ಇಸ್ರೆಲ್ ಆಕ್ರಮಣದಿಂದ ನಿರಾಶ್ರಿತರಾಗಿರುವ ಪ್ಯಾಲೆಸ್ತೀನಿಯರ ಬದುಕು ಮತ್ತು ಭವಿಷ್ಯ ರೂಪಿಸುವ ನೆಪದಲ್ಲಿ ಗಾಜಾದಿಂದ ಓಡಿಸಿ, ಗಾಜಾವನ್ನು ರಿಯಲ್ ಎಸ್ಟೇಟ್ ಉದ್ಯಮಕ್ಕೆ ಒಗ್ಗುವಂತೆ ಪರಿವರ್ತಿಸಿ, ಅಲ್ಲಿ, ರಿವೇರಾ ಹೆಸರಿನಲ್ಲಿ ಕರಾವಳಿ ಪ್ರವಾಸೋದ್ಯಮ ಮಾಡಿ, ತಮ್ಮ ಸ್ವಾರ್ಥಕ್ಕೆ ಬಳಸಿಕೊಳ್ಳುವುದು ಅಮೆರಿಕ ಮತ್ತು ಇಸ್ರೇಲ್‌ನ ಸಂಚು...
ಕಳೆದ 15 ತಿಂಗಳುಗಳಿಂದ ಇಸ್ರೇಲ್ ದಾಳಿಯಿಂದ ಗಾಜಾ ನಲುಗಿಹೋಗಿದೆ. ಇಸ್ರೇಲ್‌ನ ಕ್ರೌರ್ಯದಿಂದಾಗಿ ಗಾಜಾದಲ್ಲಿ ಸುಮಾರು 45,000 ಪ್ಯಾಲೆಸ್ತೀನಿಯರು ಸಾವನ್ನಪ್ಪಿದ್ದಾರೆ. ಲಕ್ಷಾಂತರ ಮಂದಿ ನಿರಾಶ್ರಿತರಾಗಿದ್ದಾರೆ. ಇಸ್ರೇಲ್‌ನ ಅತ್ಯಂತ ಭಯಾನಕ ದಾಳಿಯಲ್ಲಿ ಜನರು ನಿತ್ಯ ನರಕಯಾತನೆ ಅನುಭವಿಸಿದ್ದಾರೆ. ಊಟಕ್ಕಾಗಿ, ವಸತಿಗಾಗಿ, ಔಷಧಿಗಾಗಿ ಪರದಾಡಿದ್ದಾರೆ. ತಮ್ಮ ಮಕ್ಕಳು, ಕುಟುಂಬದವರನ್ನು ಕಳೆದುಕೊಂಡಿದ್ದಾರೆ. ಸ್ವಂತ ಮನೆ, ಮನೆಯವರನ್ನು ಕಳೆದುಕೊಂಡು ಬೀದಿಪಾಲಾಗಿದ್ದಾರೆ. ಈಗ, ಗಾಜಾದಲ್ಲಿ ಕದನ ವಿರಾಮ ಘೋಷಿಸಲಾಗಿದೆ. ಆದರೆ, ಗಾಜಾವನ್ನು ಅಮೆರಿಕ ತನ್ನ ಸುಪರ್ದಿಗೆ ತೆಗೆದುಕೊಳ್ಳಲಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದಾರೆ.
ಸುದೀರ್ಘ ಯುದ್ಧ, ಇಸ್ರೇಲ್‌ನ ಕ್ರೌರ್ಯಕ್ಕೆ ತುತ್ತಾಗಿ ಈಗಷ್ಟೇ ಕದನ ವಿರಾಮ ಘೋಷಣೆಯಾಗಿದ್ದು, ಪ್ಯಾಲೆಸ್ತೀನಿಯರು ನಿಟ್ಟುಸಿರು ಬಿಡುತ್ತಿದ್ದಾರೆ. ತಮ್ಮ ನೆಲೆಗಳಿಗೆ ಮರಳಲು ಪ್ರಯತ್ನಿಸಿದ್ದಾರೆ. ಇದೇ ಹೊತ್ತಿನಲ್ಲಿ, ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಜೊತೆ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಟ್ರಂಪ್, ”ಪ್ಯಾಲೇಸ್ತೀನ್ ನಿರಾಶ್ರಿತರಿಗೆ ಬೇರೆಡೆ ಪುನರ್ವಸತಿಗೊಳಿಸಿ, ಆನಂತರ, ಯುದ್ಧಪೀಡಿತ ಗಾಜಾ ಪಟ್ಟಿಯನ್ನು ಅಮೆರಿಕ ಸ್ವಾಧೀನಕ್ಕೆ ಪಡೆಯಲಿದೆ. ಅಲ್ಲಿ ಉಳಿದಿರುವ ಅಪಾಯಕಾರಿ ಶಸ್ತ್ರಾಸ್ತ್ರಗಳನ್ನು ನಾಶ ಮಾಡಲಿದೆ. ನಾಶವಾದ ಕಟ್ಟಡಗಳನ್ನು ಪುನರ್‌ನಿರ್ಮಾಣ ಮಾಡಿ, ಇಡೀ ಪ್ರದೇಶವನ್ನು ಆರ್ಥಿಕ ಅಭಿವೃದ್ಧಿಯತ್ತ ಕೊಂಡೊಯ್ಯಲಿದೆ” ಎಂದಿದ್ದಾರೆ.
ಇನ್ನು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು, ”ಟ್ರಂಪ್ ಅವರು ಗಾಜಾಕ್ಕೆ ಭವಿಷ್ಯವನ್ನು ಕಲ್ಪಿಸುತ್ತಾರೆ. ರಿಪಬ್ಲಿಕನ್ ನಾಯಕರ ಕಲ್ಪನೆಯು ಇತಿಹಾಸವನ್ನ ಬದಲಾಯಿಸಬಲ್ಲದು” ಎಂದಿದ್ದಾರೆ.
ಈ ಇಬ್ಬರು ನಾಯಕರ ಹೇಳಿಕೆ ಆಘಾತಕಾರಿ ಸೂಚನೆ ಎಂಬಂತೆ ಹಲವು ದೇಶಗಳು ನೋಡುತ್ತಿವೆ. ಮಧ್ಯಪ್ರಾಚ್ಯದಲ್ಲಿ ಭೌಗೋಳಿಕ ರಾಜಕೀಯದ ಚಿತ್ರಣದ ಮೇಲೆ ಗಂಭೀರ ಪರಿಣಾಮ ಬೀರುವ ನಿರೀಕ್ಷೆ ಇದೆ ಎನ್ನಲಾಗುತ್ತಿದೆ. ಅಷ್ಟೇ ಅಲ್ಲ, ಟ್ರಂಪ್ ಹೇಳಿಕೆಯು ಗಾಜಾದಿಂದ ಸೈಲೆಂಟ್ಆಗಿಯೇ ಪ್ಯಾಲೆಸ್ತೀನಿಯರನ್ನು ಹೊರ ಹಾಕುವ ಹುನ್ನಾರವೆಂದು ಹೇಳಲಾಗುತ್ತಿದೆ. ಹೀಗಾಗಿಯೇ, ಟ್ರಂಪ್ ಹೇಳಿಕೆಯನ್ನ ಚೀನಾ, ಯುಕೆ, ಲೇಬರ್ ಪಾರ್ಟಿ ಖಂಡಿಸಿವೆ.
ಇನ್ನು ಅಮೆರಿಕಾ ಇಲ್ಲಿಯವರೆಗೂ ಹೇಳಿಕೊಂಡು ಬಂದಿದ್ದ ವಿದೇಶಿ ನೀತಿಯನ್ನು ಗಾಳಿಗೆ ತೂರಿ ಗಾಜಾವನ್ನು ವಶಪಡಿಸಿಕೊಳ್ಳಲು ಮುಂದಾಗಿದೆ. ಅಮೆರಿಕವನ್ನು ಮುಂದೆ ಬಿಟ್ಟು, ಗಾಜಾವನ್ನು ವಶಪಡಿಸಿಕೊಳ್ಳಲು ಇಸ್ರೇಲ್ ಸಂಚು ಹೆಣೆದಿದೆ ಎಂಬುದು ಸ್ಪಷ್ಟವಾಗಿ ಕಾಣಿಸುತ್ತಿದೆ.
“ಗಾಜಾದಿಂದ ಪ್ಯಾಲೆಸ್ತೀನಿಯನ್ನರನ್ನು ನೆರೆಯ ಈಜಿಪ್ಟ್ ಮತ್ತು ಜೋರ್ಡಾನ್‌ಗೆ ಸ್ಥಳಾಂತರಿಸಬೇಕು. ಆ ಎರಡೂ ರಾಷ್ಟ್ರಗಳ ಪ್ಯಾಲೆಸ್ತೀನಿಯರಿಗೆ ಸ್ಥಳ, ವಸತಿ, ಅಗತ್ಯ ಸೌಲಭ್ಯ, ಅವಕಾಶಗಳನ್ನು ನೀಡಬೇಕು” ಎಂಬುದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಸಲಹೆ. ಅಂದರೆ, ಪ್ಯಾಲೆಸ್ತೀನಿಯರನ್ನು ಸಂಪೂರ್ಣವಾಗಿ ಗಾಜಾದಿಂದ ಓಡಿಸಿ, ಆ ಪ್ರದೇಶವನ್ನು ಅಮೆರಿಕ ವಶಕ್ಕೆ ಪಡೆದುಕೊಳ್ಳುವುದು ಮತ್ತು ಆ ಮೂಲಕ ಪ್ಯಾಲೆಸ್ತೀನ್ಅನ್ನು ಪರೋಕ್ಷವಾಗಿ ಇಸ್ರೇಲ್ ಸ್ವಾಧೀನಕ್ಕೆ ಒಪ್ಪಿಸುವುದು ಎಂದರ್ಥ. ಹೀಗಾಗಿಯೇ, ಟ್ರಂಪ್ ಹೇಳಿಕೆಯನ್ನು ಅರಬ್ ರಾಷ್ಟ್ರಗಳು ಖಂಡಿಸಿವೆ.
ಇದು, ಟ್ರಂಪ್ 2ನೇ ಬಾರಿ ಗೆದ್ದ ಬಳಿಕ, ಇಸ್ರೇಲ್ ಮೇಲೆ ತಮ್ಮ ಪಾರಮ್ಯ ಮೆರೆಯುತ್ತಿದ್ದಾರೆ ಎಂದು ಬಣ್ಣಿಸಲಾಗಿದ್ದ ವಿಚಾರಕ್ಕೆ ವಿರುದ್ಧವಾಗಿ ಕಾಣುತ್ತಿದೆ. ಇಸ್ರೇಲ್ ಪ್ರಧಾನಿ ನೆತನ್ಯಾಹು ಅವರೇ ಟ್ರಂಪ್ ಮೇಲೆ ಒತ್ತಡ ಹೇರುತ್ತಿದ್ದಾರೆ ಎಂಬಂತೆ ಭಾಸವಾಗುತ್ತಿದೆ. ಟ್ರಂಪ್ ಅವರನ್ನು ಮುಂದೆ ಬಿಟ್ಟು, ಗಾಜಾ ಮೇಲೆ ತಮ್ಮ ಅಧಿಪತ್ಯ ಸಾಧಿಸುವುದೇ ನೆತನ್ಯಾಹು ಅವರ ಹುನ್ನಾರ ಎಂದು ಹೇಳಲಾಗುತ್ತಿದೆ. ಇಸ್ರೆಲ್ ಆಕ್ರಮಣದಿಂದ ನಿರಾಶ್ರಿತರಾಗಿರುವ ಪ್ಯಾಲೆಸ್ತೀನಿಯರನ್ನು ಗಾಜಾದಿಂದ ಓಡಿಸಿ, ಗಾಜಾವನ್ನು ರಿಯಲ್ ಎಸ್ಟೇಟ್ ಉದ್ಯಮಕ್ಕೆ ಒಗ್ಗುವಂತೆ ಪರಿವರ್ತಿಸಿ, ಅಲ್ಲಿ, ರಿವೇರಾ ಹೆಸರಿನಲ್ಲಿ ಕರಾವಳಿ ಪ್ರವಾಸೋದ್ಯಮ ಮಾಡಿ, ತಮ್ಮ ಸ್ವಾರ್ಥಕ್ಕೆ ಬಳಸಿಕೊಳ್ಳುವುದು ಅಮೆರಿಕ ಮತ್ತು ಇಸ್ರೇಲ್‌ನ ಸಂಚು ಎಂದು ಆರೋಪಿಸಲಾಗುತ್ತಿದೆ.
ಅಮೆರಿಕ ಮತ್ತು ಇಸ್ರೆಲ್‌ನ ಸಂಚನ್ನು ಅರಿತ ಈಜಿಪ್ಟ್, ಜೋರ್ಡಾನ್, ಸೌದಿ ಅರೇಬಿಯಾ, ಯುನೈಟೆಡ್ ಅರಬ್ ಎಮಿರೇಟ್ಸ್, ಕತಾರ್, ಪ್ಯಾಲೆಸ್ತೀನಿಯನ್ ಪ್ರಾಧಿಕಾರ ಮತ್ತು ಅರಬ್ ಲೀಗ್, ಶನಿವಾರ ಕೈರೋದಲ್ಲಿ ಉನ್ನತ ರಾಜತಾಂತ್ರಿಕರ ಸಭೆ ನಡೆಸಿವೆ. ಬಳಿಕ, ಜಂಟಿ ಹೇಳಿಕೆಯನ್ನು ಬಿಡುಗಡೆ ಮಾಡಿದ್ದು, “ಗಾಜಾದ ಜನರನ್ನು ಒಕ್ಕಲೆಬ್ಬಿಸುವುದು ಅನ್ಯಾಯ. ಬಲವಂತದ ವಲಸೆಯ ಮೂಲಕ ಪ್ಯಾಲೆಸ್ತೀನಿಯನ್ನರ ಸ್ಥಳಾಂತರವನ್ನು ದೃಢವಾಗಿ ತಿರಸ್ಕರಿಸಿದ್ದೇವೆ” ಎಂದು ಹೇಳಿವೆ.
ಒಟ್ಟಾರೆಯಾಗಿ ರಿಯಲ್ ಎಸ್ಟೇಟ್‌ನಿಂದ ಮುನ್ನೆಲೆಗೆ ಬಂದ ಟ್ರಂಪ್. ಇದೀಗ, ಗಾಜಾದಲ್ಲಿ ರಿಯಲ್ ಎಸ್ಟೇಟ್ ಬಿಸಿನೆಸ್ ನಡೆಸಲು ಹೊಂಚುಹಾಕಿದ್ದಾರೆ. ಒಂದು ರಾಷ್ಟ್ರವನ್ನು ಮತ್ತೊಂದು ರಾಷ್ಟ್ರ ತನ್ನ ಸ್ವಾರ್ಥಕ್ಕಾಗಿ ಆಕ್ರಮಿಸಿಕೊಳ್ಳುವುದು ಅತ್ಯಂತ ಖಂಡನೀಯ. ಮಾತ್ರವಲ್ಲ, ಇತಿಹಾಸದಲ್ಲಿಯೇ ಟ್ರಂಪ್ ರೀತಿ ಯಾರು ಸಹ ಮಾಡಿರಲಿಲ್ಲ. ಜನರನ್ನ ಒಂದು ಪ್ರದೇಶದಿಂದ ಒಕ್ಕಲೆಬ್ಬಿಸುವುದು ಅನ್ಯಾಯ. ಇದು ಎಲ್ಲ ಅಂತಾರಾಷ್ಟ್ರೀಯ ಕಾನೂನುಗಳಿಗೆ ವಿರುದ್ಧವಾಗಿದೆ. ಆದರೂ, ಟ್ರಂಪ್ ಇಂತಹ ಕೃತ್ಯಕ್ಕೆ ಕೈಹಾಕಿದ್ದಾರೆ.
ಈ ವರದಿ ಓದಿದ್ದೀರಾ?: ಪ್ಯಾರಿಸ್ ಒಪ್ಪಂದದಿಂದ ಹಿಂದೆ ಸರಿದ ಅಮೆರಿಕ; ಏನಿದು ಒಪ್ಪಂದ?
ಜಗತ್ತಿನ ಅತ್ಯಂತ ಶಕ್ತಿಶಾಲಿ ರಾಷ್ಟ್ರಗಳು ಅತ್ಯಂತ ದುರ್ಬಲ ದೇಶಗಳ ಮೇಲೆ ತಮ್ಮ ದಬ್ಬಾಳಿಕೆಯನ್ನು ನಡೆಸುವುದು ನಡೆಯುತ್ತಲೇ ಇದೆ. ವಿಶ್ವಸಂಸ್ಥೆ, ಅಂತಾರಾಷ್ಟ್ರೀಯ ಒಪ್ಪಂದಗಳು, ಕಾನೂನುಗಳು ಜಾರಿಯಲ್ಲಿರುವ ಈ ಸಂದರ್ಭದಲ್ಲಿಯೂ ಒಂದು ರಾಷ್ಟ್ರದ ಮೇಲೆ ಮತ್ತೊಂದು ರಾಷ್ಟ್ರ ಆಕ್ರಮಣ ನಡೆಸುವುದು, ತನ್ನ ಹಿಡಿತಕ್ಕೆ ತೆಗೆದುಕೊಳ್ಳುವುದು, ತನ್ನ ಧೋರಣೆಗಳನ್ನು ಹೇರುವುದು ಖಂಡನೀಯ. ಹೀಗಿರುವಾಗ, ಒಂದು ದೇಶದ ಜನರನ್ನು ಅವರದ್ದೇ ನೆಲದಿಂದ ಓಡಿಸಿ, ಹೊರಹಾಕಿ, ತನ್ನ ತೆಕ್ಕೆಗೆ ತೆಗೆದುಕೊಳ್ಳುವುದು ಭೀಕರ ಕೃತ್ಯವಲ್ಲದೆ ಮತ್ತೇನೂ ಇಲ್ಲ.
ಯುದ್ಧ ನಿಲ್ಲಿಸಿ, ಪುನರ್ವಸತಿ ಹೆಸರಿನಲ್ಲಿ ನಿರಾಶ್ರಿತರನ್ನು ದೇಶದಿಂದ ಹೊರಹಾಕಿ, ತಮ್ಮ ತೆಕ್ಕೆಗೆ ತೆಗೆದುಕೊಂಡು, ಇಡೀ ದೇಶವನ್ನೇ ಆಕ್ರಮಿಸಿಕೊಳ್ಳುವುದು ಇಸ್ರೇಲ್ ಅರ್ಥಾತ್ ನೆತನ್ಯಾಹು ಅವರ ಸಂಚು. ಅದಕ್ಕಾಗಿ, ನೆತನ್ಯಾಹು ಅವರೇ ಟ್ರಂಪ್ ಮೇಲೆ ಒತ್ತಡ ತಂದು, ಇಂತಹ ಹೇಳಿಕೆ ನೀಡುವಂತೆ ಮಾಡಿದ್ದಾರೆ. ಟ್ರಂಪ್ ಮತ್ತು ನೆತನ್ಯಾಹು ಒಗ್ಗೂಡಿ ಪ್ಯಾಲೆಸ್ತೀನಿಯರ ಬದುಕನ್ನು ಮತ್ತಷ್ಟು ದುರ್ಭರಗೊಳಿಸಲು ಮುಂದಾಗಿದ್ದಾರೆ.
ಇನ್ನು, ಪ್ಯಾಲೆಸ್ತೀನ್ ಅನ್ನು ತೆಕ್ಕೆಗೆ ತೆಗೆದುಕೊಂಡ ನಂತರ, ಈ ಯುದ್ಧ ಅಥವಾ ಇಸ್ರೇಲ್ ಮತ್ತು ಅಮೆರಿಕ ನಿರ್ದಾರಗಳು ಇಲ್ಲಿಗೇ ನಿಲ್ಲುವುದಿಲ್ಲ. ಯಾಕೆಂದರೆ, ಇಸ್ರೇಲ್ ಪ್ರಧಾನಿ ನೆತನ್ಯಾಹು ಮುಂದಿನ ದಿನಗಳಲ್ಲಿ ಇರಾನ್ ಮೇಲೆ ಯುದ್ಧ ಸಾರುವ ವಾತಾವರಣ ಸೃಷ್ಟಿಯಾಗಬಹುದು.
ಹೀಗಾಗಿ, ಇಡೀ ಜಗತ್ತು ಟ್ರಂಪ್-ನೆತನ್ಯಾಹು ಅವರ ಸಂಚನ್ನು ಅರಿತುಕೊಳ್ಳುವ ಅಗತ್ಯವಿದೆ. ಟ್ರಂಪ್ ಹೇಳಿಕೆ, ನಡೆಗಳನ್ನು ಖಂಡಿಸಬೇಕಿದೆ. ನಿರಾಶ್ರಿತ ಪ್ಯಾಲೆಸ್ತೀನಿಯರಿಗೆ ನ್ಯಾಯ ದೊರೆಯುವಂತೆ ಮಾಡಲು ಅಂತಾರಾಷ್ಟ್ರೀಯ ಒತ್ತಡ ತರುವ ತುರ್ತು ಅಗತ್ಯವಿದೆ.