ಹರಿಯಾಣ ಮೂಲದ ಪೊಲೀಸ್ ಪೇದೆ ಸೇರಿದಂತೆ ನಾಲ್ವರು ಪುರುಷರಿಂದ 10 ಲಕ್ಷ ರೂಪಾಯಿ ಸುಲಿಗೆ ಮಾಡಿ, ಅವರ ಮೇಲೆ ಐವರು ಪೊಲೀಸ್ ಸಿಬ್ಬಂದಿಗಳೇ ಹಲ್ಲೆ ನಡೆಸಿರುವ ಘಟನೆ ನೈಋತ್ಯ ದೆಹಲಿಯಲ್ಲಿ ನಡೆದಿದೆ. ಪ್ರಕರಣದಲ್ಲಿ ಐವರೂ ಆರೋಪಿ ಪೊಲೀಸರನ್ನು ಬಂಧಿಸಲಾಗಿದೆ ಎಂದು ದೆಹಲಿ ಉಪ ಪೊಲೀಸ್ ಆಯುಕ್ತ (ನೈಋತ್ಯ) ರೋಹಿತ್ ಮೀನಾ ತಿಳಿಸಿದ್ದಾರೆ.
ದೆಹಲಿಯ ಮಹಿಪಾಲ್‌ಪುರದ ರಂಗಪುರಿ ಪೆಟ್ರೋಲ್ ಪಂಪ್ ಬಳಿ ಮಂಗಳವಾರ ಮಧ್ಯರಾತ್ರಿ 1 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಬಂಧಿತ ಎಲ್ಲ ಆರೋಪಿಗಳನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
“ಹಲ್ಲೆಗೊಳಗಾಗಿದ್ದವರಲ್ಲಿ ಒಬ್ಬರಾದ ಸುಖ್ ಕರಣ್ ಎಂಬವರು ನೀಡಿದ ದೂರಿನ ಆಧಾರದ ಮೇಲೆ ಐಪಿಸಿ ಸೆಕ್ಷನ್ 384 (ಸುಲಿಗೆ), 323 (ಸ್ವಯಂಪ್ರೇರಿತವಾಗಿ ನೋವುಂಟುಮಾಡುವುದು), ಮತ್ತು 34 (ಸಾಮಾನ್ಯ ಉದ್ದೇಶ) ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ” ಎಂದು ರೋಹಿತ್ ಮೀನಾ ಹೇಳಿದ್ದಾರೆ.
ಗುರುಗ್ರಾಮ್‌ನ ಮದ್ಯದಂಗಡಿಯಲ್ಲಿ ಕೆಲಸ ಮಾಡುತ್ತಿರುವ ದೂರುದಾರ ಕರಣ್, ತನ್ನ ಸ್ನೇಹಿತರಾದ ಅನಿಲ್ ಚಿಲ್ಲರ್, ದೀಪಕ್ ಛಿಲ್ಲರ್ ಮತ್ತು ರಾಜೇಶ್ ಕುಮಾರ್ ಅವರೊಂದಿಗೆ ಕಾರಿನಲ್ಲಿ ಮದ್ಯ ಸೇವಿಸುತ್ತಿದ್ದರು ಎಂದು ಹೇಳಲಾಗಿದೆ.
“ನಾವು ನಮ್ಮ ಕಾರಿನಲ್ಲಿ ಮದ್ಯ ಸೇವಿಸುತ್ತಿದ್ದೆವು. ಏಕಾಏಕಿ ಎರಡು ಕಾರು ಹಾಗೂ ಮೋಟಾರ್ ಬೈಕ್‌ನಲ್ಲಿ ಸಾಮಾನ್ಯ ಉಡುಪಿನಲ್ಲಿದ್ದ ಐವರು ಬಂದರು. ಅವರು ದೆಹಲಿ ಪೊಲೀಸ್ ಸಿಬ್ಬಂದಿ ಎಂದು ಹೇಳಿಕೊಂಡು ನಮ್ಮನ್ನು ಥಳಿಸಲು ಪ್ರಾರಂಭಿಸಿದರು” ಎಂದು ಕರಣ್ ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.
ಕರಣ್ ಅವರ ಸ್ನೇಹಿತ ರಾಜೇಶ್ ಕುಮಾರ್ ಹರಿಯಾಣ ಪೊಲೀಸ್ ಕಾನ್‌ಸ್ಟೆಬಲ್ ಆಗಿದ್ದಾರೆ. ದೀಪಕ್ ಛಿಲ್ಲರ್ ಕೂಡ ದೆಹಲಿ ಪೊಲೀಸ್ ಇಲಾಖೆಯಲ್ಲಿ ಕಾನ್ಸ್‌ಟೇಬಲ್ ಆಗಿದ್ದು, ಅವರು ನಾಗರಿಕ ಉಡುಪಿನಲ್ಲಿದ್ದರು ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.
“ನಮ್ಮನ್ನು ಥಳಿಸಿ ಭಿಕಾಜಿ ಕಾಮಾ ಪ್ಲೇಸ್‌ನಲ್ಲಿರುವ ಅವರ ಕಚೇರಿಗೆ ಕರೆದೊಯ್ದರು. ಆಗ, ಅವರು ಹವಾಲ್ದಾರ್ ಅಶೋಕ್ ಮತ್ತು ಕಾನ್‌ಸ್ಟೆಬಲ್ ವಿಶ್ವಾಸ್ ದಹಿಯಾ ಎಂದು ನಮಗೆ ಗೊತ್ತಾಯಿತು. ಅವರು, ದೆಹಲಿಯಲ್ಲಿ ಮದ್ಯ ಕಳ್ಳಸಾಗಣೆ ಪ್ರಕರಣಗಳಲ್ಲಿ ಭಾಗಿಯಾಗಿರುವ ಕಾರುಗಳನ್ನು ಬಿಡುಗಡೆ ಮಾಡುವುದಿಲ್ಲ. ಪ್ರಕರಣದಿಂದ ಪಾರಾಗಲು 10 ಲಕ್ಷ ರೂ. ಹಣ ನೀಡಬೇಕೆಂದು ಹೇಳಿದರು. ಸ್ನೇಹಿತರ ಮೂಲಕ ಹಣವನ್ನು ಹೊಂದಿಸಿ, ಅವರಿಗೆ ಕೊಟ್ಟಿದ್ದೇವೆ” ಎಂದು ಕರಣ್ ವಿವರಿಸಿದ್ದಾರೆ.
ಎಲ್ಲ ಆರೋಪಿ ಪೊಲೀಸರನ್ನು ಬಂಧಿಸಲಾಗಿದೆ. “ಆರೋಪಿಗಳನ್ನು ಬುಧವಾರ ಸ್ಥಳೀಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. 14 ದಿನಗಳ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ” ಎಂದು ಡಿಸಿಪಿ ಹೇಳಿದ್ದಾರೆ.