ದೆಹಲಿ ಹೈಕೋರ್ಟ್ ತಮ್ಮ ಜಾಮೀನಿಗೆ ತಡೆ ನೀಡಿರುವುದನ್ನು ಪ್ರಶ್ನಿಸಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ.
ಕೇಜ್ರಿವಾಲ್ ಅವರು ತಿಹಾರ್ ಜೈಲಿನಿಂದ ಹೊರಬರುವ ಕೆಲವೇ ಗಂಟೆಗಳ ಮೊದಲು ಜಾರಿ ನಿರ್ದೇಶನಾಲಯ ಜಾಮೀನು ಆದೇಶವನ್ನು ಕೋರ್ಟ್ನಲ್ಲಿ ಪ್ರಶ್ನಿಸಿತ್ತು. ನ್ಯಾಯಮೂರ್ತಿಗಳಾದ ಸುಧೀರ್ ಕುಮಾರ್ ಜೈನ್ ಮತ್ತು ರವೀಂದರ್ ದುಡೇಜಾ ಅವರ ಪೀಠದ ಮುಂದೆ ತುರ್ತು ವಿಚಾರಣೆಗಾಗಿ ವಿಚಾರಣಾ ನ್ಯಾಯಾಲಯದ ಜಾಮೀನು ಆದೇಶವನ್ನು ಪ್ರಶ್ನಿಸಿ, ಇ.ಡಿ ತನ್ನ ಅರ್ಜಿಯನ್ನು ಉಲ್ಲೇಖಿಸಿತ್ತು. ಅರ್ಜಿಯ ವಿಚಾರಣೆ ನಡೆಸುವವರೆಗೂ ವಿಚಾರಣಾ ನ್ಯಾಯಾಲಯದ ಆದೇಶದ ಪ್ರಕಾರ ಕ್ರಮ ಕೈಗೊಳ್ಳುವುದಿಲ್ಲ ಎಂದು ಹೈಕೋರ್ಟ್ ಕೇಜ್ರಿವಾಲ್ ಅವರ ಜಾಮೀನಿಗೆ ತಡೆ ನೀಡಿತ್ತು.
ಈ ಸುದ್ದಿ ಓದಿದ್ದೀರಾ? ಅಬಕಾರಿ ನೀತಿ ಪ್ರಕರಣ| ಅರವಿಂದ್ ಕೇಜ್ರಿವಾಲ್ ಬಿಡುಗಡೆಗೆ ದೆಹಲಿ ಹೈಕೋರ್ಟ್ ತಡೆ
ಅಬಕಾರಿ ನೀತಿ ಹಗರಣ ಪ್ರಕರಣಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಕೇಜ್ರಿವಾಲ್‌ಗೆ ರೂಸ್ ಅವೆನ್ಯೂ ಕೋರ್ಟ್ ಜಾಮೀನು ನೀಡಿತ್ತು. ವಿಶೇಷ ನ್ಯಾಯಮೂರ್ತಿಗಳಾದ ನಿಯಾಯ್ ಬಿಂದು ಅವರು 1 ಲಕ್ಷ ಬಾಂಡ್ ಮೇಲೆ ಅವರಿಗೆ ಜಾಮೀನು ನೀಡಿದ್ದರು. ಜಾಮೀನು ಕೋರಿ ಕೇಜ್ರಿವಾಲ್ ಸಲ್ಲಿಸಿದ್ದ ಅರ್ಜಿಯ ಕುರಿತು ಪ್ರಾಸಿಕ್ಯೂಷನ್ ಮತ್ತು ವಕೀಲರ ವಾದವನ್ನು ಆಲಿಸಿದ ಬಳಿಕ ನ್ಯಾಯಾಧೀಶರು ಆದೇಶ ನೀಡಿದ್ದರು.
ಲೋಕಸಭೆ ಚುನಾವಣೆ ಪ್ರಚಾರಕ್ಕಾಗಿ ಸುಪ್ರೀಂ ಕೋರ್ಟ್ 21 ದಿನಗಳ ಮಧ್ಯಂತರ ಜಾಮೀನು ನೀಡಿತ್ತು. ಮಧ್ಯಂತರ ಜಾಮೀನು ಅವಧಿ ಮುಗಿದ ನಂತರ ಜೂನ್ 2ರಂದು ತಿಹಾರ್ ಜೈಲಿನಲ್ಲಿ ಕೇಜ್ರಿವಾಲ್ ಶರಣಾಗಿದ್ದರು. ದೆಹಲಿ ಅಬಕಾರಿ ನೀತಿಯನ್ನು ರೂಪಿಸುವಾಗ ಅಕ್ರಮ ಹಣ ವರ್ಗಾವಣೆ ಆರೋಪದ ಮೇಲೆ ಇ.ಡಿ ಕೇಜ್ರಿವಾಲ್ ಅವರನ್ನು ಬಂಧಿಸಿತು. ಕೇಜ್ರಿವಾಲ್ ಅವರು ಎಎಪಿಯ ಸಂಚಾಲಕರಾಗಿದ್ದರಿಂದ ಗೋವಾದಲ್ಲಿ ಪಕ್ಷದ ಪ್ರಚಾರಕ್ಕಾಗಿ ಮದ್ಯ ಮಾರಾಟಗಾರರಿಂದ ಪಡೆದ ಹಣವನ್ನು ಬಳಸಲಾಗಿದೆ ಎಂದು ಇ.ಡಿ ಆರೋಪಿಸಿದೆ.
