ಪಹಲ್ಗಾಮ್ ದಾಳಿಗೆ ಪ್ರತೀಕಾರವಾಗಿ ಆಪರೇಷನ್ ಸಿಂಧೂರ ನಡೆಸಿದ ಬಳಿಕ ಭಾರತ ಮತ್ತು ಪಾಕಿಸ್ತಾನದ ಉದ್ವಿಗ್ನತೆ ಹೆಚ್ಚಿದೆ. ಈ ನಡುವೆ ಮಧ್ಯಪ್ರದೇಶ ಸರ್ಕಾರವು ರಾಜ್ಯಾದ್ಯಂತ ಪೊಲೀಸ್ ಸಿಬ್ಬಂದಿಯ ಎಲ್ಲಾ ರಜೆಗಳನ್ನು ರದ್ದುಗೊಳಿಸಿದೆ.
ಈ ಬಗ್ಗೆ ಶುಕ್ರವಾರ ಬೆಳಿಗ್ಗೆ ಮಧ್ಯಪ್ರದೇಶ ಪೊಲೀಸ್ ಪ್ರಧಾನ ಕಚೇರಿ (PHQ) ಅಧಿಸೂಚನೆಯನ್ನು ಹೊರಡಿಸಿದೆ. “ರಾಜ್ಯದಲ್ಲಿ ಪೊಲೀಸ್ ಸಿಬ್ಬಂದಿಯ ಎಲ್ಲಾ ರಜೆಗಳನ್ನು ರದ್ದುಪಡಿಸಲಾಗಿದೆ” ಎಂದು ತಿಳಿಸಿದೆ. ಹಾಗೆಯೇ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ (ಎಸ್‌ಪಿ) ಎಚ್ಚರಿಕೆ ನೀಡಿದೆ. ಯಾವುದೇ ತುರ್ತು ಪರಿಸ್ಥಿತಿಗೆ ಸಿದ್ಧತೆ ಮಾಡಿಕೊಳ್ಳುವಂತೆ ಸೂಚಿಸಿದೆ.
ಇದನ್ನು ಓದಿದ್ದೀರಾ? ಭಾರತ-ಪಾಕಿಸ್ತಾನ ಸಂಘರ್ಷ | ರಾಂಚಿಯಲ್ಲಿ ನಕಲಿ ಸೇನಾ ಸಮವಸ್ತ್ರಗಳು ಪತ್ತೆ
ಇನ್ನು ಪೊಲೀಸ್ ಮಹಾನಿರ್ದೇಶಕ ಕೈಲಾಶ್ ಮಕ್ವಾನಾ ಶುಕ್ರವಾರ ಎಲ್ಲಾ ಎಸ್‌ಪಿಗಳೊಂದಿಗೆ ವಿಡಿಯೋ ಕರೆ ಮೂಲಕ ಸಭೆ ನಡೆಸಲಿದ್ದಾರೆ. ಹಾಗೆಯೇ ಆಂತರಿಕ ಭದ್ರತೆಯನ್ನು ಪರಿಶೀಲಿಸಲು ಮತ್ತು ನಿರ್ದಿಷ್ಟ ಮಾರ್ಗಸೂಚಿಗಳನ್ನು ಹೊರಡಿಸಲು ನಿರ್ಧರಿಸಿದ್ದಾರೆ.
ಪೊಲೀಸರಿಗೆ ಗಸ್ತು ತಿರುಗುವ ಅವಧಿಯನ್ನು ವಿಸ್ತರಿಸುವಂತೆ ಮತ್ತು ಗ್ರಾಮಗಳಲ್ಲಿ ಜಾಗೃತಿ ಅಭಿಯಾನಗಳನ್ನು ನಡೆಸುವಂತೆ ಪೊಲೀಸ್ ಸಿಬ್ಬಂದಿಗಳಿಗೆ ನಿರ್ದೇಶನ ನೀಡಲಾಗಿದೆ. ಈ ನಡುವೆ ಸುಳ್ಳು ಮಾಹಿತಿ ಹರಡುವುದನ್ನು ತಡೆಯಲೂ ಸೈಬರ್ ಪೊಲೀಸರಿಗೆ ತಿಳಿಸಲಾಗಿದೆ.
ಇಂದೋರ್‌ನಲ್ಲಿ, ಜಿಲ್ಲಾಡಳಿತವು ಸೆಕ್ಷನ್ 163 ರ ಅಡಿಯಲ್ಲಿ ನಿಷೇಧಾಜ್ಞೆಗಳನ್ನು ವಿಧಿಸಿದೆ. ಪೂರ್ವಾನುಮತಿ ಇಲ್ಲದೆ ಧಾರ್ಮಿಕ, ರಾಜಕೀಯ ಮತ್ತು ಸಾಮಾಜಿಕ ಕಾರ್ಯಕ್ರಮಗಳು ಸೇರಿದಂತೆ ಎಲ್ಲಾ ಸಾರ್ವಜನಿಕ ಸಭೆಗಳನ್ನು ನಿಷೇಧಿಸಲಾಗಿದೆ ಎಂದು ಇಂದೋರ್ ಪೊಲೀಸ್ ಆಯುಕ್ತ ಸಂತೋಷ್ ಕುಮಾರ್ ಸಿಂಗ್ ಹೇಳಿದ್ದಾರೆ.
ಪಂಜಾಬ್ ಮತ್ತು ಹರಿಯಾಣ ಸೇರಿದಂತೆ ಇತರ ರಾಜ್ಯಗಳಲ್ಲಿಯೂ ಪೊಲೀಸ್ ಸಿಬ್ಬಂದಿಯ ರಜೆಗಳನ್ನು ರದ್ದುಗೊಳಿಸಲಾಗಿದೆ. ಪಾಕಿಸ್ತಾನದೊಂದಿಗೆ ಉದ್ವಿಗ್ನತೆ ಹೆಚ್ಚಾಗುತ್ತಿದ್ದಂತೆ ಗಡಿ ರಾಜ್ಯಗಳಲ್ಲಿ ಈ ಕ್ರಮಗಳನ್ನು ಕೈಗೊಳ್ಳಲಾಗಿದೆ.
