ಉತ್ತರ ಪ್ರದೇಶ ಲಖನೌದ ಸಂಜಯ್ ಗಾಂಧಿ ವೈದ್ಯಕೀಯ ವಿಜ್ಞಾನಗಳ ಸ್ನಾತಕೋತ್ತರ ಸಂಸ್ಥೆಯ(ಎಸ್‌ಜಿಪಿಜಿಐ) ತುರ್ತು ಚಿಕಿತ್ಸಾ ವಿಭಾಗದಲ್ಲಿ ಹಾಸಿಗೆ ಕೊರತೆಯಿಂದಾಗಿ ಬಿಜೆಪಿ ಮಾಜಿ ಸಂಸದನ ಪುತ್ರರೊಬ್ಬರು ಮೃತಪಟ್ಟಿರುವ ಘಟನೆ ಇತ್ತೀಚಿಗೆ ನಡೆದಿದೆ.
ಬಿಜೆಪಿ ಮಾಜಿ ಸಂಸದ ಭೈರೋನ್ ಪ್ರಸಾದ್ ಮಿಶ್ರಾ ಅವರ ಪುತ್ರ ಪ್ರಕಾಶ್ ಮಿಶ್ರಾ (42) ಅವರು ಮೂತ್ರಪಿಂಡದ ಕಾಯಿಲೆಯಿಂದ ಬಳಲುತ್ತಿದ್ದರು. ಶನಿವಾರ (ಅ.27) ರಂದು ಎಸ್‌ಜಿಪಿಜಿಐ ಆಸ್ಪತ್ರೆಗೆ ಆಗಮಿಸಿದ್ದರು. ಆದರೆ, ಹಾಸಿಗೆಗಳ ಕೊರತೆಯಿಂದ ರೋಗಿಯನ್ನು ಸೇರಿಸಿಕೊಳ್ಳಲು ಕರ್ತವ್ಯಾಧಿಕಾರಿ ನಿರಾಕರಿಸಿದರು. ನಂತರದಲ್ಲಿ ಪ್ರಕಾಶ್ ಮಿಶ್ರಾ ಅವರು ಒಂದು ಗಂಟೆಯ ನಂತರ ಆಸ್ಪತ್ರೆಯಲ್ಲಿಯೇ ನಿಧನರಾದರು.
ಘಟನೆಯ ನಂತರ ಉತ್ತರ ಪ್ರದೇಶ ಸರ್ಕಾರ ಸೋಮವಾರ ಸಾವಿನ ಕುರಿತು ಉನ್ನತ ಮಟ್ಟದ ತನಿಖೆಗೆ ಆದೇಶಿಸಿದೆ. ತುರ್ತು ಚಿಕಿತ್ಸಾ ವಿಭಾಗದ ಪ್ರಭಾರಿ ವೈದ್ಯರನ್ನು ಸರ್ಕಾರ ವಜಾಗೊಳಿಸಲಾಗಿದ್ದು, ಸಂಸ್ಥೆಯ ನಿರ್ದೇಶಕರಿಗೆ ಎಚ್ಚರಿಕೆಯನ್ನು ನೀಡಲಾಗಿದೆ.
ಈ ಸುದ್ದಿ ಓದಿದ್ದೀರಾ? ವಿಪಕ್ಷ ನಾಯಕರ ಫೋನ್ ಹ್ಯಾಕಿಂಗ್ ಯತ್ನ; ಸರ್ಕಾರದ ವಿರುದ್ಧ ‘ಇಂಡಿಯಾ’ ನಾಯಕರ ವಾಗ್ದಾಳಿ
“ಮಾಜಿ ಸಂಸದ, ಗೌರವಾನ್ವಿತ ಭೈರೋನ್ ಪ್ರಸಾದ್ ಮಿಶ್ರಾ ಅವರ ಪುತ್ರ ಲಖನೌದ ಆಸ್ಪತ್ರೆಯಲ್ಲಿ ನಿಧನರಾದ ಬಗ್ಗೆ ಉತ್ತರ ಪ್ರದೇಶ ಸರ್ಕಾರವು ಉನ್ನತ ಮಟ್ಟದ ತನಿಖೆಗೆ ಆದೇಶಿಸಿದೆ. ಪ್ರಾಥಮಿಕ ತನಿಖೆಯಲ್ಲಿ ತಪ್ಪಿತಸ್ಥರೆಂದು ಸಾಬೀತಾಗಿರುವ ಸಂಬಂಧಪಟ್ಟ ವೈದ್ಯರನ್ನು ಸಂಸ್ಥೆಯಿಂದ ಬಿಡುಗಡೆಗೊಳಿಸಲಾಗುತ್ತಿದೆ. ಭವಿಷ್ಯದಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ನೋಡಿಕೊಳ್ಳಲು ಪಿಜಿಐ ನಿರ್ದೇಶಕರಿಗೆ ಎಚ್ಚರಿಕೆಯನ್ನು ನೀಡಲಾಗಿದೆ” ಎಂದು ಉತ್ತರ ಪ್ರದೇಶ ಉಪ ಮುಖ್ಯಮಂತ್ರಿ ಬ್ರಜೇಶ್ ಪಾಠಕ್ ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಪ್ರತಿಪಕ್ಷಗಳು ಉತ್ತರ ಪ್ರದೇಶ ಸರ್ಕಾರದ ನಿರ್ಲಕ್ಷ್ಯದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿವೆ. “ಚಿಕಿತ್ಸೆಯ ಕೊರತೆಯಿಂದ ಒಬ್ಬ ನಿರ್ದಿಷ್ಟ ವ್ಯಕ್ತಿ ಸಾಯುತ್ತಾನೆ ಎಂಬುದರ ಬಗ್ಗೆ ಈ ಪ್ರಶ್ನೆ ಮಾಡುತ್ತಿಲ್ಲ. ಇದು ಪ್ರತಿಯೊಬ್ಬ ಸಾಮಾನ್ಯ ನಾಗರಿಕನ ಜೀವನದ ಮೌಲ್ಯಕ್ಕೂ ಸಂಬಂಧಿಸಿದೆ. ಉತ್ತರ ಪ್ರದೇಶದ ಆಡಳಿತಾರೂಢ ಬಿಜೆಪಿಯ ಮಾಜಿ ಸಂಸದರೊಬ್ಬರ ಮಗನಿಗೂ ಚಿಕಿತ್ಸೆ ಸಿಗುತ್ತಿಲ್ಲ ಎಂದಾದರೆ ಜನಸಾಮಾನ್ಯರ ಬಗ್ಗೆ ಏನು ಹೇಳಬೇಕು” ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಮತ್ತು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಹೇಳಿದ್ದಾರೆ.