ಜಮ್ಮು ಮತ್ತು ಕಾಶ್ಮೀರದಲ್ಲಿ 26 ಜನರ ಸಾವಿಗೆ ಕಾರಣವಾದ ಭಯೋತ್ಪಾದಕ ದಾಳಿಯ ಕೆಲವೇ ದಿನಗಳ ನಂತರ ಬಹುಭಾಷಾ ನಟ ಅತುಲ್ ಕುಲಕರ್ಣಿ ಪಹಲ್ಗಾಮ್‌ಗೆ ಭೇಟಿ ನೀಡಿದ್ದಾರೆ.
ಭೇಟಿಯ ಸಂದರ್ಭದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿ ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ ‘ಯಾರೊಬ್ಬರು ಕಾಶ್ಮೀರದ ಬಗ್ಗೆ ಭಯಪಡಬೇಡಿ. ಇದು ನಮ್ಮ ಕಾಶ್ಮೀರ, ಇದು ನಮ್ಮ ದೇಶ, ನಾವು ಬರುತ್ತೇವೆ” ಎಂದು ದೇಶದ ಜನತೆಗೆ ಸಂದೇಶ ನೀಡಿದ್ದಾರೆ.
“ಇದು ಭಾರತದ ಆಸ್ತಿ. ಧೈರ್ಯ ಭಯಕ್ಕಿಂತ ತೂಕ ಹೊಂದಿರುತ್ತದೆ. ದ್ವೇಷವು ಪ್ರೀತಿಗೆ ಸೋತಿದೆ. ಕಾಶ್ಮೀರಕ್ಕೆ ಹೋಗೋಣ. ಸಿಂಧ್, ಝೀಲಂ ತೀರಕ್ಕೆ ಹೋಗೋಣ. ನಾನು ಬಂದಿದ್ದೇನೆ, ನೀವು ಕೂಡ ಬನ್ನಿ. ಜಗತ್ತಿಗೆ ಸಂದೇಶ ಕಳುಹಿಸಲು ಪಹಲ್ಗಾಮ್‌ಗೆ ಭೇಟಿ ನೀಡಲು ಬಯಸಿದ್ದೇನೆ’ ಎಂದು ಪ್ರವಾಸಿಗರನ್ನು ಆಹ್ವಾನಿಸಿದ್ದಾರೆ.
“ಏಪ್ರಿಲ್ 22 ರಂದು ನಡೆದ ಘಟನೆ ಇಡೀ ದೇಶವನ್ನೇ ದುಃಖಮಯವಾಗಿಸಿದೆ. ಇಲ್ಲಿ ಶೇ. 90 ರಷ್ಟು ಬುಕಿಂಗ್ ರದ್ದಾಗಿದೆ ಎಂದು ನಾನು ಓದಿದ್ದೇನೆ. ಭಯೋತ್ಪಾದಕರು ಕಾಶ್ಮೀರಕ್ಕೆ ಬರಬೇಡಿ ಎಂಬ ಸಂದೇಶ ನೀಡುತ್ತಿದ್ದಾರೆ. ಇದು ಆಗುವುದಿಲ್ಲ. ಇದು ನಮ್ಮ ಕಾಶ್ಮೀರ, ನಮ್ಮ ದೇಶ, ನಾವು ಇಲ್ಲಿಗೆ ಬರುತ್ತೇವೆ. ಭಯೋತ್ಪಾದಕರ ಸಿದ್ಧಾಂತಕ್ಕೆ ನಾವು ನೀಡಬೇಕಾದ ಉತ್ತರ ಇದು. ಮುಂಬೈನಲ್ಲಿಯೇ ಇದ್ದು ಈ ಸಂದೇಶವನ್ನು ನೀಡಲು ನನಗೆ ಸಾಧ್ಯವಾಗಲಿಲ್ಲ, ಹಾಗಾಗಿ ನಾನು ಇಲ್ಲಿಗೆ ಬಂದಿದ್ದೇನೆ. ನಾನು ಬರಲು ಸಾಧ್ಯವಾದರೆ, ದೇಶದ ಉಳಿದವರು ಸಹ ಇಲ್ಲಿಗೆ ಬರಬಹುದು. ನಾವು ಇಲ್ಲಿಗೆ ಬರಬೇಕು ಮತ್ತು ಭಯಪಡಬಾರದು” ಎಂದು ಅತುಲ್ ಕುಲಕರ್ಣಿ ಸಾರ್ವಜನಿಕರಿಗೆ ಸಂದೇಶ ರವಾನಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಬಾಹ್ಯ ಭಯೋತ್ಪಾದನೆಗೆ ಆಂತರಿಕ ಮುಸ್ಲಿಂ ವಿರೋಧ ಉತ್ತರವಲ್ಲ
ಏಪ್ರಿಲ್ 27 ರಂದು, ಅತುಲ್ ಕುಲಕರ್ಣಿ ಅವರು ಪಹಲ್ಗಮ್‌ಗೆ ಭೇಟಿ ನೀಡುತ್ತಿರುವುದನ್ನು ಮತ್ತು ಅಂಗಡಿಯಲ್ಲಿ ಸ್ಥಳೀಯ ಖಾದ್ಯಗಳನ್ನು ಆನಂದಿಸುತ್ತಿರುವ ಒಂದೆರಡು ಭಾವಚಿತ್ರಗಳು ಮತ್ತು ವಿಡಿಯೊಗಳನ್ನು ಹಂಚಿಕೊಂಡಿದ್ದಾರೆ. ಒಂದು ಭಾವಚಿತ್ರದಲ್ಲಿ, ಅವರು “ಐ ಲವ್ ಪಹಲ್ಗಾಮ್” ಎಂದು ಬರೆದುಕೊಂಡಿದ್ದಾರೆ.
ಮತ್ತೊಂದು ಭಾವಚಿತ್ರದಲ್ಲಿ ಅವರು ಕಾಶ್ಮೀರಿ ಅಂಗಡಿಯಿಂದ ಕ್ರಿಕೆಟ್ ಬ್ಯಾಟ್ ಖರೀದಿಸುತ್ತಿರುವುದನ್ನು ತೋರಿಸಲಾಗಿದೆ. ಅಂಗಡಿಯ ಮಾಲೀಕರು ನಟನಿಗೆ ಕಷ್ಟದ ಸಮಯದಲ್ಲಿ ಆ ಸ್ಥಳಕ್ಕೆ ಭೇಟಿ ನೀಡಿದ್ದಕ್ಕಾಗಿ ಧನ್ಯವಾದಗಳನ್ನು ಅರ್ಪಿಸಿದ್ದಾರೆ.
ಅವರ ಒಂದು ಪೋಸ್ಟ್‌ಗೆ ನೆಟ್ಟಿಗರೊಬ್ಬರು ಪ್ರತಿಕ್ರಿಯೆ ನೀಡಿದ್ದು, ‘ಅತುಲ್ ಸರ್, ನೀವು ನಮ್ಮೂರಿನಲ್ಲಿ ಆತಿಥ್ಯ ವಹಿಸಿದ್ದು ತುಂಬಾ ಸಂತೋಷವಾಯಿತು. ಈ ಕಷ್ಟದ ಸಮಯದಲ್ಲಿ ಆಗಮಿಸಿ ಶತ್ರುಗಳಿಗೆ ನಾವು ಹೆದರುವುದಿಲ್ಲ ಎಂದು ತೋರಿಸಿದ್ದಕ್ಕಾಗಿ ತುಂಬಾ ಧನ್ಯವಾದಗಳು. ನಾವು ಒಟ್ಟಾಗಿ ಇದನ್ನು ಜಯಿಸುತ್ತೇವೆ” ಎಂದು ಹೇಳಿದ್ದಾರೆ.
