ಪಶ್ಚಿಮ ಬಂಗಾಳದಲ್ಲಿ ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆ; ರಾಜ್ಯಪಾಲರು ಅಂಕಿತ ಹಾಕುವರೆ?

Date:

Advertisements
ಬೋಸ್ ಮತ್ತು ಮಮತಾ ಅವರ ನಡುವೆ ಹಲವು ಬಾರಿ ಸಂಘರ್ಷ ಉಂಟಾಗಿದೆ. ಕಡತಗಳಿಗೆ ಸಹಿ ಹಾಕದಿರುವುದು, ಸಂವಿಧಾನವನ್ನು ರಕ್ಷಿಸುವ ಗೌರವಾನ್ವಿತ ಹುದ್ದೆ ಎಂಬುದನ್ನು ಮರೆತು ಪ್ರತಿಪಕ್ಷದ ನಾಯಕನಂತೆ ವಾಗ್ದಾಳಿ ನಡೆಸುತ್ತಿರುವುದು ನಡೆದೇ ಇದೆ. ಇವುಗಳ ನಡುವೆಯೇ 'ಅಪರಾಜಿತ ಮಹಿಳೆ ಮತ್ತು ಮಕ್ಕಳ ಮಸೂದೆ-2024'ಯನ್ನು ಪಶ್ಚಿಮ ಬಂಗಾಳ ಸರ್ಕಾರ ವಿಧಾನಸಭೆಯಲ್ಲಿ ಸರ್ವಾನುಮತದಿಂದ ಅಂಗೀಕರಿಸಿದೆ. ರಾಜ್ಯಪಾಲರು ಅಂಕಿತ ಹಾಕುವರೇ?

ದೇಶದಲ್ಲಿ ಅತ್ಯಾಚಾರದ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂಬ ಕೂಗುಗಳು ಕೇಳಿ ಬರುತ್ತಲೇ ಇವೆ. ಆದರೆ, ಇಂತಹ ಪ್ರಕರಣಗಳಲ್ಲಿ ಶಿಕ್ಷೆಯಾಗಿರುವ ಪ್ರಮಾಣ ಮಾತ್ರ ಶೇ.1ಕ್ಕಿಂತ ಕಡಿಮೆ ಇದೆ. ಆಗಾಗ ಗಂಭೀರ ಸ್ವರೂಪದ ಅತ್ಯಾಚಾರ ಪ್ರಕರಣಗಳು ದಾಖಲಾದ ನಂತರ ಅತ್ಯಾಚಾರಿಗಳ ವಿರುದ್ಧ ದೇಶಾದ್ಯಂತ ಆಕ್ರೋಶದ ಕೂಗುಗಳು ಹೆಚ್ಚುತ್ತವೆ. ಕೋಲ್ಕತ್ತಾ ಟ್ರೈನಿ ನರ್ಸ್‌ ಅತ್ಯಾಚಾರ ಘಟನೆಯ ನಂತರ ಅತ್ಯಾಚಾರಿಗಳಿಗೆ ಶೀಘ್ರವಾಗಿ ಶಿಕ್ಷೆ ವಿಧಿಸುವ ನೂತನ ವಿಧೇಯಕ ‘ಅಪರಾಜಿತ ಮಹಿಳೆ ಮತ್ತು ಮಕ್ಕಳ ಮಸೂದೆ-2024’ಯನ್ನು ಪಶ್ಚಿಮ ಬಂಗಾಳ ಸರ್ಕಾರ ವಿಧಾನಸಭೆಯಲ್ಲಿ ಸರ್ವಾನುಮತದಿಂದ ಅಂಗೀಕರಿಸಿದೆ. ರಾಜ್ಯಪಾಲರ ಸಹಿ ಬಳಿಕ ಇದು ಕಾನೂನಾಗಿ ಜಾರಿಯಾಗಲಿದೆ. ರಾಜ್ಯದಲ್ಲಿ ಮಹಿಳೆಯರ ಮೇಲೆ ನಡೆಯುವ ಅತ್ಯಾಚಾರ ಪ್ರಕರಣಗಳ ಆರೋಪಿಗಳಿಗೆ ಗಲ್ಲು ಶಿಕ್ಷೆ ವಿಧಿಸುವ ಕಠಿಣ ಕ್ರಮವನ್ನು ಮಸೂದೆಯಲ್ಲಿ ನಮೂದಿಸಲಾಗಿದೆ.

ಈ ಮಸೂದೆಯು ಭಾರತೀಯ ನ್ಯಾಯ ಸಂಹಿತಾ 2023, ಭಾರತೀಯ ನಾಗರಿಕ ಸುರಕ್ಷಾ ಸಂಹಿತಾ, 2023 ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆ 2012 ರ ಅಡಿಯಲ್ಲಿ ಅಸ್ತಿತ್ವದಲ್ಲಿರುವ ನಿಬಂಧನೆಗಳನ್ನು ತಿದ್ದುಪಡಿ ಮಾಡುವ ಗುರಿಯನ್ನು ಹೊಂದಿದೆ. ಮಹಿಳೆಯರು ಹಾಗೂ ಹೆಣ್ಣು ಮಕ್ಕಳನ್ನು ರಕ್ಷಿಸುವ ನಿಟ್ಟಿನಲ್ಲಿ ಅಪರಾಧಗಳಿಗೆ ಸದ್ಯ ಇರುವ ಶಿಕ್ಷೆಯ ಪ್ರಮಾಣ ಹೆಚ್ಚಳ ಮಾಡುವುದು ಹಾಗೂ ವೇಗವಾಗಿ ವಿಚಾರಣೆ ನಡೆಸಿ ಶಿಕ್ಷೆಗೆ ಒಳಪಡಿಸುವುದು ಈ ಮಸೂದೆಯ ಉದ್ದೇಶವಾಗಿದೆ.

ಬಂಗಾಳ ಅತ್ಯಾಚಾರ ತಡೆ ಕಾಯ್ದೆಯಲ್ಲಿ ಲೈಂಗಿಕ ದೌರ್ಜನ್ಯ ಎಸಗಿದ ವ್ಯಕ್ತಿಗೆ ಕನಿಷ್ಠ ಶಿಕ್ಷೆಯನ್ನು 3 ವರ್ಷಗಳಿಂದ 7 ವರ್ಷಗಳಿಗೆ ಹೆಚ್ಚಿಸಲಾಗಿದೆ. ಹೊಸ ಕಾಯ್ದೆಯ ಪ್ರಕಾರ, ಲೈಂಗಿಕ ದೌರ್ಜನ್ಯದ ಶಿಕ್ಷೆ ಕನಿಷ್ಠ ಏಳು ವರ್ಷಗಳಾಗಿದ್ದು, ದಂಡದೊಂದಿಗೆ 10 ವರ್ಷಗಳವರೆಗೆ ವಿಸ್ತರಿಸಬಹುದು. ಅಪರಾಜಿತ ಮಸೂದೆಯಲ್ಲಿ, ಅಪರಾಧ ನಡೆದ 7 ದಿನಗಳ ಒಳಗಾಗಿ ಮಗುವಿನ ಅಥವಾ ಬಾಲಕಿಯ ಸಾಕ್ಷ್ಯವನ್ನು ಕಡ್ಡಾಯವಾಗಿ ದಾಖಲಿಸಬೇಕು. ಆದರೆ ಪೋಕ್ಸೊ ಕಾಯ್ದೆಯಡಿಯಲ್ಲಿ ವಿಶೇಷ ನ್ಯಾಯಾಲಯವು ಅಪರಾಧವನ್ನು ಗುರುತಿಸಿದ 30 ದಿನಗಳೊಳಗೆ ಮಗುವಿನ ಸಾಕ್ಷ್ಯವನ್ನು ದಾಖಲಿಸಬೇಕು ಮತ್ತು ಯಾವುದೇ ವಿಳಂಬಕ್ಕೆ ಕಾರಣಗಳನ್ನು ನ್ಯಾಯಾಲಯವು ದಾಖಲಿಸಬೇಕು ಎಂದು ಕಾಯ್ದೆ ಹೇಳುತ್ತದೆ.

Advertisements

ಅಪರಾಧ ನಡೆದ 30 ದಿನಗಳಲ್ಲಿ ವಿಶೇಷ ನ್ಯಾಯಾಲಯವು ವಿಚಾರಣೆಯನ್ನು ಪೂರ್ಣಗೊಳಿಸಬೇಕು. ಪೋಕ್ಸೊ ಕಾಯ್ದೆಯಲ್ಲಿ ವಿಶೇಷ ನ್ಯಾಯಾಲಯವು ಅಪರಾಧ ನಡೆದ ದಿನಾಂಕದಿಂದ ಒಂದು ವರ್ಷದೊಳಗೆ ವಿಚಾರಣೆಯನ್ನು ಪೂರ್ಣಗೊಳಿಸಬೇಕು. ಅತ್ಯಾಚಾರ ತಡೆ ಕಾಯ್ದೆಯ ಪ್ರಕಾರ ಆರೋಪಿಗೆ ವಿಧಿಸುವ ದಂಡವು ವಿಶೇಷ ನ್ಯಾಯಾಲಯ ನಿರ್ಧರಿಸಿದಂತೆ ಸಂತ್ರಸ್ತೆಯ ಸಂಬಂಧಿಕರಿಗೆ ಅಥವಾ ಕುಟುಂಬಸ್ಥರಿಗೆ ಪರಿಹಾರವನ್ನು ಒಳಗೊಂಡಿರುತ್ತದೆ. ಪೋಕ್ಸೊ ಕಾಯ್ದೆಯ ಪ್ರಕಾರ ದಂಡವು ಸಂತ್ರಸ್ತರ ವೈದ್ಯಕೀಯ ವೆಚ್ಚಗಳು ಮತ್ತು ಪುನರ್ವಸತಿಯನ್ನು ಒಳಗೊಂಡಿರುತ್ತದೆ.

ಆರೋಪ ಸಾಬೀತಾದ 10 ದಿನದಲ್ಲಿ ಗಲ್ಲು ಶಿಕ್ಷೆ

ಅತ್ಯಾಚಾರ ಆರೋಪ ಸಾಬೀತಾದ 10 ದಿನದಲ್ಲಿ ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆ, ಜೀವಾವಧಿ ಶಿಕ್ಷೆ ವಿಧಿಸಲು ವಿಧೇಯಕದಲ್ಲಿ ಅನುಮತಿ ಇದೆ. ಈ ಶಿಕ್ಷೆ ಸಂದರ್ಭದಲ್ಲಿ ಅಪರಾಧಿಗೆ ಪೆರೋಲ್‌ ನೀಡಲಾಗುವುದಿಲ್ಲ. ಆರೋಪ ಸಾಬೀತಾದ 10 ದಿನದಲ್ಲಿ ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆ ವಿಧಿಸಲು ಈ ಮಸೂದೆಯಲ್ಲಿ ಅನುಮತಿಯಿದೆ. ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆ ವಿಧಿಸುವ ಕಾನೂನು ಭಾರತದಲ್ಲಿ ಇದೇ ಮೊದಲು ಪಶ್ಚಿಮ ಬಂಗಾಳದಲ್ಲಿ ಜಾರಿಗೊಳಿಸಿದೆ ಎನ್ನಲಾಗಿದೆ. ಅದೇ ರೀತಿ ಸಾಮೂಹಿಕ ಅತ್ಯಾಚಾರದ ಶಿಕ್ಷೆಯು ಕನಿಷ್ಠ 20 ವರ್ಷಗಳ ಕಠಿಣ ಸೆರೆವಾಸವನ್ನು ಒಳಗೊಂಡಿರುತ್ತದೆ. ಇದು ದಂಡದ ಜೊತೆಗೆ ಜೀವಾವಧಿ ಶಿಕ್ಷೆಗೆ ವಿಸ್ತರಿಸಬಹುದಾಗಿದೆ.

ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಗೌರಿ ಲಂಕೇಶ್: ಕೋಮುವಾದಿ ಕತ್ತಲಿಗೆ ಸವಾಲೆಸೆದ ಬೆಳ್ಳಂಬೆಳಕಿನ ದೀವಟಿಗೆ

16 ವರ್ಷದೊಳಗಿನ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿದರೆ ಬಂಗಾಳದ ಅತ್ಯಾಚಾರ-ವಿರೋಧಿ ಕಾಯ್ದೆಯಲ್ಲಿ ಅತಿ ಕಠಿಣ ಶಿಕ್ಷೆಯನ್ನು ವಿಧಿಸಲಾಗುತ್ತದೆ. ಈ ಶಿಕ್ಷೆಯು ಕಠಿಣ ಸೆರೆವಾಸ, ಜೀವಾವಧಿ ಮತ್ತು ದಂಡ ಅಥವಾ ಮರಣದಂಡನೆ ಎರಡನ್ನು ಒಳಗೊಂಡಿರುತ್ತದೆ. ಪೋಕ್ಸೋ ಕಾಯ್ದೆಯ ಪ್ರಕಾರ 16 ವರ್ಷದೊಳಗಿನ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯವೆಸಗಿದರೆ ಕನಿಷ್ಠ 20 ವರ್ಷ ಜೈಲು ಶಿಕ್ಷೆಗೆ ಗುರಿಪಡಿಸಲಾಗುತ್ತದೆ. ಈ ಶಿಕ್ಷೆಯನ್ನು ಜೀವಾವಧಿಯವರೆಗೆ ವಿಸ್ತರಿಸಬಹುದು. ಇದರೊಂದಿಗೆ ದಂಡ ಕೂಡ ಪಾವತಿಸಬೇಕಾಗುತ್ತದೆ. ಆರೋಪಪಟ್ಟಿ ಸಲ್ಲಿಸಿದ 36 ದಿನದಲ್ಲಿ ಮರಣಶಿಕ್ಷೆ ನೀಡುವ ನಿಬಂಧನೆಯನ್ನು ನೂತನ ಮಸೂದೆ ಒಳಗೊಂಡಿದೆ. ಆಸಿಡ್ ದಾಳಿಯನ್ನು ತೀವ್ರ ಸ್ವರೂಪದ ಅಪರಾಧ ಎಂದು ಪರಿಗಣಿಸಲಾಗಿದ್ದು, ಜೀವಾವಧಿ ಶಿಕ್ಷೆ ನೀಡುವ ಕಾನೂನು ಅಪರಾಜಿತ ಮಸೂದೆಯಲ್ಲಿದೆ. ನೂತನ ಕಾಯ್ದೆಯನ್ವಯ ಉಪ ಪೊಲೀಸ್ ವರಿಷ್ಠಾಧಿಕಾರಿ ನೇತೃತ್ವದಲ್ಲಿ ಜಿಲ್ಲಾ ಮಟ್ಟದಲ್ಲಿ ‘ಅಪರಾಜಿತಾ ಕಾರ್ಯಪಡೆ’ ಸ್ಥಾಪಿಸಲಾಗುವುದು. ಅತ್ಯಾಚಾರ ಮತ್ತು ಲೈಂಗಿಕ ಅಪರಾಧಗಳ ತನಿಖೆಯನ್ನು ಈ ಕಾರ್ಯಪಡೆ ಹಮ್ಮಿಕೊಳ್ಳುತ್ತದೆ.

ಮಸೂದೆಗೆ ರಾಜ್ಯಪಾಲರ ನಡೆಯೇನು?

ಸದ್ಯ ವಿಧಾನಸಭೆಯಲ್ಲಿ ಮಂಡನೆಯಾಗಿದ್ದು, ಸೆಪ್ಟೆಂಬರ್‌ 5 ರಂದು ವಿಧಾನ ಪರಿಷತ್ತಿನಲ್ಲಿ ಅಂಗೀಕರಿಸಲಾಗುತ್ತದೆ. ಆ ದಿನವೇ ರಾಜ್ಯಪಾಲರು ಅಂಕಿತ ಹಾಕಿ ವಿಧೇಯಕ ಜಾರಿಗೆ ಬರುವ ಸಾಧ್ಯತೆ ಇದೆ. ಸದ್ಯ ಪ್ರಶ್ನೆಯಿರುವುದು ನೂತನ ಮಸೂದೆಗೆ ರಾಜ್ಯಪಾಲರಾದ ಸಿ ವಿ ಆನಂದ್‌ ಬೋಸ್‌ ಅಂಕಿತ ಹಾಕಲಿದ್ದಾರೆಯೆ ಎನ್ನುವುದು. ಡಾ. ಸಿ ವಿ ಆನಂದ್‌ ಬೋಸ್‌ 2022ರ ನವೆಂಬರ್‌ನಿಂದ ಪಶ್ಚಿಮ ಬಂಗಾಳ ರಾಜ್ಯಪಾಲರಾಗಿ ಅಧಿಕಾರ ವಹಿಸಿಕೊಂಡ ನಂತರ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ಸದಾ ವಾಗ್ವಾದಕ್ಕಿಳಿಯುತ್ತಿದ್ದಾರೆ. ಕಳೆದ ಎರಡು ವರ್ಷಗಳಿಂದ ಆನಂದ್‌ ಬೋಸ್ ಅವರು ಮಮತಾ ಬ್ಯಾನರ್ಜಿ ನೇತೃತ್ವದ ಸರ್ಕಾರದ ವಿರುದ್ಧ ಸಂಘರ್ಷದ ಹಾದಿಯನ್ನು ಹಿಡಿದಿದ್ದಾರೆ. ಬೋಸ್ ಮತ್ತು ಮಮತಾ ಅವರ ನಡುವೆ ಹಲವು ಬಾರಿ ಸಂಘರ್ಷ ಉಂಟಾಗಿದೆ. ಕಡತಗಳಿಗೆ ಸಹಿ ಹಾಕದಿರುವುದು, ಸಂವಿಧಾನವನ್ನು ರಕ್ಷಿಸುವ ಗೌರವಾನ್ವಿತ ಹುದ್ದೆ ಎಂಬುದನ್ನು ಮರೆತು ಪ್ರತಿಪಕ್ಷದ ನಾಯಕನಂತೆ ವಾಗ್ದಾಳಿ ನಡೆಸುತ್ತಿರುವುದು ನಡೆಯುತ್ತಲೇ ಬಂದಿದೆ. ಲೋಕಸಭಾ ಚುನಾವಣೆಯಲ್ಲಿ ಇಬ್ಬರ ನಡುವಿನ ಸಂಘರ್ಷ ಇನ್ನಷ್ಟು ತೀವ್ರಗೊಂಡಿತ್ತು.

ತಮ್ಮ ವಿರುದ್ಧ ಅಸಹ್ಯಕರ ಹೇಳಿಕೆ ನೀಡಿದ್ದಾರೆ ಎಂದು ಇತ್ತೀಚಿಗೆ ರಾಜ್ಯಪಾಲ ಆನಂದ್‌ ಬೋಸ್‌ ಅವರು ಮಮತಾ ಬ್ಯಾನರ್ಜಿ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದರು. ಇದಕ್ಕೂ ಮೊದಲು ಸಿಎಂ ಮಮತಾ ಬ್ಯಾನರ್ಜಿ ಅವರು ರಾಜಭವನದಲ್ಲಿ ಕೆಲಸ ನಿರ್ವಹಿಸುತ್ತಿರುವ ಮಹಿಳೆಯರಿಗೆ ರಕ್ಷಣೆಯಿಲ್ಲ. ರಾಜಭವನದಲ್ಲಿ ಕಾರ್ಯನಿರ್ವಹಿಸುವ ಉದ್ಯೋಗಿಯೊಬ್ಬರು ಮಹಿಳಾ ಸಿಬ್ಬಂದಿ ವಿರುದ್ಧ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎಂದು ಆರೋಪಿಸಿದ್ದರು. ಇದಲ್ಲದೆ ವಿಧಾನಸಭೆಯಲ್ಲಿ ಅಪರಾಜಿತ ಮಸೂದೆ ಮಂಡಿಸುವ ಸಂದರ್ಭದಲ್ಲಿ ಮಮತಾ ಬ್ಯಾನರ್ಜಿ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರ ರಾಜೀನಾಮೆಗೆ ಒತ್ತಾಯಿಸಿದ್ದರು. ಪರೋಕ್ಷವಾಗಿ ರಾಜ್ಯಪಾಲರನ್ನು ಟೀಕಿಸಿದ್ದರು. ರಾಜ್ಯಪಾಲರು ಹಾಗೂ ಮುಖ್ಯಮಂತ್ರಿಗಳ ಸಂಬಂಧ ಸಂಪೂರ್ಣ ಹದಗೆಟ್ಟಿರುವ ಸಂದರ್ಭದಲ್ಲಿ ‘ಅಪರಾಜಿತ ಮಹಿಳೆ ಮತ್ತು ಮಕ್ಕಳ ಮಸೂದೆ-2024’ಕ್ಕೆ ಸಿ ವಿ ಆನಂದ್‌ ಬೋಸ್‌ ಅವರು ಅಂಕಿತ ಹಾಕುವರೆ ಅಥವಾ ವಿವಾದವೆಬ್ಬಿಸಿ ಕಾನೂನು ಸಮರಕ್ಕೆ ತೆಗೆದುಕೊಂಡು ಹೋಗುವರೆ ಎಂಬುದು ಮುಂದಿರುವ ಪ್ರಶ್ನೆಯಾಗಿದೆ.   

blank profile picture 973460 640
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ನಟಿಗೆ ಕಿರುಕುಳ ಆರೋಪ: ಕೇರಳ ಯುವ ಕಾಂಗ್ರೆಸ್ ಅಧ್ಯಕ್ಷನ ಹುದ್ದೆ ತೊರೆದ ರಾಹುಲ್ ಮಾಂಕೂಟತ್ತಿಲ್

ಕೇರಳದ ರಾಜಕೀಯದಲ್ಲಿ ದೊಡ್ಡ ಸಂಚಲನ ಸೃಷ್ಟಿಸಿರುವ ಅಶ್ಲೀಲ ಸಂದೇಶ ಹಾಗೂ ದುರ್ವರ್ತನೆ...

ನ್ಯಾಯದೇಗುಲಗಳಿಗೆ ಬಲು ಇಕ್ಕಟ್ಟಾದ ಬಾಗಿಲುಗಳ ಕಟ್ಟಿದ್ದೇವೆ- ಸಿಜೆಐ

‘ಹೈಕೋರ್ಟ್ ಜಡ್ಜ್ ಗಳ ಪೈಕಿ ಮೊಂಡರು, ಹಟಮಾರಿಗಳು, ಜಂಭದ ಕೋಳಿಗಳಿದ್ದಾರೆ...ಇನ್ನು ಕೆಲವರ...

ಈದಿನ ವಿಶೇಷ | ಧರ್ಮಸ್ಥಳ: ಉತ್ತರ ನೀಡಿದ ಗೃಹ ಸಚಿವರು; ಈಗಲೂ ಉಳಿದ ಹಲವು ಪ್ರಶ್ನೆಗಳು

ಸದನದಲ್ಲಿ ನಿಂತು ಷಡ್ಯಂತ್ರ ಎನ್ನುವವರಿಗೆ, ಎಸ್‌ಐಟಿ ರಚನೆಯಾಗಿದ್ದೇಕೆ? ಕಾನೂನು ಏನು ಹೇಳುತ್ತೆ?...

ಉಪ ರಾಷ್ಟ್ರಪತಿ ಚುನಾವಣೆ: ಇಂಡಿಯಾ ಒಕ್ಕೂಟದ ಅಭ್ಯರ್ಥಿ ಸುದರ್ಶನ್ ರೆಡ್ಡಿ ನಾಮಪತ್ರ ಸಲ್ಲಿಕೆ

ಭಾರತದ ಉಪ ರಾಷ್ಟ್ರಪತಿ ಚುನಾವಣೆಗೆ ‘ಇಂಡಿಯಾ’ ಮೈತ್ರಿಕೂಟದ ಅಭ್ಯರ್ಥಿಯಾಗಿ ಸುಪ್ರೀಂ ಕೋರ್ಟ್‌ನ...

Download Eedina App Android / iOS

X