ಅಂಗನವಾಡಿ ಕಾರ್ಯಕರ್ತೆ ಸರ್ಕಾರದ ಹಣ ದುರ್ಬಳಕೆ ಮಾಡಿಕೊಳ್ಳುವ ಉದ್ದೇಶದಿಂದ 40 ಅವಿವಾಹಿತ ಹೆಣ್ಣುಮಕ್ಕಳನ್ನು ಗರ್ಭಿಣಿಯರು ಎಂದು ಉಲ್ಲೇಖಿಸಿರುವ ಪ್ರಕರಣ ಉತ್ತರಪ್ರದೇಶದಲ್ಲಿ ಬೆಳಕಿಗೆ ಬಂದಿದೆ.
ಪ್ರಧಾನಿ ಮೋದಿ ಅವರು ಪ್ರತಿನಿಧಿಸುವ ವಾರಣಾಸಿಯ ಮಲ್ಹಿಯಾ ಗ್ರಾಮದಲ್ಲಿ ಪ್ರಕರಣ ಬೆಳಕಿಗೆ ಬಂದಿದೆ. ಕೇಂದ್ರ ಸರ್ಕಾರದ ಮಕ್ಕಳು ಮತ್ತು ತಾಯಂದಿರ ಅಭಿವೃದ್ಧಿ ಸಚಿವಾಲಯದ ‘ಪೋಷಣ್ ಅಭಿಯಾನ ಯೋಜನೆ’ಯಡಿ ಅಂಗನವಾಡಿ ಕಾರ್ಯಕರ್ತೆ ಈ ಅವ್ಯವಹಾರ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.
ಅವಿವಾಹಿತ ಹೆಣ್ಣುಮಕ್ಕಳನ್ನು ಗರ್ಭಿಣಿಯರೆಂದು ಅಂಗನವಾಡಿ ಕಾರ್ಯಕರ್ತೆ ಸುಮನಲತಾ ಉಲ್ಲೇಖಿಸಿದ್ದಾರೆ. ಆ ಹೆಣ್ಣುಮಕ್ಕಳ ಫೋನ್ ನಂಬರ್ಅನ್ನೂ ಕೂಡ ನಮೂದಿಸಿದ್ದಾರೆ.
ಆ ಎಲ್ಲ ಹೆಣ್ಣುಮಕ್ಕಳಿಗೆ, “ಪೋಷಣ್ ಟ್ರ್ಯಾಕರ್ಗೆ ಸುಸ್ವಾಗತ, ಹಾಲುಣಿಸುವ ತಾಯಂದಿರು ಬಿಸಿಯೂಟ ಅಥವಾ ಪಡಿತರ, ಸಮಾಲೋಚನೆ, ಮಕ್ಕಳ ಆರೋಗ್ಯ ಮೇಲ್ವಿಚಾರಣೆ ಹಾಗೂ ಸ್ತನ್ಯಪಾನಕ್ಕೆ ಸಂಬಂಧಿಸಿದ ಸಲಹೆಯನ್ನು ಪಡೆಯಬಹುದು” ಎಂಬ ಸಂದೇಶಗಳು ಬಂದಿವೆ. ಆ ಸಂದೇಶಗಳನ್ನು ನೋಡಿ ಹೆಣ್ಣುಮಕ್ಕಳು ಮತ್ತು ಅವರ ಪೋಷಕರು ಆತಂಕಗೊಂಡಿದ್ದಾರೆ.
ಅಂಗನವಾಡಿ ಕಾರ್ಯಕರ್ತೆ ಸುಮನಲತಾ ಅವರು ಮತದಾರರ ಗುರುತಿನ ಚೀಟಿಗೆ ಆಧಾರ್ ಲಿಂಕ್ ಮಾಡಿಸುವ ನೆಪದಲ್ಲಿ ಹೆಣ್ಣುಮಕ್ಕಳ ಆಧಾರ್ ಮತ್ತು ಫೋನ್ ನಂಬರ್ ಪಡೆದುಕೊಂಡಿದ್ದಾರೆ. ಅವುಗಳನ್ನು ಬಳಸಿಕೊಂಡು ಹೆಣ್ಣುಮಕ್ಕಳು ಗರ್ಭಿಣಿಯರೆಂದು ಪೋಷಣ್ ಯೋಜನೆಯಡಿ ಅಪ್ಲೋಡ್ ಮಾಡಿದ್ದಾರೆ ಎಂದು ವರದಿಯಾಗಿದೆ.
ಈ ಬಗ್ಗೆ ಹೆಣ್ಣುಮಕ್ಕಳು ಅಂಗನವಾಡಿ ಕಾರ್ಯಕರ್ತೆಯನ್ನು ಪ್ರಶ್ನಿಸಿದ್ದು, ಆಕೆ ಹಾರಿಕೆಯ ಉತ್ತರ ನೀಡಿದ್ದಾರೆ. ಬಳಿಕ, ಅಧಿಕಾರಿಗಳಿಗೆ ದೂರು ನೀಡಲಾಗಿದೆ.
ದೂರನ್ನು ಆಧರಿಸಿ ಪೋಷಣ್ ಅಭಿಯಾನದ ಮುಖ್ಯ ಅಭಿವೃದ್ಧಿ ಅಧಿಕಾರಿ ಹಿಮಾಂಶು ನಾಗ್ಪಾಲ್ ಅವರು ತನಿಖೆಗೆ ಆದೇಶಿಸಿದ್ದಾರೆ. ಬ್ಲಾಕ್ ಅಭಿವೃದ್ಧಿ ಅಧಿಕಾರಿ ತನಿಖೆ ನಡೆಸುತ್ತಿದ್ದಾರೆ. ತನಿಖಾ ವರದಿ ಬಂದ ಬಳಿಕ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹಿಮಾಂಶು ತಿಳಿಸಿದ್ದಾರೆ.