ಅನುಚ್ಛೇದ 142: ಸುಪ್ರೀಂ ಕೋರ್ಟ್‌ನ ವಿಶೇಷಾಧಿಕಾರ, ನ್ಯಾಯದ ಸಂಜೀವಿನಿ!

Date:

ದೇಶಾದ್ಯಂತ ಕಾಕ್ರೋಚ್ ಜನತಾ ಪಾರ್ಟಿ ನೇತೃತ್ವದಲ್ಲಿ ನಡೆದ ವಿದ್ಯಾರ್ಥಿ, ಯುವಜನರ ಬೃಹತ್ ಪ್ರತಿಭಟನೆಗಳ ಸಂದರ್ಭದಲ್ಲಿ ದಾಖಲಾಗಿದ್ದ ನೂರಾರು ಎಫ್‌ಐಆರ್‌ಗಳನ್ನು ಸುಪ್ರೀಂ ಕೋರ್ಟ್‌ ರದ್ದುಗೊಳಿಸಿದೆ. ಎಫ್‌ಐಆರ್‌ಗಳನ್ನು ಹಿಂಪಡೆಯುವಲ್ಲಿ ಸರ್ಕಾರಗಳು ವಿಳಂಬ ಧೋರಣೆ ತೋರಿದ್ದರಿಂದ ನ್ಯಾಯಾಲಯವು ಸಂವಿಧಾನದ ಅನುಚ್ಛೇದ 142ರ ಅಡಿಯಲ್ಲಿ ವಿಶೇಷ ಅಧಿಕಾರ ಬಳಸಿ, ಎಫ್‌ಐಆರ್‌ಗಳನ್ನು ರದ್ದುಗೊಳಿಸಿದೆ. ಧೀರ್ಘಾವಧಿಯ ವಿಚಾರಣೆ ಮತ್ತು ಕಾನೂನು ತಾಂತ್ರಿಕತೆಗಳಿಗೆ ಕಾಯದೆ, ಯುವಜನರ ಭವಿಷ್ಯ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಎತ್ತಿಹಿಡಿಯಲು ಈ ಐತಿಹಾಸಿಕ ಕ್ರಮ ಕೈಗೊಂಡಿದೆ.

- Advertisement -

ಏನಿದು ಅನುಚ್ಛೇದ 142?

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಜನತಂತ್ರದ ಬಿಕ್ಕಟ್ಟಿಗೆ ಮೌನ; ವ್ಯಾಪಾರಿಗಳ ನಷ್ಟಕ್ಕೆ ಪರಿಹಾರದ ಭರವಸೆ;...

ಚುನಾವಣಾ ಜನತಂತ್ರ ಬಿಕ್ಕಟ್ಟಿಗೆ ಸಿಲುಕಿದಾಗ, ನಾಗರಿಕರ ಪ್ರತಿಭಟನಾ ಹಕ್ಕು ಬೀದಿಗೆ ಬಿದ್ದಾಗ ಸುಪ್ರೀಂ ಕೋರ್ಟ್ ತಳೆದ ಮೌನ, ಸ್ಪಂದಿಸಿದ ರೀತಿ, ಕನಾಟ್ ಪ್ಲೇಸ್‌ನ ವ್ಯಾಪಾರಿಗಳು ಹಾಗೂ ಉದ್ಯೋಗಿಗಳ ಜೀವನೋಪಾಯಕ್ಕೆ ಧಕ್ಕೆಯಾದರೆ ಮಧ್ಯಪ್ರವೇಶಿಸಿ ಪರಿಹಾರ...

‘ಕೈಮುಗಿದು ಕಾಲಿಗೆ ಬೀಳುವೆ…’ ಪ್ರಜಾಪ್ರಭುತ್ವ ಕುಸಿತಕ್ಕೆ ಮುನ್ನುಡಿಯೇ?

ಜಾತಿ ಅಸಮಾನತೆ, ಸಾಮಾಜಿಕ ಶೋಷಣೆ ಮತ್ತು ರಾಜಕೀಯ ಪ್ರಭಾವದ ಮುಂದೆ ಜನಪ್ರತಿನಿಧಿಗಳೇ ಕೈಮುಗಿದು ನಿಲ್ಲುವ ದುಸ್ಥಿತಿ ಪ್ರಜಾಪ್ರಭುತ್ವದ ಅಡಿಪಾಯವನ್ನೇ ಅಲುಗಾಡಿಸುತ್ತಿದೆ. ಸಂವಿಧಾನ ಸಾರಿದ ಸಮಾನತೆ, ಸ್ವಾತಂತ್ರ್ಯ ಮತ್ತು ಭ್ರಾತೃತ್ವ ಕೇವಲ ಕಾಗದಕ್ಕೆ ಸೀಮಿತವಾಗುತ್ತಿದೆಯೇ...

JNU ವಿದ್ಯಾರ್ಥಿ ‘ನಜೀಬ್’ ನಾಪತ್ತೆಗೆ 10 ವರ್ಷಗಳು: ಉತ್ತರ...

ತನಿಖಾ ಸಂಸ್ಥೆಗಳು ಕಡತವನ್ನು ಮುಚ್ಚಿದ ಮಾತ್ರಕ್ಕೆ ಒಬ್ಬ ತಾಯಿಯ ಹುಡುಕಾಟವನ್ನಾಗಲಿ ಅಥವಾ ಅಮಾಯಕ ವಿದ್ಯಾರ್ಥಿಯೊಬ್ಬನ ನಾಪತ್ತೆ ಕುರಿತ ಪ್ರಶ್ನೆಗಳನ್ನಾಗಲಿ ಅಳಿಸಿಹಾಕಲು ಸಾಧ್ಯವಿಲ್ಲ. ನಜೀಬ್ ಅಹ್ಮದ್ ಅವರನ್ನು ಕೇವಲ ಒಂದು ಪ್ರತಿಭಟನೆಯ ಸಂಕೇತವಾಗಿ ನೆನೆಯುವ...

ಭಾರತೀಯ ಸಂವಿಧಾನವು ಸುಪ್ರೀಂ ಕೋರ್ಟ್‌ಗೆ ಕೇವಲ ಶಾಸಕಾಂಗ ರೂಪಿಸಿದ ಕಾನೂನುಗಳನ್ನು ಯಾಂತ್ರಿಕವಾಗಿ ವ್ಯಾಖ್ಯಾನಿಸುವ ಜವಾಬ್ದಾರಿಯನ್ನಷ್ಟೇ ನೀಡಿಲ್ಲ. ಬದಲಾಗಿ, ಕೆಲವೊಂದು ಅತ್ಯಂತ ಅಸಾಧಾರಣ ಮತ್ತು ಸಂಕೀರ್ಣ ಸಂದರ್ಭಗಳಲ್ಲಿ, ಕಾನೂನಿನ ತಾಂತ್ರಿಕ ಮಿತಿಗಳನ್ನು ಮೀರಿ, ಪೂರ್ಣ ಪ್ರಮಾಣದ ‘ಸಂಪೂರ್ಣ ನ್ಯಾಯ’ (Complete Justice) ಒದಗಿಸುವ ವಿಶೇಷ ಅಧಿಕಾರವನ್ನೂ ನೀಡಿದೆ. ಈ ವಿಶೇಷ ಸಂವಿಧಾನಿಕ ಅಧಿಕಾರವೇ ಅನುಚ್ಛೇದ 142. ಇದನ್ನು ‘ನ್ಯಾಯಕ್ಕಾಗಿ ಇರುವ ಸಂಜೀವಿನಿ’ ಎಂದೂ ಬಣ್ಣಿಸಲಾಗಿದೆ.

ಸಮಾಜದ ಅತ್ಯಂತ ದುರ್ಬಲ ವ್ಯಕ್ತಿಗೂ ಅಂತಿಮವಾಗಿ ನ್ಯಾಯ ತಲುಪಿಸುವ ಉದ್ದೇಶದಿಂದ ಸುಪ್ರೀಂ ಕೋರ್ಟ್‌ಗೆ ಅನುಚ್ಛೇದ 142ರ ಅಡಿಯಲ್ಲಿ ವಿಶೇಷ ಅಧಿಕಾರ ಒದಗಿಸಲಾಗಿದೆ. ಸಾಮಾನ್ಯ ಕಾನೂನುಗಳ ಚೌಕಟ್ಟಿನಲ್ಲಿ ತಕ್ಷಣದ ಪರಿಹಾರ ಸಿಗದ ಸಂದರ್ಭಗಳಲ್ಲಿ, ಮೂಲಭೂತ ನ್ಯಾಯದ ಉದ್ದೇಶವನ್ನು ಈಡೇರಿಸಲು ಸುಪ್ರೀಂ ಕೋರ್ಟ್ ತನ್ನ ಅಸಾಧಾರಣ ಸಂವಿಧಾನಿಕ ಅಧಿಕಾರ ಬಳಸಿ ಯಾವುದೇ ಆದೇಶ ನೀಡಬಹುದು ಎಂದು ಈ ಅನುಚ್ಛೇದ ಹೇಳುತ್ತದೆ.

ಆದರೆ, ಈ ಅಧಿಕಾರವು ಸಾಮಾನ್ಯ ಆಡಳಿತ ವ್ಯವಸ್ಥೆಗೆ ಪರ್ಯಾಯವಲ್ಲ ಅಥವಾ ಪ್ರತಿಯೊಂದು ಸಣ್ಣಪುಟ್ಟ ಪ್ರಕರಣದಲ್ಲೂ ಬಳಸಬಹುದಾದ ಸಾಮಾನ್ಯ ಪ್ರಕ್ರಿಯೆಯಲ್ಲ. ಅಂತೆಯೇ, ನ್ಯಾಯಾಲಯಕ್ಕೆ ನೀಡಲಾಗಿರುವ ಯಾವುದೇ ಅನಿಯಂತ್ರಿತ ಅಥವಾ ಸ್ವೇಚ್ಛಾಚಾರದ ಅಧಿಕಾರವೂ ಅಲ್ಲ. ಇದು ಕೇವಲ ಅತ್ಯಂತ ವಿರಳ ಸಂದರ್ಭಗಳಲ್ಲಿ ಮಾತ್ರವೇ ಬಳಸಬಹುದಾದ ಸಂವಿಧಾನಿಕ ರಕ್ಷಣಾ ಕವಚವಾಗಿದೆ. ಸಂವಿಧಾನದ ಮೂಲಭೂತ ಆಶಯಗಳು, ನೈಸರ್ಗಿಕ ನ್ಯಾಯದ ತತ್ವಗಳು ಹಾಗೂ ಸಾರ್ವಜನಿಕ ಹಿತಾಸಕ್ತಿಯ ಭದ್ರ ಬುನಾದಿಯ ಮೇಲೆ ಮಾತ್ರವೇ ಈ ಅಧಿಕಾರವನ್ನು ನ್ಯಾಯಾಲಯ ಪ್ರಯೋಗಿಸುತ್ತದೆ.

ಸಂವಿಧಾನದ ಅನುಚ್ಛೇದ 142(1) ಹೇಳುವಂತೆ; ನ್ಯಾಯಾಲಯದ ಮುಂದೆ ಇರುವ ಯಾವುದೇ ಪ್ರಕರಣ ಅಥವಾ ವಿಷಯದಲ್ಲಿ ‘ಸಂಪೂರ್ಣ ನ್ಯಾಯ’ ಒದಗಿಸಲು ಅಗತ್ಯವಿರುವ ಯಾವುದೇ ಆದೇಶ ಅಥವಾ ಆಜ್ಞೆಯನ್ನು ಹೊರಡಿಸುವ ಸಂಪೂರ್ಣ ಅಧಿಕಾರ ಸುಪ್ರೀಂ ಕೋರ್ಟ್‌ಗೆ ಇದೆ. ಹೀಗೆ ಹೊರಡಿಸಲಾದ ಆದೇಶಗಳು ಅಥವಾ ಆಜ್ಞೆಗಳು ಸಮಗ್ರ ಭಾರತದ ಭೂಭಾಗದಾದ್ಯಂತ ತಕ್ಷಣದಿಂದಲೇ ಜಾರಿಗೆ ಬರುತ್ತವೆ.

ಅಂದರೆ, ಯಾವುದೇ ಒಂದು ನಿರ್ದಿಷ್ಟ ಪ್ರಕರಣದಲ್ಲಿ ಕಾನೂನಿನ ಅಕ್ಷರಶಃ ಅನ್ವಯದಿಂದ ಅನ್ಯಾಯ ಉಂಟಾಗುವ ಅಪಾಯವಿದ್ದರೆ ಅಥವಾ ಚಾಲ್ತಿಯಲ್ಲಿರುವ ಕಾನೂನುಗಳಲ್ಲಿ ಅದಕ್ಕೆ ಸೂಕ್ತ ಪರಿಹಾರ ಮಾರ್ಗವೇ ಇಲ್ಲದಿರುವ ಪರಿಸ್ಥಿತಿ ನಿರ್ಮಾಣವಾದರೆ, ಸುಪ್ರೀಂ ಕೋರ್ಟ್ ತನ್ನ ವಿಶೇಷ ಅಧಿಕಾರವನ್ನು ಚಲಾಯಿಸುತ್ತದೆ.

ಅನುಚ್ಛೇದ 142ರ ಅಗತ್ಯ ಏಕೆ ಬಂತು?

ಸುಪ್ರೀಂ ಕೋರ್ಟ್‌ಗೆ ಅನುಚ್ಛೇದ 142ರ ಅಡಿಯಲ್ಲಿ ವಿಶೇಷ ಅಧಿಕಾರ ನೀಡುವುದರಲ್ಲಿ ‘ಕಾನೂನು ಮತ್ತು ನ್ಯಾಯದ ನಡುವಿನ ಅಂತರವನ್ನು ಕಡಿಮೆ ಮಾಡುವುದು’ ಮುಖ್ಯ ಉದ್ದೇಶ. ಸಮಾಜವು ವೇಗವಾಗಿ ಬದಲಾಗುತ್ತಿದ್ದು, ಹೊಸ ಸಮಸ್ಯೆಗಳು ಎದುರಾಗುತ್ತವೆ. ಅದೇ ರೀತಿ, ಕೆಲವು ಸಂಕೀರ್ಣ ಪ್ರಕರಣಗಳಲ್ಲಿ ಕಾನೂನುಗಳು ಅಸ್ತಿತ್ವದಲ್ಲಿದ್ದರೂ, ಅವುಗಳ ಒಳಗೆ ನಿಗದಿಪಡಿಸಲಾದ ಮಿತಿಗಳಿಂದಾಗಿ ಸಂತ್ರಸ್ತರಿಗೆ ಸಂಪೂರ್ಣ ಮತ್ತು ತೃಪ್ತಿಕರ ನ್ಯಾಯ ಸಿಗುವುದು ಅಸಾಧ್ಯವಾಗುತ್ತದೆ. ಅಂತಹ ತುರ್ತು ಸಂದರ್ಭಗಳಲ್ಲಿ ಅನುಚ್ಛೇದ 142 ನ್ಯಾಯಾಂಗಕ್ಕೆ ಸಮಯೋಚಿತವಾಗಿ ಮಧ್ಯಪ್ರವೇಶಿಸುವ ಹಕ್ಕನ್ನು ನೀಡುತ್ತದೆ. ಅಲ್ಲದೆ, ಸಾಮಾನ್ಯ ಶಾಸನಗಳ ಚೌಕಟ್ಟನ್ನು ದಾಟಿ, ಸಂವಿಧಾನದ ವಿಶಾಲ ಮೂಲಭೂತ ತತ್ವಗಳನ್ನೇ ಆಧಾರವಾಗಿಟ್ಟುಕೊಂಡು ಪರ್ಯಾಯ ಪರಿಹಾರ ರೂಪಿಸುತ್ತದೆ.

ಈ ಅಧಿಕಾರದ ಮೂಲ ಉದ್ದೇಶ ಶಾಸಕಾಂಗದ ಕೆಲಸವನ್ನು ಕಸಿದುಕೊಳ್ಳುವುದಲ್ಲ ಅಥವಾ ಚಾಲ್ತಿಯಲ್ಲಿರುವ ಕಾನೂನನ್ನು ಬದಲಿಸುವುದಲ್ಲ; ಬದಲಾಗಿ, ಕಾನೂನಿನ ಅಂತಿಮ ಗುರಿಯಾದ ‘ನ್ಯಾಯ’ವನ್ನು ಜೀವಂತವಾಗಿಡಲು, ಯಾಂತ್ರಿಕವಾಗಿ ಕಾನೂನಿನ ಪದಗಳನ್ನು ಪಾಲಿಸುವುದಕ್ಕಿಂತ, ಆ ಕಾನೂನಿನ ಹಿಂದಿರುವ ನ್ಯಾಯದ ಪರಮೋಚ್ಚ ಉದ್ದೇಶಕ್ಕೆ ಆದ್ಯತೆ ನೀಡುವುದು ಈ ಅನುಚ್ಛೇದವನ್ನು ಸಂವಿಧಾನದಲ್ಲಿ ತರಲಾಗಿದೆ.

ಅನುಚ್ಛೇದ 142ಅನ್ನು ಸುಪ್ರೀಂ ಕೋರ್ಟ್‌ ಯಾವಾಗೆಲ್ಲ ಬಳಸಿದೆ?

ವಿಶಾಖ ಮಾರ್ಗಸೂಚಿ: ಸಂವಿಧಾನದ ಅನುಚ್ಛೇದ 142ಅನ್ನು ಅತ್ಯಂತಕ ಪರಿಣಾಮಕಾರಿ ಮತ್ತು ಐತಿಹಾಸಿಕವಾಗಿ ಸುಪ್ರೀಂ ಕೋರ್ಟ್‌ ಮೊದಲ ಬಾರಿಗೆ ಬಳಸಿದ್ದು 1997ರಲ್ಲಿ – ವಿಶಾಖ ಮಾರ್ಗಸೂಚಿ ಜಾರಿಗೊಳಿಸುವಾಗ. ಆ ಸಮಯದಲ್ಲಿ; ಭಾರತದಲ್ಲಿ ಮಹಿಳೆಯರ ಗೌರವ, ಸಮಾನತೆ ಹಾಗೂ ಸುರಕ್ಷತೆಯು ಸಂವಿಧಾನ ನೀಡಿದ ಮೂಲಭೂತ ಹಕ್ಕುಗಳ ಭಾಗವಾಗಿತ್ತು. ಆದರೆ, ಕೆಲಸದ ಸ್ಥಳಗಳಲ್ಲಿ ಮಹಿಳೆಯರ ಮೇಲಾಗುವ ಲೈಂಗಿಕ ಕಿರುಕುಳವನ್ನು ತಡೆಯಲು ಯಾವುದೇ ನಿರ್ದಿಷ್ಟ ಅಥವಾ ಸಮಗ್ರ ಕಾನೂನು ಇರಲಿಲ್ಲ.

ಈ ಕಾನೂನು ಕೊರತೆಯನ್ನು ಗಮನಿಸಿದ ಸುಪ್ರೀಂ ಕೋರ್ಟ್, ಅನುಚ್ಛೇದ 142ರ ಅಡಿಯಲ್ಲಿ ತನ್ನ ವಿಶೇಷ ಅಧಿಕಾರವನ್ನು ಬಳಸಿ ‘ವಿಶಾಖ ಮಾರ್ಗದರ್ಶಿ ಸೂತ್ರ’ಗಳನ್ನು ರೂಪಿಸಿತು. ಶಾಸಕಾಂಗವು ನೂತನ ಕಾನೂನು ತರುವವರೆಗೂ ಈ ಮಾರ್ಗಸೂಚಿಗಳೇ ದೇಶಾದ್ಯಂತ ಕಾನೂನಿನ ಬಲದೊಂದಿಗೆ ಜಾರಿಯಲ್ಲಿದ್ದವು. ನಂತರದ ದಿನಗಳಲ್ಲಿ ಇದೇ ಮಾರ್ಗಸೂಚಿಗಳನ್ನು ಆಧಾರವಾಗಿಟ್ಟುಕೊಂಡು ಕೇಂದ್ರ ಸರ್ಕಾರವು 2013ರಲ್ಲಿ ‘ಕೆಲಸದ ಸ್ಥಳದಲ್ಲಿ ಮಹಿಳೆಯರ ಮೇಲಿನ ಲೈಂಗಿಕ ಕಿರುಕುಳ ತಡೆ ಕಾಯ್ದೆ’ಯನ್ನು ಜಾರಿಗೆ ತಂದಿತು.

ಭೋಪಾಲ್ ಅನಿಲ ದುರಂತ: 1984ರಲ್ಲಿ ಸಂಭವಿಸಿದ ಭೋಪಾಲ್ ಅನಿಲ ದುರಂತವು ಮಾನವ ಇತಿಹಾಸದ ಅತ್ಯಂತ ಭೀಕರ ಕೈಗಾರಿಕಾ ವಿಪತ್ತುಗಳಲ್ಲಿ ಒಂದಾಗಿದೆ. ಯೂನಿಯನ್ ಕಾರ್ಬೈಡ್ ಸಂಸ್ಥೆಯ ವಿಷಕಾರಿ ಅನಿಲ ಸೋರಿಕೆಯಿಂದಾಗಿ ಸಾವಿರಾರು ಅಮಾಯಕರು ಕೆಲವೇ ನಿಮಿಷಗಳಲ್ಲಿ ಪ್ರಾಣ ಕಳೆದುಕೊಂಡರೆ, ಲಕ್ಷಾಂತರ ಜನರು ಜೀವನಪೂರ್ತಿ ರೋಗರುಜಿನಗಳಿಂದ ಬಳಲುವಂತಾಯಿತು. ಈ ಪ್ರಕರಣದಲ್ಲಿ ಸಂತ್ರಸ್ತರಿಗೆ ತಕ್ಷಣದ ಆರ್ಥಿಕ ಮತ್ತು ವೈದ್ಯಕೀಯ ಪರಿಹಾರ ಸಿಗಬೇಕಾದ ತುರ್ತು ಅಗತ್ಯವಿತ್ತು. ಸಾಮಾನ್ಯ ಸಿವಿಲ್ ಮತ್ತು ಕ್ರಿಮಿನಲ್ ನ್ಯಾಯಾಲಯಗಳ ದೀರ್ಘಾವಧಿಯ ವಿಚಾರಣೆ ಮುಗಿಯುವವರೆಗೆ ಕಾಯುವುದು ಮಾನವೀಯತೆಯ ದೃಷ್ಟಿಯಿಂದ ಅಸಾಧ್ಯವಾಗಿತ್ತು.

ಈ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಅನುಚ್ಛೇದ 142ರ ಸಂವಿಧಾನಿಕ ಶಕ್ತಿಯನ್ನು ಬಳಸಿಕೊಂಡು, ಕಂಪನಿಯು ಸಂತ್ರಸ್ತರಿಗೆ ಬಹುಕೋಟಿ ಮೊತ್ತದಲ್ಲಿ ಪರಿಹಾರ ನೀಡಬೇಕೆಂದು ನಿಗದಿ ಮಾಡಿತು, ಪರಿಹಾರವು ತಕ್ಷಣವೇ ಸಂತ್ರಸ್ತರಿಗೆ ತಲುಪುವಂತೆ ವ್ಯವಸ್ಥೆ ಮಾಡಿತು. ಕೇವಲ ತಾಂತ್ರಿಕ ವಿಚಾರಣೆ ನಡೆಸುವುದಕ್ಕಿಂತ ಮಾನವೀಯ ತುರ್ತುಸ್ಥಿತಿಗೆ ಸ್ಪಂದಿಸುವುದು ನ್ಯಾಯಾಂಗದ ಕರ್ತವ್ಯ ಎಂದು ನ್ಯಾಯಾಲಯ ಹೇಳಿತು.

ಬಾಬರಿ ಮಸೀದಿ ವಿವಾದ: ನ್ಯಾಯಾಲಯವು ಅನುಚ್ಛೇದ 142ಅನ್ನು ಬಳಸಿದ್ದಕ್ಕೆ ತೀವ್ರ ಟೀಕೆಗಳು ವ್ಯಕ್ತವಾಗಿದ್ದು ಅಯೋಧ್ಯೆಯ ಬಾಬರಿ ಮಸೀದಿ ಪ್ರಕರಣದಲ್ಲಿ. ಅಯೋಧ್ಯೆ ಬಾಬರಿ ಮಸೀದಿ ಭೂವಿವಾದ ಪ್ರಕರಣವು ಭಾರತದ ಅತ್ಯಂತ ಸೂಕ್ಷ್ಮ, ಭಾವನಾತ್ಮಕ ಹಾಗೂ ದೀರ್ಘಕಾಲದ ನ್ಯಾಯಾಂಗ ಸವಾಲಾಗಿತ್ತು. ಈ ವಿವಾದಿತ ಜಾಗದ ಕುರಿತು 2019ರಲ್ಲಿ ಸಿವಿಲ್ ಕಾನೂನುಗಳ ಆಧಾರದ ಮೇಲೆ ಅಂತಿಮ ತೀರ್ಪು ನೀಡಿದ ಸುಪ್ರೀಂ ಕೋರ್ಟ್, ಆಸ್ತಿ ಹಕ್ಕಿನ ನಿರ್ಧಾರದ ಹೊರತಾಗಿ ದೇಶದ ಸಾಂವಿಧಾನಿಕ ಶಾಂತಿ, ಸೌಹಾರ್ದತೆ ಹಾಗೂ ಸಮತೋಲನವನ್ನು ಕಾಯ್ದುಕೊಳ್ಳುವ ಉದ್ದೇಶದಿಂದ, ಅನುಚ್ಛೇದ 142ಅನ್ನು ಬಳಸಿತು. ಬಾಬರಿ ಮಸೀದಿಯಿದ್ದ ಜಾಗವನ್ನು ರಾಮಮಂದಿರ ನಿರ್ಮಾಣ ಕೊಟ್ಟು, ಮಸೀದಿ ನಿರ್ಮಾಣಕ್ಕೆ ಪರ್ಯಾಯವಾಗಿ ಐದು ಎಕರೆ ಜಮೀನನ್ನು ನೀಡುವಂತೆ ಸರ್ಕಾರಕ್ಕೆ ನಿರ್ದೇಶಿಸಿತು.

ಚಂಡೀಗಢ ಮೇಯರ್ ಚುನಾವಣೆ: 2024ರ ಚಂಡೀಗಢ ಮೇಯರ್ ಚುನಾವಣೆಯಲ್ಲಿ ಚುನಾವಣಾ ಅಧಿಕಾರಿಯೊಬ್ಬರು ಮತಪತ್ರಗಳನ್ನು ಅಕ್ರಮವಾಗಿ ಅಮಾನ್ಯಗೊಳಿಸಿದ ಪ್ರಕರಣ ದೇಶಾದ್ಯಂತ ವ್ಯಾಪಕ ಚರ್ಚೆಗೆ ಗ್ರಾಸವಾಗಿತ್ತು. ಈ ಪ್ರಕರಣದಲ್ಲಿ ಮಧ್ಯಪ್ರವೇಶಿಸಿದ ಸುಪ್ರೀಂ ಕೋರ್ಟ್‌, ಕಾನೂನು ಪ್ರಕ್ರಿಯೆಯಂತೆ ಇಡೀ ಚುನಾವಣೆಯನ್ನು ರದ್ದುಗೊಳಿಸಿ ಮತ್ತೆ ಹೊಸದಾಗಿ ಚುನಾವಣೆ ನಡೆಸಲು ಆದೇಶಿಸುವ ಬದಲು, ಅನುಚ್ಛೇದ 142ಅನ್ನು ಬಳಸಿ, ಅಕ್ರಮವಾಗಿ ತಿರಸ್ಕರಿಸಲಾಗಿದ್ದ ಮತಗಳಿಗೆ ಸಿಂಧುತ್ವಕೊಟ್ಟು, ನಿಜವಾದ ವಿಜೇತರನ್ನು ಮೇಯರ್ ಎಂದು ಘೋಷಿಸಿತು.

ಈ ಲೇಖನ ಓದಿದ್ದೀರಾ?: ಬದಲಾಗುತ್ತಿದೆಯೇ ಯುವಜನರ ರಾಜಕೀಯ ಚಿತ್ತ; ಲೋಕನೀತಿ ಅಧ್ಯಯನ ಹೇಳುವುದೇನು?

ಈಗ, ಜೆನ್‌-ಝೀ ವಿದ್ಯಾರ್ಥಿ-ಯುವಜನರ ವಿರುದ್ಧದ FIR ರದ್ದು

ಕಳೆದ ಜುಲೈ ತಿಂಗಳಿನಲ್ಲಿ; ಪರೀಕ್ಷಾ ಅಕ್ರಮಗಳ ವಿರುದ್ಧ ಸಿಜೆಪಿ ನೇತೃತ್ವದಲ್ಲಿ ದೇಶಾದ್ಯಂತ ವಿದ್ಯಾರ್ಥಿಗಳು ಮತ್ತು ಯುವಜನರು ಬೃಹತ್ ಪ್ರತಿಭಟನೆಗಳನ್ನು ನಡೆಸಿದ್ದರು. ಜುಲೈ 20ರಂದು ಶಾಂತಿಯುತ ‘ಸಂಸತ್ ಚಲೋ’ ಮೆರವಣಿಗೆ ಹೊರಟ್ಟಿದ್ದರು. ಈ ವೇಳೆ, ಪೊಲೀಸರು ಯುವಜನರ ಮೇಲೆ ಅಮಾನವೀಯ ದೌರ್ಜನ್ಯ ನಡೆಸಿದ್ದರು. ಮಾತ್ರವಲ್ಲದೆ, ಎಫ್‌ಐಆರ್‌ಗಳನ್ನೂ ದಾಖಲಿಸಿದ್ದರು. ಆ ನಂತರ, ದೇಶಾದ್ಯಂತ ನಡೆದ ವಿದ್ಯಾರ್ಥಿ-ಯುವಜನರ ಪ್ರತಿಭಟನೆಗಳಿಗೂ ಸಂಬಂಧಿಸಿದಂತೆ ನೂರಾರು ಎಫ್‌ಐಆರ್‌ಗಳನ್ನು ದಾಖಲಿಸಿದ್ದರು.

ಕೇಂದ್ರ ಸರ್ಕಾರವು ವಿದ್ಯಾರ್ಥಿ-ಯುವಜನರ ವಿರುದ್ಧದ ಎಫ್‌ಐಆರ್‌ಗಳನ್ನು ಹಿಂಪಡೆಯುವುದಾಗಿ ಭರವಸೆ ನೀಡಿತ್ತಾದರೂ, ತನ್ನ ಭರವಸೆಯನ್ನು ಪೂರ್ಣಗೊಳಿಸಲಿಲ್ಲ. ಪರಿಣಾಮವಾಗಿ, ಸಾವಿರಾರು ಯುವಜನರ ಭವಿಷ್ಯಕ್ಕೆ ಕತ್ತಲೆ ಆವರಿಸಿತು. ವಿದ್ಯಾರ್ಥಿ-ಯುವಜನರು ತಮ್ಮ ವಿರುದ್ಧದ ಎಫ್‌ಐಆರ್‌ ರದ್ದತಿಗಾಗಿ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿಸಿದರು. ಪ್ರಕರಣಗಳ ಗಂಭೀರತೆ ಮತ್ತು ಪ್ರತಿಭಟನಾ ನಿರತರ ಹಕ್ಕುಗಳನ್ನು ಪರಿಶೀಲಿಸಿದ ನ್ಯಾಯಾಲಯವು 142ನೇ ವಿಧಿಯಡಿ ಎಫ್‌ಐಆರ್‌ಗಳನ್ನು ರದ್ದುಗೊಳಿಸಿದೆ.

ಅನುಚ್ಛೇದ 142 ಕುರಿತಾದ ಟೀಕೆಗಳು

ಸುಪ್ರೀಂ ಕೋರ್ಟ್‌ನ ಈ ಅಸಾಧಾರಣ ಅಧಿಕಾರಕ್ಕೆ ಶಾಸಕಾಂಗದ ಅಸಮಾಧಾನವಿದೆ ಎಂಬುದು ಸ್ಪಷ್ಟ. ಸಂವಿಧಾನದ 142ನೇ ವಿಧಿಯು ‘ನ್ಯಾಯಾಂಗ ಅತಿಕ್ರಮಣ’ಕ್ಕೆ ಕಾರಣವಾಗುತ್ತದೆ ಎಂದು ಆಳುವವರು ವಾದಿಸುತ್ತಾರೆ.

“ದೇಶದಲ್ಲಿ ಕಾನೂನುಗಳನ್ನು ರೂಪಿಸುವ ಸಂಪೂರ್ಣ ಹಕ್ಕು ಜನಪ್ರತಿನಿಧಿಗಳನ್ನೊಳಗೊಂಡ ಶಾಸಕಾಂಗಕ್ಕಿದೆ. ಆ ಕಾನೂನುಗಳನ್ನು ಜಾರಿಗೊಳಿಸುವ ಹೊಣೆಗಾರಿಕೆ ಕಾರ್ಯಾಂಗಕ್ಕಿದೆ. ನ್ಯಾಯಾಲಯಗಳು ತಮ್ಮ ಸಂವಿಧಾನಿಕ ಮಿತಿಯೊಳಗಷ್ಟೇ ಕೆಲಸ ಮಾಡಬೇಕು. ಅನುಚ್ಛೇದ 142ನ್ನು ಪದೇ ಪದೇ ಪ್ರಯೋಗಿಸುವುದರಿಂದ ಸಂವಿಧಾನದ ಮೂಲ ತತ್ವವಾದ ‘ಅಧಿಕಾರ ವಿಭಜನೆ’ಗೆ ಧಕ್ಕೆಯಾಗುತ್ತದೆ. ನ್ಯಾಯಾಂಗವು ಕಾರ್ಯಾಂಗ ಅಥವಾ ಶಾಸಕಾಂಗದ ಕಾರ್ಯವ್ಯಾಪ್ತಿಯಲ್ಲಿ ಅನಗತ್ಯವಾಗಿ ಮಧ್ಯಪ್ರವೇಶಿಸಿದಂತಾಗುತ್ತದೆ” ಎಂದು ಆಳುವ ವರ್ಗ ಪ್ರತಿಪಾದಿಸುತ್ತದೆ.

ಆದಾಗ್ಯೂ, ಭಾರತೀಯ ಸಂವಿಧಾನವು ಪ್ರಜಾಪ್ರಭುತ್ವದ ಮೂರು ಅಂಗಗಳಾದ ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗಗಳ ನಡುವೆ ಸ್ಪಷ್ಟವಾದ ಅಧಿಕಾರ ಹಂಚಿಕೆಯನ್ನು ಮಾಡಿದೆ. ಅನುಚ್ಛೇದ 142 ಈ ಸಮತೋಲಿತ ವ್ಯವಸ್ಥೆಯನ್ನು ಬುಡಮೇಲು ಮಾಡುವುದಿಲ್ಲ; ಬದಲಾಗಿ ಕಾರ್ಯಾಂಗ ಅಥವಾ ಶಾಸಕಾಂಗದ ಲೋಪಗಳಿಂದ ಸಾರ್ವಜನಿಕರಿಗೆ ಅನ್ಯಾಯವಾದಾಗ, ತಕ್ಷಣಕ್ಕೆ ನ್ಯಾಯ ಒದಗಿಸಲು ನ್ಯಾಯಾಂಗಕ್ಕೆ ಇರುವ ಅವಕಾಶವಾಗಿದೆ.

ನ್ಯಾಯದ ಕೊನೆಯ ದೀಪ

ಅನುಚ್ಛೇದ 142 ಭಾರತೀಯ ನ್ಯಾಯಾಂಗ ವ್ಯವಸ್ಥೆಯ ಅತ್ಯಂತ ವಿಶಿಷ್ಟ ಮತ್ತು ಶಕ್ತಿಶಾಲಿ ಅಸ್ತ್ರ. ಇದು ಕಾನೂನುಗಳ ತಾಂತ್ರಿಕ ಚೌಕಟ್ಟನ್ನು ಮೀರಿ, ಸಂವಿಧಾನದ ಜೀವಂತ ಆತ್ಮವಾದ ‘ನ್ಯಾಯ’ವನ್ನು ಕಾಪಾಡುವ ಮಹತ್ವದ ಸಾಧನವೂ ಕೂಡ. ಸಮಾಜದ ದುರ್ಬಲರು, ಸಂಕಷ್ಟದಲ್ಲಿರುವ ಸಂತ್ರಸ್ತರು ಹಾಗೂ ಸಾಮಾನ್ಯ ಕಾನೂನು ಪ್ರಕ್ರಿಯೆಯಲ್ಲಿ ನ್ಯಾಯ ಸಿಗದೆ ಅಲೆದಾಡುವ ಅಸಹಾಯಕ ನಾಗರಿಕರಿಗೆ ಇದು ಕೊನೆಯ ಭರವಸೆಯ ಬೆಳಕೂ ಆಗಿದೆ.

ಆದರೆ, ಕತ್ತಿ ಎರಡೂ ಕಡೆಗೆ ಹರಿತವಾಗಿರುವಂತೆ, ಈ ಅಧಿಕಾರದ ಬಳಕೆಯು ಅತ್ಯಂತ ಎಚ್ಚರಿಕೆ, ಸಂಯಮ ಮತ್ತು ಜವಾಬ್ದಾರಿಯಿಂದ ಕೂಡಿರಬೇಕು. ಸುಪ್ರೀಂ ಕೋರ್ಟ್ ಸ್ವತಃ ಹಲವು ತೀರ್ಪುಗಳಲ್ಲಿ ಹೇಳಿರುವಂತೆ, 142ನೇ ವಿಧಿಯಡಿ ಇರುವ ಈ ಅಧಿಕಾರವನ್ನು ಕೇವಲ ಅತ್ಯಂತ ಅಸಾಧಾರಣ ಸಂದರ್ಭಗಳಲ್ಲಿ ಮಾತ್ರವೇ ಬಳಸಬೇಕಾಗುತ್ತದೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಭಾರತ & ಚೀನಾದ H-1B ಉದ್ಯೋಗಿಗಳಿಂದ ಅಮೆರಿಕನ್ನರ ಉದ್ಯೋಗಕ್ಕೆ ಕುತ್ತು; ಸಂಸದ ರಿಲೆ ಮೂರ್ ಆರೋಪ

ಅಮೆರಿಕದ ಕಂಪ್ಯೂಟರ್‌ ಸೈನ್ಸ್‌ ಪದವೀಧರರ ಉದ್ಯೋಗಾವಕಾಶಗಳನ್ನು ಭಾರತ ಮತ್ತು ಚೀನಾದಿಂದ ಬರುವ...

ಜನತಂತ್ರದ ಬಿಕ್ಕಟ್ಟಿಗೆ ಮೌನ; ವ್ಯಾಪಾರಿಗಳ ನಷ್ಟಕ್ಕೆ ಪರಿಹಾರದ ಭರವಸೆ; ಸುಪ್ರೀಂನದ್ದು ದ್ವಂದ್ವ ನಿಲುವಲ್ಲವೇ?

ಚುನಾವಣಾ ಜನತಂತ್ರ ಬಿಕ್ಕಟ್ಟಿಗೆ ಸಿಲುಕಿದಾಗ, ನಾಗರಿಕರ ಪ್ರತಿಭಟನಾ ಹಕ್ಕು ಬೀದಿಗೆ ಬಿದ್ದಾಗ...

ದೇಶ ತೊರೆಯುವಂತೆ ನೋಟಿಸ್‌; ಹೈಕೋರ್ಟ್ ಮೆಟ್ಟಿಲೇರಿದ ನಟ ಇಮ್ರಾನ್ ಖಾನ್

ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ನಡೆದ...

‘ಕೈಮುಗಿದು ಕಾಲಿಗೆ ಬೀಳುವೆ…’ ಪ್ರಜಾಪ್ರಭುತ್ವ ಕುಸಿತಕ್ಕೆ ಮುನ್ನುಡಿಯೇ?

ಜಾತಿ ಅಸಮಾನತೆ, ಸಾಮಾಜಿಕ ಶೋಷಣೆ ಮತ್ತು ರಾಜಕೀಯ ಪ್ರಭಾವದ ಮುಂದೆ ಜನಪ್ರತಿನಿಧಿಗಳೇ...