ಗುಜರಾತ್‌ನಲ್ಲಿ ಹರಿಯುವ ನರ್ಮದಾ ನದಿಯ ಮೇಲೆ 9 ಅಪಾಯಕಾರಿ ಸೇತುವೆಗಳಿದ್ದು, ಅವುಗಳಲ್ಲಿ 5 ಗಂಭೀರ ಪರಿಸ್ಥಿತಿಯಲ್ಲಿವೆ. ಆ 5 ಸೇತುವೆಗಳನ್ನು ಬಳಕೆಯಿಂದ ನಿರ್ಬಂಧಿಸಲಾಗಿದೆ. ಉಳಿದ 4 ಸೇತುವೆಗಳಲ್ಲಿ ಭಾರೀ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಪಾಯಕಾರಿ ಸ್ಥಿತಿಯಲ್ಲಿರುವ 9 ಸೇತುವೆಗಳು ಮಾತ್ರವಲ್ಲದೆ, ತಕ್ಷಣದ ದುರಸ್ತಿ ಕಾರ್ಯಗಳಿಗಾಗಿ ಈಗಿನಿಂದಲೇ ಜಾರಿಗೆ ಬರುವಂತೆ 36 ಇತರ ಸೇತುವೆಗಳನ್ನು ಮುಚ್ಚಲು ಸಂಬಂಧಪಟ್ಟ ಜಿಲ್ಲಾಡಳಿತಕ್ಕೆ ಸೂಚನೆ ನೀಡಲಾಗಿದೆ ಎಂದು ಗುಜರಾತ್ ಸರ್ಕಾರದ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಈ ಸೇತುವೆಗಳು ಕೂಡ ನರ್ಮದಾ ನದಿ ಭಾಗವಾಗಿವೆ ಎಂಬುದು ಗಮನಾರ್ಹ.
ಇತ್ತೀಚೆಗೆ ಸುರಿದ ಭಾರೀ ಮಳೆಯಿಂದ ಹಾನಿಗೊಳಗಾದ ವಿವಿಧ ರಸ್ತೆಗಳು ಮತ್ತು ಸೇತುವೆಗಳ ದುರಸ್ತಿ ಹಾಗೂ ನಿರ್ವಹಣಾ ಕಾರ್ಯವನ್ನು ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅವರ ನಿರ್ದೇಶನದ ಮೇರೆಗೆ ನಡೆಸಲಾಗುತ್ತಿದೆ. ಅಲ್ಲದೆ, ಮುನ್ನೆಚ್ಚರಿಕೆ ಕ್ರಮವಾಗಿ ರಾಜ್ಯದಲ್ಲಿ ನರ್ಮದಾ ನದಿಯ ಜಾಲದಲ್ಲಿರುವ ವಿವಿಧ ಸೇತುವೆಗಳ ತಾಂತ್ರಿಕ ಪರಿಶೀಲನೆಯನ್ನು ಸಹ ನಡೆಸುತ್ತಿದೆ ಎಂದು ಪ್ರಕಟಣೆ ತಿಳಿಸಿದೆ.
ಸರ್ದಾರ್ ಸರೋವರ ನರ್ಮದಾ ನಿಗಮ ಲಿಮಿಟೆಡ್ (SSNNL) ಪ್ರಕಾರ, ರಾಜ್ಯದಲ್ಲಿ ನರ್ಮದಾ ನದಿ ಜಾಲದ ಮೂಲಕ ಹಾದುಹೋಗುವ ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳು ಹಾಗೂ ಹಳ್ಳಿ ರಸ್ತೆಗಳನ್ನು ಸಂಪರ್ಕಿಸುವ ಸುಮಾರು 2,110 ಸೇತುವೆಗಳಿವೆ. ಈ ಸೇತುವೆಗಳ ಪ್ರಸ್ತುತ ಸ್ಥಿತಿಯನ್ನು ನಿರ್ಣಯಿಸಲು, ಸಂಭವನೀಯ ಹಾನಿಗಳನ್ನು ತಡೆಗಟ್ಟಲು ಹಾಗೂ ಸೇತುವೆಗಳ ಜೀವಿತಾವಧಿಯನ್ನು ವಿಸ್ತರಿಸಲು ಸಮಗ್ರ ದೃಶ್ಯ ಪರಿಶೀಲನಾ ಅಭಿಯಾನವನ್ನು ನಡೆಸಲಾಗಿದೆ.
ಈ ಲೇಖನ ಓದಿದ್ದೀರಾ?: ಎಲ್ಲ ರಾಜ್ಯಗಳಲ್ಲೂ ಮತದಾರರ ಪಟ್ಟಿ ಪರಿಷ್ಕರಣೆ: ಇದು ಪರೋಕ್ಷ NRC, CAA ಜಾರಿ ಅಲ್ಲವೇ?
ಸಂಪೂರ್ಣವಾಗಿ ಮುಚ್ಚಿದ ಐದು ಸೇತುವೆಗಳಲ್ಲಿ ಎರಡು ಮೋರ್ಬಿ ಜಿಲ್ಲೆಯಲ್ಲಿದ್ದರೆ, ಮೂರು ಸುರೇಂದ್ರನಗರ ಜಿಲ್ಲೆಯಲ್ಲಿವೆ.
ಜುಲೈ 9ರಂದು ಆನಂದ್ ಮತ್ತು ವಡೋದರಾ ಜಿಲ್ಲೆಗಳನ್ನು ಸಂಪರ್ಕಿಸುವ 40 ವರ್ಷ ಹಳೆಯ ಸೇತುವೆಯ ಒಂದು ಭಾಗವು ಗಂಭೀರಾ ಗ್ರಾಮದ ಬಳಿ ಕುಸಿದು ಬಿದ್ದಿತ್ತು. ದುರಂತದಲ್ಲಿ ಕನಿಷ್ಠ 20 ಜನರು ಸಾವನ್ನಪ್ಪಿದ್ದರು.