ದೇಶದ ಖ್ಯಾತ ಪರಮಾಣು ವಿಜ್ಞಾನಿ, ಸ್ಫಟಿಕಶಾಸ್ತ್ರಜ್ಞ ಡಾ ಆರ್ ಚಿದಂಬರಂ ಅವರು ತನ್ನ 88ನೇ ವಯಸ್ಸಿನಲ್ಲಿ ಮುಂಬೈನಲ್ಲಿ ಇಂದು ಬೆಳಿಗ್ಗೆ ನಿಧನರಾದರು. ಅವರು ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು.
1974 ಮತ್ತು 1998ರಲ್ಲಿ ಪೋಖ್ರಾನ್–1 ಪರೀಕ್ಷೆ ಮತ್ತು ಪೋಖ್ರಾನ್-2 ಪರೀಕ್ಷೆಯಲ್ಲಿ ಡಾ. ಆರ್ ಚಿದಂಬರಂ ಸಂಯೋಜಕರಾಗಿದ್ದರು. ಹಾಗೆಯೇ ಪರಮಾಣು ಶಕ್ತಿ ಆಯೋಗದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು. ಭಾರತ ಸರ್ಕಾರದ ಪ್ರಧಾನ ವೈಜ್ಞಾನಿಕ ಸಲಹೆಗಾರರೂ ಆಗಿದ್ದರು.
ಇದನ್ನು ಓದಿದ್ದೀರಾ? ಜಿ ಸಿ ಬಯ್ಯಾರೆಡ್ಡಿ ನಿಧನ | ಸಿದ್ದರಾಮಯ್ಯ, ಕುಮಾರಸ್ವಾಮಿ ಸೇರಿ ಗಣ್ಯರ ಸಂತಾಪ
ಪರಮಾಣು ವಿಜ್ಞಾನಿಯಾಗಿ ಅವರು ನೀಡಿದ ಕೊಡುಗೆಗೆ ಪದ್ಮವಿಭೂಷಣ ಪ್ರಶಸ್ತಿ ಲಭಿಸಿದೆ. 1974 ರಲ್ಲಿ ಸ್ಮೈಲಿಂಗ್ ಬುದ್ಧ ಮತ್ತು 1998ರಲ್ಲಿ ಆಪರೇಷನ್ ಶಕ್ತಿ ಎರಡಕ್ಕೂ ಆರ್ ಚಿದಂಬರಂ ಕೊಡುಗೆ ನೀಡಿದ್ದಾರೆ.
ಭಾಭಾ ಪರಮಾಣು ಸಂಶೋಧನಾ ಕೇಂದ್ರದ (ಬಿಎಆರ್‌ಸಿ) ನಿರ್ದೇಶಕರಾಗಿ, ಪರಮಾಣು ಶಕ್ತಿ ಆಯೋಗದ (ಎಇಸಿ) ಅಧ್ಯಕ್ಷರಾಗಿ, ಪರಮಾಣು ಶಕ್ತಿ ಇಲಾಖೆಯ (ಡಿಎಇ) ಕಾರ್ಯದರ್ಶಿಯಾಗಿ ಡಾ. ಆರ್ ಚಿದಂಬರಂ ಕಾರ್ಯ ನಿರ್ವಹಿಸಿದ್ದರು.
ಆರ್ ಚಿದಂಬರಂ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಸೇರಿದಂತೆ ಹಲವು ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.
