ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ್ದಾನೆಂಬ ಆರೋಪದ ಮೇಲೆ ರೈಲ್ವೇ ನೌಕರನೊಬ್ಬನನ್ನು ಪ್ರಯಾಣಿಕರು ಹೊಡೆದು ಕೊಂದಿರುವ ಘಟನೆ ನಡೆದಿದೆ. ಬಿಹಾರದ ಬರೌನಿಯಿಂದ ದೆಹಲಿಗೆ ತೆರಳುತ್ತಿದ್ದ ಹಮ್ಸಫರ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಘಟನೆ ನಡೆದಿದೆ ಎಂದು ವರದಿಯಾಗಿದೆ.
ರೈಲ್ವೇ ಸಿಬ್ಬಂದಿ ತನ್ನೊಂದಿಗೆ ಅಸಭ್ಯವಾಗಿ ವರ್ತಿಸಿ, ಲೈಂಗಿಕ ಕಿರುಕುಳ ನೀಡಿದ ಬಗ್ಗೆ ಬಾಲಕಿ ತನ್ನ ಕುಟುಂಬಸ್ಥರಿಗೆ ತಿಳಿಸಿದ್ದಾರೆ. ಕೂಡಲೇ ರೈಲ್ವೇ ಸಿಬ್ಬಂದಿಯನ್ನು ಹಿಡಿದ ಕುಟುಂಬಸ್ಥರು ಮತ್ತು ಇತರ ಪ್ರಯಾಣಿಕರು ಆತನ ಮೇಲೆ ಹಲ್ಲೆ ನಡೆಸಿದ್ದಾರೆ.
ಬಿಹಾರದ ಸಿವಾನ್ ಮೂಲದ ಕುಟುಂಬವು ರೈಲಿನಲ್ಲಿ ದೆಹಲಿಗೆ ತೆರಳುತ್ತಿತ್ತು. ಈ ವೇಳೆ, ಅದೇ ಕೋಚ್‌ನಲ್ಲಿದ್ದ ರೈಲ್ವೆ ಉದ್ಯೋಗಿ ಪ್ರಶಾಂತ್ ಕುಮಾರ್ ಎಂಬಾತ ಬಾಲಕಿಯನ್ನು ತನ್ನ ಸೀಟ್‌ನಲ್ಲಿ ಕೂರಿಸಿಕೊಂಡಿದ್ದ. ಬಾಲಕಿಯ ತಾಯಿ ಶೌಚಾಲಯಕ್ಕೆ ತೆರಳಿದಾಗ, ಆತ ಬಾಲಕಿಯೊಂದಿಗೆ ವರ್ತಿಸಿದ್ದಾನೆ. ಬಾಲಕಿ ತನ್ನ ತಾಯಿ ಮರಳಿ ಬಂದಾಗ ಆತನ ಅಸಭ್ಯ ವರ್ತನೆಯ ಬಗ್ಗೆ ತಿಳಿಸಿದ್ದಾಳೆ ಎಂದು ವರದಿಯಾಗಿದೆ.
ಘಟನೆಯ ಬಗ್ಗೆ ಬಾಲಕಿಯ ತಾಯಿ ತನ್ನ ಪತಿ ಮತ್ತು ಕುಟುಂಬಸ್ಥರಿಗೆ ಹಾಗೂ ಇತರ ಪ್ರಯಾಣಿಕರಿಗೆ ತಿಳಿಸಿದ್ದಾರೆ. ಕೋಪಗೊಂಡ ಪ್ರಯಾಣಿಕರು ಮತ್ತು ಕುಟುಂಬಸ್ಥರು ಪ್ರಶಾಂತ್ ಕುಮಾರ್ ಮೇಲೆ ನಿರಂತರವಾಗಿ ಹಲ್ಲೆ ನಡೆಸಿದ್ದಾರೆ.
ಗಂಭೀರವಾಗಿ ಗಾಯಗೊಂಡಿದ್ದ ಪ್ರಶಾಂತ್‌ನನ್ನು ಉತ್ತರ ಪ್ರದೇಶದ ಕಾನ್ಪುರ ರೈಲು ನಿಲ್ದಾಣದಲ್ಲಿ ರೈಲ್ವೇ ಪೊಲೀಸರಿಗೆ ಒಪ್ಪಿಸಿದ್ದಾರೆ. ಕುಟುಂಬಸ್ಥರು ಆತನ ವಿರುದ್ಧ ದೂರು ನೀಡಿದ್ದಾರೆ. ಗಂಭೀರ ಪರಿಸ್ಥಿತಿಯಲ್ಲಿದ್ದ ಪ್ರಶಾಂತ್‌ನನ್ನು ಪೊಲೀಸರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ಆತ ಕೆಲವೇ ಕ್ಷಣಗಳಲ್ಲಿ ಮೃತಪಟ್ಟಿದ್ದಾಗಿ ವೈದ್ಯರು ತಿಳಿಸಿದ್ದಾರೆ.