ಅಯೋಧ್ಯೆಯ ರಾಮಮಂದಿರದ ದೇಣಿಗೆ ನಿಧಿಯಿಂದ ಕೋಟ್ಯಂತರ ರೂಪಾಯಿ ಕಾಣಿಕೆ ಹಣ ಮಾಯವಾಗಿದೆ ಎಂದು ಸಮಾಜವಾದಿ ಪಕ್ಷ (ಎಸ್‌ಪಿ) ಅಧ್ಯಕ್ಷ, ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಗಂಭೀರ ಆರೋಪ ಮಾಡಿದ್ದಾರೆ. ಈ ಸಂಬಂಧ ನ್ಯಾಯಾಲಯ ಮಧ್ಯಪ್ರವೇಶಿಸಬೇಕು ಎಂದು ಅಖಿಲೇಶ್ ಒತ್ತಾಯಿಸಿದ್ದಾರೆ.
“ರಾಮಮಂದಿರಕ್ಕೆ ಸಂಗ್ರಹಿಸಲಾದ ಕಾಣಿಕೆಯಾಗಿ ಸಂಗ್ರಹಿಸಲಾದ ಕೋಟ್ಯಂತರ ರೂಪಾಯಿ ಹಣ ನಾಪತ್ತೆಯಾಗಿರುವುದು ಜಗತ್ತಿನಾದ್ಯಂತ ಇರುವ ಶ್ರೀರಾಮ ಭಕ್ತರಿಗೆ ತೀವ್ರ ದುಃಖದ ಸುದ್ದಿ. ದೇವಾಲಯದ ಟ್ರಸ್ಟ್‌ಗೆ ಇದು ಅತ್ಯಂತ ಮುಜುಗರದ ಪರಿಸ್ಥಿತಿ. ಯಾರೂ ವಿವರಣೆ ನೀಡಲು ಮುಂದೆ ಬರಲು ಸಿದ್ಧರಿಲ್ಲ” ಎಂದು ಅಖಿಲೇಶ್ ಯಾದವ್ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಇದನ್ನು ಓದಿದ್ದೀರಾ? ಅಯೋಧ್ಯೆ ರಾಮಮಂದಿರ ಪ್ರಸಾದ ಹಗರಣ: 3.85 ಕೋಟಿ ರೂ.ಗಳ ವಂಚನೆ ಬಯಲಿಗೆ
“ಜಾಗತಿಕ ಸನಾತನ ಸಮುದಾಯವು ಶ್ರೀರಾಮನಲ್ಲಿ ಹೊಂದಿರುವ ಆಳವಾದ ನಂಬಿಕೆಗೆ ಇದು ನೇರವಾಗಿ ಸಂಬಂಧಿಸಿರುವುದರಿಂದ, ನ್ಯಾಯಾಲಯವು ಈ ವಿಷಯವನ್ನು ಸ್ವಯಂ ಪ್ರೇರಿತವಾಗಿ ವಿಚಾರಣೆಗೆ ಎತ್ತಿಕೊಳ್ಳಬೇಕು ಎಂಬ ಬೇಡಿಕೆಯಿದೆ. ಸರ್ಕಾರದ ಮೌನವು ಅನುಮಾನಾಸ್ಪದವಾಗಿದೆ” ಎಂದು ಹೇಳಿದ್ದಾರೆ.
ಯಾದವ್ ಅವರ ಆರೋಪಗಳಿಗೆ ಸಂಬಂಧಿಸಿದಂತೆ ದೇವಾಲಯ ಟ್ರಸ್ಟ್‌ನಿಂದ ಯಾವುದೇ ಅಧಿಕೃತ ಪ್ರತಿಕ್ರಿಯೆ ಬಂದಿಲ್ಲ.
ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಹಣಕಾಸು ವ್ಯವಹಾರದ ಬಗ್ಗೆ ತೀವ್ರ ಚರ್ಚೆ ನಡೆಯುತ್ತಿರುವ ನಡುವೆ ಅಖಿಲೇಶ್ ಯಾದವ್ ಈ ಪೋಸ್ಟ್ ಮಾಡಿದ್ದಾರೆ. ಲಭ್ಯವಿರುವ ಹಣಕಾಸಿನ ಅಂಕಿಅಂಶಗಳ ಪ್ರಕಾರ, ಟ್ರಸ್ಟ್ 2025-26 ಹಣಕಾಸು ವರ್ಷದಲ್ಲಿ ಸುಮಾರು 220.81 ಕೋಟಿ ರೂ.ಗಳ ಆದಾಯವನ್ನು ದಾಖಲಿಸಿದೆ. ಆದಾಯದ ಗಮನಾರ್ಹ ಭಾಗವು ಭಕ್ತರಿಂದ ಬಂದ ದೇಣಿಗೆ ಮತ್ತು ಕಾಣಿಕೆಯಾಗಿದೆ.
2025ರ ಏಪ್ರಿಲ್ ಮತ್ತು 2026ರ ಫೆಬ್ರವರಿ ನಡುವೆ 54.79 ಕೋಟಿ ರೂ.ಗಳು ದೇಣಿಗೆ ಪೆಟ್ಟಿಗೆಯಲ್ಲೇ ಸಂಗ್ರವಾಗಿದೆ. ದೇಣಿಗೆ ಕೌಂಟರ್‌ಗಳಲ್ಲಿ 18.88 ಕೋಟಿ ರೂ.ಗಳನ್ನು ನೀಡಲಾಗಿದ್ದರೆ, ಆನ್‌ಲೈನ್ ದೇಣಿಗೆಯಾಗಿ 8.33 ಕೋಟಿ ರೂ.ಗಳು ಸಂಗ್ರಹವಾಗಿದೆ. FCRA ಅಡಿಯಲ್ಲಿ ವಿದೇಶಿ ಕೊಡುಗೆಗಳು 78 ಲಕ್ಷ ರೂ.ಗಳಷ್ಟಿದ್ದವು. ದೇಣಿಗೆಗಳ ಜತೆಗೆ ಟ್ರಸ್ಟ್ ಬ್ಯಾಂಕ್ ಠೇವಣಿಗಳ ಮೇಲಿನ ಬಡ್ಡಿಯಾಗಿ ಸುಮಾರು 138 ಕೋಟಿ ರೂ.ಗಳನ್ನು ಗಳಿಸಿದೆ. ಇದರ ಒಟ್ಟು ಆದಾಯವು 220 ಕೋಟಿ ರೂ.ಗಳನ್ನು ಮೀರಿದೆ.
ಅಯೋಧ್ಯೆ ರಾಮಮಂದಿರದ ಪ್ರಸಾದ ಹಗರಣ
ಈ ಹಿಂದೆ ಅಯೋಧ್ಯೆ ರಾಮಮಂದಿರದ ಪ್ರಸಾದ ಹಗರಣ ಬಯಲಿಗೆ ಬಂದಿತ್ತು. ರಾಮ ಮಂದಿರದ ಪ್ರಸಾದ ಹೆಸರಲ್ಲಿ ನಡೆಸಲಾದ, ಅತಿ ದೊಡ್ಡ ಸೈಬರ್ ಹಗರಣಗಳಲ್ಲಿ ಒಂದಾದ ಬರೋಬ್ಬರಿ 3.85 ಕೋಟಿ ರೂ.ಗಳ ಆನ್‌ಲೈನ್ ವಂಚನೆಯನ್ನು ಪೊಲೀಸರು ಭೇದಿಸಿದ್ದರು.
ಇದನ್ನು ಓದಿದ್ದೀರಾ? ‘ತನಿಖಾ ಸಂಸ್ಥೆಗಳ ಭಯ’ಕ್ಕೆ ಬಿದ್ದು ಆಪ್ ತೊರೆದು ಬಿಜೆಪಿ ಸೇರಿದ 7 ಮಂದಿ ರಾಜ್ಯಸಭಾ ಸದಸ್ಯರು
2024ರ ಜನವರಿ 22ರಂದು ರಾಮ ಮಂದಿರ ಭಕ್ತರಿಗೆ ತೆರೆದಿದೆ. ಇದಾದ ಬಳಿಕ ಅಯೋಧ್ಯೆಗೆ ಭಕ್ತರ ಆಗಮನವೂ ಹೆಚ್ಚಾಗಿದೆ. ಜನರ ಈ ಭಕ್ತಿಯನ್ನೇ ಬಂಡವಾಳವನ್ನಾಗಿಸಿಕೊಂಡ ಗಾಜಿಯಾಬಾದ್‌ನ ಇಂದಿರಾಪುರಂನ ವಿಂಡ್ಸರ್ ಪಾರ್ಕ್‌ನ ಆಶಿಶ್ ಸಿಂಗ್ ಎಂಬ ಆರೋಪಿ ಸಿಯಾಟಲ್‌ನ ಈಶಾನ್ಯ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕನಾಗಿ ನಟಿಸಿ, ಭಕ್ತರ ಮನೆಗೆ ಪ್ರಸಾದವನ್ನು ತಲುಪಿಸುವುದಾಗಿ ಹೇಳಿ ನಕಲಿ ವೆಬ್‌ಸೈಟ್ ಮೂಲಕ ಲಕ್ಷಾಂತರ ಭಕ್ತರಿಗೆ ವಂಚನೆ ಮಾಡಿದ್ದಾನೆ. ಆರೋಪಿ ಅಮೆರಿಕದಲ್ಲಿ ವಾಸಿಸುತ್ತಿದ್ದ ಎಂದು ಹೇಳಲಾಗಿದೆ.
ಆಶಿಶ್ ಸಿಂಗ್ ಪ್ರಸಾದ, ದೇವಾಲಯದ ಪ್ರತಿಕೃತಿಗಳು ಮತ್ತು ರಾಮ ದೇವಾಲಯದ ಸ್ಮರಣಾರ್ಥ ನಾಣ್ಯಗಳ ‘ಉಚಿತ ವಿತರಣೆ’ ಮಾಡುತ್ತಿರುವುದಾಗಿ ಹೇಳಿಕೊಂಡಿದ್ದ. ಆದರೆ ಭಾರತೀಯ ಬಳಕೆದಾರರಿಂದ 51 ರೂ.ಗಳ ‘ಸೌಲಭ್ಯ ಶುಲ್ಕ’ ಮತ್ತು ವಿದೇಶಿ ಭಕ್ತರಿಂದ 11 ಯುಎಸ್ ಡಾಲರ್‌ಗಳನ್ನು ಪಡೆಯುತ್ತಿದ್ದ ಎನ್ನಲಾಗಿದೆ.





