ದೇಶ ಗಡಿಭಾಗದಲ್ಲಿ ಭಾರತ ಹಾಗೂ ಪಾಕಿಸ್ತಾನದ ನಡುವಿನ ಪರಿಸ್ಥಿತಿ ಮತ್ತಷ್ಟು ಉಲ್ಬಣಗೊಂಡಿದ್ದು, ಪಾಕಿಸ್ತಾನ ಸೇನೆಯು ಕಳೆದ ಎರಡು ಮೂರು ದಿನಗಳಿಂದ ನಿರಂತರವಾಗಿ ರಾತ್ರಿಯ ಸಮಯದಲ್ಲಿ ಶೆಲ್ ದಾಳಿ ನಡೆಸುವುದನ್ನು ಮುಂದುವರಿಸಿದೆ.
ಪಾಕಿಸ್ತಾನವು ಶುಕ್ರವಾರ ರಾತ್ರಿ ಕೂಡ ನಡೆಸಿದ ಶೆಲ್ ಹಾಗೂ ಡ್ರೋನ್ ದಾಳಿಯನ್ನು ಭಾರತೀಯ ಸೇನೆಯು ಬಹುತೇಕ ವಿಫಲಗೊಳಿಸಿದ್ದರೂ, ಜಮ್ಮು ಕಾಶ್ಮೀರದ ರಜೌರಿಯ ಹೆಚ್ಚುವರಿ ಜಿಲ್ಲಾಧಿಕಾರಿ ಮೃತಪಟ್ಟಿರುವುದಾಗಿ ವರದಿಯಾಗಿದೆ.
ಮೃತಪಟ್ಟ ಐಎಎಸ್ ಅಧಿಕಾರಿಯನ್ನು ರಾಜ್ ಕುಮಾರ್ ಥಾಪಾ ಎಂದು ಗುರುತಿಸಲಾಗಿದೆ.
ಪಾಕ್ ಹಾರಿಸಿದ್ದ ಹಲವು ಡ್ರೋನ್‌ಗಳ ಪೈಕಿ ಒಂದು ಡ್ರೋನ್ ಹೆಚ್ಚುವರಿ ಜಿಲ್ಲಾಧಿಕಾರಿ ಅವರ ಮನೆಗೆ ಅಪ್ಪಳಿಸಿದ ಪರಿಣಾಮವಾಗಿ ತೀವ್ರವಾಗಿ ಗಾಯಗೊಂಡಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ಸೇರಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ.
ಶೆಲ್ ದಾಳಿಗೆ ಒಳಗಾದ ಹೆಚ್ಚುವರಿ ಜಿಲ್ಲಾಧಿಕಾರಿಗಳ ಮನೆ ಸಂಪೂರ್ಣವಾಗಿ ಹಾನಿಗೊಳಗಾಗಿದೆ ಎಂದು ತಿಳಿದು ಬಂದಿದೆ.
