ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿ 17 ವರ್ಷದ ಅಪ್ರಾಪ್ತೆಯ ಮೇಲೆ 13 ಮಂದಿ ಹಲವು ದಿನಗಳ ಕಾಲ ಸಾಮೂಹಿಕ ಅತ್ಯಾಚಾರ ನಡೆಸಿರುವ ಆಘಾತಕಾರಿ ಘಟನೆ ನಡೆದಿದೆ.
ಘಟನೆಗೆ ಸಂಬಂಧಿಸಿದಂತೆ 11 ಆರೋಪಿಗಳನ್ನು ಬಂಧಿಸಲಾಗಿದ್ದು, ಉಳಿದ ಇಬ್ಬರು ಆರೋಪಿಗಳ ಪತ್ತೆಗೆ ಪೊಲೀಸರು ತೀವ್ರ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಸದ್ಯ 11 ಆರೋಪಿಗಳನ್ನು ಜನವರಿ 12ರವರೆಗೂ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
“ಮೊದಲು ಅಪ್ರಾಪ್ತೆಯನ್ನು ಆಕೆಯ ಪರಿಚಿತ ಗೆಳೆಯ ಹಾಗೂ ಆತನ ಸ್ನೇಹಿತ ಲಾಡ್ಜಿನಲ್ಲಿ ಅತ್ಯಾಚಾರವೆಸಗಿದ್ದಾರೆ. ಆಕೆ ವಿಶಾಖಪಟ್ಟಣದ ಆರ್ ಕೆ ಪಟ್ಟಣದಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಅಲ್ಲಿದ್ದ ಫೋಟೋಗ್ರಾಫರ್ ಒಬ್ಬ ಬಾಲಕಿಗೆ ಸಹಾಯ ನೀಡುವುದಾಗಿ ಹೇಳಿ ಮೊದಲು ಅತ್ಯಾಚಾರವೆಸಗಿದ್ದೇನೆ. ನಂತರ ತನ್ನ 10 ಸ್ನೇಹಿತರೊಟ್ಟಿಗೆ ಹಲವು ದಿನ ವಿವಿಧ ಲಾಡ್ಜ್‌ಗಳಲ್ಲಿ ಸಾಮೂಹಿಕ ಅತ್ಯಾಚಾರವೆಸಗಿದ್ದಾನೆ. ಆನಂತರದಲ್ಲಿ ಆಕೆಯನ್ನು ಒಡಿಶಾಗೆ ಬಿಟ್ಟಿದ್ದಾರೆ” ಎಂದು ಪೊಲೀಸರು ತಿಳಿಸಿದ್ದಾರೆ.
ಒಡಿಶಾ ಮೂಲದವಳಾದ ಬಾಲಕಿ 9 ತಿಂಗಳ ಹಿಂದೆ ಕೆಲಸದ ಪ್ರಯುಕ್ತ ವಿಶಾಖಪಟ್ಟಣಕ್ಕೆ ಆಗಮಿಸಿ ಮನೆಯೊಂದರಲ್ಲಿ ಅಡುಗೆ ಸಹಾಯಕಳಾಗಿ ಕೆಲಸ ಮಾಡುತ್ತಿದ್ದಾಳೆ. ಡಿ.17 ರಂದು ಬಾಲಕಿ ಕಾಣೆಯಾದ ನಂತರ ಆಕೆಯ ತಂದೆ ವಿಶಾಖಪಟ್ಟಣದಲ್ಲಿ ದೂರು ದಾಖಲಿಸಿದ್ದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಹೊಸವರ್ಷದ ಹೊಸ್ತಿಲಲ್ಲಿ ನಮ್ಮನ್ನಗಲಿದ ನಿಜಾಯತಿಯ ಪತ್ರಕರ್ತ ಜಾನ್ ಪಿಲ್ಜರ್
ಡಿ.23ರಂದು ಒಡಿಶಾ ಪೊಲೀಸರು ಬಾಲಕಿಯನ್ನು ಪತ್ತೆ ಹಚ್ಚಿ ಆಂಧ್ರ ಪೊಲೀಸರಿಗೆ ತಿಳಿಸಿದ್ದರು. ಬಾಲಕಿಯ ತಂದೆ ಹಾಗೂ ಪೊಲೀಸ್ ತಂಡ ಡಿ.25 ರಂದು ಒಡಿಶಾದಿಂದ ವಿಶಾಖಪಟ್ಟಣಕ್ಕೆ ಕರೆದುಕೊಂಡು ಬಂದಿದ್ದರು.
ಅತ್ಯಾಚಾರದಿಂದ ಬಾಲಕಿ ಮಾನಸಿಕ ಆಘಾತಕ್ಕೊಳಗಾಗಿದ್ದಳು. ಪೋಷಕರು ಆಕೆಯ ಆರೋಗ್ಯ ವಿಚಾರಿಸಿದಾಗ ವಿಷಯ ಬೆಳಕಿಗೆ ಬಂದಿದೆ. ಡಿ.31ರಂದು ತನ್ನನ್ನು 13 ಮಂದಿ ವಿವಿಧ ಸ್ಥಳಗಳಲ್ಲಿ ಅತ್ಯಾಚಾರ ಮಾಡಿರುವುದಾಗಿ ಪೊಲೀಸರಿಗೆ ನೀಡಿರುವ ದೂರಿನಲ್ಲಿ ಅಪ್ರಾಪ್ತೆ ತಿಳಿಸಿದ್ದಾಳೆ.
ವಿಪಕ್ಷದಿಂದ ಆಂಧ್ರ ಸರ್ಕಾರದ ವಿರುದ್ಧ ವಾಗ್ದಾಳಿ
ರಾಜ್ಯದಲ್ಲಿ ಮಹಿಳೆಯರನ್ನು ರಕ್ಷಿಸುವಲ್ಲಿ ವಿಫಲವಾಗಿದೆ ಎಂದು ಕಾಂಗ್ರೆಸ್ ಮತ್ತು ತೆಲುಗುದೇಶಂ ಪಕ್ಷಗಳು ಆಡಳಿತಾರೂಢ ವೈಎಸ್ಆರ್ಸಿಪಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿವೆ.
ವಿಶಾಖಪಟ್ಟಣಂನಲ್ಲಿ ನಡೆದ ಘಟನೆಯನ್ನು ಖಂಡಿಸಿರುವ ಟಿಡಿಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ನಾರಾ ಲೋಕೇಶ್, ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಆಂಧ್ರಪ್ರದೇಶ ಸರ್ಕಾರ ವಿಫಲವಾಗಿದೆ ಎಂದು ಟೀಕಿಸಿದ್ದಾರೆ.
ವೈಎಸ್ಆರ್ಸಿಪಿ ನಾಯಕರು ಶಾಂತಿಯುತವಾದ ವಿಶಾಖಪಟ್ಟಣಕ್ಕೆ ಶಾಪವಾಗಿದ್ದಾರೆ ಎಂದು ಟಿಡಿಪಿ ನಾಯಕ ನಾರಾ ಲೋಕೇಶ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.