ಹೈಕೋರ್ಟ್‌ನ ಏಳು ಮಾಜಿ ನ್ಯಾಯಮೂರ್ತಿಗಳು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಪತ್ರ ಬರೆದಿದ್ದು, 2024ರ ಲೋಕಸಭೆ ಚುನಾವಣೆಯಲ್ಲಿ ಅತಂತ್ರ ಸಂಸತ್ತು ಸೃಷ್ಟಿಯಾದರೆ ಸರ್ಕಾರದ ಕುದುರೆ ವ್ಯಾಪಾರವನ್ನು ತಡೆಗಟ್ಟಿ ಸ್ಥಾಪಿತ ಪ್ರಜಾಪ್ರಭುತ್ವದ ಪೂರ್ವ ನಿದರ್ಶವನ್ನು ಪಾಲಿಸಿ ಸಂವಿಧಾನವನ್ನು ಎತ್ತಿ ಹಿಡಿಯುವಂತೆ ಮನವಿ ಮಾಡಿದ್ದಾರೆ.
ನಿವೃತ್ತ ನ್ಯಾಯಾಧೀಶರು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶರಾದ ಡಿ ವೈ ಚಂದ್ರಚೂಡ್ ಹಾಗೂ ಮುಖ್ಯ ಚುನಾವಣಾ ಆಯುಕ್ತರಿಗೂ ಪತ್ರ ಬರೆದಿದ್ದು ಫಲಿತಾಂಶದಲ್ಲಿ ಆಡಳಿತ ಪಕ್ಷ ಜನರಿಂದ ವಿಶ್ವಾಸವನ್ನು ಕಳೆದುಕೊಂಡರೆ, ಅಧಿಕಾರವನ್ನು ಜನರು ನೀಡಿರುವ ತೀರ್ಪಿನ ಪಕ್ಷಕ್ಕೆ ಸುಗಮಗೊಳಿಸಲು ಸಂವಿಧಾನವನ್ನು ಎತ್ತಿಹಿಡಿಯುವ ಕೆಲಸವನ್ನು ಮಾಡಬೇಕೆಂದು ಎಂದು ಆಗ್ರಹಿಸಿದ್ದಾರೆ.
ಮದ್ರಾಸ್ ಹೈಕೋರ್ಟ್‌ನ 6 ನಿವೃತ್ತ ನ್ಯಾಯಾಧೀಶರಾದ ಜಿ ಎಂ ಅಕ್ಬರ್ ಅಲಿ, ಅರುಣಾ ಜಗದೀಶನ್, ಡಿ ಹರಿ ಪರಂತ್‌ರಾಮನ್, ಪಿ ಆರ್ ಶಿವಕುಮಾರ್, ಸಿ ಟಿ ಸೆಲ್ವನ್, ಎಸ್ ವಿಮಲಾ ಹಾಗೂ ಪಾಟ್ನಾ ಹೈಕೋರ್ಟ್‌ನ ನಿವೃತ್ತ ನ್ಯಾಯಾಧೀಶರಾದ ಅಂಜನಾ ಪ್ರಕಾಶ್ ಪತ್ರ ಬರೆದು ಸಹಿ ಹಾಕಿದ್ದಾರೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಹಣದ ಹರಿವು, ಆತ್ಮಹತ್ಯೆಗಳು, ಅಧಿಕಾರಸ್ಥರು ಮತ್ತು ಬಡವರು
ಒಂದು ವೇಳೆ ಆಡಳಿತದಲ್ಲಿರುವ ಪಕ್ಷ ಜನರ ವಿಶ್ವಾಸವನ್ನು ಕಳೆದುಕೊಂಡರೆ ಅಧಿಕಾರ ಬಿಟ್ಟುಕೊಡುವುದಕ್ಕೆ ಹಿಂದೇಟು ಹಾಕುವ ಸಾಧ್ಯತೆಯಿದೆ. ಸಂವಿಧಾನ ಬಿಕ್ಕಟ್ಟು ಸೃಷ್ಟಿಯಾಗುವ ಸಾಧ್ಯತೆ ಕೂಡ ಇದೆ. ಅತಂತ್ರ ಸಂಸತ್ತು ಸೃಷ್ಟಿಯಾದರೆ ಭಾರತದ ರಾಷ್ಟ್ರಪತಿಯವರ ಮೇಲೆ ಗುರುತರವಾದ ಜವಾಬ್ದಾರಿಯಿದೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.
ರಾಷ್ಟ್ರಪತಿಯವರು ಸ್ಥಾಪಿತ ಪ್ರಜಾಪ್ರಭುತ್ವದ ಪೂರ್ವ ನಿದರ್ಶವನ್ನು ಪಾಲಿಸಿ ಹೆಚ್ಚು ಸಂಖ್ಯೆಯನ್ನು ಹೊಂದಿರುವ ಪಕ್ಷಕ್ಕೆ ಅಧಿಕಾರ ರಚಿಸಲು ಅವಕಾಶ ನೀಡಿ, ಕುದುರೆ ವ್ಯಾಪಾರ ತಡೆಯುವ ಪ್ರಯತ್ನ ಮಾಡುತ್ತಾರೆ ಎಂಬ ವಿಶ್ವಾಸವಿದೆ ಎಂದು ತಿಳಿಸಲಾಗಿದೆ.
“ನಾವು ಹೈಕೋರ್ಟ್‌ನ ಮಾಜಿ ನ್ಯಾಯಾಧೀಶರಾಗಿದ್ದು, ಯಾವುದೇ ರಾಜಕೀಯ ಪಕ್ಷದೊಂದಿಗೆ ಸಂಬಂಧ ಹೊಂದಿಲ್ಲ. ಆದರೆ ಸಂವಿಧಾನ ಪ್ರತಿಪಾದಿಸಿದ ಆದರ್ಶಗಳು, ಚುನಾವಣಾ ಪ್ರಜಾಸತ್ತಾತ್ನಕ ಮೌಲ್ಯಗಳಿಗೆ ಬಲವಾಗಿ ಬದ್ಧವಾಗಿದ್ದೇವೆ. ಈ ಹಿನ್ನೆಲೆಯಲ್ಲಿ ಇತ್ತೀಚಿಗೆ ಚುನಾವಣೆಯ ಸಮಯದಲ್ಲಿ ನಡೆದ ನಿರ್ದಿಷ್ಟ ಸಮುದಾಯದ ಮೇಲೆ ದ್ವೇಷ ಭಾವನೆ ಸೇರಿ ಹಲವು ಕಹಿ ಘಟನೆಗಳಾದ ಬಗ್ಗೆ ತುಂಬ ನೋವು ಉಂಟಾದ ಕಾರಣ ಬಹಿರಂಗ ಪತ್ರ ಬರೆಯುತ್ತಿದ್ದೇವೆ” ಎಂದು ತಿಳಿಸಿದ್ದಾರೆ.
