ದೇಶವು ಐದು ಟ್ರಿಲಿಯನ್ ಡಾಲರ್ ಆರ್ಥಿಕತೆ ಹೊಂದಿದೆ ಎನ್ನುವುದೇ ಒಂದು ದೊಡ್ಡ ಸುಳ್ಳು ಎಂದು ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ವಾಗ್ದಾಳಿ ನಡೆಸಿದ್ದಾರೆ.
ಈ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಪ್ರಿಯಾಂಕಾ ಗಾಂಧಿ, ಐದು ಟ್ರಿಲಿಯನ್ ಡಾಲರ್ ಆರ್ಥಿಕತೆ ಹಾಗೂ ಮೋದಿ ಗ್ಯಾರಂಟಿ ಎನ್ನುವುದು ಬರಿ ಸುಳ್ಳುಗಳಾಗಿವೆ. ನಿರುದ್ಯೋಗ ಹಾಗೂ ಹಣದುಬ್ಬರ ದೇಶದ ನಿಜವಾದ ಸಮಸ್ಯೆಗಳಾಗಿದ್ದು, ಇವುಗಳಿಗೆ ಬಿಜೆಪಿ ಸರ್ಕಾರದ ಬಳಿ ಪರಿಹಾರವಿಲ್ಲ ಎಂದು ಹೇಳಿದರು.
ಪ್ರಿಯಾಂಕಾ ಗಾಂಧಿ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ವಿಡಿಯೋದಲ್ಲಿ ಇಸ್ರೇಲ್‌ನಲ್ಲಿ ಕೆಲಸಕ್ಕಾಗಿ ಉತ್ತರ ಪ್ರದೇಶ ಹಾಗೂ ಹರ್ಯಾಣದ ಜನರು ಸರದಿಯಲ್ಲಿ ನಿಂತಿರುವುದನ್ನು ತೋರಿಸಲಾಗಿದೆ.
“ಎಲ್ಲಾದರೂ ಯುದ್ಧದ ಸನ್ನಿವೇಶ ನಿರ್ಮಾಣವಾದರೆ ನಾವು ಮೊದಲು ನಮ್ಮ ನಾಗರಿಕರನ್ನು ನಮ್ಮ ದೇಶಕ್ಕೆ ವಾಪಸ್ ಕರೆಸಿಕೊಳ್ಳುತ್ತೇವೆ. ಆದರೆ ಇಂದು ಭೀಕರ ನಿರುದ್ಯೋಗ ಪರಿಸ್ಥಿತಿಯಿಂದ ಯುದ್ಧಪೀಡಿತ ಇಸ್ರೇಲ್‌ಗೆ ಹೋಗಿ ತೊಂದರೆಗೆ ಸಿಲುಕಿಕೊಳ್ಳುವ ಸಾವಿರಾರು ಯುವಕರನ್ನು ತಡೆಯಲು ಸರ್ಕಾರಕ್ಕೆ ಸಾಧ್ಯವಾಗುತ್ತಿಲ್ಲ” ಎಂದು ಪ್ರಿಯಾಂಕಾ ಗಾಂಧಿ ಹೇಳಿದ್ದಾರೆ.
ಈ ಸುದ್ದಿ ಓದಿದ್ದಿರಾ? ಈ ದಿನ ಸಂಪಾದಕೀಯ | ರಾಮ ನೆಲೆ ನಿಂತರೂ ನಿಲ್ಲದ ನಾಟಕ
“ಚುನಾವಣೆ ಸಂದರ್ಭದಲ್ಲಿ ನೀಡಲಾಗಿದ್ದ ಐದು ಟ್ರಿಲಿಯನ್ ಡಾಲರ್, ವರ್ಷಕ್ಕೆ 2 ಕೋಟಿ ಉದ್ಯೋಗ ಹಾಗೂ ಮೋದಿ ಗ್ಯಾರಂಟಿಗಳು ಎಂದು ಹೇಳಿರುವುದು ಕೇವಲ ಸುಳ್ಳುಗಳಾಗಿವೆ” ಎಂದು ಪ್ರಿಯಾಂಕಾ ಹೇಳಿದರು.
“ನಮ್ಮ ಯುವಕರು ನಮ್ಮದೇ ಸ್ವಂತ ದೇಶದಲ್ಲಿ ಉದ್ಯೋಗ ಏಕೆ ಪಡೆಯುತ್ತಿಲ್ಲ. ಈ ಯುವಕರು ಕಳೆದ ಎರಡು ದಿನಗಳಿಂದ ಭಯಾನಕ ಯುದ್ಧ ನಡೆಯುತ್ತಿರುವ ಮಧ್ಯ ಏಷ್ಯಾಕ್ಕೆ ತೆರಳಲು ಸರದಿಯಲ್ಲಿ ನಿಂತಿದ್ದಾರೆ. ಅವರನ್ನು ಕಳಿಸಲು ನಾವು ಸಂತೋಷದಿಂದ ಸಿದ್ಧರಾಗಿದ್ದೇವೆ. ಅವರು ನಮ್ಮ ದೇಶದ ಮಕ್ಕಳಲ್ಲವೇ?” ಎಂದು ಪ್ರಶ್ನಿಸಿದ್ದಾರೆ.
“ಇದರಲ್ಲಿ ಸರ್ಕಾರದ ಪಾತ್ರವೇನು? ಯಾವ ಆಧಾರದ ಮೇಲೆ ಯುದ್ಧ ಪೀಡಿತ ಇಸ್ರೇಲ್‌ಗೆ ಪ್ರಾಣ ತ್ಯಾಗ ಮಾಡಲು ಭಾರತೀಯ ಯುವಕರನ್ನು ಸರ್ಕಾರ ಕಳಿಸುತ್ತಿದೆ? ನಮ್ಮ ದೇಶದ ಆಸ್ತಿಯಾಗಿರುವ ಅವರ ಜೀವನ ರಕ್ಷಿಸುವ ಜವಾಬ್ದಾರಿ ಯಾರು ತೆಗೆದುಕೊಳ್ಳುತ್ತಾರೆ? ಓ ದೇವರೆ ಯಾರಿಗಾದರೂ ಏನಾದರೂ ಅನಾಹುತವಾದರೆ ಯಾರು ಹೊಣೆ ಹೊರುತ್ತಾರೆ?” ಎಂದು ಪ್ರಿಯಾಂಕ ಆತಂಕ ವ್ಯಕ್ತಪಡಿಸಿದ್ದಾರೆ.