ಸೌರ ಶಕ್ತಿ ಗುತ್ತಿಗೆಯ ಒಪ್ಪಂದಕ್ಕೆ ಸಂಬಂಧಿಸಿದಂತೆ ಭಾರತದ ಉದ್ಯಮಿ ಗೌತಮ್ ಅದಾನಿ ವಿರುದ್ಧ ವಂಚನೆಯ ಆರೋಪ ಕೇಳಿಬಂದಿರುವ ಪ್ರಕರಣದಲ್ಲಿ ಗೌತಮ್ ಅದಾನಿ, ಅವರ ಸೋದರಳಿಯ ಸಾಗರ್ ಅದಾನಿ ಸೇರಿದಂತೆ 6 ಮಂದಿಯ ವಿರುದ್ಧ ಅಮೆರಿಕದ ನ್ಯಾಯಾಲಯ ಬಂಧನ ವಾರೆಂಟ್ ಹೊರಡಿಸಿದೆ. ಲಂಚ ಪ್ರಕರಣದ ಗಂಭೀರ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಅದಾನಿಯನ್ನು ಕೂಡಲೇ ಬಂಧಿಸಬೇಕೆಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಒತ್ತಾಯಿಸಿದ್ದಾರೆ.
ನವದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ರಾಹುಲ್ ಗಾಂಧಿ, ‘ಸೌರ ಶಕ್ತಿಯ ಒಪ್ಪಂದಗಳಿಗೆ 250 ಮಿಲಿಯನ್ ಡಾಲರ್ಗಿಂತಲೂ ಹೆಚ್ಚು ಲಂಚ ನೀಡುವ ಯೋಜನೆಯನ್ನು ರೂಪಿಸಿದ ಆರೋಪವು ಅದಾನಿ ಮೇಲಿದೆ. ಅದಾನಿ ಮತ್ತು ಅವರ ಸಹಚರರು ಅಧಿಕಾರಿಗಳಿಗೆ 250 ಮಿಲಿಯನ್ ಡಾಲರ್ ಲಂಚವನ್ನು ನೀಡಿದ್ದಾರೆ ಎಂಬ ಆರೋಪಗಳನ್ನು ಅಮೆರಿಕದ ಪ್ರಾಸಿಕ್ಯೂಟರ್ಗಳು ಮಾಡಿದ್ದಾರೆ. ಭಾರತ ಹಾಗೂ ಅಮೆರಿಕದ ಕಾನೂನುಗಳನ್ನು ಅದಾನಿ ಉಲ್ಲಂಘಿಸಿದ್ದಾರೆ’ ಎಂದು ಹೇಳಿದ್ದಾರೆ.
‘ಗೌತಮ್ ಅದಾನಿ ಅವರು ಅಮೆರಿಕ ಹಾಗೂ ಭಾರತದ ಕಾನೂನುಗಳನ್ನು ಉಲ್ಲಂಘಿಸಿದ್ದಾರೆ ಎಂಬ ವಿಚಾರ ಈಗ ಸಂಪೂರ್ಣವಾಗಿ ಬಹಿರಂಗಗೊಂಡಿದೆ. ಅಮೆರಿಕದಲ್ಲಿ ದೋಷಾರೋಪಣೆ ಪಟ್ಟಿ ಸಲ್ಲಿಕೆಯಾಗಿದೆ. ಅವರ ವಿರುದ್ಧ ಬಂಧನ ವಾರಂಟ್ ಅನ್ನು ಹೊರಡಿಸಲಾಗಿದೆ. ಅವರು ನಮ್ಮ ದೇಶದಲ್ಲಿ ಇನ್ನೂ ಸ್ವತಂತ್ರವಾಗಿ ಓಡಾಡಿಕೊಂಡಿದ್ದಾರೆ. ಇದು ಹೇಗೆ ಸಾಧ್ಯವಾಗುತ್ತಿದೆ’ ಎಂದು ರಾಹುಲ್ ಪ್ರಶ್ನಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ನಬಾರ್ಡ್ ಸಾಲ ಖೋತಾ ಮಾಡಿದ ಮೋದಿ ಸರ್ಕಾರ ರೈತಪರವೇ?
‘ಏಕ್ ಹೈ, ಸೇಫ್ ಹೈ’ ಎಂಬ ಹೇಳಿಕೆಯನ್ನು ಪ್ರಧಾನಿ ಮೋದಿ ಚುನಾವಣಾ ಭಾಷಣಗಳಲ್ಲಿ ಮಾಡುತ್ತಾರೆ. ಬಿಜೆಪಿ ಸರ್ಕಾರದ ರಚನೆಯು ಅದಾನಿಯ ಧನಸಹಾಯದಿಂದ ಆಗಿದೆ. ಅದಾನಿಯನ್ನು ಬಂಧಿಸುವ ಸಾಮರ್ಥ್ಯ ಪ್ರಧಾನಿಗಿಲ್ಲ’ ಎಂದು ರಾಹುಲ್ ವಾಗ್ದಾಳಿ ನಡೆಸಿದ್ದಾರೆ.
‘ಭಾರತದಲ್ಲಿ ನರೇಂದ್ರ ಮೋದಿ ಮತ್ತು ಗೌತಮ್ ಅದಾನಿ ಒಟ್ಟಿಗೆ ಇದ್ದಾರೆ. ಹೀಗಾಗಿ ಅವರಿಬ್ಬರೂ ಸುರಕ್ಷಿತವಾಗಿದ್ದಾರೆ. ಭಾರತದಲ್ಲಿ ಅದಾನಿಗೆ ಏನೂ ಮಾಡಲು ಸಾಧ್ಯವಿಲ್ಲ. ಜನರಿಂದ ಆಯ್ಕೆಯಾದ ಮುಖ್ಯಮಂತ್ರಿಯನ್ನು ಇಲ್ಲಿ ಜೈಲಿಗೆ ಕಳುಹಿಸಲಾಗುತ್ತದೆ. 2,000 ಕೋಟಿ ರೂಪಾಯಿಗಳ ಹಗರಣ ಮಾಡಿರುವ ಅದಾನಿ ಮಾತ್ರ ಸ್ವತಂತ್ರವಾಗಿ ಓಡಾಡಿಕೊಂಡಿದ್ದಾರೆ. ಅವರನ್ನು ನರೇಂದ್ರ ಮೋದಿ ಅವರನ್ನು ರಕ್ಷಿಸುತ್ತಿದ್ದಾರೆ’ ಎಂದು ರಾಹುಲ್ ಆರೋಪಿಸಿದ್ದಾರೆ.
ಅದಾನಿಯನ್ನು ಬಂಧಿಸಿ ವಿಚಾರಣೆ ನಡೆಸಿದಾಗ ನರೇಂದ್ರ ಮೋದಿಯವರ ಹೆಸರು ಹೊರಬರುತ್ತದೆ. ಬಿಜೆಪಿಯ ಸಂಪೂರ್ಣ ಫಂಡಿಂಗ್ ಅವರ ಕೈಯಲ್ಲಿದೆ. ಅದಾನಿ ಈ ದೇಶವನ್ನು ಹೈಜಾಕ್ ಮಾಡಿದ್ದಾರೆ. ನಾವು ಈ ವಿಷಯವನ್ನು ಲೋಕಸಭೆಯಲ್ಲಿ ಎತ್ತುತ್ತೇವೆ. ಈ ವಿಷಯವನ್ನು ಪ್ರಸ್ತಾಪಿಸುವುದು ನನ್ನ ಜವಾಬ್ದಾರಿಯಾಗಿದೆ. ಈ ವ್ಯಕ್ತಿಯನ್ನು ಪ್ರಧಾನಿ ಮೋದಿ ರಕ್ಷಿಸುತ್ತಿದ್ದಾರೆ. ಇದು ನೂರಕ್ಕೆ ನೂರರಷ್ಟು ಸತ್ಯ. ಈ ವ್ಯಕ್ತಿ ಭ್ರಷ್ಟಾಚಾರದ ಮೂಲಕ ಭಾರತದ ಆಸ್ತಿಯನ್ನು ಕಬಳಿಸಿದ್ದಾರೆ’ ಎಂದು ರಾಹುಲ್ ವಾಗ್ದಾಳಿ ನಡೆಸಿದ್ದಾರೆ.
