ನ್ಯಾಯಾಂಗವು ಕಾಯ್ದೆಯ ಉದ್ದೇಶಕ್ಕೆ ವಿರುದ್ಧವಾದ ತೀರ್ಪುಗಳನ್ನು ನೀಡುವುದನ್ನು ಮುಂದುವರಿಸಿದರೆ, ಜನರು ದೀರ್ಘಕಾಲ ಸುಮ್ಮನಿರುವುದಿಲ್ಲ. ಪಿಟಿಸಿಎಲ್(PTCL) ಕಾಯ್ದೆಯ ಅಡಿಯಲ್ಲಿ ವಿಳಂಬವಾಗಿ ಸಲ್ಲಿಸಿದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ ಎಂಬ ತೀರ್ಪು ಮಂಚೇಗೌಡ ಮತ್ತು ಇತರರು ವಿರುದ್ಧ ಕರ್ನಾಟಕ ರಾಜ್ಯ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ನ ಮೂವರು ನ್ಯಾಯಾಧೀಶರ ಪೀಠ ನೀಡಿದ ತೀರ್ಪಿನ ಉಲ್ಲಂಘನೆಯಾಗಿದೆ ಎಂದು ಸುಪ್ರೀಂ ಕೋರ್ಟಿನ ಮಾಜಿ ನ್ಯಾಯಮೂರ್ತಿ ವಿ. ಗೋಪಾಲ ಗೌಡ ಅವರು ನೆಕ್ಕಂಟಿ(Nekkanti) ಪ್ರಕರಣದಲ್ಲಿ ನೀಡಲಾದ ತೀರ್ಪನ್ನು ಉಲ್ಲೇಖಿಸಿ ಅಭಿಪ್ರಾಯ ವ್ಯಕ್ತಪಡಿಸಿದರು.
‘ಪಿಟಿಸಿಎಲ್ (PTCL) ಕಾಯ್ದೆ, 1978ರ ಅನುಷ್ಠಾನದಲ್ಲಿನ ಸಮಸ್ಯೆಗಳು’ ಎಂಬ ವಿಷಯದ ಕುರಿತು ರಾಜ್ಯ ಮಟ್ಟದ ಸಾರ್ವಜನಿಕ ಅಹವಾಲು ಕಾರ್ಯಕ್ರಮವನ್ನು ಆಲ್ ಇಂಡಿಯಾ ಲಾಯರ್ಸ್ ಅಸೋಸಿಯೇಷನ್ ಫಾರ್ ಜಸ್ಟೀಸ್(AILAJ), ಮಂಥನ್ ಲಾ, ಆಲ್ಟರ್ನೇಟಿವ್ ಲಾ ಫೋರಮ್(ALF), ಪಿಟಿಸಿಎಲ್ ಕಾಯ್ದೆ ಭೂಮಿ ವಂಚಿತರ ಹೋರಾಟ ಸಮಿತಿ ಮತ್ತು ಸ್ವತಂತ್ರ ಪ್ರಗತಿಪರ ಸಂಶೋಧಕರ ಸಹಯೋಗದೊಂದಿಗೆ ಬೆಂಗಳೂರಿನ ಗಾಂಧಿ ಭವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಂವಿಧಾನವು ನಮಗಿತ್ತಿರುವ ಜೀವಿಸುವ ಹಕ್ಕಿನ ಬಗ್ಗೆ ಮಾತನಾಡಿದ ನ್ಯಾಯಮೂರ್ತಿ ಗೌಡರು, “ಈ ಹಕ್ಕನ್ನು ಅರ್ಥಪೂರ್ಣವಾಗಿ ಜಾರಿಗೊಳಿಸಲು ಆರ್ಥಿಕ ಸ್ವಾತಂತ್ರ್ಯ ಅತ್ಯಗತ್ಯವಾಗಿದ್ದು, ಅಂತಹ ಸ್ವಾತಂತ್ರ್ಯವನ್ನು ಭದ್ರಪಡಿಸಿಕೊಳ್ಳಲು ಭೂಮಿಯ ಲಭ್ಯತೆ ಅತ್ಯಗತ್ಯ. ಸಂವಿಧಾನದ 39(ಬಿ) ಮತ್ತು 46ನೇ ವಿಧಿಗಳನ್ನು ಉಲ್ಲೇಖಿಸಿ, ವಸ್ತು ಸಂಪನ್ಮೂಲಗಳನ್ನು ಸಾಮಾನ್ಯ ಹಿತಾಸಕ್ತಿಗಾಗಿ ಬಳಸುವುದನ್ನು ಖಾತ್ರಿಪಡಿಸಿಕೊಳ್ಳಲು ಮತ್ತು ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಗಳ ಶೈಕ್ಷಣಿಕ ಮತ್ತು ಆರ್ಥಿಕ ಹಿತಾಸಕ್ತಿಗಳನ್ನು ಉತ್ತೇಜಿಸಲು ರಾಜ್ಯ ಸರ್ಕಾರಕ್ಕೆ ಕರೆ ನೀಡಿದರು. ಪಿಟಿಸಿಎಲ್ ಕಾಯಿದೆ, 1978ನ್ನು ಈ ಸಾಂವಿಧಾನಿಕ ಗುರಿಗಳನ್ನು ಸಾಧಿಸಲು ಜಾರಿಗೆ ತರಲಾಗಿದ್ದರೂ, ಅದರ ಕಳಪೆ ಅನುಷ್ಠಾನದಿಂದಾಗಿ ಕಾಯ್ದೆಯ ಉದ್ದೇಶವೇ ಸಂಪೂರ್ಣವಾಗಿ ವಿಫಲವಾಗಿದೆ “ಎಂದು ವಿಷಾದ ವ್ಯಕ್ತಪಡಿಸಿದರು.
ಅಂಚಿನಲ್ಲಿರುವ ಜನರ ಹಿತಾಸಕ್ತಿಗೆ ವಿರುದ್ಧವಾಗಿ ಕೆಲಸ ಮಾಡುವ ಅಧಿಕಾರಿಗಳ ಬಗ್ಗೆ ಮಾತನಾಡುತ್ತ, “ಸಾರ್ವಜನಿಕ ಹಿತಾಸಕ್ತಿಗೆ ವಿರುದ್ಧವಾಗಿ ವರ್ತಿಸುವವರನ್ನು ತಕ್ಷಣವೇ ಸೇವೆಯಿಂದ ವಜಾಗೊಳಿಸುವಂತೆ ಅವರು ಮುಖ್ಯಮಂತ್ರಿ ಮತ್ತು ಕಂದಾಯ ಇಲಾಖೆಗೆ ಕರೆ ನೀಡಿದರು. ಅಲ್ಲದೇ, ಈ ವಿಷಯವನ್ನು ತುರ್ತಾಗಿ ರಾಜ್ಯ ವಿಧಾನಸಭೆಯಲ್ಲಿ ಚರ್ಚೆಗೆ ತೆಗೆದುಕೊಳ್ಳಬೇಕು” ಎಂದು ಜನಪ್ರತಿನಿಧಿಗಳಿಗೆ ಒತ್ತಾಯಿಸಿದರು.
ನಿವೃತ್ತ ಐಎಎಸ್ ಅಧಿಕಾರಿ ಡಾ. ಎಸ್ ಎಂ ಜಾಮ್ದಾರ್ ಅವರು ಮಾತನಾಡಿ, “ಪಿಟಿಸಿಎಲ್(PTCL) ಕಾಯ್ದೆಯು ನಮ್ಮ ಸುತ್ತಲಿರುವ ಸಾಮಾಜಿಕ ಅಸಮಾನತೆಗಳನ್ನು ಪ್ರತಿಬಿಂಬಿಸುವ ಕನ್ನಡಿಯಾಗಿದೆ. ಇಂತಹ ಅಸಮಾನತೆಗಳನ್ನು ಉಳಿಸಿಕೊಂಡು ಬರುವ ಮನಸ್ಥಿತಿಯೊಂದು ಸಮಾಜದಲ್ಲಿದೆ. ಇಂತಹ ಪ್ರಮುಖ ಶಾಸನಗಳು ಜಾರಿಯಾಗಲು ಇವೇ ಸಾಮಾಜಿಕ ಅಸಮಾನತೆಗಳು ಕಾರಣವಾಗಿವೆ. ಪಿ.ಟಿ.ಸಿ.ಎಲ್ ಕಾಯ್ದೆಯನ್ನು ಉಳಿಸಿಕೊಳ್ಳುವಂತಹ ಹೋರಾಟ ಜಾತಿ ಮನಸ್ಥಿತಿಯನ್ನು ವಿರೋಧಿಸುವ ಹೋರಾಟವೂ ಆಗಿದೆ” ಎಂಬುದಾಗಿ ತಿಳಿಸಿದರು. ನ್ಯಾಯಕ್ಕಾಗಿ ಜಿಲ್ಲೆ ಜಿಲ್ಲೆಯಲ್ಲೂ ಜನಚಳವಳಿ ಕಟ್ಟಬೇಕಿದೆ ಎಂದು ಪ್ರತಿಪಾದಿಸಿದರು.
ನಿವೃತ್ತ ಐಎಎಸ್ ಅಧಿಕಾರಿ ತಂಗರಾಜ್ ಅವರು, “ಪಿಟಿಸಿಎಲ್ ಬಹಳ ಪ್ರಗತಿಪರವಾದಂತಹ ಕಾನೂನು. ಆದರೆ ಅದರ ಅನುಷ್ಠಾನದಲ್ಲಿ ಅಡೆ ತಡೆಗಳಿವೆ. ಸಹಾಯಕ ಆಯುಕ್ತರು (AC) ಮತ್ತು ಜಿಲ್ಲಾಧಿಕಾರಿಗಳು (DC) ನಮ್ಮ ಪರವಾಗಿ ಆದೇಶ ಹೊರಡಿಸಿದರೂ, ಕಂದಾಯ ಇಲಾಖೆ ಮತ್ತು ಪೊಲೀಸ್ ಇಲಾಖೆಯ ಸಹಕಾರದ ಕೊರತೆಯಿಂದಾಗಿ ಭೂಮಿಯ ಸ್ವಾಧೀನವನ್ನು ಜನರು ಪಡೆಯಲಾಗುತ್ತಿಲ್ಲ. ಕಾನೂನು ಪರಿಹಾರ ನೀಡಿದರೂ ಕೂಡಾ ವಾಸ್ತವದಲ್ಲಿ ಬಹಳಷ್ಟು ತೊಂದರೆಗಳಿವೆ. ಆದರೆ ಅದನ್ನು ನಿವಾರಿಸಿಕೊಳ್ಳುವ ಹಾದಿಯಲ್ಲಿ ನಾವು ಬಹಳವೇ ದೂರ ಮುಂದುವರೆಯಬೇಕಿದೆ” ಎಂದರು.
ಭೂಶಕ್ತಿ ಕೇಂದ್ರದ ಅಧ್ಯಕ್ಷೆ ಜ್ಯೋತಿ ರಾಜ್ ಮಾತನಾಡಿ, “ಈ ಕಾರ್ಯಕ್ರಮವು ದಮನಿತರೆಲ್ಲರಿಗೂ ಹೊಸ ಭರವಸೆಯನ್ನು ನೀಡುವ ವೇದಿಕೆಯಾಗಿದೆ. ಸಾಮಾನ್ಯವಾಗಿ ಸಮಾಜವು ಜ್ಞಾನ ಮತ್ತು ಶಿಕ್ಷಣವನ್ನು ನಮಗೆ ನೀಡದ ಕಾರಣ, ಭೂಮಿಯೇ ದಲಿತ ಸಮುದಾಯಕ್ಕಿರುವ ಜೀವನಾಡಿಯಾಗಿದೆ. ದಲಿತರಿಗೆ ಭೂಮಿಯು ಕೇವಲ ಆರ್ಥಿಕ ಅಥವಾ ರಾಜಕೀಯ ವಿಷಯವಲ್ಲ, ಅದು ನಮ್ಮ ಸಾಂಸ್ಕೃತಿಕ ಸಂಬಂಧವೂ ಹೌದು. ಭೂಮಿಯಿಂದ ಹಣ ಗಳಿಸುವುದು ಮಾತ್ರವಲ್ಲ, ನಮಗೆ ಅದೊಂದು ಅವಿನಾಭಾವ ಸಂಬಂಧವೇ ಆಗಿದೆ. ಸಂವಿಧಾನವು ಬಹಳ ಸುಂದರ ದಾಖಲೆಯೇ. ಆದರೆ ಅದು ಇನ್ನೂ ನಮ್ಮ ಮನೆಗಳನ್ನು ತಲುಪಿಲ್ಲ. ಸಹಾಯಕ ಆಯುಕ್ತರು(AC), ಜಿಲ್ಲಾಧಿಕಾರಿಗಳು(DC) ಮತ್ತು ಇತರ ಅಧಿಕಾರಿಗಳಿಗೆ ಈ ವಿಷಯಗಳ ಬಗ್ಗೆ ಸಾಕಷ್ಟು ಅರಿವಿಲ್ಲ. ಆದರೆ ಸಂವಿಧಾನವು ಪ್ರತಿಯೊಂದು ಮನೆ-ಮನಕ್ಕೆ ಸಂವಿಧಾನ ತಲುಪಿದಾಗ ಮಾತ್ರ ನೈಜ ಉನ್ನತಿ ಸಾಧ್ಯ. ನಾವು ನಮ್ಮ ಜಿಲ್ಲೆಗಳಲ್ಲಿ ಪ್ರತಿ 3 ತಿಂಗಳಿಗೊಮ್ಮೆ ಕುಂದುಕೊರತೆ ಸಭೆಗಳನ್ನು ನಡೆಸುವಂತೆ ಆಗ್ರಹಿಸಿ, ಅದರಲ್ಲಿ ಭಾಗವಹಿಸುವ ಮೂಲಕ ನಮ್ಮ ಸಮಸ್ಯೆಗಳನ್ನು ಮಂಡಿಸಬೇಕು. ಸಾಮಾಜಿಕ ಕಳಕಳಿಯುಳ್ಳ ಸಂಘಟನೆಗಳೂ ಸೇರಿರುವಂತೆ ‘ಪರಿಶೀಲನೆ ಮತ್ತು ಮೇಲ್ವಿಚಾರಣಾ ಸಮಿತಿ’ಗಳನ್ನು ನಾವು ಹೊಂದಿರಬೇಕು. ಮಹಿಳೆಯರಿಗೆ ತಲಾ 5 ಎಕರೆ ಭೂಮಿಯನ್ನು ನೀಡಬೇಕು” ಎಂದು ಒತ್ತಾಯಿಸಿದರು.
ಪಿಟಿಸಿಎಲ್ (PTCL) ಕಾಯ್ದೆಯ ತಜ್ಞರೂ ವಕೀಲರೂ ಆದ ಶ್ರೀ ಹೆಚ್. ಎಲ್. ವೆಂಕಟೇಶ್ ಅವರು ಮಾತನಾಡುತ್ತಾ, “ನ್ಯಾಯಾಲಯಗಳ ಬಗ್ಗೆ ಜನರು ತಾಳ್ಮೆ ಕಳೆದಕೊಳ್ಳುತ್ತಿದ್ದಾರೆ. ಪಿ.ಟಿ.ಸಿ.ಎಲ್ ಕಾಯ್ದೆಯನ್ನು ಬಹಳ ಎಚ್ಚರಿಕೆಯಿಂದ ಪರಿಗಣಿಸಿದ ನಂತರವೇ ಜಾರಿಗೆ ತರಲಾಗಿದೆ ಮತ್ತು ಅದರ ಭಾಷೆಯು ಅತ್ಯಂತ ಸ್ಪಷ್ಟವಾಗಿದೆ. ಮೊದಲು ನ್ಯಾಯಾಲಯದ ತೀರ್ಪುಗಳಿಂದಾಗಿ ‘ಬಗರ್ ಹುಕುಂ’ ಜಮೀನುಗಳು ಪಿ.ಟಿ.ಸಿ.ಎಲ್ ವ್ಯಾಪ್ತಿಯಿಂದ ಹೊರಗಿಡಲಾಯಿತು. ನಂತರ, ಸೀತಮ್ಮ ಪ್ರಕರಣದ ತೀರ್ಪಿನಲ್ಲಿ ಮಾರಾಟ ಒಪ್ಪಂದಕ್ಕೆ ಸಹಿ ಹಾಕಿದವರು ಪಿಟಿಸಿಎಲ್ ಅಡಿಯಲ್ಲಿ ಮೇಲ್ಮನವಿ ಸಲ್ಲಿಸುವಂತಿಲ್ಲ ಎಂದು ಹೇಳಿದರು. ಆದರೆ, ಜನರು ಮೋಸದಿಂದ ಅಂತಹ ಒಪ್ಪಂದಗಳಿಗೆ ಸಹಿ ಹಾಕುತ್ತಾರೆ ಎಂಬ ವಾಸ್ತವವನ್ನು ಈ ತೀರ್ಪು ಗಣನೆಗೆ ತೆಗೆದುಕೊಳ್ಳುವುದೇ ಇಲ್ಲ. ಇಂತಹ ತೀರ್ಪುಗಳು ಕಾಯ್ದೆಯ ಉದ್ದೇಶವನ್ನೇ ದುರ್ಬಲಗೊಳಿಸುತ್ತಿದೆ. ಈ ಮೂಲಕ ಕಾಯ್ದೆಯ ಮೂಲ ಆಶಯವನ್ನೇ ಸಂಪೂರ್ಣವಾಗಿ ನಾಶಮಾಡಲಾಗುತ್ತಿದೆ” ಎಂದು ಹೇಳಿದರು.
AILAJನ ಪ್ರಧಾನ ಕಾರ್ಯದರ್ಶಿಗಳಾಗಿರುವ ವಕೀಲ ಕ್ಲಿಫ್ಟನ್ ಡಿ’ರೊಜಾರಿಯೊ ಅವರು ಪಿಟಿಸಿಎಲ್ ಕಾಯ್ದೆ, 1978ರ ಅಡಿಯಲ್ಲಿ ಹಕ್ಕುಗಳನ್ನು ಪಡೆಯುವಲ್ಲಿನ ಕಾನೂನು ಸವಾಲುಗಳ ಬಗ್ಗೆ ಮಾತನಾಡಿದರು.
ಪಿಟಿಸಿಎಲ್ ಕಾಯ್ದೆಯನ್ನು ಕೇವಲ ಸಿವಿಲ್ ಮೊಕದ್ದಮೆಗಳೆಂದು ಪರಿಗಣಿಸಲಾಗುತ್ತಿದೆಯೇ ಹೊರತು ಅದನ್ನು ಸಾಮಾಜಿಕ ನ್ಯಾಯದ ದೃಷ್ಟಿಕೋನದಿಂದ ಜನಕಲ್ಯಾಣ ಕಾಯ್ದೆಯಿದು ಎಂದು ಪರಿಗಣಿಸಲಾಗುತ್ತಿಲ್ಲ. ನ್ಯಾಯಾಲಯಗಳು ಸಾಮಾಜಿಕ-ಆರ್ಥಿಕ ನ್ಯಾಯದ ದೃಷ್ಟಿಕೋನವನ್ನು ಹೊಂದಿಲ್ಲ ಎಂಬುದನ್ನು ಪ್ರಸ್ತುತ ಪ್ರಕರಣಗಳು ತೋರಿಸಿಕೊಟ್ಟಿವೆ ಎಂದು ತಿಳಿಸಿದ ಅವರು, ಇಂತಹ ಧೋರಣೆಯು ಕಾನೂನನ್ನು ರಾಜಕೀಯ ರಹಿತಗೊಳಿಸಿ ಅದರ ಶಕ್ತಿಯನ್ನು ಕುಂದಿಸುತ್ತದೆ ಎಂದು ತಿಳಿಸಿದರು.
ಇದಲ್ಲದೇ, ಡಿ.ಎಸ್.ಎಸ್ ನ ಖ್ಯಾತ ಮುಖಂಡ ಬಸವರಾಜ ಕೌತಾಳ್, ಪಿಟಿಸಿಎಲ್ ಹೋರಾಟ ಸಮಿತಿಯ ಅಧ್ಯಕ್ಷರಾದ ಮಂಜುನಾಥ್ ಮತ್ತು ವೆಂಕಟೇಶ್ ಮುಂತಾದ ಸಮುದಾಯದ ನಾಯಕರುಗಳು ಈ ವ್ಯವಸ್ಥಿತ ವೈಫಲ್ಯಗಳ ಸಾಮಾಜಿಕ-ಆರ್ಥಿಕ ಪರಿಣಾಮಗಳ ಬಗ್ಗೆ ಬೆಳಕು ಚೆಲ್ಲಿದರು. ಭೂ-ಕಬಳಿಕೆಯು ಅಂಚಿನಲ್ಲಿರುವವರನ್ನು ಅಂಚಿನಲ್ಲಿಯೇ ಇರಿಸುವ ವ್ಯವಸ್ಥೆಯೇ ಆಗಿದೆ ಎಂಬುದಾಗಿ ಅವರು ಗಮನಸೆಳೆದರು.
ಅಹವಾಲು ಕಾರ್ಯಕ್ರಮದಲ್ಲಿ ಎತ್ತಲಾಗಿದ್ದ ಸಮಸ್ಯೆಗಳಿಗೆ ಪ್ರತಿಕ್ರಿಯಿಸಲು ರಾಜ್ಯ ಸರ್ಕಾರದ ಹಲವಾರು ಪ್ರತಿನಿಧಿಗಳನ್ನು ಆಹ್ವಾನಿಸಲಾಗಿದ್ದರೂ, ಯಾವುದೇ ಪ್ರತಿನಿಧಿ ಹಾಜರಿರಲಿಲ್ಲ. ಸಂತ್ರಸ್ತರು ನೀಡಿದ ಸಾಕ್ಷ್ಯಗಳನ್ನು ಆಲಿಸಿದ ನಂತರ ಮತ್ತು ರಾಜ್ಯ ಹಾಗೂ ಅಧಿಕಾರಿಗಳು ಪಿಟಿಸಿಎಲ್ ಕಾಯಿದೆ, 1978ನ್ನು ಉಲ್ಲಂಘಿಸಿರುವುದು ಹಾಗೂ ಜಾತಿ ವ್ಯವಸ್ಥೆಯು ಈ ಕಾಯಿದೆಯ ಜಾರಿಯನ್ನು ಹೇಗೆ ತಡೆಯುತ್ತಿದೆ ಎಂಬುದನ್ನು ಗಮನದಲ್ಲಿಟ್ಟುಕೊಂಡು ತೀರ್ಪುಗಾರರ ಮಂಡಳಿಯ ಸದಸ್ಯರು ಸಾಮಾಜಿಕ ನ್ಯಾಯದ ತತ್ವಗಳನ್ನು ಎತ್ತಿಹಿಡಿಯುವಂತೆ ರಾಜ್ಯ ಸರ್ಕಾರಕ್ಕೆ ಒತ್ತಾಯಿಸುವ ಮಧ್ಯಂತರ ತೀರ್ಪನ್ನು ಶೀಘ್ರವೇ ಪ್ರಕಟಿಸುವುದಾಗಿ ತಿಳಿಸಿದರು.
ಭೂಮಿಗಾಗಿನ ಹೋರಾಟವು ಮೂಲಭೂತವಾಗಿ ಘನತೆ ಮತ್ತು ಸ್ವಾಭಿಮಾನಕ್ಕಾಗಿನ ಹೋರಾಟವೇ ಆಗಿದೆ. ಈ ಹೋರಾಟದಲ್ಲಿ ತಾವು ದೃಢವಾಗಿ ಮುಂದುವರಿಯುವುದಾಗಿ ಸಂತ್ರಸ್ತ ಕುಟುಂಬಗಳು ಪುನರುಚ್ಚರಿಸಿದವು. ಇಂದಿನ ಸಾರ್ವಜನಿಕ ವಿಚಾರಣೆಯ ನಂತರ ತೀರ್ಪುಗಾರರು ನೀಡುವ ಅಂತಿಮ ತೀರ್ಪಿನೊಂದಿಗೆ, ಪಿಟಿಸಿಎಲ್ ಕಾಯ್ದೆ, 1978ರ ಅನುಷ್ಠಾನದ ಕುರಿತು ಸಂಘಟಕರು ವಿವರವಾದ ವರದಿಯನ್ನು ಸಿದ್ಧಪಡಿಸಲಿದ್ದಾರೆ. ಇದನ್ನು ಕರ್ನಾಟಕದ ಮುಖ್ಯಮಂತ್ರಿ ಮತ್ತು ಕಂದಾಯ ಸಚಿವರಿಗೆ ಸಲ್ಲಿಸಿ, ತಕ್ಷಣವೇ ಶಾಸನಬದ್ಧವಾಗಿ ಮತ್ತು ಆಡಳಿತಾತ್ಮಕವಾಗಿ ಮಧ್ಯಪ್ರವೇಶಿಸಬೇಕೆಂದು ಒತ್ತಾಯಿಸಲಾಗುವುದು ಎಂದು ಹೇಳಿದರು.
ಇದನ್ನೂ ಓದಿದ್ದೀರಾ? ಕೊಪ್ಪಳ | ವಿರೂಪಾಪುರ ಗಡ್ಡೆ ನಿರಾಶ್ರಿತರ ನರಕಕ್ಕೆ ಕೊನೆ ಇಲ್ಲವೇ?
ಕರ್ನಾಟಕದ ಏಳು ಜಿಲ್ಲೆಗಳಲ್ಲಿ(ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕೋಲಾರ, ತುಮಕೂರು, ಚಿತ್ರದುರ್ಗ, ರಾಮನಗರ ಮತ್ತು ದಾವಣಗೆರೆ) ಈ ಕಾಯ್ದೆಯ ಅನುಷ್ಠಾನದಲ್ಲಿ ಎದುರಾಗುತ್ತಿರುವ ಸವಾಲುಗಳ ಕುರಿತ ಅಧ್ಯಯನವನ್ನು ಆಧರಿಸಿ ಈ ಸಾರ್ವಜನಿಕ ಅಹವಾಲು ಕಾರ್ಯಕ್ರಮವನ್ನು ನಡೆಸಲಾಯಿತು. ದಲಿತ ಮತ್ತು ಆದಿವಾಸಿ ಸಮುದಾಯಗಳನ್ನು ಭೂ-ಹಕ್ಕಿನಿಂದ ವಂಚಿತರನ್ನಾಗಿಸುತ್ತಿರುವ ಹೊತ್ತಿನಲ್ಲಿ ಅದನ್ನು ತಡೆಗಟ್ಟಲು ಪಿಟಿಸಿಎಲ್ ಕಾಯ್ದೆಯನ್ನು ತರಲಾಗಿದ್ದರೂ ಅದರಲ್ಲಿರುವ ಸಮಸ್ಯೆಗಳನ್ನು ನಿವಾರಿಸುವ ನಿಟ್ಟಿನಲ್ಲಿ ಸಮುದಾಯದ ಸದಸ್ಯರು, ಕಾನೂನು ತಜ್ಞರುಗಳು, ಜನಪರ-ದಲಿತಪರ ಸಂಘಟನೆಗಳೊಟ್ಟಿಗೆಯೇ, ಗೌರವಾನ್ವಿತ ನ್ಯಾಯಪೀಠವೂ ಕೂಡಾ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದವು.
ಸುಪ್ರೀಂ ಕೋರ್ಟ್ನ ನಿವೃತ್ತ ನ್ಯಾಯಮೂರ್ತಿಗಳಾದ ವಿ. ಗೋಪಾಲ ಗೌಡ, ಹಿರಿಯ ನಿವೃತ್ತ ಐ.ಎ.ಎಸ್ ಅಧಿಕಾರಿಗಳಾದ ಎಸ್.ಎಂ. ಜಾಮ್ದಾರ್ ಮತ್ತು ಡಿ. ತಂಗರಾಜ್, ಹಿರಿಯ ಸಾಮಾಜಿಕ ಕಾರ್ಯಕರ್ತೆ ಜ್ಯೋತಿರಾಜ್ ಮತ್ತು ವಕೀಲರು ಮತ್ತು ಪಿಟಿಸಿಎಲ್ ಕಾನೂನು ತಜ್ಞ ಹೆಚ್ ಎಲ್ ವೆಂಕಟೇಶ್ ಅವರನ್ನೊಳಗೊಂಡ ಗೌರವಾನ್ವಿತ ನ್ಯಾಯಪೀಠವು ಸಂತ್ರಸ್ತರ ಅಹವಾಲುಗಳನ್ನು ಆಲಿಸಿ, ಪ್ರಕರಣಗಳಿಗೆ ಸಂಬಂಧಿಸಿದ ಕಡತಗಳನ್ನು ಪರಿಶೀಲಿಸಿತು.





