ಬಿಹಾರದಲ್ಲಿ ಕಳೆದ ಒಂಭತ್ತು ದಿನಗಳಲ್ಲಿ ಐದನೇ ಸೇತುವೆ ಕುಸಿದು ಬಿದ್ದಿದೆ. ನಿತೀಶ್ ಕುಮಾರ್ ಸರ್ಕಾರದ ವಿರುದ್ಧ ರಾಷ್ಟ್ರೀಯ ಜನತಾ ದಳ ನಾಯಕ ಮತ್ತು ಬಿಹಾರದ ಮಾಜಿ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ ವಾಗ್ದಾಳಿ ನಡೆಸಿದ್ದಾರೆ.
ಮಧುಬನಿ ಮತ್ತು ಸುಪೌಲ್ ನಡುವಿನ ಭೂತಾಹಿ ನದಿಯ ಸೇತುವೆಯ ಕುಸಿತದ ಕುರಿತು ಯಾದವ್ ಅವರು ತಮ್ಮ ಎಕ್ಸ್ ಖಾತೆಯಲ್ಲಿ ವೀಡಿಯೊವನ್ನು ಹಂಚಿಕೊಂಡಿದ್ದಾರೆ. “ಅಭಿನಂದನೆಗಳು! ಬಿಹಾರದಲ್ಲಿ ಡಬಲ್ ಇಂಜಿನ್ ಸರ್ಕಾರದ ಡಬಲ್ ಪವರ್‌ನಿಂದಾಗಿ ಕೇವಲ 9 ದಿನಗಳಲ್ಲಿ 𝟓 ಸೇತುವೆ ಮಾತ್ರ ಕುಸಿದಿವೆ. ಮಧುಬನಿ-ಸುಪೌಲ್ ನಡುವೆ ಭೂತಾಹಿ ನದಿಯಲ್ಲಿ ಹಲವು ವರ್ಷಗಳಿಂದ ನಿರ್ಮಾಣ ಹಂತದಲ್ಲಿದ್ದ ಸೇತುವೆ ಕುಸಿದಿದೆ. ನೀವು ಈ ಬಗ್ಗೆ ಗಮನಿಸಿದ್ದಾರಾ” ಎಂದು ಪ್ರಶ್ನಿಸಿದ್ದಾರೆ.
“ಪ್ರಧಾನಿ ನರೇಂದ್ರ ಮೋದಿ ಅವರ ಮಾರ್ಗದರ್ಶನ ಮತ್ತು ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ನಾಯಕತ್ವದಲ್ಲಿ,ಡಬಲ್ ಎಂಜಿನ್ ಎನ್‌ಡಿಎ ಸರ್ಕಾರವು 9 ದಿನಗಳಲ್ಲಿ 5 ಸೇತುವೆ ಕುಸಿತದೊಂದಿಗೆ ಬಿಹಾರದ ಜನತೆಗೆ ಮಂಗಳರಾಜ್ ಕಲ್ಯಾಣದ ಶುಭ ಹಾರೈಸಿದೆ” ಎಂದಿದ್ದಾರೆ.
“ಸೇತುವೆಗಳ ಕುಸಿತದಿಂದ ಸಾವಿರಾರು ಕೋಟಿ ರೂಪಾಯಿಗಳನ್ನು ಕಳೆದುಕೊಳ್ಳುತ್ತಿರುವ ಸ್ವಯಂಘೋಷಿತ ಪ್ರಾಮಾಣಿಕರು ಇದನ್ನು ‘ಭ್ರಷ್ಟಾಚಾರ’ ಎಂದು ಕರೆಯುವ ಬದಲು ‘ಸಭ್ಯತೆ’ ಎಂದು ಕರೆಯುತ್ತಿದ್ದಾರೆ. ವಿರೋಧ ಪಕ್ಷಗಳಿಗೆ ಭ್ರಷ್ಟಾಚಾರದ ಸರ್ಟಿಫಿಕೇಟ್ ಹಂಚುವ, ಪಕ್ಷಪಾತಿ ಪತ್ರಿಕೋದ್ಯಮದಲ್ಲಿ ಭೂಮಿ-ಆಕಾಶದ ಎಲ್ಲ ಶ್ರೇಯಾಂಕಗಳಲ್ಲಿ ವಿಶ್ವವಿಜೇತ ಎಂದು ಗೋದಿ ಮಾಧ್ಯಮಗಳಿಂದ ಪ್ರಮಾಣಪತ್ರ ಪಡೆದ ಸತ್ಯವಂತ ಮತ್ತು ವಿಶ್ವಗುರು ಈ ವಿನಾಶದ ಬಗ್ಗೆ ಯಾಕೆ ಬಾಯಿ ತೆರೆಯುವುದಿಲ್ಲ?” ಎಂದು ಹೇಳಿದ್ದಾರೆ.
“ಸೇತುವೆಗಳು ಜಲ ಸಮಾಧಿಯಾಗಿವೆ. ಇದಕ್ಕೆ ವಿರೋಧ ಪಕ್ಷದ ನಾಯಕರು ರಾಜೀನಾಮೆ ನೀಡಬೇಕು” ಎಂದು ಸರ್ಕಾರವನ್ನು ಕಾಲೆಳೆದು ವ್ಯಂಗ್ಯ ಮಾಡಿದ್ದಾರೆ. ಸದ್ಯ ಸೇತುವೆ ಕುಸಿತದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
बधाई हो! बिहार में डबल इंजन सरकार की डबल ताकत से महज 𝟗 दिन में केवल और केवल मात्र 𝟓 पुल ही गिरे है।
प्रधानमंत्री नरेंद्र मोदी की रहनुमाई और मुख्यमंत्री नीतीश कुमार की अगुवाई में 𝟔 दलों वाली डबल इंजनधारी 𝐍𝐃𝐀 सरकार ने बिहारवासियों को 𝟗 दिन में 𝟓 पुल गिरने पर मंगलराज की… pic.twitter.com/Jj8cVPwKlY
— Tejashwi Yadav (@yadavtejashwi) June 29, 2024
ಇತ್ತೀಚಿಗೆ, ಮಧುಬನಿ ಜಿಲ್ಲೆಯ ಭೇಜಾ ಪ್ರದೇಶದಲ್ಲಿ 75 ಮೀಟರ್ ಸೇತುವೆ ಕುಸಿದಿತ್ತು. ಕುಸಿದ ಸೇತುವೆಯು ಎರಡು ವರ್ಷಗಳಿಂದ ನಿರ್ಮಾಣ ಹಂತದಲ್ಲಿತ್ತು. ಇದನ್ನು ಬಿಹಾರ ಸರ್ಕಾರದ ಗ್ರಾಮೀಣ ಕಾಮಗಾರಿ ಇಲಾಖೆಯಡಿಯಲ್ಲಿ ನಿರ್ಮಿಸಲಾಗುತ್ತಿತ್ತು. ಕೆಲವು ದಿನಗಳ ಹಿಂದೆ ಸೇತುವೆ ಪಿಲ್ಲರ್‌ಗಳಲ್ಲಿ ಒಂದು ಕೊಚ್ಚಿಕೊಂಡು ಹೋಗಿರುವುದನ್ನು ಗ್ರಾಮೀಣ ಕಾಮಗಾರಿ ಇಲಾಖೆಯ ಅಧಿಕಾರಿಗಳು ಖಚಿತಪಡಿಸಿದ್ದಾರೆ ಎಂದು ವರದಿ ಉಲ್ಲೇಖಿಸಿದೆ.
ಘಟನೆಯ ಕುರಿತು ತನಿಖೆ ನಡೆಸಿ ವರದಿ ಸಲ್ಲಿಸುವ ಹೊಣೆಯನ್ನು ಜಿಲ್ಲಾಡಳಿತಕ್ಕೆ ವಹಿಸಲಾಗಿದೆ. ಆದಷ್ಟು ಬೇಗ ದುರಸ್ತಿ ಮಾಡುವಂತೆ ಜವಾಬ್ದಾರಿಯುತ ಗುತ್ತಿಗೆದಾರರಿಗೆ ಸೂಚಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಕಳೆದ ವಾರ ಅರಾರಿಯಾ, ಸಿವಾನ್ ಮತ್ತು ಪೂರ್ವ ಚಂಪಾರಣ್ ಜಿಲ್ಲೆಗಳಲ್ಲಿ ಸೇತುವೆ ಕುಸಿತ ವರದಿಯಾಗಿದೆ. ಗುರುವಾರ ಕಿಶನ್‌ಗಂಜ್‌ನಲ್ಲಿ ಇದೇ ರೀತಿಯ ದುರ್ಘಟನೆ ಸಂಭವಿಸಿದೆ.
ಈ ಸುದ್ದಿ ಓದಿದ್ದೀರಾ? ಉತ್ತರ ಪ್ರದೇಶ| ನಿರ್ಮಾಣ ಹಂತದಲ್ಲಿದ್ದ ಮನೆಯ ಗೋಡೆ ಕುಸಿತ; ಮೂವರು ಮಕ್ಕಳು ಮೃತ್ಯು
ಜೂನ್ 26ರಂದು ಬಿಹಾರದ ಕಿಶನ್‌ಗಂಜ್‌ನಲ್ಲಿ 13 ವರ್ಷಗಳ ಹಳೆಯ ಸೇತುವೆಯ ಒಂದು ಭಾಗವು ಕುಸಿದಿದೆ. ಸೇತುವೆ ಕುಸಿತದಿಂದ ಕಿಶನ್‌ಗಂಜ್ ಪ್ರದೇಶಕ್ಕೆ ಹಲವಾರು ಹಳ್ಳಿಗಳ 40,000 ಜನರು ಸಂಪರ್ಕ ಸಾಧಿಸದ ಪರಿಸ್ಥಿತಿ ನಿರ್ಮಾಣವಾಗಿದೆ.
ಇನ್ನು, ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆ ಅಡಿಯಲ್ಲಿ ನಿರ್ಮಿಸಲಾಗುತ್ತಿರುವ ಪಶ್ಚಿಮ ಚಂಪಾರಣ್ ಜಿಲ್ಲೆಯಲ್ಲಿ ನಿರ್ಮಾಣ ಹಂತದಲ್ಲಿದ್ದ ಸೇತುವೆಯ ಒಂದು ಭಾಗ ಕೂಡ ಜೂನ್ 23ರಂದು ಕುಸಿದಿದೆ.
ಜೂನ್ 22 ರಂದು, ಸಿವಾನ್ ಜಿಲ್ಲೆಯ ಮಹಾರಗಂಜ್ ಬ್ಲಾಕ್‌ನಲ್ಲಿ ಗಂಡಕ್ ನದಿಯ ಮೇಲಿನ ಸಣ್ಣ ಸೇತುವೆಯೊಂದು ಹಠಾತ್ತನೆ ಕುಸಿದು ಬಿದ್ದಿದೆ.