ಸಂದೇಶ್ ಖಾಲಿಯ ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯದ ಪ್ರಮುಖ ಆರೋಪಿ ತೃಣಮೂಲ ಕಾಂಗ್ರೆಸ್ ನಾಯಕ ಶೇಖ್ ಶಹಜಹಾನ್ ನನ್ನು ತಕ್ಷಣ ಬಂಧಿಸಿ ಎಂದು ಕಲ್ಕತ್ತಾ ಹೈಕೋರ್ಟ್ ಪಶ್ಚಿಮ ಬಂಗಾಳ ಸರ್ಕಾರಕ್ಕೆ ಆದೇಶಿಸಿದೆ.
ನಾಲ್ಕು ವರ್ಷಗಳ ಹಿಂದೆಯೇ ಘಟನೆಗಳ ಬಗ್ಗೆ ವರದಿಯಾಗಿದ್ದರೂ ಪ್ರಕರಣದ ಬಗ್ಗೆ ಕ್ರಮ ಕೈಗೊಳ್ಳದ ಅಧಿಕಾರಿಗಳಿಗೆ ಕೋರ್ಟ್ ಛೀಮಾರಿ ಹಾಕಿದೆ.
“ನಾಲ್ಕು ವರ್ಷಗಳ ಹಿಂದೆಯೇ ಪೊಲೀಸ್ ಠಾಣೆಯಲ್ಲಿ ವರದಿ ದಾಖಲಾಗಿದ್ದರೂ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗ 42 ಆರೋಪಪಟ್ಟಿಗಳನ್ನು ಸಲ್ಲಿಸಿರುವುದಕ್ಕೆ ಆಶ್ಚರ್ಯ ತಂದಿದೆ. ಒಂದು ವೇಳೆ ಬಂಧನಕ್ಕೆ ತಡೆ ನೀಡಿದ್ದರೆ ಕೆಟ್ಟ ಸಂದೇಶ ಮೂಡುತ್ತಿತ್ತು. ಈ ಕಾರಣದಿಂದ ಅವರನ್ನು ಬಂಧಿಸಬೇಕು” ಎಂದು ಹೈಕೋರ್ಟ್ ತಿಳಿಸಿದೆ.
ಶೇಖ್ ಶಹಜಹಾನ್ ವಿರುದ್ಧ ಕಾನೂನು ಕ್ರಮ ಕೈಗೊಂಡಿರುವ ಬಗ್ಗೆ ಪತ್ರಿಕೆಗಳಲ್ಲಿ ಸಾರ್ವಜನಿಕ ಪ್ರಕಟಣೆ ಹೊರಡಿಸುವಂತೆ ಅಧಿಕಾರಿಗಳಿಗೆ ನ್ಯಾಯಾಲಯ ಸೂಚಿಸಿತು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ವಿಪಕ್ಷ ನಾಯಕ ಅಶೋಕ್ ಮತ್ತು ಸಾರ್ವಜನಿಕ ಸಭ್ಯತೆ
ಶೇಖ್ ಶಹಜಹಾನ್ ವಿರುದ್ಧ ರಾಜ್ಯ ಸರ್ಕಾರ ಲೈಂಗಿಕ ದೌರ್ಜನ್ಯ ಹಾಗೂ ಭೂಕಬಳಿಕೆ ಸೇರಿ 1250 ದೂರುಗಳನ್ನು ಸ್ವೀಕರಿಸಿದ್ದರೆ, ಪರಿಶಿಷ್ಟ ಪಂಗಡಗಳ ರಾಷ್ಟ್ರೀಯ ಆಯೋಗ 50 ದೂರುಗಳನ್ನು ಪಡೆದಿತ್ತು.
ಕೋರ್ಟ್ ಆದೇಶದ ನಂತರ ಪ್ರತಿಕ್ರಿಯೆ ನೀಡಿರುವ ಟಿಎಂಸಿ ಏಳು ದಿನಗಳ ಒಳಗಾಗಿ ಶೇಖ್ ಶಹಜಹಾನ್ ವಿರುದ್ಧ ದೂರು ದಾಖಲಿಸುವುದಾಗಿ ತಿಳಿಸಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಟಿಎಂಸಿ ನಾಯಕ ಕುನಾಲ್ ಘೋಷ್, ಈ ವಿಷಯ ನ್ಯಾಯಾಲಯದ ಕುಣಿಕೆಯಲ್ಲಿ ಸಿಲುಕಿಕೊಂಡಿತ್ತು. ವಿಪಕ್ಷ ಈ ವಿಷಯವನ್ನು ರಾಜಕೀಯಕರಣಗೊಳಿಸುತ್ತಿದೆ.ಹೈಕೋರ್ಟ್ ಈ ಬಗ್ಗೆ ಸ್ಪಷ್ಟೀಕರಣ ಕೊಟ್ಟು ಪೊಲೀಸರು ಕ್ರಮ ಕೈಗೊಳ್ಳುವುದಕ್ಕೆ ಅನುಮತಿಸಿರುವುದಕ್ಕೆ ಧನ್ಯವಾದಗಳು. ಶೇಖ್ ಶಹಜಹಾನ್ ಅವರನ್ನು ಏಳು ದಿನಗಳ ಒಳಗಾಗಿ ಬಂಧಿಸಲಾಗುವುದು” ಎಂದು ತಿಳಿಸಿದ್ದಾರೆ.
ಜನವರಿ 5ರಂದು ಜಾರಿ ನಿರ್ದೇಶನಾಲಯದ ಅಧಿಕಾರಿಗಳ ಮೇಲೆ ಪಶ್ಚಿಮ ಬಂಗಾಳದಲ್ಲಿ ದಾಳಿಯಾದ ನಂತರ ಶಹಜಹಾನ್ ತಲೆ ಮರೆಸಿಕೊಂಡಿದ್ದಾನೆ.