ಚಲಿಸುತ್ತಿದ್ದ ರೈಲಿನಿಂದ ಕೆಳಗೆ ಬಿದ್ದು ಚಿತ್ರದುರ್ಗದ ಹೊಳಲ್ಕೆರೆ ಮಹಿಳೆಯೊಬ್ಬರು ಮೃತಪಟ್ಟಿರುವ ಘಟನೆ ತಮಿಳುನಾಡಿನ ಧರ್ಮಪುರಿ ಸಮೀಪದ ಟೋನೂರು ಸಮೀಪ ನಡೆದಿದೆ.
ಪಟ್ಟಣದ ಮುಷ್ಟುಗರ ಹಟ್ಟಿಯ ನಿರ್ಮಲಮ್ಮ(50) ಮೃತರು. ನಿರ್ಮಲಮ್ಮ ಹಾಗೂ ಪತಿ ಕುಮಾರ್ ಆಚಾರ್ ಸೇರಿದಂತೆ ಕುಟುಂಬದ ಸದಸ್ಯರು ತಮಿಳುನಾಡಿನ ಪ್ರಕ್ಷಣೀಯ ಸ್ಥಳಗಳಿಗೆ ಪ್ರವಾಸ ಹೋಗಿದ್ದರು. ಇವರೊಂದಿಗೆ ಪ್ರವಾಸದ ಚೀಟಿ ಮಾಡಿದ್ದ 50 ಜನ ಕೂಟ ತೆರಳಿದ್ದರು. ಪ್ರವಾಸ ಮುಗಿಸಿ ಮಧುರೈನಿಂದ ವಾಪಸ್ ಬರುವಾಗ ಈ ದುರಂತ ಸಂಭವಿಸಿದೆ.
ಈ ಸುದ್ದಿ ಓದಿದ್ದೀರಾ? ಮೈಸೂರು: ಮೇಕೆ ಮೇಯಿಸುತ್ತಿದ್ದ ಮಹಿಳೆ ಹೊತ್ತೊಯ್ದ ಹುಲಿ
ಪತಿ ಕುಮಾರ್ ಅವರು ಮುಂದಿನ ನಿಲ್ದಾಣದಲ್ಲಿ ಎಚ್ಚರಗೊಂಡಾಗ ಪಕ್ಕದಲ್ಲಿ ಪತ್ನಿ ಇಲ್ಲದ್ದನ್ನು ಕಂಡು ಗಾಬರಿಗೊಂಡಿದ್ದಾರೆ. ತಕ್ಷಣವೇ ಶೌಚಾಲಯ ಬಳಿ ಹೋಗಿ ನೋಡಿದಾಗ ನಿರ್ಮಲಮ್ಮ ಅವರ ಚಪ್ಪಲಿ ಹಾಗೂ ಮೊಬೈಲ್ ಕಾಣಿಸಿವೆ. ನಂತರ ಧರ್ಮಪುರಿ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಹುಡುಕಾಟ ನಡೆಸಿದಾಗ ರೈಲ್ವೆ ಹಳಿ ಸಮೀಪ ನಿರ್ಮಲಮ್ಮ ಅವರ ಶವ ಸಿಕ್ಕಿದೆ. ಮೂತ್ರ ವಿಸರ್ಜನೆಗೆ ಹೋದಾಗ ನಿರ್ಮಲಮ್ಮ ಆಯ ತಪ್ಪಿ ರೈಲಿನಿಂದ ಹೊರಗೆ ಬಿದ್ದಿರಬಹುದು ಎಂದು ಶಂಕಿಸಲಾಗಿದೆ.
