ಮಸೀದಿ ಪಾವಿತ್ರ್ಯಕ್ಕೆ ಧಕ್ಕೆ ಆರೋಪ; ಮೆಕ್ಕಾದಲ್ಲಿ ಇಬ್ಬರು ಬಾಂಗ್ಲಾದೇಶಿಗರಿಗೆ ಗಲ್ಲು

Date:

ಸೌದಿ ಅರೇಬಿಯಾದ ಪವಿತ್ರ ನಗರ ಮೆಕ್ಕಾ ಪ್ರದೇಶದಲ್ಲಿ ಮಸೀದಿಯೊಂದರ ಒಳಗೆ ಅನುಚಿತ ಕೃತ್ಯ ಎಸಗಿದ ಆರೋಪದ ಮೇಲೆ ಬಾಂಗ್ಲಾದೇಶದ ಮಹಿಳೆ ಮತ್ತು ಪುರುಷನನ್ನು ಅಕ್ಟೋಬರ್ 14ರಂದು ಗಲ್ಲಿಗೇರಿಸಲಾಗಿದೆ. ಪ್ರಕರಣದಲ್ಲಿ ನ್ಯಾಯಾಲಯವು ಇಸ್ಲಾಮಿಕ್ ಕಾನೂನಿನ ಅಡಿಯಲ್ಲಿ ‘ತಅಝೀರ್’ (Ta’zir) ಶಿಕ್ಷೆ ವಿಧಿಸಿತ್ತು ಎಂದು ಸೌದಿ ಅರೇಬಿಯಾದ ಆಂತರಿಕ ಸಚಿವಾಲಯ ತಿಳಿಸಿದೆ. ಆದರೆ, ಆರೋಪಿತ ಕೃತ್ಯ ಏನು, ಘಟನೆ ಯಾವ ಮಸೀದಿಯಲ್ಲಿ ನಡೆದಿದೆ ಮತ್ತು ಇಬ್ಬರನ್ನು ಯಾವಾಗ ಬಂಧಿಸಲಾಗಿತ್ತು ಎಂಬ ವಿವರಗಳನ್ನು ಸಚಿವಾಲಯ ಬಹಿರಂಗಪಡಿಸಿಲ್ಲ.

- Advertisement -

ಬಾಂಗ್ಲಾದೇಶದ ಅಧಿಕಾರಿಗಳ ಪ್ರಕಾರ, ಮರಣದಂಡನೆ ಜಾರಿಗೂ ಮುನ್ನ ಸೌದಿ ಅರೇಬಿಯಾ ತನ್ನ ದೇಶಕ್ಕೆ ಅಧಿಕೃತ ಮಾಹಿತಿ ನೀಡಿರಲಿಲ್ಲ. ಹೀಗಾಗಿ, ಪ್ರಕರಣದ ಆರೋಪಗಳು, ನ್ಯಾಯಾಂಗ ಪ್ರಕ್ರಿಯೆ ಮತ್ತು ಶಿಕ್ಷೆಗೆ ಸಂಬಂಧಿಸಿದ ಸಂಪೂರ್ಣ ವಿವರಗಳನ್ನು ನೀಡುವಂತೆ ಬಾಂಗ್ಲಾದೇಶ ಸರ್ಕಾರ ಸೌದಿ ಅರೇಬಿಯಾವನ್ನು ಕೋರಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ವಿಜಯಪುರದಲ್ಲಿ ಜಿ.ಪಂ ತಾ.ಪಂ ಚುನಾವಣೆಯ ಕಾವು; AI ಪೋಸ್ಟರ್‌ಗಳಲ್ಲೂ...

ಚುನಾವಣೆಯ ದಿನಾಂಕ ಇನ್ನೂ ಪ್ರಕಟವಾಗಿಲ್ಲ. ಅಭ್ಯರ್ಥಿಗಳ ಅಂತಿಮ ಪಟ್ಟಿಯೂ ಸಿದ್ಧವಾಗಿಲ್ಲ. ಆದರೆ, ಗ್ರಾಮೀಣ ರಾಜಕಾರಣದಲ್ಲಿ ಮಾತ್ರ ಈಗಾಗಲೇ ಚುನಾವಣೆಯ ಕಾವು ಏರತೊಡಗಿದೆ. ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿ ಕ್ಷೇತ್ರಗಳ ಕರಡು ಮೀಸಲಾತಿ...

ಸ್ಟಿಂಗ್ ಆರೋಪದ ಸುತ್ತ ರಾಜಕೀಯ ಲೆಕ್ಕಾಚಾರ; ಸತ್ಯಾಸತ್ಯತೆ ಹೊಣೆಗಾರಿಕೆಯ...

ಸಿದ್ದರಾಮಯ್ಯ ಅವರ ನಿರಾಕರಣೆ, ಕುಮಾರಸ್ವಾಮಿ ಅವರ ಆರೋಪಗಳು, ಆರ್. ಅಶೋಕ್ ಅವರ ಹಣಕಾಸಿನ ಕುರಿತ ಹೇಳಿಕೆಗಳು ಮತ್ತು ಸರ್ಕಾರದ ತನಿಖೆಯ ಭರವಸೆ—ಇವೆಲ್ಲವೂ ಪ್ರಕರಣದ ವಿವಿಧ ಆಯಾಮಗಳನ್ನು ಪ್ರತಿನಿಧಿಸುತ್ತವೆ. ಆದರೆ ಇವುಗಳಲ್ಲಿ ಯಾವುದೂ ಸ್ವತಃ...

ಬಾಲಿವುಡ್‌ ಮೇಲೆ ಭೂಗತ ಲೋಕದ ಕರಿನೆರಳು: ದಾವೂದ್ ಇಬ್ರಾಹಿಂನಿಂದ...

ಒಂದು ಕಾಲದಲ್ಲಿ ಬಾಲಿವುಡ್ ಸಿನಿಮಾಗಳಿಗೆ ಹಣ ಹೂಡುತ್ತಿದ್ದ, ನಟ-ನಟಿಯರ ವೃತ್ತಿಜೀವನದ ಮೇಲೆ ಪ್ರಭಾವ ಬೀರುತ್ತಿದ್ದ ಭೂಗತ ಲೋಕ, ಈಗ ಗುಂಡಿನ ದಾಳಿ ಮತ್ತು ಜೀವಬೆದರಿಕೆಗಳ ಮೂಲಕ ಮತ್ತೊಮ್ಮೆ ತನ್ನ ಅಸ್ತಿತ್ವ ಪ್ರದರ್ಶಿಸುತ್ತಿದೆ. ದಾವೂದ್...

ಯಾರು ಆ ಇಬ್ಬರು?

ಸೌದಿ ಆಂತರಿಕ ಸಚಿವಾಲಯದ ಹೇಳಿಕೆಯನ್ನು ಉಲ್ಲೇಖಿಸಿ ಗಲ್ಫ್ ನ್ಯೂಸ್ ವರದಿ ಮಾಡಿರುವಂತೆ, ಮರಣದಂಡನೆಗೆ ಒಳಗಾದವರನ್ನು ನಜ್ರುಲ್ ಇಸ್ಲಾಂ ಅಬ್ದುಲ್ ಬಶೀರ್ ಮತ್ತು ಸಿತಿ ಅಖ್ತರ್ ಎಂದು ಗುರುತಿಸಲಾಗಿದೆ. ಇಬ್ಬರೂ ಬಾಂಗ್ಲಾದೇಶದ ಪ್ರಜೆಗಳು. ವಿವಿಧ ಮಾಧ್ಯಮಗಳಲ್ಲಿ ಅವರ ಹೆಸರುಗಳ ಕಾಗುಣಿತದಲ್ಲಿ ವ್ಯತ್ಯಾಸಗಳಿವೆ. ಕೆಲವು ಮಾಧ್ಯಮ ವರದಿಗಳು ಅವರನ್ನು ದಂಪತಿ ಎಂದು ಉಲ್ಲೇಖಿಸಿವೆ. ಆದರೆ, ಇಬ್ಬರೂ ಪರಸ್ಪರ ವಿವಾಹವಾಗಿದ್ದರೇ ಎಂಬುದು ಅಧಿಕೃತವಾಗಿ ದೃಢಪಟ್ಟಿಲ್ಲ. ಸೌದಿ ಆಂತರಿಕ ಸಚಿವಾಲಯ ಮಾತ್ರ ಅವರನ್ನು ಒಬ್ಬ ಪುರುಷ ಮತ್ತು ಒಬ್ಬ ಮಹಿಳೆ ಎಂದು ವಿವರಿಸಿದೆ. ಭದ್ರತಾ ಅಧಿಕಾರಿಗಳು ಇಬ್ಬರನ್ನು ಬಂಧಿಸಿ, ತನಿಖೆಯ ಬಳಿಕ ಆರೋಪಗಳನ್ನು ದಾಖಲಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಆರೋಪಗಳು ಸಾಬೀತಾಗಿವೆ ಎಂದು ಪರಿಗಣಿಸಿದ ನ್ಯಾಯಾಲಯ ಮರಣದಂಡನೆ ವಿಧಿಸಿತ್ತು ಎಂದು ವರದಿಗಳು ತಿಳಿಸಿವೆ. ಮಸೀದಿಯ ಪಾವಿತ್ರ್ಯಕ್ಕೆ ಧಕ್ಕೆ ತಂದಿರುವುದು, ಕೃತ್ಯದ ಗಂಭೀರತೆ ಮತ್ತು ಅದು ನಡೆದ ಸಂದರ್ಭಗಳನ್ನು ಶಿಕ್ಷೆಗೆ ಕಾರಣವಾಗಿ ಉಲ್ಲೇಖಿಸಲಾಗಿದೆ.

ಗಲ್ಫ್ ನ್ಯೂಸ್ ವರದಿಯ ಪ್ರಕಾರ, ಸಂಬಂಧಿತ ನ್ಯಾಯಾಂಗ ಪ್ರಾಧಿಕಾರವು ತೀರ್ಪನ್ನು ಎತ್ತಿಹಿಡಿದ ಬಳಿಕ ಶಿಕ್ಷೆ ಅಂತಿಮಗೊಂಡಿತ್ತು. ನಂತರ ರಾಜಾಜ್ಞೆಯ ಮೂಲಕ ಮರಣದಂಡನೆ ಜಾರಿಗೆ ಅನುಮೋದನೆ ದೊರೆತಿತ್ತು ಎಂದು ವರದಿಯಾಗಿದೆ.

ʼತಅಝೀರ್’ ಶಿಕ್ಷೆ ಎಂದರೇನು?

ಸೌದಿ ಆಂತರಿಕ ಸಚಿವಾಲಯವು ಈ ಪ್ರಕರಣದಲ್ಲಿ ನಿರ್ದಿಷ್ಟ ಕಾನೂನು ಅಥವಾ ಕಾಯ್ದೆಯ ಹೆಸರನ್ನು ಉಲ್ಲೇಖಿಸಿಲ್ಲ. ಇಸ್ಲಾಮಿಕ್ ಕಾನೂನಿನ ಅಡಿಯಲ್ಲಿ ನ್ಯಾಯಾಧೀಶರ ವಿವೇಚನೆಗೆ ಒಳಪಡುವ ‘ತಅಝೀರ್’ ಶಿಕ್ಷೆಯಡಿ ಮರಣದಂಡನೆ ವಿಧಿಸಲಾಗಿದೆ ಎಂದು ಮಾತ್ರ ತಿಳಿಸಿದೆ.

ಇಸ್ಲಾಮಿಕ್ ಕಾನೂನಿನ ಶಿಕ್ಷೆಗಳನ್ನು ಸಾಮಾನ್ಯವಾಗಿ ಮೂರು ಪ್ರಮುಖ ವಿಭಾಗಗಳಾಗಿ ವಿವರಿಸಲಾಗುತ್ತದೆ.

  • ಹದ್ದ್ (Hadd): ಕೆಲವು ನಿರ್ದಿಷ್ಟ ಅಪರಾಧಗಳಿಗೆ ಧಾರ್ಮಿಕ ಕಾನೂನಿನಲ್ಲಿ ನಿಗದಿಪಡಿಸಲಾದ ಶಿಕ್ಷೆಗಳು.
  • ಕಿಸಾಸ್ (Qisas): ಕೊಲೆ ಸೇರಿದಂತೆ ಕೆಲವು ಅಪರಾಧಗಳಿಗೆ ಸಂಬಂಧಿಸಿದ ಪ್ರತೀಕಾರ ಅಥವಾ ಸಮಾನ ಶಿಕ್ಷೆಯ ತತ್ವ.
  • ತಅಝೀರ್ (Ta’zir): ನಿರ್ದಿಷ್ಟ ಅಪರಾಧ ಅಥವಾ ಶಿಕ್ಷೆಯನ್ನು ಮುಂಚಿತವಾಗಿ ನಿಗದಿಪಡಿಸದ ಸಂದರ್ಭಗಳಲ್ಲಿ ನ್ಯಾಯಾಧೀಶರು ನಿರ್ಧರಿಸುವ ಶಿಕ್ಷೆ.

ಸೌದಿ ಅರೇಬಿಯಾದಲ್ಲಿ ಸಮಗ್ರವಾಗಿ ಸಂಹಿತೀಕರಿಸಿದ ದಂಡಸಂಹಿತೆ ಇಲ್ಲ ಎಂದು ಮಾನವ ಹಕ್ಕುಗಳ ಸಂಘಟನೆ MENA Rights Group ತಿಳಿಸಿದೆ. ನ್ಯಾಯಾಧೀಶರು ಇಸ್ಲಾಮಿಕ್ ಕಾನೂನಿನ ತಮ್ಮ ವ್ಯಾಖ್ಯಾನದ ಆಧಾರದಲ್ಲಿ ಅಪರಾಧ ಮತ್ತು ಶಿಕ್ಷೆಯನ್ನು ನಿರ್ಧರಿಸುವ ವ್ಯವಸ್ಥೆ ಅಲ್ಲಿ ಜಾರಿಯಲ್ಲಿದೆ ಎಂದು ಮಾನವ ಹಕ್ಕುಗಳ ಸಂಘಟನೆಗಳು ಹೇಳಿವೆ.

2021ರ ಫೆಬ್ರವರಿಯಲ್ಲಿ ಸೌದಿ ಅರೇಬಿಯಾ, ನ್ಯಾಯಾಧೀಶರು ತಮ್ಮ ವಿವೇಚನೆಯಿಂದ ನೀಡುವ ಶಿಕ್ಷೆಗಳಿಗೆ ಸಂಬಂಧಿಸಿದ ಅಪರಾಧಗಳನ್ನು ಸ್ಪಷ್ಟವಾಗಿ ದಾಖಲಿಸಲು ಹೊಸ ದಂಡಸಂಹಿತೆ ರೂಪಿಸುವುದಾಗಿ ತಿಳಿಸಿತ್ತು. ಆದರೆ, ಈ ಕಾನೂನು ಜಾರಿಗೆ ಬಂದಿದೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಅಮ್ನೆಸ್ಟಿ ಇಂಟರ್‌ನ್ಯಾಷನಲ್ ಪರಿಶೀಲಿಸಿದ ಕರಡು ಪ್ರಕಾರ, ಇಂತಹ ಪ್ರಕರಣಗಳಲ್ಲಿ ಮರಣದಂಡನೆ ವಿಧಿಸುವುದಕ್ಕೆ ಯಾವುದೇ ಸ್ಪಷ್ಟ ಮಿತಿ ಹಾಕಿರಲಿಲ್ಲ ಎಂಬ ಆತಂಕವನ್ನು ಸಂಘಟನೆ ವ್ಯಕ್ತಪಡಿಸಿತ್ತು.

ಜೆಡ್ಡಾದಲ್ಲಿರುವ ಬಾಂಗ್ಲಾದೇಶದ ಕಾನ್ಸುಲೇಟ್ ಜನರಲ್‌ಗೆ ಮರಣದಂಡನೆ ಜಾರಿಗೊಳಿಸುವ ಮೊದಲು ಮಾಹಿತಿ ನೀಡಿರಲಿಲ್ಲ ಎಂದು ದಿ ಡೈಲಿ ಸ್ಟಾರ್ ವರದಿ ಮಾಡಿದೆ. ಪ್ರಥಮ್ ಆಲೋ ವರದಿಯ ಪ್ರಕಾರ, ಬಾಂಗ್ಲಾದೇಶ ಸರ್ಕಾರವು ಮಾಧ್ಯಮ ವರದಿಗಳ ಮೂಲಕವೇ ಈ ಬೆಳವಣಿಗೆಯನ್ನು ತಿಳಿದುಕೊಂಡಿತ್ತು.

ಬಾಂಗ್ಲಾದೇಶದ ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವರಾದ ಶಮಾ ಒಬೈದ್ ಇಸ್ಲಾಂ ಅವರು, ಇಬ್ಬರ ವಿರುದ್ಧದ ಆರೋಪಗಳು ಮತ್ತು ಅನುಸರಿಸಲಾದ ಕಾನೂನು ಪ್ರಕ್ರಿಯೆಯ ಕುರಿತು ಸೌದಿ ಅರೇಬಿಯಾದಿಂದ ವಿವರಣೆ ಕೇಳಲಾಗಿದೆ ಎಂದು ತಿಳಿಸಿದ್ದಾರೆ. ವಿವರಗಳು ದೊರೆತ ಬಳಿಕ ಮುಂದಿನ ಕ್ರಮಗಳ ಬಗ್ಗೆ ನಿರ್ಧರಿಸಲಾಗುವುದು. ಮೃತದೇಹಗಳನ್ನು ಸ್ವದೇಶಕ್ಕೆ ತರಿಸುವ ವಿಚಾರವೂ ಈ ನಿರ್ಧಾರದ ಭಾಗವಾಗಿರಲಿದೆ ಎಂದು ಅವರು ಹೇಳಿದ್ದಾರೆ.

ಈ ಸಂಬಂಧ ಬಾಂಗ್ಲಾದೇಶ ಸರ್ಕಾರವು ಸೌದಿ ವಿದೇಶಾಂಗ ಸಚಿವಾಲಯಕ್ಕೆ ಅಧಿಕೃತ ರಾಜತಾಂತ್ರಿಕ ಸಂದೇಶವನ್ನೂ ಕಳುಹಿಸಿದೆ. ದಿ ಡೈಲಿ ಸ್ಟಾರ್ ವರದಿಯ ಪ್ರಕಾರ, ಜೆಡ್ಡಾದಲ್ಲಿರುವ ಬಾಂಗ್ಲಾದೇಶದ ಕಾನ್ಸುಲೇಟ್ ಕೋರಿಕೆಯ ಮೇರೆಗೆ ಸೌದಿ ಅಧಿಕಾರಿಗಳು ಹಂಚಿಕೊಂಡಿದ್ದ ಕೈದಿಗಳ ಪಟ್ಟಿಯಲ್ಲಿ ಈ ಇಬ್ಬರ ಹೆಸರುಗಳಿದ್ದವು. ಆದರೆ, ಆ ಪಟ್ಟಿಯಲ್ಲಿ ಅವರಿಗೆ ಮರಣದಂಡನೆ ವಿಧಿಸಿರುವುದಾಗಿ ಉಲ್ಲೇಖಿಸಿರಲಿಲ್ಲ. ಇನ್ನೊಂದೆಡೆ, ಜೆಡ್ಡಾದ ನ್ಯಾಯಾಲಯದಲ್ಲಿ ಹಲವು ತಿಂಗಳುಗಳಿಂದ ವಿಚಾರಣೆ ನಡೆಯುತ್ತಿತ್ತು ಎಂದು ಖಾಸಗಿ ಮೂಲಗಳನ್ನು ಉಲ್ಲೇಖಿಸಿ ಢಾಕಾ ಟ್ರಿಬ್ಯೂನ್ ವರದಿ ಮಾಡಿದೆ. ಇಬ್ಬರು ತಮ್ಮ ದೇಶದ ಕಾನ್ಸುಲೇಟ್‌ಗೆ ಮಾಹಿತಿ ನೀಡುವಂತೆ ಕೋರಿದ್ದರೇ, ಅವರಿಗೆ ವಕೀಲರ ನೆರವು ದೊರೆತಿತ್ತೇ ಮತ್ತು ಮೇಲ್ಮನವಿ ಸಲ್ಲಿಸಲು ಅವಕಾಶವಿತ್ತೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಬಾಂಗ್ಲಾದೇಶ ಮತ್ತು ಸೌದಿ ಅರೇಬಿಯಾ ಎರಡೂ ದೇಶಗಳು ರಾಜತಾಂತ್ರಿಕ ಸಂಬಂಧಗಳಿಗೆ ಸಂಬಂಧಿಸಿದ ವಿಯೆನ್ನಾ ಒಪ್ಪಂದದ (Vienna Convention on Consular Relations) ಸದಸ್ಯ ರಾಷ್ಟ್ರಗಳಾಗಿವೆ.

ಬಿಬಿಸಿ ವರದಿಯ ಪ್ರಕಾರ, ಸೌದಿ ಅರೇಬಿಯಾದಲ್ಲಿ ಮೂರು ಮಿಲಿಯನ್‌ಗೂ ಹೆಚ್ಚು ಬಾಂಗ್ಲಾದೇಶದ ಪ್ರಜೆಗಳು ವಾಸಿಸುತ್ತಿದ್ದು, ಉದ್ಯೋಗ ಮಾಡುತ್ತಿದ್ದಾರೆ. ಇವರಲ್ಲಿ ಹೆಚ್ಚಿನವರು ಕಡಿಮೆ ವೇತನದ ಉದ್ಯೋಗಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಇಬ್ಬರು ಬಾಂಗ್ಲಾದೇಶಿಗರ ಮರಣದಂಡನೆ ಸುದ್ದಿ ಆ ದೇಶದಲ್ಲಿ ಆತಂಕ ಮೂಡಿಸಿದೆ. ವಿದೇಶದಲ್ಲಿ ಕೆಲಸ ಮಾಡುವ ತನ್ನ ಪ್ರಜೆಗಳಿಗೆ ಸಂಬಂಧಿಸಿದ ಕಾನೂನು ಪ್ರಕ್ರಿಯೆ, ರಾಜತಾಂತ್ರಿಕ ನೆರವು ಮತ್ತು ಮರಣದಂಡನೆಗೂ ಮುನ್ನ ಮಾಹಿತಿ ನೀಡುವ ವಿಚಾರಗಳು ಮತ್ತೆ ಚರ್ಚೆಗೆ ಬಂದಿವೆ.

ಇದನ್ನೂ ಓದಿ: ಚಂದ್ರದರ್ಶನ ಹಿನ್ನೆಲೆ: ಸೌದಿ ಅರೇಬಿಯಾದಲ್ಲಿ ಫೆ.18ರಿಂದ ಪವಿತ್ರ ರಮಝಾನ್ ಉಪವಾಸ ಆರಂಭ

ಈ ಪ್ರಕರಣದಲ್ಲಿ, ಮಸೀದಿಯೊಳಗೆ ಎಸಗಿದ್ದಾರೆ ಎನ್ನಲಾದ ಅನುಚಿತ ಕೃತ್ಯ ಯಾವುದು?, ಘಟನೆ ಮೆಕ್ಕಾದ ಯಾವ ಮಸೀದಿಯಲ್ಲಿ ನಡೆದಿದೆ?, ಇಬ್ಬರನ್ನು ಯಾವಾಗ ಬಂಧಿಸಲಾಯಿತು ಮತ್ತು ವಿಚಾರಣೆ ಯಾವಾಗ ನಡೆಯಿತು?, ಅವರಿಗೆ ವಕೀಲರ ನೆರವು ದೊರೆತಿತ್ತೇ?, ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಲು ಅವಕಾಶ ನೀಡಲಾಗಿತ್ತೇ?, ಇಬ್ಬರೂ ಪರಸ್ಪರ ವಿವಾಹವಾಗಿದ್ದರೇ?, ಮರಣದಂಡನೆಗೂ ಮುನ್ನ ಬಾಂಗ್ಲಾದೇಶದ ಅಧಿಕಾರಿಗಳಿಗೆ ಮಾಹಿತಿ ನೀಡದಿರಲು ಕಾರಣವೇನು? ಎಂಬಿತರೆ ಹಲವು ಪ್ರಮುಖ ವಿವರಗಳು ಇನ್ನೂ ಬಹಿರಂಗವಾಗಿಲ್ಲ.

ಸೌದಿ ಅರೇಬಿಯಾದ ಆಂತರಿಕ ಸಚಿವಾಲಯದ ಹೇಳಿಕೆಯಲ್ಲಿ ಈ ಪ್ರಶ್ನೆಗಳಿಗೆ ಉತ್ತರಗಳಿಲ್ಲ ಎಂದು ದಿ ಡೈಲಿ ಸ್ಟಾರ್ ವರದಿ ಮಾಡಿದೆ. ಪ್ರಕರಣದ ಕುರಿತು ಅಧಿಕೃತ ಮಾಹಿತಿ ದೊರೆಯುವವರೆಗೆ ಬಾಂಗ್ಲಾದೇಶ ಸರ್ಕಾರ ಮುಂದಿನ ಕ್ರಮಗಳ ಬಗ್ಗೆ ನಿರ್ಧಾರ ಕೈಗೊಳ್ಳುವ ಸಾಧ್ಯತೆಯಿದೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ವನ್ಯಜೀವಿಗಳ ಸಂಖ್ಯೆಯಲ್ಲಿ ಶೇ. 73ರಷ್ಟು ಭಾರಿ ಕುಸಿತ; ಭೂಮಿಯ ಉಳಿವಿಗೀಗ ‘ಭರವಸೆಯ ವಿಜ್ಞಾನ’ವೇ ದಾರಿ

​"ನಮ್ಮ ಕಣ್ಣೆದುರೇ ಪ್ರಕೃತಿಯ ಉಸಿರು ಕ್ಷೀಣಿಸುತ್ತಿದೆ. ಕೇವಲ ಐದು ದಶಕಗಳಲ್ಲಿ ಶೇ....

TMC ತೊರೆದಿದ್ದ ಯೂಸುಫ್ ಪಠಾಣ್‌ಗೆ ಗುಜರಾತ್ BJP ಸರ್ಕಾರದಿಂದ ಭಾರೀ ಮೌಲ್ಯದ ಭೂಮಿ ಉಡುಗೊರೆ!

ಮಾಜಿ ಕ್ರಿಕೆಟಿಗ, ಪಶ್ಚಿಮ ಬಂಗಾಳದ ಬಹರಾಂಪುರ ಲೋಕಸಭಾ ಕ್ಷೇತ್ರದ ಸಂಸದ ಯೂಸುಫ್...

ವಿಜಯಪುರದಲ್ಲಿ ಜಿ.ಪಂ ತಾ.ಪಂ ಚುನಾವಣೆಯ ಕಾವು; AI ಪೋಸ್ಟರ್‌ಗಳಲ್ಲೂ ಆಕಾಂಕ್ಷಿಗಳ ಅಬ್ಬರ!

ಚುನಾವಣೆಯ ದಿನಾಂಕ ಇನ್ನೂ ಪ್ರಕಟವಾಗಿಲ್ಲ. ಅಭ್ಯರ್ಥಿಗಳ ಅಂತಿಮ ಪಟ್ಟಿಯೂ ಸಿದ್ಧವಾಗಿಲ್ಲ. ಆದರೆ,...

ಕನ್ನಡಿಗರಲ್ಲಿ ಸಾವಿರ ಬಾರಿ ಕ್ಷಮೆ ಕೇಳಲೂ ಸಿದ್ಧ: ಸೋನು ನಿಗಮ್‌

ಪಹಲ್ಗಾಮ್‌ ಉಗ್ರರ ದಾಳಿ ಕುರಿತು ನೀಡಿದ್ದ ವಿವಾದಾತ್ಮಕ ಹೇಳಿಕೆಯ ಹಿನ್ನೆಲೆಯಲ್ಲಿ ಕನ್ನಡಿಗರ...