ಈಶಾನ್ಯ ಭಾರತದ 25 ಸೀಟುಗಳು: ಗುಡಿಸಿ ಹಾಕುವ ಬಿಜೆಪಿಯ ಗುರಿ ಮೂರನೆಯ ಸಲವೂ ಈಡೇರುವುದೇ?

Date:

ಅಸ್ಸಾಮ್ ಸೇರಿದಂತೆ ಈಶಾನ್ಯ ಭಾರತ(North East India)ದ ಎಂಟು ರಾಜ್ಯಗಳು ಒಟ್ಟು 25 ಪ್ರತಿನಿಧಿಗಳನ್ನು ಲೋಕಸಭೆಗೆ ಆರಿಸಿ ಕಳಿಸುತ್ತವೆ. ಬಹುತೇಕ ಕೇಂದ್ರದಲ್ಲಿ ಅಧಿಕಾರ ಹಿಡಿದಿರುವ ಪಕ್ಷ ಅಥವಾ ಪಕ್ಷಗಳ ಒಕ್ಕೂಟಕ್ಕೇ ಮಣೆ ಹಾಕುತ್ತವೆ. 2019ರ ಲೋಕಸಭಾ ಚುನಾವಣೆಗಳಲ್ಲಿ ಮೋದಿ ನೇತೃತ್ವದ ಎನ್.ಡಿ.ಎ. 19 ಸೀಟುಗಳನ್ನು ಗೆದ್ದುಕೊಂಡಿತ್ತು. ಈ ಸಲ 22 ಕ್ಷೇತ್ರಗಳನ್ನು ಗೆಲ್ಲುವ ಗುರಿ ಇರಿಸಿಕೊಂಡಿದೆ.

ಅಸ್ಸಾಮಿನಲ್ಲಿ 14 ಲೋಕಸಭಾ ಕ್ಷೇತ್ರಗಳಿವೆ. ಅರುಣಾಚಲ, ಮೇಘಾಲಯ, ಮಣಿಪುರ ಹಾಗೂ ತ್ರಿಪುರ ತಲಾ ಎರಡು ಲೋಕಸಭಾ ಕ್ಷೇತ್ರಗಳನ್ನು ಹೊಂದಿವೆ. ಮಿಝೋರಾಂ, ನಾಗಾಲ್ಯಾಂಡ್ ಹಾಗೂ ಸಿಕ್ಕಿಂನಲ್ಲಿರುವುದು ತಲಾ ಒಂದು ಸೀಟು ಮಾತ್ರ.

1989ರಲ್ಲಿ ಸಮ್ಮಿಶ್ರ ಸರ್ಕಾರಗಳ ಯುಗ ಕಾಲಿರಿಸಿತು. ಅಲ್ಲಿಯ ತನಕ ‘ಬಾಲಂಗೋಚಿ’ಗಳಂತಿದ್ದ ಈಶಾನ್ಯದ 25 ಸೀಟುಗಳು ಹಠಾತ್ತನೆ ‘ಮುಖ್ಯಧಾರೆ’ಯ ಮಹತ್ವವನ್ನು ಸಂಪಾದಿಸಿದವು. ಕೇಂದ್ರದಲ್ಲಿ ಸರ್ಕಾರ ರಚನೆಗೆ ಅತ್ಯಗತ್ಯ ಸಂಖ್ಯೆಯಾಗಿ ಪರಿಣಮಿಸಿದವು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಅಸ್ಸಾಮಿನ ಆಲ್ ಇಂಡಿಯಾ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಎಐಯುಡಿಎಫ್) ಮತ್ತು ಮಿಜೋರಾಂನ ಝೋರಂ ಪೀಪಲ್ಸ್ ಮೂವ್ಮೆಂಟ್ (ZPM) ವಿನಾ ಈಶಾನ್ಯದ ಉಳಿದೆಲ್ಲ ಪ್ರಾದೇಶಿಕ ಪಕ್ಷಗಳು ಬಿಜೆಪಿ ಪೋಣಿಸಿ ಹೆಣೆದಿರುವ ನಾರ್ತ್ ಈಸ್ಟ್ ಡೆಮಾಕ್ರಟಿಕ್ ಅಲಯನ್ಸ್ ನ (NEDA) ಸದಸ್ಯರಾಗಿವೆ. ಈ ಮುಖಾಂತರವಾಗಿ ಕೇಂದ್ರದ ಬಿಜೆಪಿ ನೇತೃತ್ವದ ಎನ್.ಡಿ.ಎ. ಭಾಗವೂ ಆಗಿವೆ.

ಅಸ್ಸಾಮ್ ಜಾತೀಯ ಪರಿಷತ್ತು ಮತ್ತು ಅಖಿಲ್ ಗೋಗೋಯ್ ಅವರ ರಾಜ್ಜೋರ್ ದಲ್ ಕಾಂಗ್ರೆಸ್ ನೇತೃತ್ವದ ‘ಇಂಡಿಯಾ’ ಒಕ್ಕೂಟಕ್ಕೆ ಸೇರಿವೆ. ಏಪ್ರಿಲ್ 19ರ ಮೊದಲ ಹಂತದಲ್ಲಿ ಈ ಸೀಮೆಯ 16 ಲೋಕಸಭಾ ಕ್ಷೇತ್ರಗಳ ಮತದಾರರು ಮತ ಚಲಾಯಿಸಿದರು. ಅರುಣಾಚಲ ಪ್ರದೇಶ ಮತ್ತು ಸಿಕ್ಕಿಂ ನ ಮತದಾರರು ಲೋಕಸಭೆಯ ಎರಡು ಸೀಟುಗಳ ಜೊತೆ ಜೊತೆಗೆ ತಮ್ಮ ರಾಜ್ಯಗಳ ವಿಧಾನಸಭೆಗಳಿಗೂ ಶಾಸಕರನ್ನೂ ಆರಿಸಿದರು. ಉಳಿದ ಒಂಬತ್ತು ಲೋಕಸಭಾ ಕ್ಷೇತ್ರಗಳಿಗೆ ಎರಡು ಮತ್ತು ಮೂರನೆಯ ಹಂತದಲ್ಲಿ ಮತದಾನ ಜರುಗಿತು. ಅರ್ಥಾತ್ ಈಶಾನ್ಯ ಭಾರತದ 25 ಸೀಟುಗಳಿಗೆ ಮತದಾನ ಈಗಾಗಲೆ ಪೂರ್ಣಗೊಂಡಿದೆ.

ಅರುಣಾಚಲದ ವಿಧಾನಸಭೆ ಚುನಾವಣೆಗಳಲ್ಲಿ ಬಿಜೆಪಿ ಬಹುಮತ ಗಳಿಸುವುದು ಬಹುತೇಕ ನಿಶ್ಚಿತ. 60 ಸೀಟುಗಳ ಪೈಕಿ ಹತ್ತು ಸೀಟುಗಳನ್ನು ಅವಿರೋಧವಾಗಿ ಗೆದ್ದುಕೊಂಡಿದೆ. ಉಳಿದ 50ರಲ್ಲಿ ಕೂಡ ಬಹುತೇಕ ಸೀಟುಗಳನ್ನು ಗೆಲ್ಲುವ ವಿಶ್ವಾಸದಲ್ಲಿದೆ.

ಸಿಕ್ಕಿಮ್ ವಿಧಾನಸಭೆಯ 32 ಸೀಟುಗಳು ಮತ್ತು ಒಂದು ಲೋಕಸಭಾ ಕ್ಷೇತ್ರದಲ್ಲಿ ತನ್ನ ಹುರಿಯಾಳುಗಳನ್ನು ಹೂಡಿದೆ. ಸಿಕ್ಕಿಮ್ ಕ್ರಾಂತಿಕಾರಿ ಮೋರ್ಚಾ ಜೊತೆಗೆ ಚುನಾವಣಾ ಮೈತ್ರಿಯನ್ನು ರದ್ದು ಮಾಡಿಕೊಂಡಿತು ಕೇಸರಿ ಪಕ್ಷ.

ಅರುಣಾಚಲ ಪ್ರದೇಶದ ಎರಡೂ ಲೋಕಸಭಾ ಸೀಟುಗಳಲ್ಲಿ ತನ್ನ ಅಭ್ಯರ್ಥಿಗಳನ್ನು ಹೂಡಿದೆ ಬಿಜೆಪಿ. ಈ ಪೈಕಿ ಒಬ್ಬರು ಕೇಂದ್ರ ಸಚಿವ ಕಿರೆನ್ ರಿಜಿಜು. ಈ ಎರಡೂ ಕ್ಷೇತ್ರಗಳಲ್ಲಿ ಬಿಜೆಪಿಯನ್ನು ಬೆಂಬಲಿಸಿದೆ ನ್ಯಾಶನಲ್ ಪೀಪಲ್ಸ್ ಪಾರ್ಟಿ. ಆದರೆ ಅರುಣಾಚಲ ವಿಧಾನಸಭೆ ಚುನಾವಣೆಯ 23 ಸೀಟುಗಳಲ್ಲಿ ತನ್ನ ಉಮೇದುವಾರರನ್ನು ಹೂಡಿದೆ. ಬಿಜೆಪಿ ಮತ್ತು ನ್ಯಾಶನಲ್ ಪೀಪಲ್ಸ್ ಪಾರ್ಟಿ ಮುಖಾಮುಖಿಯಾಗಿವೆ.

ಲೋಕಸಭೆಯಲ್ಲಿ ದೋಸ್ತಿ ಮತ್ತು ವಿಧಾನಸಭೆಯಲ್ಲಿ ಕುಸ್ತಿ. ಎನ್.ಪಿ.ಪಿ. ಮೇಘಾಲಯದಲ್ಲಿ ಅಧಿಕಾರ ಹಿಡಿದಿರುವ ಪಕ್ಷ. ಕಾಂಗ್ರೆಸ್ ಪಕ್ಷದ ಹಿರಿಯ ಹುದ್ದರಿಯಾಗಿದ್ದು ಹೊರಬಿದ್ದ ಪಿ.ಎ.ಸಂಗ್ಮಾ ಸ್ಥಾಪಿಸಿದ್ದ ಪಕ್ಷ. ಸಂಗ್ಮಾ ಮರಣದ ನಂತರ ಅವರ ಮಗ ಕೋನ್ರಾಡ್ ಸಂಗ್ಮಾ ಮತ್ತು ಮಗಳು ಅಗಾಥಾ ಸಂಗ್ಮಾ ಈ ಪಕ್ಷದ ಸೂತ್ರಧಾರರು. ಕೋನ್ರಾಡ್ ಮೇಘಾಲಯದ ಮುಖ್ಯಮಂತ್ರಿ. ಅಗಾಥಾ ತಂದೆಯ ಮರಣದ ನಂತರ ತುರಾ ಕ್ಷೇತ್ರದ ಸತತ ಲೋಕಸಭಾ ಸದಸ್ಯೆ. ಈ ಸಲವೂ ಕಣದಲ್ಲಿದ್ದಾರೆ.

ಅರುಣಾಚಲದಲ್ಲಿ ಎನ್.ಪಿ.ಪಿ. ಬೆಂಬಲದ ಉಪಕಾರಕ್ಕೆ ಬಿಜೆಪಿ ಮೇಘಾಲಯದಲ್ಲಿ ಪ್ರತ್ಯುಪಕಾರ ಮಾಡಿದೆ. ಮೇಘಾಲಯದ ಎರಡೂ ಸೀಟುಗಳಲ್ಲಿ ತನ್ನ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿಲ್ಲ. ಎನ್.ಪಿ.ಪಿ.ಯ ಅಭ್ಯರ್ಥಿಗಳನ್ನೇ ಬೆಂಬಲಿಸಿದೆ.

ಮಿಜೋರಾಂ ಸಿಎಂ ಲಾಲ್ದುಹೋಮ, ಅರುಣಾಚಲ ಪ್ರದೇಶದ ಸಿಎಂ ಪೆಮಾ ಖಂಡು, ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮಾ

ಅಸ್ಸಾಮ್ ನ 14 ಸೀಟುಗಳ ಪೈಕಿ 11ರಲ್ಲಿ ಮಾತ್ರ ತಾನು ಸ್ಪರ್ಧಿಸಿದ್ದು, ಉಳಿದ ಮೂರನ್ನು ಮಿತ್ರಪಕ್ಷಗಳಿಗೆ ಬಿಟ್ಟುಕೊಟ್ಟಿದೆ. ಎರಡನ್ನು ಅಸ್ಸಾಮ್ ಗಣ ಪರಿಷತ್ತಿನ ಹುರಿಯಾಳುಗಳನ್ನೂ ಒಂದರಲ್ಲಿ ಯುನೈಟೆಡ್ ಪೀಪಲ್ಸ್ ಪಾರ್ಟಿ ಲಿಬರಲ್ ಅಭ್ಯರ್ಥಿಯನ್ನೂ ಬೆಂಬಲಿಸಿದೆ.

ಅಸ್ಸಾಮಿನಲ್ಲಿ ಕಾಂಗ್ರೆಸ್ 13 ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದು ಮಿತ್ರಪಕ್ಷ ಎ.ಜೆ.ಪಿ.ಗೆ ಒಂದು ಸೀಟನ್ನು ಬಿಟ್ಟುಕೊಟ್ಟಿದೆ. ಆಮ್ ಆದ್ಮೀ ಪಾರ್ಟಿ ಒಪ್ಪಂದವನ್ನು ಕಡೆಗಣಿಸಿ ಒಂದು ಕ್ಷೇತ್ರದಲ್ಲಿ ಕಾಂಗ್ರೆಸ್ ವಿರುದ್ಧ, ಮತ್ತೊಂದರಲ್ಲಿ ಎ.ಜೆ.ಪಿ. ವಿರುದ್ಧ ಉಮೇದುವಾರರನ್ನು ಹೂಡಿದೆ.

ಈಶಾನ್ಯ ಸೀಮೆಯನ್ನು ಕಳೆದ ಸಲದಂತೆ ಈ ಸಲವೂ ಕೇಸರಿ ಪಕ್ಷ ಗುಡಿಸಿ ಹಾಕುವುದನ್ನು ತಪ್ಪಿಸಲು ಹೆಣಗುತ್ತಿದೆ ಕಾಂಗ್ರೆಸ್ ಪಕ್ಷ. ಮತ್ತಷ್ಟು ದಮನಕಾರಿ ಮತ್ತು ಸರ್ವಾಧಿಕಾರಿ ಆಗಲಿರುವ ಬಹುಸಂಖ್ಯಾತರ ಪಕ್ಷವನ್ನು (ಬಿಜೆಪಿ) ತಡೆದು ನಿಲ್ಲಿಸುವುದು ನಮ್ಮ ಗುರಿ ಎನ್ನುತ್ತಾರೆ ಕಾಂಗ್ರೆಸ್ ನಾಯಕ ಗೌರವ್ ಗೋಗೋಯ್. ಗೋಗೋಯ್ ಕೂಡ ಲೋಕಸಭೆಗೆ ಸ್ಪರ್ಧಿಸಿದ್ದಾರೆ.

ಒಂದು ಕಾಲಕ್ಕೆ ಈಶಾನ್ಯ ಭಾರತ ಕಾಂಗ್ರೆಸ್ಸಿನ ಭದ್ರಕೋಟೆ. ಆದರೆ ಈಗ ಅರುಣಾಚಲ, ಮಣಿಪುರ, ನಾಗಾಲ್ಯಾಂಡ್, ಮಿಝೋರಾಂ,ತ್ರಿಪುರ ಹಾಗೂ ಸಿಕ್ಕಿಂನಲ್ಲಿ ಧೂಳೀಪಟವಾಗಿ ಹೋಗಿದೆ. ಈ ಆರೂ ರಾಜ್ಯಗಳು ಒಂಬತ್ತು ಲೋಕಸಭಾ ಸೀಟುಗಳನ್ನು ಹೊಂದಿವೆ. ಈಶಾನ್ಯದ ಸೀಮೆಯಲ್ಲಿ ಕಾಂಗ್ರೆಸ್ ಗೆದ್ದ ನಾಲ್ಕು ಸ್ಥಾನಗಳ ಪೈಕಿ ಮೂರು ಅಸ್ಸಾಮಿನವು. ನಾಲ್ಕನೆಯದು ಮೇಘಾಲಯದ ಶಿಲ್ಲಾಂಗ್. 2023ರ ಕ್ಷೇತ್ರ ಮರುವಿಂಗಡಣೆಯ ನಂತರ ಅಸ್ಸಾಮಿನಲ್ಲಿ ಕಾಂಗ್ರೆಸ್ ಗೆದ್ದ ಮೂರು ಕ್ಷೇತ್ರಗಳ ಜನಸಂಖ್ಯಾ ಚಹರೆಯೇ ಬದಲಾಗಿ ಹೋಗಿದೆ. ಒಂದು ಕ್ಷೇತ್ರ ಅಸ್ತಿತ್ವದಲ್ಲೇ ಇಲ್ಲ.

ಜನಾಂಗೀಯ ಕದನದ ಹಿಂಸಾಚಾರದಲ್ಲಿ ಈಗಲೂ ಹೊತ್ತಿ ಉರಿದಿರುವ ಈಶಾನ್ಯ ರಾಜ್ಯ ಮಣಿಪುರ. ಇಲ್ಲಿನ ಎರಡೂ ಸೀಟುಗಳನ್ನು ಗೆಲ್ಲುವ ವಿಶ್ವಾಸ ಕಾಂಗ್ರೆಸ್ಸಿನದು. ಹಿಂಸಾಚಾರಕ್ಕೆ ಎಣ್ಣೆ ಎರೆದಿರುವ ಬಿಜೆಪಿ ಜನಾಕ್ರೋಶ ಎದುರಿಸಿರುವುದೇ ತನ್ನ ವಿಶ್ವಾಸಕ್ಕೆ ಆಧಾರ ಎಂಬ ವಿವರಣೆ ನೀಡಿದೆ. ಆದರೆ ಬಿಜೆಪಿಯ ಮಿತ್ರಪಕ್ಷ ನಾಗಾ ಪೀಪಲ್ಸ್ ಫ್ರಂಟ್ ಕೂಡ ಕುಕಿ-ಝೋ ಕ್ರೈಸ್ತ ಬುಡಕಟ್ಟು ಬಾಹುಳ್ಯದ ಬಾಹ್ಯಮಣಿಪುರ ಕ್ಷೇತ್ರವನ್ನು ಗೆಲ್ಲುವ ವಿಶ್ವಾಸದಲ್ಲಿದೆ.

ಅಸ್ಸಾಮಿನ ಬಾರ್ಪೇಟ ಹಾಗೂ ನಾಗಾಂವ್ ಕ್ಷೇತ್ರಗಳಲ್ಲಿ ಮುಸ್ಲಿಮ್ ಮತಗಳು ಕಾಂಗ್ರೆಸ್ ಮತ್ತು ಬದ್ರುದ್ದೀನ್ ಅಜ್ಮಲ್ ಅವರ ಎಐಯುಡಿಎಫ್ ನಡುವೆ ಹಂಚಿ ಹೋಗುವ ದಟ್ಟ ಸಾಧ್ಯತೆಗಳಿವೆ. ಈ ಕಾರಣಕ್ಕಾಗಿಯೇ ಅಜ್ಮಲ್ ಪಕ್ಷವನ್ನು ಬಿಜೆಪಿಯ ‘ಬಿ ಟೀಮ್’ ಎಂದು ಜರೆದಿದೆ ಕಾಂಗ್ರೆಸ್. ಧುಬ್ರಿ ಕ್ಷೇತ್ರದಿಂದ ಮರು ಆಯ್ಕೆ ಬಯಸಿದ್ದಾರೆ ಅಜ್ಮಲ್. “ನಾವು 2021ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ಸಿನ ಜೊತೆ ಮೈತ್ರಿ ಮಾಡಿಕೊಂಡಿದ್ದೆವೇ ವಿನಾಃ ಬಿಜೆಪಿ ಜೊತೆ ಅಲ್ಲ. ಆದರೆ ಕಾಂಗ್ರೆಸ್ ನಮ್ಮನ್ನು ಕಡೆಗಣಿಸಿತು” ಎಂಬುದು ಅಜ್ಮಲ್ ಅವರ ಸಮಜಾಯಿಷಿ.

ಮಣಿಪುರ ಮತ್ತು ತ್ರಿಪುರದಲ್ಲಿ ಭಾರೀ ಪ್ರಮಾಣದ ಮತದಾನ ನಡೆದಿದೆ. ಮಣಿಪುರದ ಶೇಕಡಾವಾರು ಪ್ರಮಾಣ 80.47. ತ್ರಿಪುರದ ಪ್ರಮಾಣ ಶೇ.80.92. ಅರುಣಾಚಲದಲ್ಲಿ 77.68, ಮೇಘಾಲಯದಲ್ಲಿ ಶೇ.76.60, ಸಿಕ್ಕಿಂ ನಲ್ಲಿ ಶೇ 79.88. ಆದರೆ ಮಿಝೋರಂ ಮತ್ತು ನಾಗಾಲ್ಯಾಂಡ್ ನಲ್ಲಿ ಈ ಪ್ರಮಾಣ ಶೇ.56.87 ಮತ್ತು ಶೇ 57.72ಕ್ಕೆ ಸೀಮಿತಗೊಂಡಿದೆ.

ನಾಗಾಲ್ಯಾಂಡ್ ಆರು ಜಿಲ್ಲೆಗಳ ನಾಲ್ಕು ಲಕ್ಷ ಮತದಾರರು ಮತದಾನವನ್ನು ಬಹಿಷ್ಕರಿಸಿದರು. ಪ್ರತ್ಯೇಕ ರಾಜ್ಯದ ಬೇಡಿಕೆಯನ್ನು ಈಡೇರಿಸಿಲ್ಲವೆಂಬುದು ನಾಗಾಲ್ಯಾಂಡ್‌ನ ಪೂರ್ವಭಾಗದ ಈ ಜಿಲ್ಲೆಗಳ ಅಸಮಾಧಾನ. 738 ಮತಗಟ್ಟೆಗಳು ಒಂದೇ ಒಂದು ವೋಟ ಕೂಡ ಬೀಳದೆ ಭಣಗುಟ್ಟಿದವು.

ಈಸ್ಟರ್ನ್ ನಾಗಾಲ್ಯಾಂಡ್ ಪೀಪಲ್ಸ್ ಆರ್ಗನೈಸೇಷನ್ (ENPO) ಈ ಬಹಿಷ್ಕಾರಕ್ಕೆ ಕರೆ ನೀಡಿತ್ತು. ಈ ಸಂಘಟನೆಯು 2010ರಿಂದ ಪ್ರತ್ಯೇಕ ರಾಜ್ಯದ ಬೇಡಿಕೆ ಇಟ್ಟಿದೆ. ನಾಗಾಲ್ಯಾಂಡ್ ಪ್ರತ್ಯೇಕ ರಾಜ್ಯದ ಸ್ಥಾನಮಾನ ಪಡೆದು 60 ವರ್ಷಗಳಾಗಿದ್ದರೂ ಅಭಿವೃದ್ಧಿಯ ಎಲ್ಲ ಕ್ಷೇತ್ರಗಳಲ್ಲೂ ತಮ್ಮನ್ನು ಕಡೆಗಣಿಸಲಾಗಿದೆ ಎಂಬುದು ಈ ಜಿಲ್ಲೆಗಳ ಆಕ್ರೋಶ. ಫ್ರಾಂಟಿಯರ್ ನಾಗಾಲ್ಯಾಂಡ್ ಅಥವಾ ಗಡಿನಾಡ ನಾಗಾಲ್ಯಾಂಡ್ ಎಂದು ಈ ಜಿಲ್ಲೆಗಳು ತಮ್ಮ ಸೀಮೆಯನ್ನು ಕರೆದುಕೊಂಡಿವೆ. ಏಳು ನಾಗಾ ಬುಡಕಟ್ಟುಗಳು ಈ ಸೀಮೆಯಲ್ಲಿ ನೆಲೆಸಿವೆ.

ಮೇಘಾಲಯ ಕಳೆದ ಆರು ವರ್ಷಗಳಿಂದ ಎನ್.ಪಿ.ಪಿ.ಮತ್ತು ಬಿಜೆಪಿ ಆಡಳಿತದಲ್ಲಿದೆ. ಕೋನ್ರಾಡ್ ಸಂಗ್ಮಾ ಮುಖ್ಯಮಂತ್ರಿ. ಬಿಜೆಪಿ- ಶಿಲ್ಲಾಂಗ್ ಮತ್ತು ತೂರ ಮೇಘಾಲಯದ ಎರಡು ಲೋಕಸಭಾ ಕ್ಷೇತ್ರಗಳು. ಶಿಲ್ಲಾಂಗ್ ಕ್ಷೇತ್ರದಿಂದ ಕಾಂಗ್ರೆಸ್ ನ ವಿನ್ಸೆಂಟ್ ಪಾಲಾ ಕಳೆದ ಮೂರು ಚುನಾವಣೆಗಳಲ್ಲಿ ಸತತ ಗೆಲುವು ಸಾಧಿಸಿ ನಾಲ್ಕನೆಯ ಸಲ ಲೋಕಸಭೆಯ ಪ್ರವೇಶ ಬಯಸಿ ಕಣದಲ್ಲಿದ್ದಾರೆ. ಒಂದೊಮ್ಮೆ ಕಾಂಗ್ರೆಸ್ ಕುಳವಾಗಿದ್ದ ಮಾಝೆಲ್ ಅಂಪರೀನ್ ಲಿಂಗ್ಡೋ ಕೋನ್ರಾಡ್ ಸಂಪುಟದಲ್ಲಿ ಮಂತ್ರಿ. ವಿನ್ಸೆಂಟ್ ಪಾಲಾ ವಿರುದ್ಧ ಈಕೆಯನ್ನು ಹೂಡಲಾಗಿದೆ.

ಮೇಘಾಲಯ ಮುಖ್ಯಮಂತ್ರಿ ಕೋನ್ರಾಡ್ ಸಂಗ್ಮಾ

 

ಮತ್ತೊಂದು ಕ್ಷೇತ್ರ ತೂರ 70ರ ದಶಕದಿಂದ ಪಿ.ಎ.ಸಂಗ್ಮಾ ಕುಟುಂಬದ ಪಾಲಾಗಿ ಉಳಿದಿದೆ. ಸಂಗ್ಮಾ ಅವರು ಕಾಂಗ್ರೆಸ್ ತೊರೆದು ತಮ್ಮದೇ ಪಕ್ಷ ಎನ್.ಪಿ.ಪಿಯನ್ನು ರಚಿಸಿದ್ದರು. ಅವರ ಮಗಳು ಅಗಾಥಾ ಸಂಗ್ಮಾ ಮನಮೋಹನ್ ಸಿಂಗ್ ಮಂತ್ರಿಮಂಡಲದಲ್ಲಿದ್ದರು. ಬಿಜೆಪಿ ತನ್ನ ಅಭ್ಯರ್ಥಿಗಳನ್ನು ಸ್ಪರ್ಧೆಗೆ ಇಳಿಸಿಲ್ಲ. ಮಿತ್ರಪಕ್ಷ ಎನ್.ಪಿ.ಪಿ.ಯ ಹುರಿಯಾಳುಗಳನ್ನು ಬೆಂಬಲಿಸಿದೆ.

ಇದನ್ನು ಓದಿದ್ದೀರಾ? ದಿಲ್ಲಿ ಗದ್ದುಗೆ ತಲುಪಲು ಹೆದ್ದಾರಿಯಂತಿರುವ ಉತ್ತರ ಪ್ರದೇಶದಲ್ಲಿ ಈ ಬಾರಿ ಯುವಕರ ಸಮಸ್ಯೆಗಳೇ ನಿರ್ಣಾಯಕ

ಮಮತಾ ಬ್ಯಾನರ್ಜಿ ಅವರ ತೃಣಮೂಲ ಕಾಂಗ್ರೆಸ್ ಕೂಡ ಇಲ್ಲಿ ಹುರಿಯಾಳುಗಳನ್ನು ಕಣಕ್ಕೆ ಇಳಿಸಿದೆ. ತ್ರಿಪುರದ ಎರಡೂ ಸೀಟುಗಳನ್ನು ಕಳೆದ ಸಲ ಬಿಜೆಪಿ ಗೆದ್ದುಕೊಂಡಿತ್ತು. ಈ ಸಲ ಇಂಡಿಯಾ ಮೈತ್ರಿಕೂಟ ಮತ್ತು ಬಿಜೆಪಿ ಅಭ್ಯರ್ಥಿಗಳ ನಡುವೆ ತುರುಸಿನ ಪೈಪೋಟಿ ಏರ್ಪಟ್ಟಿದೆ.

ಈಶಾನ್ಯ ಭಾರತದ ಲೋಕಸಭಾ ಚುನಾವಣಾ ಕಣವನ್ನು ಕಳೆದೆರಡು ಸಲದಂತೆ ಈ ಬಾರಿಯೂ ಬಿಜೆಪಿಯೇ ಗುಡಿಸಿ ಹಾಕಲಿದೆಯೇ, 22 ಸೀಟುಗಳ ಗುರಿ ತಲುಪುವುದೇ ಅಥವಾ 19ಕ್ಕಿಂತ ಕೆಳಕ್ಕೆ ಕುಸಿಯಲಿದೆಯೇ ಎಂಬುದನ್ನು ಜೂನ್ 4ರವರೆಗೆ ಕಾದು ನೋಡಬೇಕಿದೆ.

ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ನಮ್ಮನ್ನು ಬೆಂಬಲಿಸಿ

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ನೂತನ ಕೇಂದ್ರ ಸಚಿವ ಸಂಪುಟ: ಯಾರಿಗೆ, ಯಾವ ಖಾತೆ? ಸಂಪೂರ್ಣ ಪಟ್ಟಿ

ಪ್ರಧಾನ ಮಂತ್ರಿ ನರೇಂದ್ರ ಮೋದಿ ಭಾನುವಾರ ಪ್ರಮಾಣ ವಚನ ಸ್ವೀಕರಿಸಿದ್ದು, ಮೋದಿಯ...

ಗೇಣಿಬೆನ್ ಠಾಕೂರ್ ಎಂಬ ಗುಜರಾತಿನ ‘ದೈತ್ಯಸಂಹಾರಿ’

ಗುಜರಾತ್ ತನ್ನದೇ ಪಾಳೆಯಪಟ್ಟು ಎಂಬ ಬಿಜೆಪಿಯ ಭಾರೀ ದುರಹಂಕಾರಕ್ಕೆ ಪೆಟ್ಟು ನೀಡಿರುವಾಕೆ...

ಬಿಜೆಪಿ ಪಿಎಂ ಮೋದಿಯನ್ನು ಬದಲಿಸಿ, ಹೊಸ ನಾಯಕರನ್ನು ಆಯ್ಕೆ ಮಾಡಬೇಕು: ಟಿಎಂಸಿ ನಾಯಕಿ

ಬಿಜೆಪಿ ಹೊಸ ನಾಯಕರನ್ನು ಆಯ್ಕೆ ಮಾಡಿಕೊಳ್ಳಬೇಕು ಮತ್ತು ಪ್ರಧಾನಿ ನರೇಂದ್ರ ಮೋದಿಯನ್ನು...

ಮೂರನೇ ಅವಧಿಗೆ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ನರೇಂದ್ರ ಮೋದಿ

ನರೇಂದ್ರ ಮೋದಿ ಅವರು ಮೂರನೇ ಅವಧಿಗೆ ಪ್ರಧಾನ ಮಂತ್ರಿಯಾಗಿ ದೇವರ ಹೆಸರಿನಲ್ಲಿ...