ಮಾಜಿ ಕ್ರಿಕೆಟಿಗ, ಪಶ್ಚಿಮ ಬಂಗಾಳದ ಬಹರಾಂಪುರ ಲೋಕಸಭಾ ಕ್ಷೇತ್ರದ ಸಂಸದ ಯೂಸುಫ್ ಪಠಾಣ್ ಅವರು TMC ತೊರೆದು, ಹೊಸದಾಗಿ ರಚನೆಯಾದ ‘ನ್ಯಾಷನಲ್ ಸಿಟಿಜನ್ಸ್ ಪಾರ್ಟಿ ಆಫ್ ಇಂಡಿಯಾ’ (NCPI) ಜೊತೆ ಗುರುತಿಸಿಳ್ಳುತ್ತಿದ್ದಾರೆ. ಅವರು ಟಿಎಂಸಿ ತೊರೆದ ಎರಡೇ ತಿಂಗಳಿಗೆ, ಅವರಿಗೆ ಗುಜರಾತ್‌ನ ಬಿಜೆಪಿ ಸರ್ಕಾರ ದೊಡ್ಡ ರಾಜಕೀಯ ಉಡುಗೊರೆ ನೀಡಿದೆ. ವಡೋದರಾ ಮಹಾನಗರ ಪಾಲಿಕೆ (VMC) ವ್ಯಾಪ್ತಿಯಲ್ಲಿರುವ 978 ಚದರ ಮೀಟರ್ ವಿಸ್ತೀರ್ಣದ ಬೆಲೆಬಾಳುವ ಸಾರ್ವಜನಿಕ ನಿವೇಶನವನ್ನು ಯೂಸುಫ್ ಪಠಾಣ್ ಅವರಿಗೆ ಉಡುಗೊರೆ ಮತ್ತು ಅತ್ಯಂತ ಕನಿಷ್ಠ ದರದಲ್ಲಿ ನೀಡಲು ರಾಜ್ಯ ಸರ್ಕಾರ ನಿರ್ಧರಿಸಿದೆ.
ಕಳೆದ 2024ರ ಜೂನ್‌ನಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಟಿಎಂಸಿ ಟಿಕೆಟ್‌ನಿಂದ ಸ್ಪರ್ಧಿಸಿ, ಗೆದ್ದ ಕೆಲವೇ ದಿನಗಳಲ್ಲಿ, ಈ ನಿವೇಶನವನ್ನು ಪಠಾಣ್ ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿ ಬಿಜೆಪಿ ಆಡಳಿತದ ವಡೋದರಾ ಪಾಲಿಕೆ ನೋಟಿಸ್ ಜಾರಿ ಮಾಡಿತ್ತು. ಆದಾಗ್ಯೂ, ಬಂಗಾಳದಲ್ಲಿ ರಾಜ್ಯ ಸರ್ಕಾರ ಬದಲಾಗಿ, ಬಿಜೆಪಿ ಅಧಿಕಾರಕ್ಕೇರಿದ ಬಳಿಕ, 2026ರ ಜೂನ್‌ನಲ್ಲಿ ಪಠಾಣ್ ಸೇರಿದಂತೆ 20 ಮಂದಿ ಟಿಎಂಸಿ ಸಂಸದರು ಪಕ್ಷವನ್ನು ತೊರೆದು ಎನ್‌ಸಿಪಿಐಗೆ ಸೇರ್ಪಡೆಯಾದ ನಂತರ ರಾಜಕೀಯ ಚಿತ್ರಣ ಬದಲಾಗಿದೆ. ಗುಜರಾತ್ ಸರ್ಕಾರದ ನಗರಾಭಿವೃದ್ಧಿ ಇಲಾಖೆಯು ಆಗಸ್ಟ್ 13ರಂದು ಆಡಳಿತಾತ್ಮಕ ಆದೇಶ ಹೊರಡಿಸಿದ್ದು, ಒಟ್ಟು 978 ಚದರ ಮೀಟರ್ ಜಾಗದಲ್ಲಿ 500 ಚದರ ಮೀಟರ್ ನಿವೇಶನವನ್ನು ಪಠಾಣ್ ಅವರಿಗೆ ವಸತಿ ಉದ್ದೇಶಕ್ಕಾಗಿ ಉಡುಗೊರೆಯಾಗಿ ನೀಡಲು ಮತ್ತು ಉಳಿದ 478 ಚದರ ಮೀಟರ್ ಜಾಗವನ್ನು ಸರ್ಕಾರಿ ಮೌಲ್ಯದ 55% ರಿಯಾಯಿತಿ ದರದಲ್ಲಿ ವರ್ಗಾಯಿಸಲು ಅನುಮೋದನೆ ನೀಡಿದೆ.
ವಡೋದರಾದ ತಾಂಡಲ್ಜಾ ಪ್ರದೇಶದಲ್ಲಿರುವ ಈ ಬೆಲೆಬಾಳುವ ಜಾಗವು ಪಠಾಣ್ ಕುಟುಂಬದ ಐಷಾರಾಮಿ ಬಂಗಲೆಗೆ ಹೊಂದಿಕೊಂಡಿದೆ. ಯೂಸುಫ್ ಪಠಾಣ್ ಮತ್ತು ಅವರ ಸಹೋದರ ಇರ್ಫಾನ್ ಪಠಾಣ್ ಕುಟುಂಬಸ್ಥರು ಇಲ್ಲೇ ವಾಸಿಸುತ್ತಿದ್ದಾರೆ. ಪಠಾಣ್ 2012ರಲ್ಲೇ ಈ ಜಾಗವನ್ನು ಸಾರ್ವಜನಿಕ ಹರಾಜಿಲ್ಲದೆ 99 ವರ್ಷಗಳ ಗುತ್ತಿಗೆಗೆ ಕೋರಿದ್ದರು. ಆದರೆ, 2014ರಲ್ಲಿ ಸರ್ಕಾರ ಇದನ್ನು ತಿರಸ್ಕರಿಸಿದರೂ, ಅವರು ಜಾಗವನ್ನು ಕಾಂಪೌಂಡ್ ಹಾಕಿ ಒತ್ತುವರಿ ಮಾಡಿಕೊಂಡಿದ್ದರು ಎಂದು ಪಾಲಿಕೆ ಆರೋಪಿಸಿತ್ತು. ಇದನ್ನು ಪ್ರಶ್ನಿಸಿ ಪಠಾಣ್ ಹೈಕೋರ್ಟ್ ಮೆಟ್ಟಿಲೇರಿದ್ದರಾದರೂ, ನ್ಯಾಯಾಲಯವು ಸರ್ಕಾರದ ನಿರ್ಧಾರವನ್ನು ಎತ್ತಿಹಿಡಿದು, ಸೆಲೆಬ್ರಿಟಿಗಳಿಗೆ ವಿಶೇಷ ರಿಯಾಯಿತಿ ನೀಡಲಾಗದು ಎಂದು ಸ್ಪಷ್ಟಪಡಿಸಿತ್ತು.
ಈ ಲೇಖನ ಓದಿದ್ದೀರಾ?: ಮೋದಿ ಆಡಳಿತದಲ್ಲಿ ಮಾಹಿತಿ ಹಕ್ಕು ಕಾಯ್ದೆಯ ‘ಸ್ಥಿತಿ’ ಹೇಗಿದೆ? ಅಂಜಲಿ ಭಾರದ್ವಾಜ್ ಏನು ಹೇಳುತ್ತಾರೆ?
ಆದರೆ, ರಾಜಕೀಯ ಬೆಳವಣಿಗೆಗಳ ಬಳಿಕ ಆಗಸ್ಟ್ 31 ರಂದು ಪಠಾಣ್ ಅವರು ಹೈಕೋರ್ಟ್‌ನಲ್ಲಿ ತಮ್ಮ ಮೇಲ್ಮನವಿಯನ್ನು ವಾಪಸ್ ಪಡೆದರು. ಜುಲೈ ತಿಂಗಳಿನಲ್ಲಷ್ಟೇ ಈ ಜಾಗದ ಒಟ್ಟು ಮೌಲ್ಯವನ್ನು ಸುಮಾರು 20.5 ಕೋಟಿ ರೂಪಾಯಿ ಎಂದು ಅಂದಾಜಿಸಿ ಬಹಿರಂಗ ಹರಾಜಿಗೆ ಪಾಲಿಕೆ ಸಿದ್ಧತೆ ನಡೆಸಿತ್ತು. ಇದೀಗ, ಈ ಹರಾಜು ಪ್ರಕ್ರಿಯೆಯನ್ನು ಬದಿಗೊತ್ತಿ, ಭೂಮಿಯನ್ನು ಅತ್ಯಂತ ಕಡಿಮೆ ದರಕ್ಕೆ ಪಠಾಣ್‌ಗೆ ನೀಡಲು ಪಾಲಿಕೆಯ ಸ್ಥಾಯಿ ಸಮಿತಿಗೆ ಪ್ರಸ್ತಾಪ ಸಲ್ಲಿಸಲಾಗಿದೆ.
ಈ ಕ್ರಮವನ್ನು ಸ್ಥಳೀಯ ‘ವಿಶ್ವಾಮಿತ್ರಿ ಬಚಾವೋ ಸಮಿತಿ’ ಮತ್ತು ನಾಗರಿಕ ಹಕ್ಕುಗಳ ಹೋರಾಟಗಾರರು ತೀವ್ರವಾಗಿ ವಿರೋಧಿಸಿದ್ದು, ಕಳೆದೆರಡು ದಶಕಗಳಿಂದ ನಡೆದಿರುವ ಅಕ್ರಮ ಅತಿಕ್ರಮಣಕ್ಕೆ ದಂಡ ವಿಧಿಸುವ ಬದಲು, ಸಾರ್ವಜನಿಕ ಆಸ್ತಿಯನ್ನು ಉಡುಗೊರೆಯಾಗಿ ನೀಡುತ್ತಿರುವ ಸರ್ಕಾರದ ನಡೆ ರಾಜಕೀಯ ಪ್ರೇರಿತ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.




