ಬಹುಜನ ಸಮಾಜವಾದಿ ಪಕ್ಷದ (ಬಿಎಸ್‌ಪಿ) ರಾಷ್ಟ್ರೀಯ ಅಧ್ಯಕ್ಷೆ ಮಾಯಾವತಿ ಅವರು ತಮ್ಮ ಸೋದರಳಿಯ ಹಾಗೂ ಪಕ್ಷದ ಪ್ರಮುಖ ನಾಯಕ ಆಕಾಶ್ ಆನಂದ್ ಅವರನ್ನು ‘ಮುಖ್ಯ ರಾಷ್ಟ್ರೀಯ ಸಂಯೋಜಕ’ ಹುದ್ದೆಯಿಂದ ಮತ್ತೆ ತೆರವುಗೊಳಿಸಿದ್ದಾರೆ. ಆಕಾಶ್ ಆನಂದ್ ಅವರಿಗೆ ಇನ್ನೂ ಹೆಚ್ಚಿನ ‘ರಾಜಕೀಯ ಪಕ್ವತೆ’ ಅಗತ್ಯವಿದೆ. ಅಲ್ಲಿಯವರೆಗೆ ಅವರನ್ನು ಪ್ರಮುಖ ಜವಾಬ್ದಾರಿಗಳಿಂದ ದೂರವಿಡಲಾಗುವುದು ಎಂದು ಮಾಯಾವತಿ ಸ್ಪಷ್ಟಪಡಿಸಿದ್ದಾರೆ.
ಉತ್ತರ ಪ್ರದೇಶದ ಲಖನೌದಲ್ಲಿ ನಡೆದ ಬಿಎಸ್‌ಪಿ ರಾಷ್ಟ್ರೀಯ ಕಾರ್ಯಾಕಾರಿಣಿ ಸಭೆಯಲ್ಲಿ ಮಾಯಾವತಿ ಈ ನಿರ್ಧಾರ ಪ್ರಕಟಿಸಿದ್ದಾರೆ. 2027ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ, ಪಕ್ಷದ ಸಂಘಟನೆಯನ್ನು ಬಲಪಡಿಸಲು ಮಾಯಾವತಿ ಸ್ವತಃ ನಾಯಕತ್ವದ ಸಂಪೂರ್ಣ ಚುಕ್ಕಾಣಿ ಹಿಡಿಯಲು ನಿರ್ಧರಿಸಿದ್ದಾರೆ.
ಇದನ್ನೂ ಓದಿ: ಬಿಎಸ್‌ಪಿ ರಾಷ್ಟ್ರೀಯ ಸಂಯೋಜಕ ಹುದ್ದೆಯಿಂದ ಆಕಾಶ್ ಆನಂದ್ ವಜಾ
ಮಾಯಾವತಿ ಅವರ ಈ ನಿರ್ಧಾರದ ಪ್ರಕಾರ, ಆಕಾಶ್ ಆನಂದ್ ಪಕ್ಷದ ಸಾಮಾನ್ಯ ಕಾರ್ಯಕರ್ತನಾಗಿ ಕೆಲಸ ಮುಂದುವರಿಸಲಿದ್ದಾರೆ. ಆದರೆ ಪಕ್ಷದ ಸಂಘಟನೆ ಹಾಗೂ ಚುನಾವಣೆಗೆ ಸಂಬಂಧಿಸಿದ ನಿರ್ಣಾಯಕ ಹುದ್ದೆ ಅಥವಾ ಜವಾಬ್ದಾರಿಗಳನ್ನು ಅವರಿಗೆ ಸದ್ಯಕ್ಕೆ ನೀಡಲಾಗುವುದಿಲ್ಲ.
ಚುನಾವಣೆಗಳ ವೇಳೆಯಲ್ಲಿ ಎದುರಾಳಿ ಪಕ್ಷಗಳು ನಡೆಸುವ ತಂತ್ರಗಳು, ಕುತಂತ್ರಗಳು ಮತ್ತು ಆಮಿಷಗಳನ್ನು ಮೆಟ್ಟಿ ನಿಲ್ಲಲು ಪಕ್ಷಕ್ಕೆ ಪಕ್ವವಾದ ನಾಯಕತ್ವದ ಅಗತ್ಯವಿದೆ. ಆಕಾಶ್‌ಗೆ ರಾಜಕೀಯ ಅನುಭವ ಮತ್ತು ಪಕ್ವತೆ ಬರಲು ಇನ್ನೂ ಕಾಲಾವಕಾಶ ಬೇಕಿದೆ ಎಂಬುದು ಮಾಯಾವತಿ ಅವರ ಅಭಿಪ್ರಾಯ.
ಆಕಾಶ್ ಆನಂದ್ ಅವರನ್ನು ಮಾಯಾವತಿ ಅವರು ತಮ್ಮ ರಾಜಕೀಯ ಉತ್ತರಾಧಿಕಾರಿ ಎಂದು ಈ ಹಿಂದೆ ಘೋಷಿಸಿದ್ದರು. ಆದರೆ, ಅವರ ಭಾಷಣಗಳು ಹಾಗೂ ರಾಜಕೀಯ ನಿರ್ಧಾರಗಳ ಕುರಿತು ಹಲವು ಭಿನ್ನಾಭಿಪ್ರಾಯಗಳು ವ್ಯಕ್ತವಾದ ಬೆನ್ನಲ್ಲೇ ಈ ಕಠಿಣ ಕ್ರಮ ಕೈಗೊಳ್ಳಲಾಗಿದೆ.
ಈ ಹಿಂದೆಯೂ ಎರಡು ಬಾರಿ ಮಾಯಾವತಿ ಅವರು ಆಕಾಶ್ ಆನಂದ್ ಅವರಿಗೆ ಪಕ್ಷದ ಜವಾಬ್ದಾರಿ ವಹಿಸಿದ್ದಾರೆ, ಬಳಿಕ ಹಿಂಪಡೆದಿದ್ದಾರೆ. ಮೊದಲ ಬಾರಿಗೆ 2023ರ ಡಿಸೆಂಬರ್‌ನಲ್ಲಿ ಮಾಯಾವತಿ ಅವರು ಮೊದಲ ಬಾರಿಗೆ ಆಕಾಶ್ ಆನಂದ್ ಅವರನ್ನು ಬಿಎಸ್‌ಪಿ ಪಕ್ಷದ ರಾಷ್ಟ್ರೀಯ ಸಂಯೋಜಕ ಹಾಗೂ ತಮ್ಮ ಅಧಿಕೃತ ರಾಜಕೀಯ ಉತ್ತರಾಧಿಕಾರಿ ಎಂದು ಘೋಷಿಸಿದರು. ಅದಾದ ಬಳಿಕ 2024ರ ಮೇ ತಿಂಗಳಲ್ಲಿ ಲೋಕಸಭೆ ಚುನಾವಣೆ ಪ್ರಚಾರದ ವೇಳೆ ಆಕಾಶ್ ಆನಂದ್ ನೀಡಿದ ವಿವಾದಾತ್ಮಕ ಹೇಳಿಕೆಗಳ ಬಳಿಕ, ಆನಂದ್‌ಗೆ ಇನ್ನೂ “ರಾಜಕೀಯ ಪ್ರಬುದ್ಧತೆ” ಬಂದಿಲ್ಲ ಎಂದು ಹೇಳಿ ಮಾಯಾವತಿ ಅವರು ಉತ್ತರಾಧಿಕಾರಿ ಸ್ಥಾನ ಹಾಗೂ ಪಕ್ಷದ ಜವಾಬ್ದಾರಿಗಳಿಂದ ಮುಕ್ತಗೊಳಿಸಿದ್ದರು.
2024ರ ಜೂನ್ ತಿಂಗಳಲ್ಲಿ ಅಂದರೆ ಕೇವಲ ಒಂದೂವರೆ ತಿಂಗಳಲ್ಲೇ ಮಾಯಾವತಿ ತಮ್ಮ ನಿರ್ಧಾರವನ್ನು ಬದಲಿಸಿ, ಆಕಾಶ್ ಆನಂದ್ ಅವರಿಗೆ ಮತ್ತೊಮ್ಮೆ ಅವಕಾಶ ನೀಡುವುದಾಗಿ ಹೇಳಿ ಮತ್ತೆ ಉತ್ತರಾಧಿಕಾರಿ ಎಂದು ಘೋಷಿಸಿದರು. 2025ರ ಮಾರ್ಚ್‌ನಲ್ಲಿ ಆಕಾಶ್ ಆನಂದ್ ಅವರ ಮಾವ (ಪತ್ನಿಯ ತಂದೆ) ಅಶೋಕ್ ಸಿದ್ಧಾರ್ಥ್ ಅವರ ಪ್ರಭಾವಕ್ಕೆ ಒಳಗಾಗಿ ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿದ್ದಾರೆ ಎಂದು ಆರೋಪಿಸಿ, ಮಾಯಾವತಿ ಅವರು ಆಕಾಶ್ ಅವರನ್ನು ಎರಡನೇ ಬಾರಿಗೆ ಉತ್ತರಾಧಿಕಾರಿ ಸ್ಥಾನದಿಂದ ತೆಗೆದುಹಾಕಿದರು. ಇದೇ ವೇಳೆ, “ನಾನು ಬದುಕಿರುವವರೆಗೆ ಪಕ್ಷಕ್ಕೆ ಯಾವುದೇ ಉತ್ತರಾಧಿಕಾರಿಯನ್ನು ನೇಮಿಸುವುದಿಲ್ಲ” ಎಂದೂ ಸ್ಪಷ್ಟಪಡಿಸಿದರು. ಇದೀಗ ಮಾಯಾವತಿ ಅವರು ಆಕಾಶ್ ಆನಂದ್ ಅವರನ್ನು ರಾಷ್ಟ್ರೀಯ ಸಂಯೋಜಕ ಹುದ್ದೆಯಿಂದ ಮತ್ತೊಮ್ಮೆ ತೆಗೆದುಹಾಕಿದ್ದಾರೆ.





