ಈ ದಿನ ಸಂಪಾದಕೀಯ | ಕಬ್ಬು ಬೆಳೆಗಾರರ ಬೇಡಿಕೆ ಬಗೆಹರಿಸಲಾಗದ ಬಿಕ್ಕಟ್ಟೇ?

Date:

ಕಬ್ಬು ಬೆಳೆದು ಕಾರ್ಖಾನೆಗಳಿಗೆ ಪೂರೈಸುವ ರೈತನಿಗೆ ತನ್ನ ಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯಬೇಕು ಎಂಬುದು ನ್ಯಾಯಸಮ್ಮತವಾದ ಬೇಡಿಕೆ. ಆದರೆ ಈ ಬೇಡಿಕೆ ಪ್ರತಿ ಹಂಗಾಮಿನಲ್ಲೂ ಪ್ರತಿಭಟನೆ, ಮಾತುಕತೆ, ಭರವಸೆ ಮತ್ತು ವಿಳಂಬಗಳ ಸುಳಿಯಲ್ಲಿ ಸಿಲುಕುತ್ತಿದೆ. ಇದಕ್ಕೆ ಪಕ್ಷ ರಾಜಕಾರಣ, ಸ್ವಾರ್ಥ ಮತ್ತು ಅಹಂ ಕೂಡ ಕಾರಣವಾಗುತ್ತಿದೆ.

ಕಬ್ಬು ಬೆಳೆಗಾರರ ಹೋರಾಟ ಮತ್ತೆ ಮತ್ತೆ ಬೀದಿಗೆ ಬರುತ್ತಿರುವುದು, ಗಡುವು ನೀಡುತ್ತಿರುವುದು ಕೇವಲ ಬೆಂಬಲ ಬೆಲೆಯ ಹೆಚ್ಚಳದ ಪ್ರಶ್ನೆಯಲ್ಲ. ಕಬ್ಬು ಉತ್ಪಾದನೆಯ ವೆಚ್ಚ, ಸಕ್ಕರೆ ಕಾರ್ಖಾನೆಗಳ ಆರ್ಥಿಕ ಹಿತಾಸಕ್ತಿ, ರೈತರ ಬದುಕು ಮತ್ತು ಸರ್ಕಾರಗಳ ಕೃಷಿ ನೀತಿಯ ನಡುವಿನ ಸಂಘರ್ಷದ ಪ್ರತಿಬಿಂಬವಿದು. ಕಬ್ಬು ಬೆಳೆದು ಕಾರ್ಖಾನೆಗಳಿಗೆ ಪೂರೈಸುವ ರೈತನಿಗೆ ತನ್ನ ಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯಬೇಕು ಎಂಬುದು ನ್ಯಾಯಸಮ್ಮತವಾದ ಬೇಡಿಕೆ. ಆದರೆ ಈ ಬೇಡಿಕೆ ಪ್ರತಿ ಹಂಗಾಮಿನಲ್ಲೂ ಪ್ರತಿಭಟನೆ, ಮಾತುಕತೆ, ಭರವಸೆ ಮತ್ತು ವಿಳಂಬಗಳ ಸುಳಿಯಲ್ಲಿ ಸಿಲುಕುತ್ತಿದೆ. ಅಷ್ಟಕ್ಕೂ ಈ ಬೇಡಿಕೆ ಬಗೆಹರಿಸಲಾಗದ ಬಿಕ್ಕಟ್ಟೇ? ಈ ಸಮಸ್ಯೆಗೆ ಪರಿಹಾರವೇ ಇಲ್ಲವೇ?

- Advertisement -

ಖಂಡಿತವಾಗಿಯೂ ಇದೆ. ಆದರೆ ಪರಿಹಾರ ಕಂಡುಕೊಳ್ಳಲು ಸರ್ಕಾರಗಳು ತೋರಬೇಕಾದ ರಾಜಕೀಯ ಇಚ್ಛಾಶಕ್ತಿ, ಆರ್ಥಿಕ ಪಾರದರ್ಶಕತೆ ಮತ್ತು ರೈತರ ಹಿತಾಸಕ್ತಿಗೆ ನೀಡಬೇಕಾದ ಆದ್ಯತೆ ಇಲ್ಲಿ ಮುಖ್ಯವಾಗಬೇಕಾಗುತ್ತದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ವಿಜಯಪುರದಲ್ಲಿ ಜಿ.ಪಂ ತಾ.ಪಂ ಚುನಾವಣೆಯ ಕಾವು; AI ಪೋಸ್ಟರ್‌ಗಳಲ್ಲೂ...

ಚುನಾವಣೆಯ ದಿನಾಂಕ ಇನ್ನೂ ಪ್ರಕಟವಾಗಿಲ್ಲ. ಅಭ್ಯರ್ಥಿಗಳ ಅಂತಿಮ ಪಟ್ಟಿಯೂ ಸಿದ್ಧವಾಗಿಲ್ಲ. ಆದರೆ, ಗ್ರಾಮೀಣ ರಾಜಕಾರಣದಲ್ಲಿ ಮಾತ್ರ ಈಗಾಗಲೇ ಚುನಾವಣೆಯ ಕಾವು ಏರತೊಡಗಿದೆ. ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿ ಕ್ಷೇತ್ರಗಳ ಕರಡು ಮೀಸಲಾತಿ...

ಸ್ಟಿಂಗ್ ಆರೋಪದ ಸುತ್ತ ರಾಜಕೀಯ ಲೆಕ್ಕಾಚಾರ; ಸತ್ಯಾಸತ್ಯತೆ ಹೊಣೆಗಾರಿಕೆಯ...

ಸಿದ್ದರಾಮಯ್ಯ ಅವರ ನಿರಾಕರಣೆ, ಕುಮಾರಸ್ವಾಮಿ ಅವರ ಆರೋಪಗಳು, ಆರ್. ಅಶೋಕ್ ಅವರ ಹಣಕಾಸಿನ ಕುರಿತ ಹೇಳಿಕೆಗಳು ಮತ್ತು ಸರ್ಕಾರದ ತನಿಖೆಯ ಭರವಸೆ—ಇವೆಲ್ಲವೂ ಪ್ರಕರಣದ ವಿವಿಧ ಆಯಾಮಗಳನ್ನು ಪ್ರತಿನಿಧಿಸುತ್ತವೆ. ಆದರೆ ಇವುಗಳಲ್ಲಿ ಯಾವುದೂ ಸ್ವತಃ...

ಬಾಲಿವುಡ್‌ ಮೇಲೆ ಭೂಗತ ಲೋಕದ ಕರಿನೆರಳು: ದಾವೂದ್ ಇಬ್ರಾಹಿಂನಿಂದ...

ಒಂದು ಕಾಲದಲ್ಲಿ ಬಾಲಿವುಡ್ ಸಿನಿಮಾಗಳಿಗೆ ಹಣ ಹೂಡುತ್ತಿದ್ದ, ನಟ-ನಟಿಯರ ವೃತ್ತಿಜೀವನದ ಮೇಲೆ ಪ್ರಭಾವ ಬೀರುತ್ತಿದ್ದ ಭೂಗತ ಲೋಕ, ಈಗ ಗುಂಡಿನ ದಾಳಿ ಮತ್ತು ಜೀವಬೆದರಿಕೆಗಳ ಮೂಲಕ ಮತ್ತೊಮ್ಮೆ ತನ್ನ ಅಸ್ತಿತ್ವ ಪ್ರದರ್ಶಿಸುತ್ತಿದೆ. ದಾವೂದ್...

ಅಧಿಕಾರಸ್ಥರ ಆದ್ಯತೆ, ಇಚ್ಛಾಶಕ್ತಿ ಮತ್ತು ಪಾರದರ್ಶಕತೆ ಹೇಗಿದೆ ಎನ್ನುವುದಕ್ಕೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಎಚ್.ಡಿ. ಕುಮಾರಸ್ವಾಮಿ, ಸಿಎಂ ಡಿ.ಕೆ. ಶಿವಕುಮಾರ್ ಮತ್ತು ಸಚಿವ ಲಕ್ಷ್ಮಣ ಸವದಿಯವರ ಹೇಳಿಕೆಗಳತ್ತ ಗಮನ ಹರಿಸಿದರೆ, ಎಲ್ಲವೂ ಸ್ಪಷ್ಟವಾಗುತ್ತದೆ.

ಕೇಂದ್ರ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣೆ ಸಚಿವರಾದ ಪ್ರಲ್ಹಾದ್ ಜೋಶಿಯವರನ್ನೇ ನೋಡಿ. ಅವರು ಮಾಧ್ಯಮಗಳ ಮುಂದೆ ನಿಂತು ಮಾತನಾಡಲು ಆರಂಭಿಸಿದರೆ, ಪತ್ರಕರ್ತರು ಕಬ್ಬು ಬೆಳೆಗಾರರ ಬೇಡಿಕೆಗಳ ಬಗ್ಗೆ ಪ್ರಶ್ನಿಸಿದರೆ, ಅವರ ಮುಖದಲ್ಲಿ ಕಿರುನಗೆ ಹೊಮ್ಮುತ್ತದೆ. ಆ ನಗೆಯ ಹಿಂದೆ, ಈ ಪತ್ರಕರ್ತರಿಗೆ ಪ್ರಶ್ನೆ ಕೇಳುವುದಕ್ಕೂ ಬರುವುದಿಲ್ಲ, ಆ ರೈತರಿಗೆ ಪ್ರತಿಭಟನೆ ಮಾಡುವುದು ಬಿಟ್ಟು ಬೇರೇನೂ ಕೆಲಸವಿಲ್ಲ ಎನ್ನುವ ವ್ಯಂಗ್ಯ, ಉಡಾಫೆ ಎದ್ದು ಕಾಣುತ್ತದೆ. ಸಮಸ್ಯೆ ಪರಿಹರಿಸುವುದಕ್ಕಿಂತ ಹೆಚ್ಚಾಗಿ ತಮ್ಮ ಪಾಂಡಿತ್ಯ ಪ್ರದರ್ಶನವೇ ಮೇಲುಗೈ ಸಾಧಿಸುತ್ತದೆ. ‘ಎಂಎಸ್‌ಪಿ ಅಂದರೆ ಕಬ್ಬಿನ ಕನಿಷ್ಠ ಬೆಂಬಲ ಬೆಲೆ ಅಲ್ಲ, ಅದು ಸಕ್ಕರೆ ಕನಿಷ್ಠ ಮಾರಾಟ ಬೆಲೆ’ ಎಂದು ಸರಿಪಡಿಸಲು ಯತ್ನಿಸಿ, ಮೂಲ ಸಮಸ್ಯೆ ಬಗೆಹರಿಸುವುದನ್ನು ನಯವಾಗಿ ನಿರಾಕರಿಸಿ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಾರೆ.

ಇದನ್ನು ಓದಿದ್ದೀರಾ?: ಕಬ್ಬು ಬೆಳೆಗಾರರ ಹೋರಾಟ 7ನೇ ದಿನಕ್ಕೆ ತಾತ್ಕಾಲಿಕ ಅಂತ್ಯ: ಬೇಡಿಕೆ ಈಡೇರಿಕೆಗೆ ನವೆಂಬರ್ 26ರ ಗಡುವು

ಸಕ್ಕರೆ ಕಾರ್ಖಾನೆ ಮಾಲೀಕ ಮತ್ತು ಸಹಕಾರ ಸಚಿವ ಲಕ್ಷ್ಮಣ ಸವದಿಯವರು, ‘ರಾಜ್ಯದ ಸಕ್ಕರೆ ಕಾರ್ಖಾನೆಗಳಿಂದ ಎಥೆನಾಲ್ ಖರೀದಿಸುತ್ತಿರುವುದು ಶೇ. 27ರಷ್ಟು ಮಾತ್ರ. ಆದರೆ ಉತ್ತರಪ್ರದೇಶದಿಂದ ಶೇ.80, ಮಹಾರಾಷ್ಟ್ರದಿಂದ ಶೇ.60ರಷ್ಟು ಖರೀದಿಸುತ್ತಿದೆ. ನಮ್ಮಿಂದ ಲೀಟರ್ ಗೆ ರೂ. 60ರಂತೆ ಖರೀದಿಸಿ, ಗ್ರಾಹಕರಿಗೆ ಲೀಟರ್ ಗೆ 110ಕ್ಕೆ ಮಾರಾಟ ಮಾಡುತ್ತಾರೆ. ಇದರಿಂದ ತೈಲ ಸಂಸ್ಕರಣಾ ಘಟಕಗಳಿಗೆ ಲಾಭವಾಗಿದೆ, ಕೇಂದ್ರ ಸರ್ಕಾರ ಅವರ ಪರವಾಗಿದೆ’ ಎಂದು ಕೇಂದ್ರವನ್ನು ದೂರುತ್ತಾರೆ. ಅಸಲಿಗೆ ಇವರ ಕಾರ್ಖಾನೆಯ ಎಥೆನಾಲ್ ಅನ್ನು 51ರಿಂದ 71 ರೂ.ಗೆ ಹಾಗೂ ಸಕ್ಕರೆಯನ್ನು ಕೆಜಿಗೆ 51 ರೂ.ಗೆ ಮಾರಾಟ ಮಾಡಲಾಗುತ್ತಿದೆ.

ಲಕ್ಷ್ಮಣ ಸವದಿ ದೂರಿಗೆ ಉತ್ತರಿಸಿರುವ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ‘ಮೊದಲು 38 ಕೋಟಿ ಲೀಟರ್ ಎಥೆನಾಲ್ ಖರೀದಿ ಮಾಡುತ್ತಿದ್ದರು. ಈಗ 1,200 ಕೋಟಿ ಲೀಟರ್ ಎಥೆನಾಲ್ ಖರೀದಿ ಮಾಡುತ್ತಿದ್ದೇವೆ’ ಎಂದು ಕಾರ್ಖಾನೆಗಳಿಗೆ ಸಿಗುತ್ತಿರುವ ಲಾಭವನ್ನು ಪರೋಕ್ಷವಾಗಿ ಬಿಚ್ಚಿಡುತ್ತಾರೆ. ಆದರೆ, ಯುಪಿ, ಮಹಾರಾಷ್ಟ್ರದಿಂದ ಹೆಚ್ಚಿನ ಪ್ರಮಾಣದಲ್ಲಿ ಖರೀದಿಸುತ್ತಿರುವ, ಕರ್ನಾಟಕವನ್ನು ಕಡೆಗಣಿಸುತ್ತಿರುವ ಬಗ್ಗೆ ಮಾತೇ ಆಡುವುದಿಲ್ಲ.

ಇನ್ನು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿಯವರು, ‘ರಾಜ್ಯದ 217 ತಾಲೂಕುಗಳು ಭೀಕರ ಬರಗಾಲಕ್ಕೆ ತುತ್ತಾಗಿವೆ. ಸರ್ಕಾರ ರೈತರ ನೆರವಿಗೆ ಧಾವಿಸಬೇಕು. ನಾನು ಸಿಎಂ ಆಗಿದ್ದಾಗ ರೈತರ ಸಾಲ ಮನ್ನಾ ಮಾಡಿದ್ದೆ, ಈ ಸರ್ಕಾರವೂ ಮಾಡಲಿ’ ಎಂದು ತಮ್ಮ ಸಾಧನೆ ಹೇಳಿಕೊಳ್ಳುತ್ತಲೇ ಹಾಲಿ ಸಿಎಂ ಡಿ.ಕೆ. ಶಿವಕುಮಾರ್ ಅವರಿಗೆ ಟಾಂಗ್ ಕೊಡುತ್ತಾರೆ. ಆದರೆ ಕೇಂದ್ರ ಸಚಿವರಾಗಿ, ರಾಜ್ಯದ ರೈತರಿಗೆ ನಾನು ಏನು ಮಾಡಬಹುದು ಎಂಬುದನ್ನು ಪ್ರಜ್ಞಾಪೂರ್ವಕವಾಗಿ ಮರೆಯುತ್ತಾರೆ.

ಇದಕ್ಕೆಲ್ಲ ಉತ್ತರಿಸಬೇಕಾದ, ಪರಿಹಾರ ಸೂಚಿಸಬೇಕಾದ ರಾಜ್ಯದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ‘ಕರ್ನಾಟಕದ ಕಬ್ಬು ಬೆಳೆಗಾರರ ಬೇಡಿಕೆಗಳಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ತುರ್ತಾಗಿ ಮಧ್ಯಪ್ರವೇಶಿಸಬೇಕು’ ಎಂದು ಪ್ರಧಾನಮಂತ್ರಿಗಳಿಗೆ ಪತ್ರ ಬರೆದು ಮನವಿ ಮಾಡಿಕೊಳ್ಳುವ ಮೂಲಕ ಹೆಗಲಮೇಲಿನ ಜವಾಬ್ದಾರಿಯನ್ನು ಕೇಂದ್ರದ ಮೇಲೆ ಹಾಕಿ ಅರುಗಾಗುತ್ತಾರೆ.

ಕಬ್ಬು ಬೆಳೆಗಾರರ ಕಷ್ಟವನ್ನು ಕೇವಲ ರೈತರು ಮತ್ತು ಸಕ್ಕರೆ ಕಾರ್ಖಾನೆಗಳ ನಡುವಿನ ಬೆಲೆ ವಿವಾದವೆಂದು ನೋಡುವುದು ಸರಿಯಲ್ಲ. ಕಬ್ಬು ಬೆಳೆಯಲು ರೈತ ಮಾಡಿದ ಹೂಡಿಕೆ, ಕಾರ್ಮಿಕರ ವೆಚ್ಚ, ನೀರು, ರಸಗೊಬ್ಬರ, ಸಾಗಣೆ ಮತ್ತು ಸಾಲದ ಬಡ್ಡಿಯನ್ನು ಲೆಕ್ಕಹಾಕದೆ ಬೆಲೆಯ ಕುರಿತು ಚರ್ಚಿಸುವುದರಿಂದ ಸಮಸ್ಯೆ ಬಗೆಹರಿಯುವುದಿಲ್ಲ.
ಹಾಗೆಯೇ ಕಾರ್ಖಾನೆಗಳು ಕಬ್ಬು ಅರೆಯುವಿಕೆ, ಸಕ್ಕರೆ ಉತ್ಪಾದನೆ, ಉಪಉತ್ಪನ್ನಗಳ ವಹಿವಾಟು ಮತ್ತು ಮಾರುಕಟ್ಟೆಯ ಏರಿಳಿತಗಳನ್ನು ಮುಂದಿಟ್ಟು ತಮ್ಮ ಆರ್ಥಿಕ ಸ್ಥಿತಿಯನ್ನು ಸಮರ್ಥಿಸಿಕೊಳ್ಳುವುದನ್ನು ಕಾರ್ಖಾನೆ ಮಾಲೀಕರೂ ಬಿಡುವುದಿಲ್ಲ. ಈ ಎರಡು ಹಿತಾಸಕ್ತಿಗಳ ನಡುವೆ ನ್ಯಾಯಯುತ ಸಮತೋಲನ ಸಾಧಿಸುವ ಜವಾಬ್ದಾರಿ ಸರ್ಕಾರಗಳದ್ದು. ಕೇಂದ್ರ ಸಮಿತಿ ರಚಿಸಲಾಗಿದೆ ಎಂದು ರೈತರ ಮೂಗಿಗೆ ತುಪ್ಪ ಸವರಬಾರದು. ರಾಜ್ಯ ಸರ್ಕಾರ ಕೇಂದ್ರಕ್ಕೆ ನಿಯೋಗ ಕೊಂಡೊಯ್ಯಲಾಗುವುದು ಎಂದು ಜವಾಬ್ದಾರಿಯಿಂದ ಜಾರಿಕೊಳ್ಳಬಾರದು.

ಕೇಂದ್ರ ಕಬ್ಬಿನ ನ್ಯಾಯಸಮ್ಮತ ಬೆಲೆ(ಎಫ್ಆರ್‍‌ಪಿ) ಏರಿಸಿದರೆ, ರಾಜ್ಯ ಸಲಹಾ ಬೆಲೆ(ಎಸ್ಎಪಿ) ನಿಗದಿ ವಿಚಾರದಲ್ಲಿ ಒಂದು ತೀರ್ಮಾನಕ್ಕೆ ಬರಬೇಕು. ಸಕ್ಕರೆ ಬೆಲೆಯನ್ನು ವಾಣಿಜ್ಯ ಮತ್ತು ಗ್ರಾಹಕ ಬಳಕೆದಾರರಿಗೆ ದರ ನಿಗದಿ ಮಾಡಬೇಕು. ಒಂದು ಟನ್ ಕಬ್ಬಿನಿಂದ 100ರಿಂದ 110 ಕೆಜಿ ಸಕ್ಕರೆ, ಶೇ. 4ರಷ್ಟು ಎಥೆನಾಲ್, 4 ಕೆಜಿ ಮೊಲಾಸಿಸ್, 4 ಚೀಲ ಸಾವಯವ ಗೊಬ್ಬರ, ಸಿಪ್ಪೆಯಿಂದ ವಿದ್ಯುತ್ ಉತ್ಪಾದನೆಗೆ ಇಂಧನ ಸಿಗುತ್ತದೆ. ಈ ನಿಟ್ಟಿನಲ್ಲಿ ಸಕ್ಕರೆ ಕಾರ್ಖಾನೆಗಳು ಲಾಭ-ನಷ್ಟದ ಲೆಕ್ಕಪತ್ರವನ್ನು ಸಾರ್ವಜನಿಕ ಅವಗಾಹನೆಗೆ ತೆರೆದಿಡಬೇಕು.

ಇದನ್ನು ಓದಿದ್ದೀರಾ?: ರಾಸಾಯನಿಕಗಳಿಲ್ಲದೆ ಎಕರೆಗೆ 80 ಟನ್ ಕಬ್ಬು ಬೆಳೆದು ಗಮನ ಸೆಳೆದ ರೈತ ಮಹೇಶ್

ಆದರೆ ಕಾರ್ಖಾನೆ ಮಾಲೀಕರು ರೈತರಿಗೆ ಸಕ್ಕರೆ ಲೆಕ್ಕ ಮಾತ್ರ ತೋರಿಸಿ, ಮಿಕ್ಕದ್ದನ್ನು ಮರೆಮಾಚುತ್ತಾರೆ. ಇದು ಗೊತ್ತಿದ್ದೂ ಸರ್ಕಾರಗಳು ಸುಮ್ಮನೆ ಕೂರುತ್ತವೆ. ಏಕೆಂದರೆ ಹೆಚ್ಚಿನಪಾಲು ಕಾರ್ಖಾನೆ ಮಾಲೀಕರು ರಾಜಕಾರಣಿಗಳೇ ಆಗಿದ್ದಾರೆ. ಅವರು ಎಲ್ಲ ಪಕ್ಷಗಳಲ್ಲೂ ಇದ್ದಾರೆ. ಒಂದು ಟನ್ ಕಬ್ಬಿಗೆ ಈಗ ಕೊಡುತ್ತಿರುವುದು 3,300ರಿಂದ 3,500 ರೂ. ರೈತರು ಇದನ್ನು 5,500ಕ್ಕೆ ಏರಿಕೆ ಮಾಡಬೇಕೆಂದು ಬೇಡಿಕೆ ಇಟ್ಟಿದ್ದಾರೆ. 5,500 ಆಗದಿದ್ದರೂ ಕನಿಷ್ಠ 4,500 ರೂ.ಗಳನ್ನಾದರೂ ನೀಡಬೇಕು. ಇದು ನ್ಯಾಯಯುತ ಬೆಲೆ.

ಕಬ್ಬು ಬೆಳೆಗಾರರ ಬೇಡಿಕೆ ಬಗೆಹರಿಸಲಾಗದ ಬಿಕ್ಕಟ್ಟಲ್ಲ. ಬಗೆಹರಿಸಲು ಬೇಕಿರುವುದು ರೈತ ಪ್ರತಿನಿಧಿಗಳು, ಕಾರ್ಖಾನೆ ಮಾಲೀಕರು, ಕೇಂದ್ರ-ರಾಜ್ಯ ಸಚಿವರ ಪ್ರಾಮಾಣಿಕ ಪ್ರಯತ್ನ. ಪಕ್ಷ ರಾಜಕಾರಣ, ಸ್ವಾರ್ಥ ಮತ್ತು ಅಹಂ ಅನ್ನು ಪಕ್ಕಕ್ಕಿಟ್ಟು ಪಾರದರ್ಶಕ ಬೆಲೆ ನೀತಿ, ಪ್ರತಿ ಮೂರು ವರ್ಷಕ್ಕೊಮ್ಮೆ ಬೆಲೆ ಏರಿಕೆ ನಿರ್ಧಾರ ತೆಗೆದುಕೊಳ್ಳಬೇಕಿದೆ. ಇಷ್ಟನ್ನು ರೈತರು ನೀಡಿರುವ ಅ. 26ರ ಗಡುವಿನೊಳಗೆ, ಮಾಡಬೇಕಿದೆ. ಮಾಡದಿದ್ದರೆ, ಅನ್ನದಾತನ ಪರ ಸರ್ಕಾರಗಳು ಇಲ್ಲ ಎನ್ನುವುದು; ಕೇಂದ್ರ-ರಾಜ್ಯ ಸಚಿವರು ಆಡಳಿತ ಮಾಡಲು ಬಾರದ ಅಡ್ನಾಡಿಗಳು ಎನ್ನುವುದು ಸಾಬೀತಾಗುತ್ತದೆ.

WhatsApp Image 2025 11 17 at 3.23.18 PM
ಈ ದಿನ ಸಂಪಾದಕೀಯ
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ವಿಜಯಪುರ | ಸಾಧಕ ಗಣ್ಯರಿಗೆ ರಾಜ್ಯೋತ್ಸವ ಸನ್ಮಾನದ ಗೌರವ; ಅರ್ಜಿ ಆಹ್ವಾನ

2026 ನೇ ಸಾಲಿನ ಕರ್ನಾಟಕ ರಾಜ್ಯೋತ್ಸವ ಅಂಗವಾಗಿ ನ. 1ರಂದು ವಿಜಯಪುರ...

ವನ್ಯಜೀವಿಗಳ ಸಂಖ್ಯೆಯಲ್ಲಿ ಶೇ. 73ರಷ್ಟು ಭಾರಿ ಕುಸಿತ; ಭೂಮಿಯ ಉಳಿವಿಗೀಗ ‘ಭರವಸೆಯ ವಿಜ್ಞಾನ’ವೇ ದಾರಿ

​"ನಮ್ಮ ಕಣ್ಣೆದುರೇ ಪ್ರಕೃತಿಯ ಉಸಿರು ಕ್ಷೀಣಿಸುತ್ತಿದೆ. ಕೇವಲ ಐದು ದಶಕಗಳಲ್ಲಿ ಶೇ....

ವಿಜಯಪುರದಲ್ಲಿ ಜಿ.ಪಂ ತಾ.ಪಂ ಚುನಾವಣೆಯ ಕಾವು; AI ಪೋಸ್ಟರ್‌ಗಳಲ್ಲೂ ಆಕಾಂಕ್ಷಿಗಳ ಅಬ್ಬರ!

ಚುನಾವಣೆಯ ದಿನಾಂಕ ಇನ್ನೂ ಪ್ರಕಟವಾಗಿಲ್ಲ. ಅಭ್ಯರ್ಥಿಗಳ ಅಂತಿಮ ಪಟ್ಟಿಯೂ ಸಿದ್ಧವಾಗಿಲ್ಲ. ಆದರೆ,...

ಕನ್ನಡಿಗರಲ್ಲಿ ಸಾವಿರ ಬಾರಿ ಕ್ಷಮೆ ಕೇಳಲೂ ಸಿದ್ಧ: ಸೋನು ನಿಗಮ್‌

ಪಹಲ್ಗಾಮ್‌ ಉಗ್ರರ ದಾಳಿ ಕುರಿತು ನೀಡಿದ್ದ ವಿವಾದಾತ್ಮಕ ಹೇಳಿಕೆಯ ಹಿನ್ನೆಲೆಯಲ್ಲಿ ಕನ್ನಡಿಗರ...