‘ತನಿಖಾ ಸಂಸ್ಥೆಗಳ ಭಯ’ಕ್ಕೆ ಬಿದ್ದು ಆಪ್‌ ತೊರೆದು ಬಿಜೆಪಿ ಸೇರಿದ 7 ಮಂದಿ ರಾಜ್ಯಸಭಾ ಸದಸ್ಯರು

Date:

ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧ ಪಕ್ಷಗಳನ್ನು ನಿರ್ನಾಮ ಮಾಡುವ ಬಿಜೆಪಿಯ ತಂತ್ರ ಯಶಸ್ವಿಯಾಗುತ್ತಿರಬಹುದು, ಆದರೆ ಇದು ಆರೋಗ್ಯಕರ ಪ್ರಜಾಪ್ರಭುತ್ವದ ಲಕ್ಷಣವಲ್ಲ. ಸಂವಿಧಾನದ ಹೆಸರಲ್ಲಿ ನಡೆಯುತ್ತಿರುವ ಈ "ರಾಜಕೀಯ ವಿಲೀನ" ವಾಸ್ತವದಲ್ಲಿ "ರಾಜಕೀಯ ಶರಣಾಗತಿ".

ಭಾರತದ ರಾಜಕಾರಣದಲ್ಲಿ ತತ್ವ-ಸಿದ್ಧಾಂತಗಳಿಗಿಂತ ‘ಸಂದರ್ಭಗಳು’ ಮತ್ತು ‘ತನಿಖಾ ಸಂಸ್ಥೆಗಳ ಭಯ’ವೇ ಹೆಚ್ಚು ಕೆಲಸ ಮಾಡುತ್ತಿವೆ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಆಮ್ ಆದ್ಮಿ ಪಕ್ಷದ ರಾಜ್ಯಸಭೆಯಲ್ಲಿ ಎಎಪಿಯ ಧ್ವನಿಯಾಗಿದ್ದ ಯುವ ನಾಯಕ ರಾಘವ್ ಚಡ್ಡಾ ಸೇರಿ ಒಟ್ಟು 7 ಮಂದಿ ಬಿಜೆಪಿಗೆ ಜಿಗಿದಿರುವುದು ದೆಹಲಿ ರಾಜಕಾರಣದಲ್ಲಿ ಸಂಚಲನ ಮೂಡಿಸಿದೆ. ಅಚ್ಚರಿಯ ಸಂಗತಿ ಎಂದರೆ, 15 ದಿನಗಳ ಹಿಂದೆ ರಾಘವ್ ಚಡ್ಡಾ ಅವರ ಸ್ಥಾನಕ್ಕೆ ರಾಜ್ಯಸಭಾ ಉಪ ನಾಯಕರಾಗಿ ನೇಮಕಗೊಂಡ ಅಶೋಕ್ ಮಿತ್ತಲ್ ಕೂಡ ಬಿಜೆಪಿಗೆ ಸೇರುತ್ತಿದ್ದಾರೆ. ಇದು ಆಮ್ ಆದ್ಮಿ ಪಕ್ಷಕ್ಕೆ ತಡೆಯಲಾರದ ಹೊಡೆತವಾಗಿ ಪರಿಣಮಿಸಿದೆ. 

- Advertisement -

ರಾಘವ್ ಚಡ್ಡಾ ಅವರ ಪ್ರಕಾರ, ಎಲ್ಲಾ ಸಂಸದರು ಈ ಸಂಬಂಧ ದಾಖಲೆಗಳಿಗೆ ಸಹಿ ಹಾಕಿ ರಾಜ್ಯಸಭೆಯ ಅಧ್ಯಕ್ಷರಿಗೆ ಸಲ್ಲಿಸಿದ್ದಾರೆ. ತಮ್ಮೊಂದಿಗೆ ಮೂವರು ಸಂಸದರು ಇದ್ದಾರೆ, ಉಳಿದವರಲ್ಲಿ ಹರ್ಭಜನ್ ಸಿಂಗ್, ರಾಜಿಂದರ್ ಗುಪ್ತಾ, ವಿಕ್ರಮ್ ಸಾಹ್ನಿ ಮತ್ತು ಸ್ವಾತಿ ಮಲಿವಾಲ್ ಸೇರಿದ್ದಾರೆ ಎಂದು ಅವರು ಹೇಳಿದ್ದಾರೆ. 

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಮೌಢ್ಯತೆಯೊಳಗೆ ನಾ ಕಂಡ ಭಾರತ

ಭಾರತವು ಏಕತೆಯಲ್ಲಿ ವೈವಿಧ್ಯತೆಯನ್ನು ಕಂಡ ದೇಶ. ಹಲವು ಭಾಷೆಗಳು, ಧರ್ಮಗಳು, ಸಂಸ್ಕೃತಿಗಳು, ಆಹಾರ ಪದ್ಧತಿಗಳು, ಜೀವನಶೈಲಿಗಳು ಮತ್ತು ಆಚರಣೆಗಳು ಇಲ್ಲಿನ ಸಾಮಾಜಿಕ ಬದುಕಿನ ವೈಶಿಷ್ಟ್ಯ. ಈ ವೈವಿಧ್ಯತೆಯೇ ಭಾರತದ ಶಕ್ತಿ. ಆದರೆ, ವೈವಿಧ್ಯತೆಯನ್ನು...

ಅಂಬಾರಿಯ ಮುಂದೆ ಪೊಲೀಸರು ಸೆಲ್ಫಿ ತೆಗೆದುಕೊಂಡರೆ ಭದ್ರತೆಗೆ ಹೇಗೆ...

ಚಿನ್ನದ ಅಂಬಾರಿಯನ್ನು ಜಂಬೂಸವಾರಿಯ ದಿನ ಬಳಸಿಕೊಳ್ಳಲು ಸರ್ಕಾರ ಅರಸು ಮನೆತನದವರಿಂದ ಪಡೆಯುತ್ತದೆ. ಉಚಿತವಾಗಿ ಅಲ್ಲ; ನಿಗದಿಪಡಿಸಿರುವ ಹಣವನ್ನು ಸಂದಾಯ ಮಾಡಿ. ಅಂಬಾರಿಯ ಭದ್ರತೆಯ ಹೊಣೆ ಸರ್ಕಾರದ ಮೇಲೂ ಇರುತ್ತದೆ. ಪೊಲೀಸರು ಸೆಲ್ಫಿ ತೆಗೆದುಕೊಂಡರೆ...

ಜನತಂತ್ರಕ್ಕೆ ಕುತ್ತು: ‘ಖಾಸಗಿತನ’ದ ನೆಪದಲ್ಲಿ ಪತ್ರಿಕಾ ಸ್ವಾತಂತ್ರ್ಯ ಹತ್ತಿಕ್ಕಲು...

ಮೋದಿ ಸರ್ಕಾರವು ಈ ಕಾಯ್ದೆಯನ್ನು ಏಕಾಏಕಿ ಜಾರಿಗೊಳಿಸದೆ, ಹಂತ ಹಂತವಾಗಿ ಜಾರಿಗೊಳಿಸುತ್ತಾ ಪ್ರಜಾಪ್ರಭುತ್ವದ ಕತ್ತು ಹಿಸುಕುತ್ತಿದೆ. ಆರ್‌ಟಿಐ ಕಾಯ್ದೆಯನ್ನು ದುರ್ಬಲಗೊಳಿಸುವ ತಿದ್ದುಪಡಿಯು ಈಗಾಗಲೇ ನವೆಂಬರ್ 2025ರಿಂದಲೇ ಜಾರಿಯಲ್ಲಿದ್ದರೆ, ಡೇಟಾ ಬಳಕೆಯ ಕಠಿಣ ನಿಯಮಗಳು...

ಸಂವಿಧಾನದ 2/3 ನಿಯಮವನ್ನು ಬಳಸಿ ನಾವು ಬಿಜೆಪಿಯೊಂದಿಗೆ ವಿಲೀನವಾಗುತ್ತಿದ್ದೇವೆ ಎಂದು ಚಡ್ಡಾ ಹೇಳುತ್ತಿರುವುದು ಮೇಲ್ನೋಟಕ್ಕೆ ಕಾನೂನುಬದ್ಧವಾಗಿ ಕಂಡರೂ, ಇದರ ಹಿಂದಿರುವ “ಬ್ಲ್ಯಾಕ್‌ಮೇಲ್ ತಂತ್ರ” ಮತ್ತು ಇಡಿ (ED) ದಾಳಿಯ ನೆರಳು ಪ್ರಜಾಪ್ರಭುತ್ವದ ಕರಾಳ ಮುಖವನ್ನು ಅನಾವರಣಗೊಳಿಸುತ್ತಿದೆ.

ಇನ್ನು ಏಳು ರಾಜ್ಯಸಭಾ ಸಂಸದರ ಈ ಹಠಾತ್ ಪಕ್ಷಾಂತರದ ವಿರುದ್ಧ ಆಮ್ ಆದ್ಮಿ ಪಕ್ಷದ ಹಿರಿಯ ನಾಯಕ ಸಂಜಯ್ ಸಿಂಗ್ ಕೆರಳಿ ಕೆಂಡವಾಗಿದ್ದಾರೆ. ಇದನ್ನು ನರೇಂದ್ರ ಮೋದಿ ಮತ್ತು ಅಮಿತ್ ಶಾ ಜೋಡಿಯ ‘ಆಪರೇಷನ್ ಕಮಲ’ದ ಭಾಗ ಎಂದು ಅವರು ಗುಡುಗಿದ್ದಾರೆ. “ಪಂಜಾಬ್‌ನ ಜನರು ಈ ಏಳು ಮಂದಿ ದೇಶದ್ರೋಹಿಗಳ ಹೆಸರುಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು” ಎಂದು ಆಕ್ರೋಶ ವ್ಯಕ್ತಪಡಿಸಿರುವ ಅವರು, “ಇದು ಕೇವಲ ಪಕ್ಷಾಂತರವಲ್ಲ, ಬದಲಾಗಿ ಪಂಜಾಬ್‌ನ ಜನಾದೇಶವನ್ನು ಬುಡಮೇಲು ಮಾಡುವ ಮತ್ತು ಅಲ್ಲಿನ ಸರ್ಕಾರವನ್ನು ಅಸ್ಥಿರಗೊಳಿಸುವ ವ್ಯವಸ್ಥಿತ ಸಂಚು” ಎಂದು ಆರೋಪಿಸಿದ್ದಾರೆ. ತನಿಖಾ ಸಂಸ್ಥೆಗಳನ್ನು ಬೇಟೆ ನಾಯಿಗಳಂತೆ ಬಳಸಿ ಸಂಸದರನ್ನು ಹೆದರಿಸಿ ಬಿಜೆಪಿಗೆ ಸೇರಿಸಿಕೊಳ್ಳಲಾಗುತ್ತಿದೆ ಎಂಬ ಅವರ ಮಾತುಗಳು, ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯು ಕೇವಲ ಸಂಖ್ಯಾಬಲ ಮತ್ತು ಅಧಿಕಾರ ದಾಹದ ಆಟವಾಗಿ ಹೇಗೆ ಬದಲಾಗುತ್ತಿದೆ ಎಂಬುದಕ್ಕೆ ಹಿಡಿದ ಕೈಗನ್ನಡಿಯಾಗಿದೆ.

photo 6296285884457881390 y

ರಾಘವ್ ಚಡ್ಡಾ ರಾಜ್ಯಸಭೆಯಲ್ಲಿ ಎಎಪಿಯ ಉಪನಾಯಕರಾಗಿ ಅತ್ಯಂತ ಚುರುಕಾಗಿ ಕೆಲಸ ಮಾಡುತ್ತಿದ್ದರು. ಒಂದು ಸಮಯದಲ್ಲಿ ಚಡ್ಡಾ ಅವರನ್ನು ಆಪ್ ಪಕ್ಷದ ಭವಿಷ್ಯದ ನಾಯಕ ಎಂದು ಪರಿಗಣಿಸಲಾಗುತ್ತಿತ್ತು. ಬೆಲೆ ಏರಿಕೆ, ಉದ್ಯೋಗ ಮತ್ತು ಕೇಂದ್ರೀಯ ತನಿಖಾ ಸಂಸ್ಥೆಗಳ ದುರುಪಯೋಗದ ಬಗ್ಗೆ ಸಂಸತ್ತಿನಲ್ಲಿ ಅವರು ಗುಡುಗುತ್ತಿದ್ದರೆ ಮೋದಿ ಸರ್ಕಾರಕ್ಕೆ ನಡುಕ ಶುರುವಾಗುತ್ತಿತ್ತು. ಆದರೆ, ಕಳೆದ ಕೆಲವು ತಿಂಗಳುಗಳಿಂದ ಚಡ್ಡಾ ಅವರ ಮಾತುಗಳು ಹಳಿ ತಪ್ಪಿದ್ದವು. ಕೇಂದ್ರ ಸರ್ಕಾರದ ನೀತಿಗಳನ್ನು ಟೀಕಿಸಬೇಕಿದ್ದ ಅವರು, ಏರ್ಪೋರ್ಟ್ ಕ್ಯಾಂಟೀನ್‌ಗಳಲ್ಲಿ ಸಮೋಸಾ ಬೆಲೆ ಜಾಸ್ತಿ ಆಗಿದೆ ಎಂದು ಕ್ಷುಲ್ಲಕ ವಿಷಯಗಳನ್ನು ಮಾತನಾಡಲು ಶುರು ಮಾಡಿದ್ದರು. ದೇಶದ ಜ್ವಲಂತ ಸಮಸ್ಯೆಗಳ ಬಗ್ಗೆ ಮಾತನಾಡುತ್ತಿದ್ದ ನಾಯಕನೊಬ್ಬ ಏಕಾಏಕಿ ‘ಕ್ಯಾಂಟೀನ್ ಮೆನು’ ಬಗ್ಗೆ ಚರ್ಚಿಸುತ್ತಿರುವುದು ಆಪ್ ನಾಯಕರಿಗೆ ಅಚ್ಚರಿ ಮತ್ತು ಅನುಮಾನ ಮೂಡಿಸಿತ್ತು. “ಅವರಿಗೆ ಮೋದಿ ಅಂದರೆ ಭಯ ಶುರುವಾಗಿದೆ” ಎಂದು ಆಪ್ ನಾಯಕರು ಆರೋಪಿಸಿದ್ದು ಇವತ್ತು ನಿಜವಾಗಿದೆ.

ಇನ್ನು ಆಪ್‌ ಪಕ್ಷದಿಂದ ಹಂತ ಹಂತವಾಗಿ ದೂರವಾಗುತ್ತಿದ್ದ ರಾಘವ್‌ ಚಡ್ಡಾ, ಬಿಜೆಪಿಗೆ ಹತ್ತಿರವಾಗುತ್ತಿದ್ದುದು ಸ್ಪಷ್ಟವಾಗಿ ಕಂಡುಬರುತ್ತಿತ್ತು. ಇತ್ತೀಚಿಗೆ ರಾಘವ್‌ ಚಡ್ಡಾ ಅವರಿಂದ Z+ ಭದ್ರತೆಯನ್ನು ಹಿಂಪಡೆದಿದ್ದ ಪಂಜಾಬ್‌ ಸರ್ಕಾರ, ಪಕ್ಷ ಮತ್ತು ಅವರ ನಡುವಿನ ಅಂತರಕ್ಕೆ ಸಾಕ್ಷಿ ಒದಗಿಸಿತ್ತು. ಆದರೆ ಪಂಜಾಬ್ ಸರ್ಕಾರದ ತೀರ್ಮಾನ ಹೊರಬಿದ್ದ ಒಂದು ಗಂಟೆ ಬಳಿಕ, ಕೇಂದ್ರ ಸರ್ಕಾರ ರಾಘವ್‌ ಚಡ್ಡಾ ಅವರಿಗೆ Z ಶ್ರೇಣಿಯ ಭದ್ರತೆ ಘೋಷಿಸಿತ್ತು. 

ರಾಘವ್ ಚಡ್ಡಾ ಅವರ ಈ ದಿಢೀರ್ ಬದಲಾವಣೆಗೆ ಕಾರಣ ದೆಹಲಿ ಜಲ ಮಂಡಳಿಯ ಹಗರಣ ಎನ್ನಲಾಗುತ್ತಿದೆ. 2026ರ ಏಪ್ರಿಲ್‌ನಲ್ಲಿ ದೆಹಲಿ ಜಲ ಮಂಡಳಿಯ ಭ್ರಷ್ಟಾಚಾರದ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯವು (ED) ಆಪ್ ನಾಯಕರ ಮನೆಗಳ ಮೇಲೆ ದಾಳಿ ನಡೆಸಿತ್ತು. ಈ ದಾಳಿಯ ಸಂದರ್ಭದಲ್ಲಿ ರಾಘವ್ ಚಡ್ಡಾ ಅವರ ಹೆಸರೂ ಕೇಳಿಬಂದಿತ್ತು. ಬಿಜೆಪಿಯ ವಿರುದ್ಧ ಮಾತನಾಡಿದರೆ ಜೈಲು, ಬಿಜೆಪಿಗೆ ಸೇರ್ಪಡೆಯಾದರೆ ‘ಕ್ಲೀನ್ ಚಿಟ್’ ಸಿಗುವ “ವಾಷಿಂಗ್ ಮಷಿನ್” ತಂತ್ರಕ್ಕೆ ರಾಘವ್ ಚಡ್ಡಾ ಕೂಡ ಬಲಿಯಾಗಿದ್ದಾರೆ. 

photo 6296285884457881392 m

ಇನ್ನು ಚಡ್ಡಾ ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದು, ”ನಾನು ತಪ್ಪಾದ ಪಕ್ಷದಲ್ಲಿದ್ದ ಸರಿಯಾದ ವ್ಯಕ್ತಿ” ಎಂದು ಹೇಳಿದ್ದಾರೆ. ಇದು ರಾಜಕೀಯದಲ್ಲಿ ಸಾಮಾನ್ಯವಾಗಿ ಕೇಳಿಬರುವ ಮಾತು. ಪಕ್ಷ ಬದಲಾಯಿಸುವಾಗ, ನಾಯಕರು ತಮ್ಮ ಹಳೆಯ ಪಕ್ಷವನ್ನು ಟೀಕಿಸುವುದು ಹೊಸದೇನಲ್ಲ. ಆದರೆ ಇಲ್ಲಿ ಬರುವ ಪ್ರಶ್ನೆ, ನಿನ್ನೆ ಸರಿಯಾದ ಪಕ್ಷ ಆಗಿದ್ದದ್ದು, ಇವತ್ತು ತಪ್ಪಾದ ಪಕ್ಷ ಹೇಗೆ ಆಯಿತು? ಕೊನೆಗೂ ಕೇಂದ್ರ ಸರ್ಕಾರದ ಬ್ಲ್ಯಾಕ್‌ಮೇಲ್ ಪ್ಲಾನ್‌ನ ಸುಳಿಗೆ ಸಿಲುಕಿದ ಚಡ್ಡಾ, ಸಂದೀಪ್ ಪಾಠಕ್ ಮತ್ತು ಅಶೋಕ್ ಮಿತ್ತಲ್ ತಮ್ಮ ರಾಜಕೀಯ ಭವಿಷ್ಯವನ್ನು ಉಳಿಸಿಕೊಳ್ಳಲು ತತ್ವಗಳನ್ನೇ ಬಲಿಕೊಟ್ಟಿದ್ದಾರೆ.

ಆಪ್‌ ಪಕ್ಷಕ್ಕೆ ಬಂದಿರುವ ಈ ಸ್ಥಿತಿಗೆ ಆಪ್‌ ಈ ಹಿಂದೆ ಅನುಸರಿಸಿದ ರಾಜಕೀಯ ತಂತ್ರಗಾರಿಕೆಯ ಫಲವೇ ಕಾರಣ ಎನ್ನಬಹುದು. ಬಿಜೆಪಿ ‘ಹಾರ್ಡ್‌ಕೋರ್ ಹಿಂದುತ್ವ’ವನ್ನು ತನ್ನ ಅಸ್ತ್ರವಾಗಿಸಿಕೊಂಡರೆ, ಎಎಪಿ ಅದನ್ನು ಎದುರಿಸಲು ‘ಸಾಫ್ಟ್ ಹಿಂದುತ್ವ’ದ ಮೊರೆ ಹೋಗಿತ್ತು. ಇದಕ್ಕೆ ಪ್ರಮುಖ ಉದಾಹರಣೆ ಎಂದರೆ 2020ರ ದೆಹಲಿ ಗಲಭೆ. ಆ ಸಂದರ್ಭದಲ್ಲಿ ಮುಸ್ಲಿಂ ಸಮುದಾಯದ ಮೇಲೆ ನಡೆದ ಕಗ್ಗೊಲೆ ಮತ್ತು ದೌರ್ಜನ್ಯಗಳ ಬಗ್ಗೆ ಅರವಿಂದ್ ಕೇಜ್ರಿವಾಲ್ ಮತ್ತು ಅವರ ತಂಡ ವಹಿಸಿದ ನಿಗೂಢ ಮೌನವು ಅನೇಕ ಪ್ರಶ್ನೆಗಳನ್ನು ಹುಟ್ಟುಹಾಕಿತ್ತು. ಸಂತ್ರಸ್ತರ ಪರವಾಗಿ ಗಟ್ಟಿಯಾಗಿ ನಿಲ್ಲುವ ಬದಲು, ಕೇವಲ ಹನುಮಾನ್ ಚಾಲೀಸಾ ಪಠಣ ಮತ್ತು ಧಾರ್ಮಿಕ ರಾಜಕಾರಣದ ಮೂಲಕ ಬಹುಸಂಖ್ಯಾತ ವೋಟ್ ಬ್ಯಾಂಕ್ ಅನ್ನು ಸಮಾಧಾನಪಡಿಸಲು ಆಪ್ ಪ್ರಯತ್ನಿಸಿತು. ಸೈದ್ಧಾಂತಿಕವಾಗಿ ಸ್ಪಷ್ಟ ನಿಲುವು ತಳೆಯದೆ, ಬಿಜೆಪಿಯ ಸಿದ್ಧಾಂತವನ್ನ ಒಪ್ಪಿಕೊಂಡಂತೆ ವರ್ತಿಸಿದ್ದು ಇವತ್ತು ಆ ಪಕ್ಷದ ನಾಯಕರೇ ಬಿಜೆಪಿಯತ್ತ ಮುಖ ಮಾಡಲು ದಾರಿಯಾಗಿದೆ. 

ದೆಹಲಿ ಗಲಭೆ 2

ಅಷ್ಟೇ ಅಲ್ಲ ಅಯೋಧ್ಯೆ ರಾಮಮಂದಿರದ ವಿಷಯದಲ್ಲೂ ಬಿಜೆಪಿಗಿಂತ ತಾವೇನು ಕಡಿಮೆ ಇಲ್ಲ ಎಂಬಂತೆ ವರ್ತಿಸಿದ ಆಪ್‌ಗೆ ಈಗ ತಿಳಿಯಬೇಕಿರುವ ವಿಷಯವೊಂದಿದೆ. ಬಿಜೆಪಿಯ ಸಿದ್ಧಾಂತಕ್ಕೆ ಪರ್ಯಾಯವಾಗಿ ಒಂದು ಗಟ್ಟಿಯಾದ ಸಿದ್ಧಾಂತವನ್ನು ರೂಪಿಸಿಕೊಳ್ಳುವಲ್ಲಿ ಕೇಜ್ರಿವಾಲ್ ವಿಫಲರಾಗಿದ್ದಾರೆ. 

ಆಮ್ ಆದ್ಮಿ ಪಕ್ಷದ ಸೈದ್ಧಾಂತಿಕ ಇಬ್ಬಂದಿತನಕ್ಕೆ ಇದಕ್ಕಿಂತ ದೊಡ್ಡ ಉದಾಹರಣೆ ಬೇಕಿಲ್ಲ. ಈ ಹಿಂದೆ ಸ್ವತಃ ಅರವಿಂದ್ ಕೇಜ್ರಿವಾಲ್ ಅವರು ನ್ಯಾಯಮೂರ್ತಿ ಸ್ವರ್ಣಕಾಂತ ಶರ್ಮಾ ಅವರ ವಿರುದ್ಧ ಕೋರ್ಟ್‌ನಲ್ಲಿ ಮನವಿ ಸಲ್ಲಿಸುತ್ತಾ, ”ಇವರು ಆರ್‌ಎಸ್‌ಎಸ್ ಬೆಂಬಲಿತ ‘ಅಧಿವಕ್ತ ಪರಿಷತ್’ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾರೆ. ನ್ಯಾಯಮೂರ್ತಿ ಶರ್ಮಾ ಅವರ ಮಕ್ಕಳು ಕೇಂದ್ರ ಸರ್ಕಾರದ ವಕೀಲರ ತಂಡದಲ್ಲಿದ್ದು, ಸಿಬಿಐ ಪರ ಹಾಜರಾಗುತ್ತಿದ್ದಾರೆ. ಹಾಗಾಗಿ ಇವರು ನನ್ನ ಪ್ರಕರಣದ ತೀರ್ಪು ನೀಡಬಾರದು, ಇವರು ರಿಕ್ಯೂಸಲ್ (ಪ್ರಕರಣದಿಂದ ಹಿಂದೆ ಸರಿಯುವುದು) ಪಡೆದುಕೊಳ್ಳಬೇಕು” ಎಂದು ಆಗ್ರಹಿಸಿದ್ದರು. ‘ಆಪ್ ಎಂಬುದು ಆರ್‌ಎಸ್‌ಎಸ್ ಸಿದ್ಧಾಂತಕ್ಕೆ ಸಂಪೂರ್ಣ ವಿರುದ್ಧವಾದ ಪಕ್ಷ’ ಎಂದು ಅಂದು ದೊಡ್ಡ ದೊಡ್ಡ ಡೈಲಾಗ್‌ಗಳನ್ನು ಹೊಡೆದಿದ್ದ ಕೇಜ್ರಿವಾಲ್, ವಾಸ್ತವದಲ್ಲಿ ಅದೇ ಆರ್‌ಎಸ್‌ಎಸ್ ಹಾದಿಯಾದ ‘ಸಾಫ್ಟ್ ಹಿಂದುತ್ವ’ವನ್ನು ಪಾಲಿಸುತ್ತಿರುವುದು ಒಂದು ದೊಡ್ಡ ವಿಪರ್ಯಾಸ. ಕೋರ್ಟ್‌ನಲ್ಲಿ ಆರ್‌ಎಸ್‌ಎಸ್ ಸಿದ್ಧಾಂತಕ್ಕೆ ವಿರೋಧ ವ್ಯಕ್ತಪಡಿಸುವ ಇವರು, ಚುನಾವಣಾ ಅಖಾಡದಲ್ಲಿ ಮಾತ್ರ ಹನುಮಾನ್ ಚಾಲೀಸಾ ಪಠಣ ಮತ್ತು ಧಾರ್ಮಿಕ ರಾಜಕಾರಣದ ಮೂಲಕ ಬಿಜೆಪಿಯ ‘ಬಿ’ ಟೀಮ್‌ನಂತೆ ವರ್ತಿಸುತ್ತಾರೆ. ಇಂತಹ ಸೈದ್ಧಾಂತಿಕ ಗೊಂದಲವೇ ಇಂದು ರಾಘವ್ ಚಡ್ಡಾ ಅಂತಹ ನಾಯಕರು ನೇರವಾಗಿ ಆರ್‌ಎಸ್‌ಎಸ್ ಮೂಲದ ಬಿಜೆಪಿಗೆ ಸೇರ್ಪಡೆಯಾಗಲು ದಾರ ಮಾಡಿಕೊಟ್ಟಿದೆ.

ಪಕ್ಷದ ಪ್ರಮುಖ ನಾಯಕರು ತನಿಖಾ ಸಂಸ್ಥೆಗಳ ಭಯಕ್ಕೆ ಪಕ್ಷ ಬಿಡುತ್ತಿದ್ದಾರೆ ಎಂದರೆ, ಪಕ್ಷದ ಸಂಘಟನೆಯಲ್ಲಿ ಸಿದ್ಧಾಂತಕ್ಕಿಂತ ಅವಕಾಶವಾದವೇ ಹೆಚ್ಚಾಗಿದೆ ಎಂದರ್ಥ. ಸಿದ್ಧಾಂತದ ಬುನಾದಿ ಇಲ್ಲದ ‘ಸಾಫ್ಟ್ ಹಿಂದುತ್ವ’ದ ರಾಜಕಾರಣವು ಅಂತಿಮವಾಗಿ ಬಿಜೆಪಿ ತಿಮಿಂಗಿಲದ ಬಾಯಿಗೆ ಆಹಾಯವಾಗುತ್ತವೆ ಎಂಬುದಕ್ಕೆ ರಾಘವ್ ಚಡ್ಡಾ ಅವರ ಪಕ್ಷಾಂತರವೇ ಸಾಕ್ಷಿ.

ಜನರು ಒಬ್ಬ ನಾಯಕನಿಗೆ ಮತ ಹಾಕುವುದು ಆತನ ಪಕ್ಷದ ಸಿದ್ಧಾಂತವನ್ನು ನೋಡಿ. ಆದರೆ ಗೆದ್ದ ನಂತರ ಸಂವಿಧಾನದ ನಿಯಮಗಳನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ಬಳಸಿಕೊಂಡು ತಮ್ಮ ಸಾಫ್ಟ್‌ ಹಿಂದುತ್ವದ ಜೊತೆ ವಿಲೀನವಾಗುವುದು ಮತದಾರರಿಗೆ ಮಾಡುತ್ತಿರುವ ದ್ರೋಹ. ರಾಘವ್ ಚಡ್ಡಾ ಅವರಂತಹ ಯುವ ನಾಯಕರು ಭ್ರಷ್ಟಾಚಾರದ ಹಣೆಪಟ್ಟಿಯಿಂದ ಬಚಾವಾಗಲು ಎದುರಾಳಿ ಪಾಳಯಕ್ಕೆ ಶರಣಾಗಿರುವುದು ಯುವ ಜನಾಂಗಕ್ಕೆ ತಪ್ಪು ಸಂದೇಶ ನೀಡುತ್ತದೆ.

ಇದನ್ನೂ ಓದಿ: ಮೋದಿ ‘ಪಟಾಲಂ’ ರಕ್ಷಣೆಗೆ ನಿಂತ ಚುನಾವಣಾ ಆಯೋಗ?

ರಾಘವ್ ಚಡ್ಡಾ ಈಗ ಬಿಜೆಪಿ ಸೇರಿದ ಕೆಲ ದಿನಗಳಲ್ಲಿ ‘ಕ್ಲೀನ್’ ಆಗಬಹುದು. ಆದರೆ ರಾಜ್ಯಸಭೆಯಲ್ಲಿ ಅವರು ಕೆಲವು ದಿನದವರೆಗಾದರೂ ಜನರ ಪರವಾಗಿ ಎತ್ತುತ್ತಿದ್ದ ಧ್ವನಿ ಈಗ ಅಧಿಕಾರದ ದಾಹಕ್ಕೆ ಹತ್ತಿಕ್ಕಲ್ಪಟ್ಟಿದೆ. ಮೋದಿ ಸರ್ಕಾರದ ವಿರುದ್ಧ ಗುಡುಗುತ್ತಿದ್ದ ಧ್ವನಿ ಈಗ ಮೌನವಾಗಿದೆ.

ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧ ಪಕ್ಷಗಳನ್ನು ನಿರ್ನಾಮ ಮಾಡುವ ಬಿಜೆಪಿಯ ತಂತ್ರ ಯಶಸ್ವಿಯಾಗುತ್ತಿರಬಹುದು, ಆದರೆ ಇದು ಆರೋಗ್ಯಕರ ಪ್ರಜಾಪ್ರಭುತ್ವದ ಲಕ್ಷಣವಲ್ಲ. ಸಂವಿಧಾನದ ಹೆಸರಲ್ಲಿ ನಡೆಯುತ್ತಿರುವ ಈ “ರಾಜಕೀಯ ವಿಲೀನ” ವಾಸ್ತವದಲ್ಲಿ “ರಾಜಕೀಯ ಶರಣಾಗತಿ”. ರಾಘವ್ ಚಡ್ಡಾ ಮತ್ತು ತಂಡದ ಈ ನಡೆ ಇತಿಹಾಸದಲ್ಲಿ ಒಂದು ಅವಕಾಶವಾದಿ ನಡೆಯಾಗಿ ದಾಖಲಾಗಲಿದೆ. ಆಪ್ ಪಕ್ಷವು ಈಗಲಾದರೂ ತನ್ನ ‘ಸಾಫ್ಟ್ ಹಿಂದುತ್ವ’ದ ಮುಖವಾಡ ಕಳಚಿ ಸಿದ್ಧಾಂತದ ಮೇಲೆ ಗಮನ ಹರಿಸದಿದ್ದರೆ, ಮುಂದಿನ ದಿನಗಳಲ್ಲಿ ಇಂತಹ ಇನ್ನಷ್ಟು “ವಾಷಿಂಗ್ ಮಷಿನ್” ಘಟನೆಗಳು ನಡೆಯುವುದರಲ್ಲಿ ಸಂಶಯವಿಲ್ಲ.

WhatsApp Image 2025 09 25 at 3.16.47 PM e1758793879498
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

30 ದಿನ ಕಳೆದರೂ ʼRTIʼಗೆ ಉತ್ತರವಿಲ್ಲ; ECI ಮೇಲೊಂದು ಪ್ರಶ್ನಾರ್ಥಕ ಚಿಹ್ನೆ! 

'ಚುನಾವಣಾ ಆಯೋಗ ಏನು ಮುಚ್ಚಿಡಲು ಪ್ರಯತ್ನಿಸುತ್ತಿದೆ?' ಎಂಬ ಗಂಭೀರ ಅನುಮಾನ ಈಗ...

ನ.1ರಂದು ʼದಿಲ್ಲಿ ಚಲೋʼ | ಪ್ರಜಾಪ್ರಭುತ್ವ ಉಳಿಸಲು ಎಲ್ಲರೂ ಜೊತೆಗೂಡುವಂತೆ ರಾಹುಲ್ ಗಾಂಧಿ ಕರೆ

ದೇಶದ ಪ್ರಜಾಪ್ರಭುತ್ವವನ್ನು ಉಳಿಸಲು, ಮತಗಳ್ಳತನವನ್ನು ತಡೆಯಲು ಹಾಗೂ ಸಂವಿಧಾನವನ್ನು ರಕ್ಷಿಸಲು ನವೆಂಬರ್...

SIR ಸಂಚು: 10 ಕೋಟಿ ಜನರಲ್ಲಿ ಸಿಕ್ಕಿದ್ದು ಬರಿ 1,600 ವಿದೇಶಿಯರು!

ದೇಶಾದ್ಯಂತ ಮತದಾರರ ಪಟ್ಟಿಯ 'ವಿಶೇಷ ತೀವ್ರ ಪರಿಷ್ಕರಣೆ' (SIR) ನಡೆಸುತ್ತಿರುವುದು ದೇಶದ...

ಅಪ್ರಾಪ್ತ ಪುತ್ರನಿಂದ ಕಾರು ಅಪಘಾತ: ಕೇರಳದ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರಿಗೆ ಬಂಧನದಿಂದ ಮಧ್ಯಂತರ ರಕ್ಷಣೆ

ಕೊಚ್ಚಿಯಲ್ಲಿ 17 ವರ್ಷದ ಅಪ್ರಾಪ್ತ ಮಗ ಚಲಾಯಿಸುತ್ತಿದ್ದ ಮರ್ಸಿಡಿಸ್-ಬೆಂಜ್ ಕಾರು ಡಿಕ್ಕಿ...