ಗುಜರಾತ್‌ನ ಮಹಿಸಾಗರ್ ಜಿಲ್ಲಾಧಿಕಾರಿ ನೇಹಾ ಕುಮಾರಿ ಅವರು ದಲಿತ ವಿರೋಧಿ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿರುವ ಗುಜರಾತ್ ಕಾಂಗ್ರೆಸ್ ಶಾಸಕ ಜಿಗ್ನೇಶ್ ಮೇವಾನಿ, ಜಿಲ್ಲಾಧಿಕಾರಿಯನ್ನು ಅಮಾನತುಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ. ಆದರೆ ಜಿಲ್ಲಾಧಿಕಾರಿ ಮಾತ್ರ ದಲಿತ ವಿರೋಧಿ ಹೇಳಿಕೆ ಆರೋಪವನ್ನು ತಿರಸ್ಕರಿಸಿದ್ದಾರೆ.
ತಮ್ಮ ಮತ್ತು ತಮ್ಮ ಪಕ್ಷದ ಸಹೋದ್ಯೋಗಿಗಳೊಂದಿಗೆ ಅನುಚಿತವಾಗಿ ವರ್ತಿಸಿದ ಆರೋಪದಲ್ಲಿ ಹಿರಿಯ ಐಪಿಎಸ್ ಅಧಿಕಾರಿ ರಾಜ್‌ಕುಮಾರ್ ಪಾಂಡಿಯನ್ ಅವರನ್ನು ಅಮಾನತುಗೊಳಿಸಬೇಕು ಎಂದು ಜಿಗ್ನೇಶ್ ಮೇವಾನಿ ಒಂದು ವಾರದ ಹಿಂದಷ್ಟೇ ಅಗ್ರಹಿಸಿದ್ದರು.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆ ಅಥವಾ ದೌರ್ಜನ್ಯ ಕಾಯ್ದೆಯಡಿ ದಾಖಲಾದ ಶೇಕಡ 90ರಷ್ಟು ಪ್ರಕರಣಗಳು ಬ್ಲ್ಯಾಕ್‌ಮೇಲಿಂಗ್‌ಗೆ ಬಳಕೆಯಾಗುತ್ತಿದೆ ಎಂದು ಮಹಿಸಾಗರ್ ಜಿಲ್ಲಾಧಿಕಾರಿ ನೇಹಾ ಕುಮಾರಿ ಹೇಳಿದ್ದರು. ಈ ವಿಡಿಯೋವನ್ನು ಉಲ್ಲೇಖಿಸಿ ಜಿಲ್ಲಾಧಿಕಾರಿಯನ್ನು ಅಮಾನತುಗೊಳಿಸಬೇಕು ಮೇವಾನಿ ಆಗ್ರಹಿಸಿದ್ದಾರೆ. ಜೊತೆಗೆ ಎಫ್‌ಐಆರ್ ದಾಖಲಿಸಬೇಕೆಂದು ಹೇಳಿದ್ದಾರೆ.
ಇದನ್ನು ಓದಿದ್ದೀರಾ? ಗುಜರಾತ್ | ಕಾಂಗ್ರೆಸ್ ಶಾಸಕ ಜಿಗ್ನೇಶ್ ಮೇವಾನಿ ವಿಧಾನಸಭೆಯಿಂದ ಉಚ್ಚಾಟನೆ
ಇನ್ನು ಐಎಎಸ್ ಅಧಿಕಾರಿ ನೇಹಾ ಕುಮಾರಿ ಅವರು ಶಾಸಕ ಮೇವಾನಿ ಆರೋಪವು ‘ಆಧಾರರಹಿತ’ ಮತ್ತು ರಾಜಕೀಯ ಮೈಲೇಜ್ ಪಡೆಯುವ ವಿಫಲ ಪ್ರಯತ್ನ ಎಂದು ಬಣ್ಣಿಸಿದ್ದಾರೆ.
ವಿಜಯ್ ಪರ್ಮಾರ್ ಜಿಲ್ಲಾಧಿಕಾರಿಯನ್ನು ಭೇಟಿ ಮಾಡಲು ಹೋದಾಗ ಜಿಲ್ಲಾಧಿಕಾರಿ ಕೆಟ್ಟದಾಗಿ ನಡೆಸಿದ್ದಾರೆ, ಅವಮಾನ ಮಾಡಿದ್ದಾರೆ. ದೌರ್ಜನ್ಯ ಕಾಯ್ದೆಯಡಿಯಲ್ಲಿನ ಶೇಕಡ 90ರಷ್ಟು ಪ್ರಕರಣಗಳನ್ನು ಬ್ಲ್ಯಾಕ್‌ಮೇಲಿಂಗ್‌ಗಾಗಿ ದುರುಪಯೋಗಪಡಿಸಿಕೊಳ್ಳಲಾಗಿದೆ ಎಂಬ ಜಿಲ್ಲಾಧಿಕಾರಿಯ ಹೇಳಿಕೆಯು ಎಸ್‌ಸಿ ಮತ್ತು ಎಸ್‌ಟಿ ಸಮುದಾಯಗಳಿಗೆ ಅವಮಾನವಾಗಿದೆ. ದೌರ್ಜನ್ಯ ಕಾಯ್ದೆ ಮತ್ತು ಭಾರತೀಯ ನ್ಯಾಯ ಸಂಹಿತಾ (ಬಿಎನ್‌ಎಸ್) ಅಡಿಯಲ್ಲಿ ಅಪರಾಧವಾಗಿದೆ ಎಂದು ಮೇವಾನಿ ಹೇಳಿದ್ದಾರೆ.
“ಶಾಸಕರ ಅಮಾಯಕ ಯುವ ಸ್ನೇಹಿತ (ವಿಜಯ್ ಪರ್ಮಾರ್) ಎಂಬ ವ್ಯಕ್ತಿ ವಿರುದ್ಧ ಪೊಲೀಸ್ ಕೇಸ್ ಇದೆ. ಅವನ ಸಹೋದರನ ವಿರುದ್ಧ ಒಂದಕ್ಕಿಂತ ಹೆಚ್ಚು ಅತ್ಯಾಚಾರ, ಅಪಹರಣ ಮತ್ತು ಹಲ್ಲೆ ಪ್ರಕರಣಗಳಿವೆ. ಅವರು ಹಲವು ಕುಂದುಕೊರತೆಗಳ ವಿಚಾರ ಪ್ರಸ್ತಾಪಿಸಲು ಜಿಲ್ಲಾಧಿಕಾರಿ ಕಚೇರಿಗೆ ಭೇಟಿ ನೀಡುತ್ತಲೇ ಇರುತ್ತಾರೆ” ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ.
