಯೂನತೆಯೆಂದರೆ ಅವನ ದುರಹಂಕಾರ. ನಾವು ಆ ದುರಹಂಕಾರವನ್ನು ಶಮನ ಮಾಡಲು ಆತನ ಪ್ರತಿಕೃತಿಯನ್ನು ಸುಡುತ್ತೇವೆ” ಎಂದು ಅರ್ಚಕರು ಹೇಳಿದ್ದಾರೆ.
ಈ ದಶಾನನ್ ದೇವಾಲಯವು ಸುಮಾರು 125 ವರ್ಷಗಳಷ್ಟು ಹಳೆಯದಾಗಿದ್ದು, 1890ರಲ್ಲಿ ರಾಜ ಗುರು ಪ್ರಸಾದ್ ಶುಕ್ಲ ಎಂಬಾತ ನಿರ್ಮಿಸಿದ್ದಾನೆಂದು ಹೇಳಲಾಗಿದೆ. ರಾವಣನು ವಿದ್ವಾಂಸನಾಗಿದ್ದನು. ಆತ ಶಿವನ ಅತಿದೊಡ್ಡ ಭಕ್ತನಾಗಿದ್ದನು ಎಂಬುದು ದೇವಾಲಯದ ನಿರ್ಮಾಣದ ಹಿಂದಿನ ಉದ್ದೇಶವಾಗಿದೆ. ಹೀಗಾಗಿ, ಶಿವನ ದೇವಾಲಯದ ಆವರಣದಲ್ಲಿ ಈ ದೇವಾಲಯವನ್ನು ನಿರ್ಮಿಸಲಾಗಿದೆ ಎಂದು ಹೇಳಲಾಗಿದೆ.
ಉತ್ತರ ಪ್ರದೇಶದಲ್ಲಿಯೇ ರಾವಣನ ಮತ್ತೊಂದು ದೇವಾಲಯವಿದೆ. ಗ್ರೇಟರ್ ನೋಯ್ಡಾದ ಬಿಸ್ರಾಖ್‌ನಲ್ಲಿ ರಾವಣ ಮಂದಿರವಿದೆ. ಅಲ್ಲಿಯೂ ಭಕ್ತರು ಪೂಜೆ ಸಲ್ಲಿಸುತ್ತಾರೆ.
ಮಧ್ಯಪ್ರದೇಶದಲ್ಲಿಯೂ ಎರಡು ದೇವಾಲಯಗಳಿವೆ. ಮಂಡೋದರಿಯನ್ನು ರಾವಣ ಮದುವೆಯಾದ ಸ್ಥಳವೆಂದು ಹೇಳಲಾಗಿರುವ ಮಂಡಸೌರ್‌ನಲ್ಲಿ ರಾವಣ ದೇವಾಲಯವಿದೆ. ಅಲ್ಲದೆ, ಮಂಡೋದರಿಯ ಸ್ಥಳವೆಂದು ಹೇಳಲಾಗಿರುವ ವಿದಿಶಾದಲ್ಲಿ ರಾವಣ್‌ಗ್ರಾಮ್ ರಾವಣ ದೇವಾಲಯವಿದೆ.
ಇನ್ನು ಆಂಧ್ರಪ್ರದೇಶದಲ್ಲಿ ಮತ್ತೊಂದು ದೇವಾಲಯವಿದ್ದು, ಅದು ಗೋದಾವರಿ ಜಿಲ್ಲೆಯಲ್ಲಿ ಕಾಕಿನಡ ರಾವಣ ಎಂಬ ದೇವಾಲಯವಿದೆ.